ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಯೋಜನೆಗಳು ದೇವರ ಉದ್ದೇಶದೊಂದಿಗೆ ಹೊಂದಿಕೆಯಲ್ಲಿವೆಯೋ?

ನಿಮ್ಮ ಯೋಜನೆಗಳು ದೇವರ ಉದ್ದೇಶದೊಂದಿಗೆ ಹೊಂದಿಕೆಯಲ್ಲಿವೆಯೋ?

ನಿಮ್ಮ ಯೋಜನೆಗಳು ದೇವರ ಉದ್ದೇಶದೊಂದಿಗೆ ಹೊಂದಿಕೆಯಲ್ಲಿವೆಯೋ?

ಕ್ಲಾರ್ಕ್ಸ್‌ ನಟ್‌ಕ್ರ್ಯಾಕರ್‌ ಎಂಬ ಹೆಸರಿನ ಬಿಳಿಬೂದು ಬಣ್ಣದ ಹಾಡುಹಕ್ಕಿಯೊಂದು ಉತ್ತರ ಅಮೆರಿಕದ ಪಶ್ಚಿಮ ಅರಣ್ಯಗಳಲ್ಲಿ ಅತ್ತಿತ್ತ ಹಾರಾಡುತ್ತಾ ಇರುವುದು ಕಣ್ಣಿಗೆ ಬೀಳುತ್ತದೆ. ಕೊರೆಯುವ ಚಳಿಗಾಲದ ತಿಂಗಳುಗಳಿಗಾಗಿ ಅದು ವಾರ್ಷಿಕವಾಗಿ 33 ಸಾವಿರದಷ್ಟು ಕಾಳುಗಳನ್ನು ಒಟ್ಟುಗೂಡಿಸಿ, ಸುಮಾರು 2,500 ವಿಭಿನ್ನ ಸ್ಥಳಗಳಲ್ಲಿ ಅವನ್ನು ಹುಗಿದಿಟ್ಟು ಶೇಖರಿಸುತ್ತದೆ. ಮುಂದಣ ದಿನಗಳಿಗಾಗಿ ಆಹಾರವನ್ನು ಕೂಡಿಸಿಡುವ ವಿಷಯದಲ್ಲಿ ನೋಡುವುದಾದರೆ ಇದನ್ನು “ಅಧಿಕ ಜ್ಞಾನವುಳ್ಳ” ಹಕ್ಕಿ ಎನ್ನಬೇಕು ನಿಶ್ಚಯ.—ಜ್ಞಾನೋಕ್ತಿ 30:24.

ಮಾನವರಿಗೆ ಇದಕ್ಕಿಂತಲೂ ಮಹತ್ತಾದ ಸಾಮರ್ಥ್ಯವಿದೆ. ಯೆಹೋವನ ಭೂ ಸೃಷ್ಟಿಗಳಲ್ಲಿ ಎಲ್ಲವುಗಳಿಗಿಂತ ಹೆಚ್ಚಾಗಿ ಪೂರ್ವದ ಅನುಭವದಿಂದ ಕಲಿಯುವ ಮತ್ತು ಕಲಿತ ಪಾಠಗಳನ್ನು ಮುಂದಿನ ಯೋಜನೆಗಳಲ್ಲಿ ಉಪಯೋಗಿಸುವ ಸಾಮರ್ಥ್ಯವಿರುವುದು ಮನುಷ್ಯರಿಗೆ ಮಾತ್ರ. “ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ” ಎಂದು ವಿವೇಕಿಯಾದ ರಾಜ ಸೊಲೊಮೋನನು ಹೇಳಿದನು.—ಜ್ಞಾನೋಕ್ತಿ 19:21.

