ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದಾದರೂ ‘ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಬಲ್ಲದೊ’?

ಯಾವುದಾದರೂ ‘ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಬಲ್ಲದೊ’?

ದೇವರ ಸಮೀಪಕ್ಕೆ ಬನ್ನಿರಿ

ಯಾವುದಾದರೂ ‘ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಬಲ್ಲದೊ’?

ರೋಮಾಪುರ 8:38, 39

ನಮ್ಮಲ್ಲಿ ಯಾರಿಗೆ ತಾನೇ ಪ್ರೀತಿಸಲ್ಪಡಬೇಕೆಂಬ ಬಯಕೆ ಇರುವುದಿಲ್ಲ? ಕುಟುಂಬ ಮತ್ತು ಮಿತ್ರರಿಂದ ನಾವು ಪ್ರೀತಿಸಲ್ಪಡುವಾಗ ಸಂತೋಷದಿಂದ ಹಿಗ್ಗುತ್ತೇವಲ್ಲಾ. ಆದರೆ ವಿಷಾದಕರವಾಗಿ, ಮಾನವ ಸಂಬಂಧಗಳು ಅತಿ ನಾಜೂಕೂ ಅನಿಶ್ಚಿತವೂ ಆಗಬಲ್ಲವು. ನಮಗೆ ಪ್ರಿಯರಾದ ಜನರೇ ನಮ್ಮನ್ನು ನೋಯಿಸಾರು, ತ್ಯಜಿಸಿಬಿಟ್ಟಾರು ಇಲ್ಲವೆ ತಿರಸ್ಕರಿಸಾರು. ಆದರೂ, ಎಂದೂ ಮಾರ್ಪಡದ ಪ್ರೀತಿಯನ್ನು ತೋರಿಸುವ ಒಬ್ಬಾತನು ಇದ್ದಾನೆ. ತನ್ನ ಆರಾಧಕರ ಕಡೆಗೆ ಯೆಹೋವ ದೇವರಿಗಿರುವ ಪ್ರೀತಿಯನ್ನು ಬೈಬಲಿನ ಪುಸ್ತಕವಾದ ರೋಮಾಪುರ 8:38, 39 ರಲ್ಲಿ ಅಂದವಾಗಿ ವರ್ಣಿಸಲಾಗಿದೆ.

“ನನಗೆ ನಿಶ್ಚಯ ಉಂಟು” ಎನ್ನುತ್ತಾನೆ ಅಪೊಸ್ತಲ ಪೌಲನು. ಯಾವುದರ ನಿಶ್ಚಯ? ನಮ್ಮನ್ನು “ದೇವರ ಪ್ರೀತಿಯಿಂದ ಯಾವುದೂ ಅಗಲಿಸಲಾರದು” ಎಂಬ ನಿಶ್ಚಯ. ಪೌಲನು ತನ್ನ ಪರವಾಗಿ ಮಾತ್ರವಲ್ಲ, “ನಮ್ಮ” ಪರವಾಗಿಯೂ ಮಾತಾಡುತ್ತಾನೆ ಅಂದರೆ ದೇವರನ್ನು ನಿಷ್ಠೆಯಿಂದ ಸೇವಿಸುವ ಎಲ್ಲರ ಪರವಾಗಿ. ಇದನ್ನು ಒತ್ತಿಹೇಳಲಿಕ್ಕಾಗಿ ಪೌಲನು, ಯೆಹೋವನ ಪ್ರೀತಿಯು ಆತನ ಭಕ್ತರಿಗೆ ತಲಪುವದನ್ನು ತಡೆಯಲಶಕ್ತವಾದ ಹಲವಾರು ವಿಷಯಗಳನ್ನು ಒಂದೊಂದಾಗಿ ತಿಳಿಸುತ್ತಾನೆ.

