ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೃತಜ್ಞತೆಯನ್ನು ಏಕೆ ತೋರಿಸಬೇಕು?

ಕೃತಜ್ಞತೆಯನ್ನು ಏಕೆ ತೋರಿಸಬೇಕು?

ಕೃತಜ್ಞತೆಯನ್ನು ಏಕೆ ತೋರಿಸಬೇಕು?

“ನನ್ನ ಪ್ರಿಯ ರಾಕೆಲ್‌,

ನಿನ್ನ ಒಲುಮೆಯ ಉತ್ತೇಜನಕ್ಕಾಗಿ ತುಂಬ ಧನ್ಯವಾದಗಳು. ನೀನು ತಿಳಿದಿರದಿದ್ದರೂ ನಿನ್ನ ಈ ಪ್ರೋತ್ಸಾಹನೀಯ ಸ್ವಭಾವ ಹಾಗೂ ಮೃದುಮಾತುಗಳು ನನಗೆ ಮಾಡಿದ ಸಹಾಯವೊ ಅಪಾರ.”—ಜೆನಿಫರ್‌.

ಅನಿರೀಕ್ಷಿತವಾದ ಕೃತಜ್ಞತೆಯ ಪತ್ರವೊಂದನ್ನು ನೀವು ಪಡೆದದ್ದುಂಟೋ? ಹಾಗಿರುವಲ್ಲಿ, ಅದರ ಅಭಿವ್ಯಕ್ತಿಗಳು ನಿಮಗೆ ಹೃದಯೋಲ್ಲಾಸವನ್ನು ತಂದಿದ್ದವೆಂಬುದು ನಿಸ್ಸಂದೇಹ. ಎಷ್ಟೆಂದರೂ, ಇತರರ ಮೆಚ್ಚಿಕೆ ಮತ್ತು ಗಣ್ಯತೆಯನ್ನು ನಾವು ಬಯಸುವುದು ಸ್ವಾಭಾವಿಕ.—ಮತ್ತಾಯ 25:19-23.

ಧನ್ಯವಾದದ ಅಭಿವ್ಯಕ್ತಿಗಳು ಸಾಮಾನ್ಯವಾಗಿ ಅದನ್ನು ತಿಳಿಸುವವನ ಮತ್ತು ಪಡೆಯುವವನ ಮಧ್ಯೆ ಆತ್ಮೀಯ ಸಂಬಂಧವನ್ನು ಬೆಳೆಸುತ್ತವೆ. ಇದಲ್ಲದೆ, ಕೃತಜ್ಞತೆ ತೋರಿಸುವವನು ಯೇಸು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುತ್ತಿದ್ದಾನೆ. ಯೇಸು ಕ್ರಿಸ್ತನು ಇತರರ ಸುಕೃತ್ಯಗಳನ್ನು ಗಮನಿಸಲು ಎಂದಿಗೂ ತಪ್ಪಿರಲಿಲ್ಲ.—ಮಾರ್ಕ 14:3-9; ಲೂಕ 21:1-4.

ವಿಷಾದಕರವಾಗಿ, ಕೃತಜ್ಞತೆಯ ವೈಯಕ್ತಿಕ ಅಭಿವ್ಯಕ್ತಿಗಳನ್ನು ಜನರು ಮಾತಿನಲ್ಲಾಗಲಿ ಬರೆವಣಿಗೆಯಲ್ಲಾಗಲಿ ಸೂಚಿಸುವುದು ಅತಿ ವಿರಳವಾಗುತ್ತಾ ಬರುತ್ತಿದೆ. “ಕಡೇ ದಿವಸಗಳಲ್ಲಿ” ಜನರು “ಉಪಕಾರ ನೆನಸದವರು” ಆಗಿರುವರು ಎಂದು ಬೈಬಲ್‌ ಎಚ್ಚರಿಕೆ ನೀಡುತ್ತದೆ. (2 ತಿಮೊಥೆಯ 3:1, 2) ನಾವು ಜಾಗರೂಕತೆಯಿಂದ ಇರದಿದ್ದಲ್ಲಿ, ಇಂದು ವ್ಯಾಪಕವಾಗಿರುವ ಕೃತಜ್ಞತಾರಾಹಿತ್ಯವು ನಮ್ಮಲ್ಲಿರುವ ಗಣ್ಯತೆಯ ಕೋಮಲ ಅನಿಸಿಕೆಗಳನ್ನು ಅಡಗಿಸಬಲ್ಲದು.