ಆದರೂ ಭವಿಷ್ಯತ್ತಿನ ಕುರಿತ ಯೋಜನೆಗಳನ್ನು ಮನುಷ್ಯರು ತಮ್ಮ ಊಹನೆಗಳ ಮೇಲೆ ಆಧಾರಿಸಿ ಮಾಡಬೇಕಾಗಿದೆಯೇ ಹೊರತು ಬೇರೆ ಉಪಾಯವಿಲ್ಲ. ಉದಾಹರಣೆಗೆ, ನಾಳೆ ಸೂರ್ಯನು ನಿಶ್ಚಯವಾಗಿ ಉದಯಿಸುವನು ಮತ್ತು ನೀವು ಇನ್ನೂ ಜೀವಿಸುತ್ತಾ ಇರುವಿರಿ ಎಂದು ಊಹಿಸುತ್ತಾ ನಾಳೆಗಾಗಿ ಯೋಜನೆಗಳನ್ನು ಮಾಡುತ್ತೀರಿ. ಮೊದಲನೆಯ ಊಹನೆಯು ನಿಜತ್ವಗಳ ಮೇಲೆ ಆಧಾರಿಸಿದೆ; ಆದರೆ ಎರಡನೆಯದಾದರೋ ಅಷ್ಟು ನಿಶ್ಚಿತವಲ್ಲ. ಯಾಕೆಂದರೆ ಬೈಬಲ್‌ ಲೇಖಕನಾದ ಯಾಕೋಬನು ಅಂದದ್ದು: “ನಾಳೆ ಏನಾಗುವದೋ ನಿಮಗೆ ತಿಳಿಯದು.”—ಯಾಕೋಬ 4:13, 14.

ಯೆಹೋವನಿಗಾದರೋ ಅಂಥ ಸೀಮಿತಗಳಿಲ್ಲ. ಆತನು “ಆರಂಭದಲ್ಲಿಯೇ ಅಂತ್ಯವನ್ನು” ತಿಳಿದಿದ್ದಾನೆ. ಆತನ ಉದ್ದೇಶವು ನಿಶ್ಚಯವಾಗಿಯೂ ನೆರವೇರುವುದು. ಆತನು ಘೋಷಿಸಿದ್ದು: “ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು.” (ಯೆಶಾಯ 46:10) ಆದರೂ, ಮನುಷ್ಯರ ಯೋಜನೆಗಳು ದೇವರ ಉದ್ದೇಶಕ್ಕೆ ವಿರುದ್ಧವಾಗಿರುವಾಗ ಏನು ಸಂಭವಿಸುತ್ತದೆ?

ಮನುಷ್ಯರ ಯೋಜನೆಗಳು ದೇವರ ಉದ್ದೇಶವನ್ನು ಪರಿಗಣಿಸದೆ ಇದ್ದಾಗ

ಸುಮಾರು 4,000 ವರ್ಷಗಳ ಹಿಂದೆ, ಬಾಬೆಲ್‌ ಗೋಪುರವನ್ನು ಕಟ್ಟುವವರು ಮಾನವ ಕುಲವು ಬೇರೆ ಬೇರೆ ಸ್ಥಳಕ್ಕೆ ಚದರುವುದನ್ನು ತಡೆಯಲು ಯೋಜಿಸಿದರು. ಅವರಂದದ್ದು: “ಬನ್ನಿ. . . ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವ ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಪಡೆಯೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರುವದಕ್ಕೆ ಆಸ್ಪದವಾಗುವದಿಲ್ಲ.”—ಆದಿಕಾಂಡ 11:3, 4.

ಆದರೆ ಭೂಮಿಯ ಕಡೆಗೆ ದೇವರ ಉದ್ದೇಶವಾದರೋ ಬೇರೆಯಾಗಿತ್ತು. ಆತನು ನೋಹನಿಗೂ ಅವನ ಗಂಡುಮಕ್ಕಳಿಗೂ ಆಜ್ಞೆಯಿತ್ತದ್ದು: “ಬಹು ಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.” (ಆದಿಕಾಂಡ 9:1) ಬಾಬೆಲಿನ ದಂಗೆಕೋರ ಜನರ ಯೋಜನೆಗಳೊಂದಿಗೆ ದೇವರು ಹೇಗೆ ವ್ಯವಹರಿಸಿದನು? ದೇವರು ಅವರ ಭಾಷೆಯನ್ನು ತಾರುಮಾರು ಮಾಡಿದನು. ಒಬ್ಬರ ಮಾತು ಇನ್ನೊಬ್ಬರಿಗೆ ತಿಳಿಯದಿದ್ದರಿಂದ ಅವರು ಸಂಭಾಷಣೆ ಮಾಡಲು ಶಕ್ತರಾಗದೆ ಹೋದರು. ಪರಿಣಾಮ? “ಯೆಹೋವನು ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದನು.” (ಆದಿಕಾಂಡ 11:5-8) ಹೀಗೆ ಬಾಬೆಲಿನ ಕಟ್ಟಡ ಕಟ್ಟುವವರಿಗೆ ಒಂದು ಮಹತ್ವದ ಪಾಠವನ್ನು ಕಲಿಯಬೇಕಾಯಿತು. ಏನಂದರೆ ಮನುಷ್ಯರ ಯೋಜನೆಗಳು ದೇವರ ಉದ್ದೇಶಕ್ಕೆ ವಿರುದ್ಧವಾಗಿ ಹೋದಲ್ಲಿ, “ಯೆಹೋವನ ಸಂಕಲ್ಪವೇ ಈಡೇರುವದು.” (ಜ್ಞಾನೋಕ್ತಿ 19:21) ಇಂಥ ಪ್ರಾಚೀನ ಕಾಲದ ಪಾಠಗಳು ನಿಮ್ಮ ಜೀವನವನ್ನು ಪ್ರಭಾವಿಸುವಂತೆ ನೀವು ಬಿಡುತ್ತೀರೋ?