“ಮರಣವಾಗಲಿ ಜೀವವಾಗಲಿ.” ಯೆಹೋವನಿಗೆ ತನ್ನ ಭಕ್ತರ ಮೇಲಿರುವ ಪ್ರೀತಿಯು ಅವರು ಸಾಯುವಾಗ ನಿಂತು ಹೋಗುವುದಿಲ್ಲ. ತನ್ನ ಪ್ರೀತಿಯ ಪುರಾವೆಯಾಗಿ ಅಂಥವರನ್ನು ದೇವರು ತನ್ನ ಸ್ಮರಣೆಯಲ್ಲಿ ಇಟ್ಟುಕೊಂಡು ಬರಲಿರುವ ನೀತಿಯ ನೂತನ ಲೋಕದಲ್ಲಿ ಜೀವಿತರನ್ನಾಗಿ ಎಬ್ಬಿಸುವನು. ಇದನ್ನು ಬೈಬಲ್‌ ಪುನರುತ್ಥಾನ ಎಂದು ಕರೆಯುತ್ತದೆ. (ಯೋಹಾನ 5:28, 29; ಪ್ರಕಟನೆ 21:3, 4) ಈ ನಡುವೆ, ಅವರು ಲೋಕದಲ್ಲಿ ಏನನ್ನೇ ಅನುಭವಿಸಲಿ ತನ್ನ ನಿಷ್ಠಾವಂತ ಜನರಿಗೆ ದೇವರು ತೋರಿಸುವ ಪ್ರೀತಿ ನಿಶ್ಚಲವಾಗಿರುತ್ತದೆ.

‘ದೇವದೂತರಾಗಲಿ ಅಧಿಪತಿಗಳಾಗಲಿ.’ (NIBV) ಮನುಷ್ಯರು ಪ್ರಭಾವಶಾಲಿ ವ್ಯಕ್ತಿಗಳ ಅಥವಾ ಅಧಿಕಾರಿಗಳ ಪ್ರಭಾವಕ್ಕೆ ಸುಲಭವಾಗಿ ಒಳಗಾಗಬಲ್ಲರು. ಆದರೆ ಯೆಹೋವನು ಹಾಗೆ ಒಳಗಾಗನು. ಸೈತಾನನಾಗಿ ಪರಿಣಮಿಸಿದ ದೇವದೂತನಂಥ ಪರಾಕ್ರಮಿ ಆತ್ಮಜೀವಿಗಳು ಸಹ ದೇವರು ತನ್ನ ಆರಾಧಕರನ್ನು ಪ್ರೀತಿಸದಂತೆ ಸ್ವಲ್ಪವೂ ಪ್ರಭಾವಿಸಲಾರರು. (ಪ್ರಕಟನೆ 12:10) ಅದೇ ರೀತಿಯಲ್ಲಿ, ಸತ್ಯ ಕ್ರೈಸ್ತರನ್ನು ವಿರೋಧಿಸಬಹುದಾದ ಸರಕಾರಗಳು ಸಹ ದೇವರು ತನ್ನ ಸೇವಕರನ್ನು ವೀಕ್ಷಿಸುವ ರೀತಿಯನ್ನು ಬದಲಾಯಿಸಶಕ್ತವಲ್ಲ.—1 ಕೊರಿಂಥ 4:13.

ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ.” ಸಮಯವು ದಾಟಿದಂತೆ ದೇವರ ಪ್ರೀತಿಯು ಕಡಿಮೆಯಾಗುವುದಿಲ್ಲ. ತನ್ನ ಸೇವಕರ ಮೇಲೆ ಈಗ ಅಥವಾ ಇನ್ನು ಮುಂದೆ ಬರಸಾಧ್ಯವಿರುವ ಯಾವ ವಿಷಯವೂ ದೇವರು ಅವರನ್ನು ಪ್ರೀತಿಸದಂತೆ ತಡೆಯದು.