ಕೃತಜ್ಞತೆಯನ್ನು ಹೇಗೆ ತೋರಿಸಬಹುದೆಂದು ತಮ್ಮ ಮಕ್ಕಳಿಗೆ ಕಲಿಸಲು ಹೆತ್ತವರು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲರು? ನಾವು ಯಾರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು? ಇತರರು ಉಪಕಾರ ನೆನಸದಿದ್ದರೂ ನಾವೇಕೆ ಕೃತಜ್ಞತಾಭಾವವನ್ನು ತೋರಿಸಬೇಕು?

ಕುಟುಂಬ ವೃತ್ತದೊಳಗೆ

ತಮ್ಮ ಮಕ್ಕಳನ್ನು ಸಾಕಿಸಲಹಲು ಹೆತ್ತವರು ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಕೆಲವೊಮ್ಮೆ, ಮಕ್ಕಳು ತಮ್ಮ ಪ್ರಯತ್ನಗಳನ್ನು ಗಣ್ಯಮಾಡುತ್ತಿಲ್ಲವೆಂಬ ಅನಿಸಿಕೆ ಹೆತ್ತವರಿಗಾಗಬಹುದು. ಇದನ್ನು ಪರಿಹರಿಸಲು ಅವರು ಏನು ಮಾಡಬಲ್ಲರು? ಇದಕ್ಕೆ ಮೂರು ವಿಷಯಗಳು ಅಗತ್ಯ.

(1) ಮಾದರಿ. ಕೃತಜ್ಞತೆ ಹೇಳಲು ಮಕ್ಕಳಿಗೆ ಕಲಿಸುವ ಒಂದು ಉತ್ತಮ ವಿಧಾನವು ಹೆತ್ತವರು ಇಡುವ ಮಾದರಿಯೇ. ಪುರಾತನ ಇಸ್ರಾಯೇಲಿನ ಶ್ರಮಶೀಲ ತಾಯಿಯೊಬ್ಬಳ ವಿಷಯದಲ್ಲಿ ಬೈಬಲ್‌ ಹೇಳುವುದು: “ಮಕ್ಕಳು ಎದ್ದುನಿಂತು . . . ಆಕೆಯನ್ನು ಧನ್ಯಳು ಎಂದು ಹೇಳುವರು.” ಈ ಮಕ್ಕಳು ಕೃತಜ್ಞತೆ ಹೇಳಲು ಕಲಿತದ್ದೆಲ್ಲಿ? ಮುಂದಿನ ವಚನವು ಒಂದು ಸುಳಿವನ್ನು ಕೊಡುತ್ತ ಹೇಳುವುದು: “ಪತಿಯು ಸಹ . . . ಆಕೆಯನ್ನು ಕೊಂಡಾಡುವನು.” (ಜ್ಞಾನೋಕ್ತಿ 31:28, 29) ಪರಸ್ಪರ ಕೃತಜ್ಞತೆಯನ್ನು ವ್ಯಕ್ತಪಡಿಸುವ ಹೆತ್ತವರು ಮಕ್ಕಳಿಗೆ ಕಲಿಸಿಕೊಡುತ್ತಾರೆ ಏನೆಂದರೆ ಅಂಥ ಕೃತಜ್ಞತೆಯ ಮಾತುಗಳು ಇತರರನ್ನು ಸಂತೋಷಪಡಿಸುತ್ತವೆ, ಕುಟುಂಬ ಸಂಬಂಧವನ್ನು ಉತ್ತಮಗೊಳಿಸುತ್ತವೆ ಹಾಗೂ ಅದು ಪ್ರೌಢತೆಯ ಚಿಹ್ನೆಯಾಗಿದೆ.