ವಿವೇಚನೆಯಿಲ್ಲದ ಐಶ್ವರ್ಯವಂತ

ಒಂದು ದೊಡ್ಡ ಗೋಪುರವನ್ನು ಕಟ್ಟಲು ಪ್ರಾಯಶಃ ನೀವು ಯೋಜಿಸಲಿಕ್ಕಿಲ್ಲ. ಆದರೆ ಇಂದು ಅನೇಕರು ಬ್ಯಾಂಕ್‌ನಲ್ಲಿ ತುಂಬಾ ಹಣ ಕೂಡಿಸಿಡಲು ಹಾಗೂ ತಮಗಾಗಿ ಪ್ರಾಪಂಚಿಕ ಸ್ವತ್ತುಗಳನ್ನು ಒಟ್ಟುಸೇರಿಸಲು ಯೋಜಿಸುತ್ತಾರೆ. ಯಾಕೆಂದರೆ ತಾವು ಕೆಲಸದಿಂದ ನಿವೃತ್ತಿಯಾದಾಗ ಆರಾಮವಾಗಿ ಜೀವಿಸಬಹುದೆಂದು ಅವರೆಣಿಕೆ. ತನ್ನ ಪ್ರಯಾಸದ ದುಡಿಮೆಯ ಫಲವನ್ನು ಉಂಡು ಆನಂದಿಸುವುದು ಮನುಷ್ಯನಿಗಿರುವ ಸಹಜ ಬಯಕೆ. “ಪ್ರತಿಯೊಬ್ಬನು ತಿಂದು, ಕುಡಿದು, ತನ್ನ ಎಲ್ಲಾ ಪ್ರಯಾಸದ ಮೇಲನ್ನು ಅನುಭವಿಸುವುದು ದೇವರ ದಾನದಿಂದಲೇ” ಎಂದು ಸೊಲೊಮೋನನು ಬರೆದನು.—ಪ್ರಸಂಗಿ 3:13, NIBV.

ಆದರೆ ಈ ದಾನವನ್ನು ಹೇಗೆ ಉಪಯೋಗಿಸುತ್ತೇವೆ ಎಂಬ ವಿಷಯದಲ್ಲಿ ನಾವು ಯೆಹೋವ ದೇವರಿಗೆ ಲೆಕ್ಕಕೊಡಲಿಕ್ಕಿದೆ. ಸುಮಾರು 2,000 ವರ್ಷಗಳ ಹಿಂದೆ ಯೇಸು ತನ್ನ ಶಿಷ್ಯರಿಗೆ ಒಂದು ಸಾಮ್ಯದ ಮೂಲಕವಾಗಿ ಈ ವಿಷಯವನ್ನು ಒತ್ತಿಹೇಳಿದನು. ಆತನು ಅಂದದ್ದು: “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯು ಚೆನ್ನಾಗಿ ಬೆಳೆಯಿತು. ಆಗ ಅವನು ತನ್ನೊಳಗೆ—ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ ಎಂದು ಆಲೋಚಿಸಿ—ಒಂದು ಕೆಲಸ ಮಾಡುತ್ತೇನೆ; ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು ನನ್ನ ಜೀವಾತ್ಮಕ್ಕೆ—ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು ಅಂದುಕೊಂಡನು.” (ಲೂಕ 12:16-19) ಆ ಐಶ್ವರ್ಯವಂತನ ಯೋಜನೆಗಳಲ್ಲಿ ಏನೂ ತಪ್ಪಿಲ್ಲದಂತೆ ಕಾಣತ್ತದೆ ಅಲ್ಲವೇ? ಆರಂಭದಲ್ಲಿ ತಿಳಿಸಲಾದ ಆ ಕ್ಲಾರ್ಕ್ಸ್‌ ನಟ್‌ಕ್ರ್ಯಾಕರ್‌ ಪಕ್ಷಿಯಂತೆ ಸಾಮ್ಯದಲ್ಲಿದ್ದ ಮನುಷ್ಯನು ಸಹ ತನ್ನ ಭವಿಷ್ಯತ್ತಿನ ಅಗತ್ಯಗಳಿಗಾಗಿ ಸಿದ್ಧಮಾಡುತ್ತಿದ್ದನು ಅಷ್ಟೇ.

