ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಗ್ರಹದ ಕಾಲಾವಧಿ ಮುಗಿಯುತ್ತಿದೆಯೋ?

ಭೂಗ್ರಹದ ಕಾಲಾವಧಿ ಮುಗಿಯುತ್ತಿದೆಯೋ?

ಭೂಗ್ರಹದ ಕಾಲಾವಧಿ ಮುಗಿಯುತ್ತಿದೆಯೋ?

ಈ ಕೆಳಗಿನ ಪ್ರಶ್ನೆಗೆ ಸರಿಯಾದ ಉತ್ತರವು ಯಾವುದು?

ಭವಿಷ್ಯತ್ತಿನಲ್ಲಿ ಬೇಗನೆ ಭೂಮಿಯ ಪರಿಸ್ಥಿತಿಗಳು

(ಎ) ಸುಧಾರಿಸುವವೊ?

(ಬಿ) ಹೀಗೆಯೇ ಉಳಿಯುವವೊ?

(ಸಿ) ಇನ್ನೂ ಕೆಡುವವೊ?

ಭವಿಷ್ಯತ್ತಿನ ಕುರಿತು ಆಶಾವಾದಿಗಳಾಗಿರಲು ನೀವು ಪ್ರಯತ್ನಿಸುತ್ತೀರೋ? ಹಾಗೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಭವಿಷ್ಯತ್ತಿನ ಕುರಿತು ಸಕಾರಾತ್ಮಕ ನೋಟವನ್ನಿಡುವ ಜನರು ಮಾನಸಿಕವಾಗಿಯೂ ದೈಹಿಕವಾಗಿಯೂ ಉತ್ತಮವಾಗಿ ಕಾರ್ಯನಡಿಸುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಜೀವಿತದ ಕುರಿತು ಸಕಾರಾತ್ಮಕ ಮನೋಭಾವವುಳ್ಳವರು ನಕಾರಾತ್ಮಕವಾಗಿ ಯೋಚಿಸುವವರಿಗಿಂತ ಹೃದ್ರೋಗಗಳಿಗೆ ತುತ್ತಾಗುವುದು ಕಡಿಮೆಯೆಂದು ಒಂದು ದೀರ್ಘಾವಧಿಯ ಅಧ್ಯಯನ ತೋರಿಸಿದೆ. ಈ ಕಂಡುಹಿಡಿತಗಳು ಶತಮಾನಗಳ ಹಿಂದೆ ಬೈಬಲ್‌ ಹೇಳಿರುವ ಈ ಮಾತಿಗೆ ಹೊಂದಿಕೆಯಲ್ಲಿವೆ: “ಹರ್ಷಹೃದಯವು ಒಳ್ಳೇ ಔಷಧ, ಕುಗ್ಗಿದ ಮನದಿಂದ ಒಣಮೈ.”—ಜ್ಞಾನೋಕ್ತಿ 17:22.

ಆದರೂ, ಈ ಭೂಗ್ರಹದ ಭವಿಷ್ಯತ್ತಿನ ಕುರಿತು ವೈಜ್ಞಾನಿಕ ಪರಿಣತರು ಏನು ಹೇಳುತ್ತಾರೋ ಅದರಿಂದಾಗಿ ಅನೇಕರಿಗೆ ಸಂತೋಷದಿಂದ ಮತ್ತು ಆಶಾವಾದದಿಂದ ಜೀವಿಸಲು ಕಷ್ಟವಾಗುತ್ತಿದೆ. ವಾರ್ತಾ ಮಾಧ್ಯಮದಲ್ಲಿ ಕಂಡುಬರುತ್ತಿರುವ ಕೆಲವು ಭೀತಿದಾಯಕ ಮುಂತಿಳಿಸುವಿಕೆಗಳನ್ನು ಪರಿಗಣಿಸಿರಿ.