ಸ್ಟೀವನ್‌ ಎಂಬ ಹೆಸರಿನ ತಂದೆ ಹೇಳುವುದು: “ನನ್ನ ಹೆಂಡತಿ ಮಾಡಿದ ಅಡಿಗೆಗಾಗಿ ನಾನು ಯಾವಾಗಲೂ ಧನ್ಯವಾದ ಹೇಳುತ್ತೇನೆ. ಈ ಮೂಲಕ ನನ್ನ ಮಕ್ಕಳಿಗೆ ಮಾದರಿಯನ್ನಿಡಲು ಪ್ರಯತ್ನಿಸಿದೆ.” ಇದರ ಪರಿಣಾಮ? “ನನ್ನ ಇಬ್ಬರು ಹೆಣ್ಣು ಮಕ್ಕಳು ಇದನ್ನು ಗಮನಿಸಿದರು, ಮತ್ತು ಇತರರಿಗೆ ಕೃತಜ್ಞತೆ ಹೇಳುವುದನ್ನು ಅವರು ಚೆನ್ನಾಗಿ ಕಲಿತುಕೊಂಡರು.” ನೀವು ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಯು ಮಾಡುವ ಚಿಕ್ಕ ಚಿಕ್ಕ ಕೆಲಸಕ್ಕಾಗಿ ನೀವು ಯಾವಾಗಲೂ ಧನ್ಯವಾದ ಹೇಳುತ್ತೀರಾ? ನಿಮ್ಮ ಮಕ್ಕಳು ಮಾಡಲೇಬೇಕಾದ ಕರ್ತವ್ಯಗಳನ್ನು ಮಾಡುವಾಗಲೂ ಅವರಿಗೆ ಧನ್ಯವಾದ ಹೇಳುತ್ತೀರೋ?

(2) ತರಬೇತು. ಕೃತಜ್ಞತೆಯ ಭಾವನೆಗಳು ಕೋಮಲ ಪುಷ್ಪಗಳಂತಿವೆ. ಉತ್ತಮ ಫಲಸಿಗಬೇಕಾದರೆ ಅವುಗಳನ್ನು ನಾಜೂಕಾಗಿ ಬೆಳೆಸಿಕೊಳ್ಳಬೇಕು. ಮಕ್ಕಳು ಗಣ್ಯತೆಯನ್ನು ಬೆಳೆಸಿಕೊಳ್ಳಲು ಮತ್ತು ಅದನ್ನು ವ್ಯಕ್ತಪಡಿಸಲು ಹೆತ್ತವರು ಹೇಗೆ ಸಹಾಯ ಮಾಡಬಲ್ಲರು? ವಿವೇಕಿ ರಾಜ ಸೊಲೊಮೋನನು, “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ” ಎಂದು ಹೇಳಿದಾಗ ಒಂದು ಮುಖ್ಯ ವಿಷಯವನ್ನು ಒತ್ತಿಹೇಳಿದನು.—ಜ್ಞಾನೋಕ್ತಿ 15:28.