ಆದರೂ ಆ ಮನುಷ್ಯನ ಆಲೋಚನಾಧಾಟಿಯಲ್ಲಿ ಏನೋ ತಪ್ಪು ಇತ್ತೆಂಬುದು ವ್ಯಕ್ತ. ಯಾಕೆಂದರೆ ಯೇಸು ಅಂದದ್ದು; “ಆದರೆ ದೇವರು ಅವನಿಗೆ—ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು ಎಂದು ಹೇಳಿದನು.” (ಲೂಕ 12:20) ಹಾಗಾದರೆ, ಕೆಲಸದಲ್ಲಿ ಮತ್ತು ಅದರ ಫಲಪ್ರಾಪ್ತಿಯಲ್ಲಿ ಸುಖವನ್ನು ಅನುಭವಿಸುವುದು ದೇವರ ದಾನ ಎಂದು ಹೇಳಿದ ಸೊಲೊಮೋನನ ಮಾತುಗಳನ್ನು ಯೇಸು ಇಲ್ಲಿ ಪ್ರತಿರೋಧಿಸುತ್ತಿದ್ದನೋ? ಖಂಡಿತ ಇಲ್ಲ. ಯೇಸು ಇಲ್ಲಿ ಏನನ್ನು ಸೂಚಿಸುತ್ತಿದ್ದನು? ಆತನಂದದ್ದು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.” —ಲೂಕ 12:21.

ಇಲ್ಲಿ ಯೇಸು ತನ್ನ ಕೇಳುಗರಿಗೆ ಕಲಿಸುತ್ತಿದ್ದ ವಿಷಯವೇನಂದರೆ, ನಾವು ಯೋಜನೆಗಳನ್ನು ಮಾಡುವಾಗ ಯೆಹೋವ ದೇವರ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಯೋಚಿಸಬೇಕೆಂದು ಆತನು ಬಯಸುತ್ತಾನೆಂದೇ. ಆ ಧನಿಕನು ದೈವಿಕ ಭಕ್ತಿ, ವಿವೇಕ ಮತ್ತು ಪ್ರೀತಿಯಲ್ಲಿ ಬಲಗೊಳ್ಳಲು ಕಾರ್ಯನಡಿಸುವ ಮೂಲಕ ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗಿರಸಾಧ್ಯವಿತ್ತು. ಆದರೆ ಅವನಿಗೆ ಆ ವಿಷಯಗಳಲ್ಲಿ ಯಾವ ಆಸಕ್ತಿಯೂ ಇರಲಿಲ್ಲ ಎಂದು ಅವನ ಮಾತುಗಳು ತೋರಿಸುತ್ತವೆ. ತನ್ನ ಗದ್ದೆಯ ಬೆಳೆಗಳಲ್ಲಿ ಸ್ವಲ್ಪವನ್ನು ಬಡವರು ಹಕ್ಕಲಾಯುವಂತೆ ಅವನು ಬಿಟ್ಟುಬಿಡಬಹುದಿತ್ತು ಇಲ್ಲವೆ ತನ್ನ ಬೆಳೆಯಲ್ಲಿ ಕೆಲವನ್ನು ಯೆಹೋವನಿಗೆ ಕಾಣಿಕೆಯಾಗಿ ಅರ್ಪಿಸಬಹುದಾಗಿತ್ತು. ಆದರೆ ಅಂಥ ಅಧ್ಯಾತ್ಮಿಕ ಬೆನ್ನಟ್ಟುವಿಕೆಗಳು ಮತ್ತು ನಿಸ್ವಾರ್ಥ ಕ್ರಿಯೆಗಳು ಆ ಐಶ್ವರ್ಯವಂತನ ಜೀವನದ ಭಾಗವಾಗಿರಲಿಲ್ಲ. ತನ್ನ ಸ್ವಂತ ಆಶೆಗಳನ್ನು ಮತ್ತು ಸುಖವಿಲಾಸಗಳನ್ನು ತೃಪ್ತಿಗೊಳಿಸುವುದೇ ಅವನ ಯೋಜನೆಗಳಾಗಿದ್ದವು.