ಭೂಗ್ರಹವು ಅಪಾಯದ ಅಂಚಿನಲ್ಲಿದೆ

ಸ್ಟೋಕ್‌ಹಾಮ್‌ ಎನ್‌ವೈರ್ನ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ 2002ರಲ್ಲಿ ಎಚ್ಚರಿಕೆ ನೀಡಿದ್ದೇನೆಂದರೆ ಆರ್ಥಿಕ ಅಭಿವೃದ್ಧಿ ಮಾಡುವುದಕ್ಕೋಸ್ಕರ ಪರಿಸರಕ್ಕೆ ಕೇವಲ ಸಾಮಾನ್ಯ ಗಮನವನ್ನು ಕೊಡುವದರಿಂದ “ಭೂಗ್ರಹದ ವಾತಾವರಣ ಮತ್ತು ಪರಿಸರ ವ್ಯವಸ್ಥೆಯನ್ನು ಮಹತ್ತಾದ ರೀತಿಯಲ್ಲಿ ಬದಲಾಯಿಸುವ ಘಟನೆಗಳು ಸಂಭವಿಸಸಾಧ್ಯವಿದೆ.” ಅದು ಇನ್ನೂ ಹೇಳಿದ್ದೇನೆಂದರೆ ಭೌಗೋಳಿಕ ಬಡತನ, ಮುಂದುವರಿಯುತ್ತಿರುವ ಅಸಮಾನತೆ, ಪ್ರಾಕೃತಿಕ ಸಂಪತ್ತಿನ ನಿರಂತರ ನಾಶಮಾಡುವಿಕೆ ಮುಂತಾದವುಗಳು ಸಮಾಜವನ್ನು “ನೈಸರ್ಗಿಕವಾಗಿ, ಸಾಮಾಜಿಕವಾಗಿ ಹಾಗೂ ಸುರಕ್ಷೆಯ ವಿಷಯದಲ್ಲಿ ಒಂದರ ಹಿಂದೊಂದು ವಿಪತ್ತನ್ನು ಅನುಭವಿಸುವಂತೆ ಮಾಡಬಲ್ಲವು.”

ಭೂಮಿಯ ಪರಿಸರವನ್ನು ನಾಲ್ಕು ವರ್ಷದ ತನಕ ಅಧ್ಯಯನ ಮಾಡಿದ ವಿಶ್ವ ಸಂಸ್ಥೆಯು 2005ರಲ್ಲಿ ‘ಮಿಲೇನಿಯಮ್‌ ಇಕೊ ಸಿಸ್ಟಮ್‌ ಎಸೆಸ್ಸ್‌ಮೆಂಟ್‌’ ಅನ್ನು ಬಿಡುಗಡೆ ಮಾಡಿತು. ಈ ಅಧ್ಯಯನದಲ್ಲಿ 95 ದೇಶಗಳಿಂದ ಬಂದ ಸುಮಾರು 1,360ಕ್ಕೂ ಹೆಚ್ಚು ಪರಿಣತರು ಒಳಗೂಡಿದ್ದು, ಅದು ಭಯಗೊಳಿಸುವ ಈ ಎಚ್ಚರಿಕೆಯನ್ನು ಕೊಟ್ಟಿತು: “ಮಾನವ ಕೆಲಸಗಳು ಭೂಮಿಯ ಸಹಜ ಕಾರ್ಯಗತಿಯ ಮೇಲೆ ಎಷ್ಟೊಂದು ಒತ್ತಡವನ್ನು ಹಾಕುತ್ತಿವೆಯೆಂದರೆ ಮುಂದಿನ ಪೀಳಿಗೆಯನ್ನು ಪೋಷಿಸಲು ಭೂಮಿಯ ಪರಿಸರ ವ್ಯವಸ್ಥೆಗಿರುವ ಸಾಮರ್ಥ್ಯವನ್ನು ನಾವು ಇನ್ನೆಂದೂ ಹಗುರವಾಗಿ ತೆಗೆದುಕೊಳ್ಳಸಾಧ್ಯವಿಲ್ಲ.” ಇಂಥ ವಿಪತ್ತನ್ನು ತಪ್ಪಿಸಬೇಕಾದರೆ, “ಧೋರಣೆಗಳಲ್ಲಿ, ಪದ್ಧತಿಗಳಲ್ಲಿ ಮತ್ತು ರೂಢಿಗಳಲ್ಲಿ ಮಹತ್ತಾದ ಬದಲಾವಣೆಗಳಾಗಬೇಕು. ಆದರೆ ಈ ಬದಲಾವಣೆಗಳು ಇನ್ನೂ ಪ್ರಾರಂಭಗೊಂಡಿಲ್ಲ” ಎಂದು ಆ ಅಧ್ಯಯನ ವರದಿ ತಿಳಿಸುತ್ತದೆ.