ಹೆತ್ತವರೇ, ನಿಮ್ಮ ಮಕ್ಕಳು ಕೊಡುಗೆ ಪಡೆಯುವಾಗ, ಅದನ್ನು ಕೊಟ್ಟವರು ಎಷ್ಟು ಪ್ರಯತ್ನ ಮತ್ತು ಉದಾರತೆಯಿಂದ ಕೊಟ್ಟಿದ್ದಾರೆ ಎಂಬುದನ್ನು ವಿವೇಚಿಸುವಂತೆ ತರಬೇತು ಕೊಡಬಲ್ಲಿರಾ? ಈ ರೀತಿಯ ವಿವೇಚನೆಯು, ಫಲವತ್ತಾದ ಮಣ್ಣು ಹೂಗಳನ್ನು ಹೇಗೆ ಚೆನ್ನಾಗಿ ಬೆಳೆಸುತ್ತದೋ ಹಾಗೆಯೇ ಕೃತಜ್ಞತಾಭಾವವನ್ನು ಬೆಳೆಸುತ್ತದೆ. ಮೂವರು ಮಕ್ಕಳನ್ನು ಬೆಳೆಸಿರುವ ಮರೀಯ ಹೇಳುವುದು: “ಯಾರಾದರೂ ಕೊಡುಗೆ ಕೊಡುವಾಗ ಅದರಲ್ಲಿ ಏನು ಒಳಗೊಂಡಿದೆ ಎಂದು ಮಕ್ಕಳಿಗೆ ವಿವರಿಸಿ ಹೇಳಲು ಸಮಯದ ಅಗತ್ಯವಿದೆ. ಕೊಡುಗೆ ಕೊಟ್ಟವರು ಮಕ್ಕಳನ್ನು ವೈಯಕ್ತಿಕವಾಗಿ ನೆನಪಿಸಿಕೊಂಡು ಅವರ ಬಗ್ಗೆ ಎಷ್ಟು ಚಿಂತಿಸುತ್ತಾರೆಂದು ವಿವರಿಸಬೇಕು. ಇಂಥ ಪ್ರಯತ್ನ ಸಾರ್ಥಕ ಎಂದು ನಾನೆಣಿಸುತ್ತೇನೆ.” ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ಅವರು ಏನು ಹೇಳಬೇಕು ಮತ್ತು ಅದನ್ನು ಏಕೆ ಹೇಳಬೇಕು ಎಂದು ಮಕ್ಕಳು ಕಲಿಯುವಂತೆ ಇಂಥ ಸಂಭಾಷಣೆಗಳು ಸಹಾಯಕರ.

ತಮಗೆ ದೊರೆಯುವ ಎಲ್ಲ ಒಳ್ಳೇ ವಿಷಯಗಳನ್ನು ಪಡೆದುಕೊಳ್ಳಲು ತಮಗೆ ಹಕ್ಕಿದೆ ಎಂಬ ಭಾವನೆಯು ಮಕ್ಕಳಲ್ಲಿ ಬಾರದಂತೆ ವಿವೇಕಿಗಳಾದ ಹೆತ್ತವರು ಸಹಾಯ ನೀಡುತ್ತಾರೆ. * ಸೇವಕರೊಂದಿಗೆ ವ್ಯವಹರಿಸುವ ರೀತಿಯ ಕುರಿತು ಜ್ಞಾನೋಕ್ತಿ 29:21ರಲ್ಲಿರುವ ಎಚ್ಚರಿಕೆಯು ಮಕ್ಕಳಿಗೂ ಅಷ್ಟೇ ಬಲವಾಗಿ ಅನ್ವಯಿಸುತ್ತದೆ: “ಆಳನ್ನು ಚಿಕ್ಕತನದಿಂದ ಕೋಮಲವಾಗಿ ಸಾಕಿದರೆ ತರುವಾಯ ಅವನು ಎದುರು ಬೀಳುವನು.”

ಚಿಕ್ಕ ಮಕ್ಕಳು ಸಹ ಕೃತಜ್ಞತೆ ತೋರಿಸುವಂತೆ ಹೇಗೆ ಸಹಾಯ ಮಾಡಬಹುದು? ಮೂವರು ಮಕ್ಕಳ ತಾಯಿ ಲಿಂಡ ಹೇಳುವುದು: “ನಾವು ಬರೆಯುವ ಥ್ಯಾಂಕ್ಯೂ ಕಾರ್ಡಿನಲ್ಲಿ ನಮ್ಮ ಮಕ್ಕಳು ಒಂದು ಚಿತ್ರವನ್ನು ಬರೆದೊ ಅಥವಾ ತಮ್ಮ ಹೆಸರನ್ನು ಹಾಕಿಯೋ ಅದರಲ್ಲಿ ಒಳಗೂಡುವಂತೆ ನಾನು ಮತ್ತು ನನ್ನ ಪತಿ ಪ್ರೋತ್ಸಾಹಿಸಿದೆವು.” ಅವರು ಬರೆಯುವ ಚಿತ್ರ ಸರಳವೂ ಅವರ ಕೈಬರಹ ಅಸ್ಪಷ್ಟವೂ ಆಗಿರಬಹುದಾದರೂ ಇದರಿಂದ ಮಕ್ಕಳು ಕಲಿಯುವ ಪಾಠವೊ ಅಪಾರ.