ಯೇಸು ತಿಳಿಸಿದ ಆ ಐಶ್ವರ್ಯವಂತನು ತನ್ನ ಜೀವನದಲ್ಲಿ ಇಟ್ಟಂಥ ಆದ್ಯತೆಗಳನ್ನೇ ಇಂದಿರುವ ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಇಟ್ಟಿರುವುದನ್ನು ನೀವು ಕಂಡಿದ್ದೀರೋ? ನಾವು ಧನಿಕರಾಗಿರಲಿ ಬಡವರಾಗಿರಲಿ, ದಿನನಿತ್ಯದ ಅಗತ್ಯಗಳಿಂದ ಮತ್ತು ಆಶೆಗಳಿಂದ ಅಪಕರ್ಷಿಸಲ್ಪಡುವ ಕಾರಣ ಪ್ರಾಪಂಚಿಕತೆಯ ಪಾಶಕ್ಕೆ ಬಲಿಬೀಳುವುದು ಹಾಗೂ ದೇವರೊಂದಿಗಿನ ನಮ್ಮ ಸಂಬಂಧವನ್ನು ಅಲಕ್ಷಿಸುವುದು ತೀರಾ ಸುಲಭ. ಆ ಪಾಶವನ್ನು ತೊರೆದುಬಿಡಲು ನೀವೇನು ಮಾಡಬಲ್ಲಿರಿ?

“ಸಹಜ” ಜೀವನವನ್ನು ಯೋಜಿಸುವುದು

ಯೇಸು ತಿಳಿಸಿದ ಆ ಧನಿಕ ಮನುಷ್ಯನಂತೆ ನೀವು ಐಶ್ವರ್ಯವಂತರಾಗಿರಲಿಕ್ಕಿಲ್ಲ; ನಿಮಗೆ ಆರ್ಥಿಕ ಬಿಕ್ಕಟ್ಟುಗಳು ಇರಬಹುದು. ಆದರೂ ವಿವಾಹಿತರಾಗಿದ್ದಲ್ಲಿ, ನೀವು ನಿಮ್ಮ ಕುಟುಂಬಕ್ಕೆ ಬೇಕಾದ ಜೀವನಾವಶ್ಯಕತೆಗಳನ್ನು ಒದಗಿಸಲು ಹಾಗೂ ಸಾಧ್ಯವಿದ್ದಲ್ಲಿ ನಿಮ್ಮ ಮಕ್ಕಳಿಗೆ ಉತ್ತಮ ಮೂಲ ಶಿಕ್ಷಣ ನೀಡಲು ಯೋಜಿಸುತ್ತೀರಿ. ಒಬ್ಬಂಟಿಗರಾಗಿದ್ದಲ್ಲಿ ಬೇರೆಯವರಿಗೆ ಹೊರೆಯಾಗದಂತೆ ಒಂದು ಉದ್ಯೋಗಕ್ಕಾಗಿ ಹುಡುಕುವುದು ಇಲ್ಲವೆ ನಿಮಗಿರುವ ಉದ್ಯೋಗವನ್ನು ಉಳಿಸಿಕೊಳ್ಳುವುದು ನಿಮ್ಮ ಯೋಜನೆಯಲ್ಲಿ ಸೇರಿರಬಹುದು. ಇವು ಸಾರ್ಥಕವಾದ ಗುರಿಗಳಾಗಿವೆ.—2 ಥೆಸಲೊನೀಕ 3:10-12; 1 ತಿಮೊಥೆಯ 5:8.