“ಯಾವುದೇ ಶಕ್ತಿಯಾಗಲಿ. (NIBV) ಪೌಲನು ಆಕಾಶ ಮತ್ತು ಭೂಮಿಯ ಅಧಿಕಾರಗಳನ್ನು ಅಂದರೆ “ದೇವದೂತರನ್ನು” ಮತ್ತು “ಅಧಿಪತಿಗಳನ್ನು” ಸೂಚಿಸಿದ ಮೇಲೆ ಈಗ “ಶಕ್ತಿ”ಯ ಬಗ್ಗೆ ಮಾತಾಡುತ್ತಾನೆ. ಇಲ್ಲಿ ಬಳಸಲಾಗಿರುವ ಗ್ರೀಕ್‌ ಪದಕ್ಕೆ ವಿವಿಧ ಅರ್ಥಗಳಿವೆ. ಇದರ ನಿಷ್ಕೃಷ್ಟ ಅರ್ಥ ಏನೇ ಆಗಿರಲಿ, ಒಂದು ವಿಷಯವಂತೂ ನಿಶ್ಚಯ. ಆಕಾಶದಲ್ಲಿ ಇಲ್ಲವೆ ಭೂಮಿಯ ಮೇಲೆ ಇರುವ ಶಕ್ತಿಗಳಲ್ಲಿ ಯಾವುದೂ ಯೆಹೋವನ ಪ್ರೀತಿ ಆತನ ಜನರಿಗೆ ತಲಪದಂತೆ ತಡೆಯಲಾರದು.

“ಎತ್ತರವಾಗಲಿ ಆಳವಾಗಲಿ.” (NIBV) ಯೆಹೋವನು ತನ್ನ ಜನರನ್ನು ಎಲ್ಲಾ ಪರಿಸ್ಥಿತಿಗಳಲ್ಲಿ ಪ್ರೀತಿಸುತ್ತಾನೆ. ಎತ್ತರದ ಅಥವಾ ಆಳದ ಯಾವುದೇ ಪರಿಸ್ಥಿತಿಗಳಲ್ಲಿ ಅವರು ಇರಲಿ, ದೇವರ ಪ್ರೀತಿ ಅವರ ಮೇಲಿದೆ.

“ಬೇರೆ ಯಾವ ಸೃಷ್ಟಿಯಾಗಲಿ.” ಎಲ್ಲ ಸೃಷ್ಟಿಯನ್ನು ಒಳಗೊಂಡಿರುವ ಈ ಮಾತುಗಳಿಂದ ಪೌಲನು ಹೇಳುವುದೇನಂದರೆ, ನಿಷ್ಠಾವಂತ ಆರಾಧಕರನ್ನು ನಿಶ್ಚಯವಾಗಿ ಯಾವುದೂ ಯೆಹೋವನ ಪ್ರೀತಿಯಿಂದ ಅಗಲಿಸಲಾರದು.

ಮಾರ್ಪಡಲು ಅಥವಾ ಕುಂದಿಹೋಗಲು ಸಾಧ್ಯವಿರುವ ಮಾನವ ಪ್ರೀತಿಗೆ ಅಸದೃಶವಾಗಿ, ನಂಬಿಕೆಯಿಂದ ದೇವರನ್ನು ನಿರೀಕ್ಷಿಸುತ್ತಾ ಇರುವ ಜನರಿಗೆ ಆತನ ಪ್ರೀತಿ ಎಂದೂ ಬದಲಾಗದೆ ಇರುವದು. ಅದು ನಿರಂತರವಾದ ಪ್ರೀತಿ. ಈ ತಿಳಿವಳಿಕೆ ನಮ್ಮನ್ನು ನಿಶ್ಚಯವಾಗಿ ಯೆಹೋವನಿಗೆ ಹೆಚ್ಚು ಹತ್ತಿರವಾಗುವಂತೆಯೂ ನಮ್ಮಲ್ಲಿ ಆತನಿಗಿರುವ ಪ್ರೀತಿಯನ್ನು ರುಜುಪಡಿಸಲು ಸಾಧ್ಯವಿರುವಷ್ಟು ಹೆಚ್ಚು ಪ್ರಯತ್ನವನ್ನು ಮಾಡುವಂತೆಯೂ ಪ್ರೇರಿಸುತ್ತದೆ. (w08 8/1)