(3) ಪಟ್ಟುಹಿಡಿಯುವಿಕೆ. ನಮ್ಮೆಲ್ಲರಲ್ಲಿ ಸ್ವಾರ್ಥಭಾವವು ಹುಟ್ಟಿನಿಂದಲೂ ಇರುವುದರಿಂದ ಅದು ಕೃತಜ್ಞತೆ ತೋರಿಸುವುದನ್ನು ನಿಗ್ರಹಿಸಬಹುದು. (ಆದಿಕಾಂಡ 8:21; ಮತ್ತಾಯ 15:19) ಆದರೂ ದೇವರ ಸೇವಕರಿಗೆ ಬೈಬಲ್‌ ಹೇಳುವುದು: “ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.”—ಎಫೆಸ 4:23, 24.

ಆದರೆ ತಮ್ಮ ಮಕ್ಕಳು “ನೂತನ ಸ್ವಭಾವವನ್ನು” ಧರಿಸಿಕೊಳ್ಳುವಂತೆ ಮಾಡುವುದು ಅಷ್ಟೊಂದು ಸುಲಭವಲ್ಲ ಎಂಬುದು ಅನುಭವೀ ಹೆತ್ತವರಿಗೆ ಚೆನ್ನಾಗಿ ಗೊತ್ತು. ಮೇಲೆ ಹೇಳಿರುವ ಸ್ಟೀವನ್‌ ತಿಳಿಸುವುದು: “ಪ್ರತಿಸಲ ಧನ್ಯವಾದ ಹೇಳಲು ನಮ್ಮ ಹೆಣ್ಣುಮಕ್ಕಳಿಗೆ ನೆನಪಿಸಬೇಕಿತ್ತು. ಅದಕ್ಕೆ ತುಂಬ ಸಮಯ ಹಿಡಿದಂತೆ ಕಂಡಿತು.” ಆದರೆ ಸ್ಟೀವನ್‌ ಮತ್ತು ಅವನ ಪತ್ನಿ ತಮ್ಮ ಪ್ರಯತ್ನ ಬಿಟ್ಟುಬಿಡಲಿಲ್ಲ. “ಬಿಡದೆ ಪಟ್ಟುಹಿಡಿದ ಕಾರಣ ನಮ್ಮ ಹುಡುಗಿಯರು ಪಾಠ ಕಲಿತರು. ಈಗ ಅವರು ಉಪಕಾರ ಹೇಳಲು ಮರೆಯುವುದಿಲ್ಲ ಎಂಬದಕ್ಕೆ ನಾವು ಹೆಮ್ಮೆಪಡುತ್ತೇವೆ.”

ಸ್ನೇಹಿತರ ಮತ್ತು ನೆರೆಯವರ ವಿಷಯದಲ್ಲೇನು?

ನಾವು ಕೆಲವೊಮ್ಮೆ ಧನ್ಯವಾದ ಹೇಳಲು ತಪ್ಪುವುದು ಕೃತಘ್ನತೆಯಿಂದಲ್ಲ, ಮರೆತುಬಿಡುವುದರಿಂದ ಆಗಿರಬಹುದು. ನಮ್ಮಲ್ಲಿ ಕೃತಜ್ಞತೆಯ ಭಾವನೆ ಇರುವುದು ಮಾತ್ರವಲ್ಲ ಅದನ್ನು ಮಾತುಗಳಿಂದ ವ್ಯಕ್ತಪಡಿಸುವುದು ಸಹ ಪ್ರಾಮುಖ್ಯವೊ? ಯೇಸು ಮತ್ತು ಕೆಲವು ಕುಷ್ಠರೋಗಿಗಳು ಸೇರಿದ್ದ ಒಂದು ಘಟನೆಯು ಇದಕ್ಕೆ ಉತ್ತರಕೊಡುತ್ತದೆ.