ಆದರೂ ‘ಸಹಜ’ ಜೀವನ ಎಂದು ಪರಿಗಣಿಸಲ್ಪಡುವ ಕೆಲಸ, ತಿನ್ನುವುದು, ಕುಡಿಯುವುದು ಸಹ ಒಬ್ಬನನ್ನು ದೇವರ ಇಚ್ಛೆಗೆ ಹೊಂದಿಕೆಯಲ್ಲಿಲ್ಲದ ಜೀವನ ನಡಿಸುವಂತೆ ಮಾಡಬಹುದು. ಅದು ಹೇಗೆ? ಯೇಸು ಅಂದದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೇ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:37-40.

ಜಲಪ್ರಳಯಕ್ಕೆ ಮುಂಚಿತವಾಗಿ ಜನಸಾಮಾನ್ಯರು ತಾವು ಸಹಜ ಜೀವನ ಎಂದು ಪರಿಗಣಿಸಿದ್ದಿರಬಹುದಾದ ಜೀವನವನ್ನು ನಡಿಸಿದ್ದರು. ಆದರೂ ಅವರ ತಪ್ಪು ಏನಾಗಿತ್ತೆಂದರೆ, ಆ ದುಷ್ಟ ಲೋಕವನ್ನು ಒಂದು ಭೌಗೋಳಿಕ ಜಲಪ್ರಲಯದ ಮೂಲಕ ನಾಶಮಾಡಲು ದೇವರಿಗಿದ್ದ ಉದ್ದೇಶವನ್ನು ಅವರು “ತಿಳಿಯದೇ” ಅಥವಾ ಗಮನಿಸದೇ ಇದ್ದದ್ದೇ. ನೋಹನ ಜೀವನಶೈಲಿಯನ್ನು ಅವರು ಅಸಹಜವೆಂದು ನೆನಸಿದ್ದರೆಂಬುದಕ್ಕೆ ಸಂದೇಹವಿಲ್ಲ. ಆದರೂ ಜಲಪ್ರಳಯವು ಬಂದಾಗ, ನಿಜವಾಗಿಯೂ ವಿವೇಕಯುತ ಎಂದು ರುಜುವಾದದ್ದು ನೋಹ ಮತ್ತು ಅವನ ಕುಟುಂಬದ ಜೀವನಶೈಲಿಯೇ.

ಇಂದು ಲಭ್ಯವಿರುವ ಎಲ್ಲಾ ಪುರಾವೆಗಳು ನಾವು ಅಂತ್ಯಕಾಲದಲ್ಲಿ ಜೀವಿಸುತ್ತೇವೆಂಬುದನ್ನು ರುಜುಪಡಿಸುತ್ತವೆ. (ಮತ್ತಾಯ 24:3-12; 2 ತಿಮೊಥೆಯ 3:1-5) ಶೀಘ್ರದಲ್ಲೇ ದೇವರ ರಾಜ್ಯವು ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯನ್ನು “ಭಂಗಪಡಿಸಿ ನಿರ್ನಾಮಮಾಡಿ” ಬಿಡುವುದು. (ದಾನಿಯೇಲ 2:44) ಆ ರಾಜ್ಯದ ಕೆಳಗೆ ಈ ಭೂಮಿಯು ಪರದೈಸ್‌ ಆಗಿ ಮಾರ್ಪಡಲಿರುವುದು. ಆ ರಾಜ್ಯವು ಅನಾರೋಗ್ಯ ಮತ್ತು ಮರಣವನ್ನು ತೆಗೆದುಹಾಕುವುದು. (ಯೆಶಾಯ 33:24; ಪ್ರಕಟನೆ 21:3-5) ಭೂಜೀವಿಗಳೆಲ್ಲ ಐಕ್ಯದಲ್ಲಿ ಜೀವನ ನಡಿಸುವರು ಮತ್ತು ಹಸಿವು ಅವರನ್ನು ಇನ್ನೆಂದಿಗೂ ಬಾಧಿಸದು.—ಕೀರ್ತನೆ 72:16; ಯೆಶಾಯ 11:6-9.