ಹೆಚ್ಚಿನ ಸಂಶೋಧಕರ ಒಟ್ಟಭಿಪ್ರಾಯ ಏನೆಂಬುದರ ಕುರಿತು ಯುನೈಟೆಡ್‌ ನೇಶನ್ಸ್‌ ಹ್ಯೂಮನ್‌ ಸೆಟ್‌ಲ್‌ಮೆಂಟ್‌ ಪ್ರೋಗ್ರ್ಯಾಮ್‌ನ ಕಾರ್ಯನಿರ್ವಹಣಾ ನಿರ್ದೇಶಕಿಯಾದ ಆನ ಟೀಬೈಯೂಕಾ ಹೀಗನ್ನುತ್ತಾರೆ: “ನಾವು ಏನೂ ಕ್ರಮ ಕೈಗೊಳ್ಳದೆ ಹೀಗೆಯೇ ಮುಂದುವರಿಯುವುದಾದರೆ ಮುಂದೆ ನಮಗೊಂದು ಭೀಕರ ಆಪತ್ತು ಕಾದಿದೆ.”

ಆಶಾವಾದಿಗಳಾಗಿರಲು ಒಂದು ಕಾರಣ

ಹಠಾತ್ತಾದ ಹಾಗೂ ಭೂಮಿಯ ಮೇಲೆ ತೀವ್ರ ಪರಿಣಾಮಬೀರುವ ಬದಲಾವಣೆಗಳು ಬೇಗನೆ ಸಂಭವಿಸಲಿಕ್ಕಿವೆಯೆಂದು ಈ ಪತ್ರಿಕೆಯನ್ನು ಪ್ರಕಾಶಿಸುವ ಯೆಹೋವನ ಸಾಕ್ಷಿಗಳು ಸಹ ನಂಬುತ್ತಾರೆ. ಆದರೆ ಈ ಘಟನೆಗಳು ಒಂದು ವಿಪತ್ಕಾರಕ ಭವಿಷ್ಯತ್ತಿಗೆ ನಡೆಸುವ ಬದಲು ಮಾನವಕುಲವು ಇಷ್ಟರ ವರೆಗೆ ಅನುಭವಿಸಿರದ ಅತ್ಯತ್ತಮ ಪರಿಸ್ಥಿತಿಗಳಿಗೆ ದಾರಿ ಮಾಡಿಕೊಡುತ್ತವೆಂದು ಅವರು ಮನಗಂಡಿದ್ದಾರೆ. ಇಂಥ ಆಶಾವಾದವು ಅವರಲ್ಲಿರುವುದೇಕೆ? ಏಕೆಂದರೆ ದೇವರ ವಾಕ್ಯವಾದ ಬೈಬಲ್‌ನಲ್ಲಿರುವ ವಾಗ್ದಾನಗಳನ್ನು ಅವರು ನಂಬುತ್ತಾರೆ. ಆ ವಾಗ್ದಾನಗಳಲ್ಲಿ ಒಂದು ಹೀಗಿದೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:10, 11.

ಇಂಥಾ ನಿರೀಕ್ಷೆಯು ಕೇವಲ ಒಂದು ಸ್ವಪ್ನ ಮಾತ್ರವೋ? ಈ ಪ್ರಶ್ನೆಗೆ ಉತ್ತರ ಪಡೆಯುವ ಮುಂಚೆ ಕೆಳಗಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಿ: ಭೂಮಿಯನ್ನು ಮತ್ತು ಮಾನವರನ್ನು ಸಂಕಟಕ್ಕೀಡುಮಾಡಿರುವ ಈಗಿನ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳನ್ನು ಬೈಬಲ್‌ ಸಾವಿರಾರು ವರ್ಷಗಳ ಮುಂಚೆಯೇ ನಿಷ್ಕೃಷ್ಟವಾಗಿ ಮುಂತಿಳಿಸಿದೆ. ದಯವಿಟ್ಟು ಮುಂದಿನ ಲೇಖನದಲ್ಲಿ ಉದ್ಧರಿಸಲಾಗಿರುವ ವಚನಗಳನ್ನು ಓದಿರಿ ಮತ್ತು ಆ ವಚನಗಳಲ್ಲಿ ತಿಳಿಸಲ್ಪಟ್ಟ ವಿಷಯಗಳನ್ನು ಹಾಗೂ ಇಂದು ಲೋಕದಲ್ಲಿ ನೀವು ಅವಲೋಕಿಸುವ ವಿಷಯಗಳನ್ನೂ ಹೋಲಿಸಿ ನೋಡಿರಿ. ಹಾಗೆ ಮಾಡುವುದಾದರೆ, ಭವಿಷ್ಯತ್ತಿನ ಘಟನೆಗಳನ್ನು ಬೈಬಲ್‌ ನಿಷ್ಕೃಷ್ಟವಾಗಿ ಮುಂತಿಳಿಸುತ್ತದೆ ಎಂಬ ನಿಮ್ಮ ಭರವಸೆಯು ಹೆಚ್ಚುವುದು. (w08 8/1)