ಯೆರೂಸಲೇಮಿಗೆ ಪಯಣಿಸುತ್ತಿದ್ದಾಗ ಯೇಸು ಹತ್ತು ಮಂದಿ ಕುಷ್ಠರೋಗಿಗಳನ್ನು ಸಂಧಿಸಿದನು. ಬೈಬಲ್‌ ಹೇಳುವುದು: “ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು ಎಂದು ಕೂಗಿಹೇಳಿದರು. ಆತನು ಅವರನ್ನು ನೋಡಿ—ನೀವು ಹೋಗಿ ಯಾಜಕರಿಗೆ ಮೈ ತೋರಿಸಿಕೊಳ್ಳಿರಿ ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು. ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ಉಪಕಾರಸ್ತುತಿಮಾಡಿದನು. ಅವನು ಸಮಾರ್ಯದವನು.”—ಲೂಕ 17:11-16.

ಉಳಿದ ಒಂಬತ್ತು ಮಂದಿ ಉಪಕಾರಸ್ಮರಣೆ ಮಾಡಲು ತಪ್ಪಿದ್ದನ್ನು ಯೇಸು ನಿರ್ಲಕ್ಷಿಸಿದನೊ? ಆ ವೃತ್ತಾಂತ ಮುಂದುವರಿಸುವುದು: “ಯೇಸು ಇದನ್ನು ನೋಡಿ— ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ” ಎಂದನು.—ಲೂಕ 17:17, 18.

ಆ ಒಂಬತ್ತು ಮಂದಿ ಕುಷ್ಠರೋಗಿಗಳು ದುಷ್ಟರಾಗಿರಲಿಲ್ಲ. ಈ ಮೊದಲು ಅವರು ಯೇಸುವಿನಲ್ಲಿ ಬಹಿರಂಗವಾಗಿ ನಂಬಿಕೆಯನ್ನು ವ್ಯಕ್ತಪಡಿಸಿದ್ದರು ಮತ್ತು ಅವನು ಹೇಳಿದ ಮಾತುಗಳಿಗೆ ಸಿದ್ಧಮನಸ್ಸಿನಿಂದ ವಿಧೇಯರಾಗಿದ್ದರು. ಅದರಲ್ಲಿ ಯೆರೂಸಲೇಮಿಗೆ ಪಯಣಿಸಿ ಯಾಜಕರಿಗೆ ಮೈತೋರಿಸಿಕೊಳ್ಳುವುದು ಸೇರಿತ್ತು. ಆದರೆ, ಯೇಸುವಿನ ದಯಾಭರಿತ ಕ್ರಿಯೆಗೆ ಅವರಲ್ಲಿ ಆಳವಾದ ಕೃತಜ್ಞತೆಯ ಭಾವವಿದ್ದರೂ ಅವರದನ್ನು ಮಾತುಗಳಿಂದ ವ್ಯಕ್ತಪಡಿಸಲಿಲ್ಲ. ಅವರ ವರ್ತನೆ ಕ್ರಿಸ್ತನನ್ನು ನಿರಾಶೆಗೊಳಪಡಿಸಿತು. ಹಾಗಾದರೆ ನಮ್ಮ ಕುರಿತೇನು? ಒಬ್ಬನು ನಮಗೆ ಒಳ್ಳೆಯದನ್ನು ಮಾಡುವಲ್ಲಿ, ನಾವು ಒಡನೆ ಧನ್ಯವಾದ ಹೇಳುತ್ತೇವೊ ಮತ್ತು ಸೂಕ್ತವಾಗಿರುವಲ್ಲಿ ಅದನ್ನು ಪತ್ರದ ಮೂಲಕ ತಿಳಿಸುತ್ತೇವೋ?