ಆದರೆ ಯೆಹೋವನು ಅದನ್ನು ಮಾಡುವ ಮೊದಲು ಆತನ ರಾಜ್ಯದ ಸುವಾರ್ತೆಯು ‘ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವಂತೆ’ ಉದ್ದೇಶಿಸಿದ್ದಾನೆ. (ಮತ್ತಾಯ 24:14) ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಸುಮಾರು 70 ಲಕ್ಷ ಯೆಹೋವನ ಸಾಕ್ಷಿಗಳು 236 ದೇಶಗಳಲ್ಲಿ ನಾನೂರಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಈ ಸುವಾರ್ತೆಯನ್ನು ಸಾರುತ್ತಿದ್ದಾರೆ.

ಲೋಕದ ಜನರಿಗೆ ಯೆಹೋವನ ಸಾಕ್ಷಿಗಳ ಜೀವನಶೈಲಿ ವಿಚಿತ್ರ ರೀತಿಯದ್ದಾಗಿ, ಹಾಸ್ಯಾಸ್ಪದವಾಗಿಯೂ ಕಾಣಬಹುದು. (2 ಪೇತ್ರ 3:3, 4) ಜಲಪ್ರಳಯಕ್ಕೆ ಮುಂಚೆ ಜೀವಿಸುತ್ತಿದ್ದ ಆ ಜನರಂತೆ ಇಂದಿನ ಹೆಚ್ಚಿನ ಜನರು ಸಹ ತಮ್ಮ ದಿನನಿತ್ಯದ ಕೆಲಸದಲ್ಲಿ ಪೂರಾ ತಲ್ಲೀನರಾಗಿರುತ್ತಾರೆ. ಸಮಾಜದಲ್ಲಿ ಯಾವುದನ್ನು ಸಹಜ ಜೀವನ ಎಂದು ಪರಿಗಣಿಸಲಾಗುತ್ತದೋ ಆ ಜೀವನವನ್ನು ಯಾರು ನಡಿಸುವುದಿಲ್ಲವೋ ಅವರನ್ನು ಸಮತೂಕ ತಪ್ಪಿದ ಜನರೆಂದು ಅವರು ವೀಕ್ಷಿಸಲೂಬಹುದು. ಆದರೆ ದೇವರ ವಾಗ್ದಾನಗಳಲ್ಲಿ ನಂಬಿಕೆ ಇಟ್ಟಿರುವವರ ನೋಟದಲ್ಲಿ, ದೇವರ ಸೇವೆಯಲ್ಲಿ ಕೇಂದ್ರಿತವಾದ ಜೀವನವೇ ನಿಜವಾದ ಸಮತೂಕದ ಜೀವನ.

ಆದುದರಿಂದ ನೀವು ಧನಿಕರಾಗಿರಲಿ ಬಡವರಾಗಿರಲಿ ಮಧ್ಯಮ ವರ್ಗದವರಾಗಿರಲಿ, ಭವಿಷ್ಯತ್ತಿಗಾಗಿ ನೀವು ಮಾಡಿರುವ ಯೋಜನೆಗಳನ್ನು ಆಗಿಂದಾಗ್ಗೆ ಪುನರಾವರ್ತಿಸಿ ನೋಡುವುದು ನಿಜವಾಗಿಯೂ ವಿವೇಕಪ್ರದ. ಹಾಗೆ ಮಾಡುವಾಗ, ‘ನನ್ನ ಯೋಜನೆಗಳು ದೇವರ ಉದ್ದೇಶದೊಂದಿಗೆ ಹೊಂದಿಕೆಯಲ್ಲಿವೆಯೋ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ. (w08 7/1)

[ಪುಟ 9ರಲ್ಲಿರುವ ಚಿತ್ರ]

ಮಾನವರ ಯೋಜನೆಗಳು ಮತ್ತು ದೇವರ ಉದ್ದೇಶವು ಪರಸ್ಪರ ಘರ್ಷಿಸುವಾಗ, ದೇವರ ಸಂಕಲ್ಪವೇ ಈಡೇರುವುದು

[ಪುಟ 10ರಲ್ಲಿರುವ ಚಿತ್ರ]

ಯೇಸುವಿನ ಸಾಮ್ಯದ ಆ ಐಶ್ವರ್ಯವಂತನು ಯೋಜನೆಗಳನ್ನು ಮಾಡುವಾಗ ದೇವರ ಉದ್ದೇಶದ ಮೇಲೆ ಕೇಂದ್ರೀಕರಿಸಲು ತಪ್ಪಿದನು