ಪ್ರೀತಿ “ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 13:5) ಈ ಕಾರಣದಿಂದ, ಕೃತಜ್ಞತೆಯ ಯಥಾರ್ಥ ಅಭಿವ್ಯಕ್ತಿಗಳು ಸಭ್ಯತೆಯ ಸೂಚನೆಯಾಗಿವೆ ಮಾತ್ರವಲ್ಲ ಪ್ರೀತಿಯ ರುಜುವಾತೂ ಆಗಿವೆ. ಕುಷ್ಠರೋಗಿಗಳು ಒಳಗೊಂಡಿದ್ದ ಆ ಘಟನೆ ತೋರಿಸುವಂತೆ, ಕ್ರಿಸ್ತನನ್ನು ಮೆಚ್ಚಿಸ ಬಯಸುವವರೆಲ್ಲರೂ ಪ್ರೀತಿ ಮತ್ತು ಕೃತಜ್ಞತೆಯನ್ನು ಸಕಲ ಜನಾಂಗ, ಕುಲ, ಧರ್ಮಗಳ ಜನರಿಗೆ ತೋರಿಸುವ ಹಂಗಿನಲ್ಲಿದ್ದಾರೆ.

ಆದುದರಿಂದ, ನಿಮ್ಮನ್ನೇ ಕೇಳಿಕೊಳ್ಳಿ: ‘ನನಗೆ ಉಪಕಾರ ಮಾಡಿದ ನೆರೆಯವನಿಗೊ, ಸಹೋದ್ಯೋಗಿಗೊ, ಸಹಪಾಠಿಗೊ, ಆಸ್ಪತ್ರೆಯ ಸಿಬ್ಬಂದಿಗೊ, ಅಂಗಡಿಯವನಿಗೊ ಅಥವಾ ಇನ್ನಾವನಿಗೊ ನಾನು ಎಂದಾದರೂ ಧನ್ಯವಾದ ಹೇಳಿದ್ದೇನೋ? ದಿನದಲ್ಲಿ ಎಷ್ಟು ಬಾರಿ ಧನ್ಯವಾದ ಹೇಳುತ್ತೀರಿ ಅಥವಾ ಧನ್ಯವಾದದ ಪತ್ರ ಬರೆಯುತ್ತೀರಿ ಎಂಬುದನ್ನು ಪರೀಕ್ಷಿಸಲು ಅದರ ದಾಖಲೆಯನ್ನು ಯಾಕೆ ಒಂದೆರಡು ದಿನ ಬರೆದಿಡಬಾರದು? ಇಂಥ ದಾಖಲೆಯು, ಕೃತಜ್ಞತೆಯ ವ್ಯಕ್ತಪಡಿಸುವಿಕೆಯಲ್ಲಿ ನೀವು ಮಾಡಸಾಧ್ಯವಿರುವ ಸುಧಾರಣೆಯನ್ನು ತೋರಿಸಿಕೊಡುತ್ತದೆ.

ಹೌದು, ನಮ್ಮ ಕೃತಜ್ಞತೆಗೆ ಹೆಚ್ಚು ಪಾತ್ರನಾಗಿರುವಾತನು ಯೆಹೋವ ದೇವರೆಂಬುದು ಖಂಡಿತ. “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ” ಆತನಿಂದ ಬರುತ್ತವೆ. (ಯಾಕೋಬ 1:17) ದೇವರು ನಿಮಗೆ ಮಾಡಿರುವ ನಿರ್ದಿಷ್ಟ ಸಹಾಯಗಳಿಗೆ ನೀವು ಆತನಿಗೆ ಕೊನೆಯ ಬಾರಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು ಯಾವಾಗ?—1 ಥೆಸಲೊನೀಕ 5:17, 18.

ಇತರರು ಕೃತಜ್ಞತೆ ತೋರಿಸದಿದ್ದಾಗಲೂ ನಾವೇಕೆ ಅದನ್ನು ತೋರಿಸಬೇಕು?

ನಾವು ಇತರರಿಗೆ ಸಹಾಯಮಾಡುವಾಗ ಒಂದು ವೇಳೆ ಅವರು ನಮಗೆ ಕೃತಜ್ಞತೆ ತೋರಿಸದೆ ಇದ್ದಾರು. ಹೀಗಿರುವಾಗ, ನಾವೇಕೆ ಇತರರಿಗೆ ಕೃತಜ್ಞತೆ ತೋರಿಸಬೇಕು? ಒಂದು ಕಾರಣವನ್ನು ಪರಿಗಣಿಸಿ.

ಕೃತಜ್ಞತೆ ತೋರಿಸದವರಿಗೂ ಒಳ್ಳೆಯದನ್ನು ಮಾಡುವ ಮೂಲಕ ನಾವು ನಮ್ಮ ಉಪಕಾರಶೀಲ ಸೃಷ್ಟಿಕರ್ತ ಯೆಹೋವ ದೇವರನ್ನು ಅನುಕರಿಸುತ್ತೇವೆ. ಯೆಹೋವನು ತೋರಿಸುವ ಪ್ರೀತಿಯನ್ನು ಅನೇಕರು ಗಣ್ಯ ಮಾಡದಿದ್ದರೂ ಆತನು ಅವರಿಗೆ ಉಪಕಾರ ಮಾಡುವುದನ್ನು ನಿಲ್ಲಿಸುವುದಿಲ್ಲ. (ರೋಮಾಪುರ 5:8; 1 ಯೋಹಾನ 4:9, 10) “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” ನಾವು ಕೃತಘ್ನ ಲೋಕದಲ್ಲಿ ಜೀವಿಸುತ್ತಿರುವುದಾದರೂ ಕೃತಜ್ಞತೆ ತೋರಿಸಲು ನಿಜವಾಗಿ ಪ್ರಯಾಸಪಡುವಲ್ಲಿ, ‘ಪರಲೋಕದಲ್ಲಿರುವ [ನಮ್ಮ] ತಂದೆಗೆ ಮಕ್ಕಳಾಗುವೆವು.’—ಮತ್ತಾಯ 5:45. (w08 8/1)

[ಪಾದಟಿಪ್ಪಣಿ]

^ ಪ್ಯಾರ. 14 ಅನೇಕ ಮಂದಿ ಹೆತ್ತವರು ತಮ್ಮ ಮಕ್ಕಳೊಂದಿಗೆ, ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್‌) ಎಂಬ ಪುಸ್ತಕವನ್ನು ಓದಿದ್ದಾರೆ ಮತ್ತು ಅಧ್ಯಯನ ಮಾಡಿದ್ದಾರೆ. ಅದರ 18ನೆಯ ಅಧ್ಯಾಯದ ಶೀರ್ಷಿಕೆ, “ನೀವು ಮರೆಯದೆ ಧನ್ಯವಾದ ಹೇಳುತ್ತೀರೋ?” ಎಂದಾಗಿದೆ.

[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]

ದಿನಕ್ಕೆ ಎಷ್ಟು ಬಾರಿ ನೀವು ನಿಜವಾಗಿ ಧನ್ಯವಾದ ಹೇಳುತ್ತೀರಿ ಎಂದು ಪರೀಕ್ಷಿಸಲು ಒಂದೆರಡು ದಿನ ಅದರ ದಾಖಲೆಯನ್ನಿಡಿರಿ

[ಪುಟ 23ರಲ್ಲಿರುವ ಚಿತ್ರ]

ಕೃತಜ್ಞತೆಯನ್ನು ವ್ಯಕ್ತಪಡಿಸುವುದರಲ್ಲಿ ನಿಮ್ಮ ಮಕ್ಕಳಿಗೆ ಮಾದರಿಯನ್ನಿಡಿ

[ಪುಟ 23ರಲ್ಲಿರುವ ಚಿತ್ರ]

ಕೃತಜ್ಞತೆಯನ್ನು ವ್ಯಕ್ತಪಡಿಸಲು ಚಿಕ್ಕ ಮಕ್ಕಳಿಗೂ ತರಬೇತಿ ನೀಡಸಾಧ್ಯವಿದೆ