ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೋಗವಾಸಿಯ ಅದ್ಭುತಗಳನ್ನು ಯೆಹೋವನ ಸಾಕ್ಷಿಗಳು ನಡೆಸುತ್ತಾರೊ?

ರೋಗವಾಸಿಯ ಅದ್ಭುತಗಳನ್ನು ಯೆಹೋವನ ಸಾಕ್ಷಿಗಳು ನಡೆಸುತ್ತಾರೊ?

ನಮ್ಮ ಓದುಗರ ಪ್ರಶ್ನೆ

ರೋಗವಾಸಿಯ ಅದ್ಭುತಗಳನ್ನು ಯೆಹೋವನ ಸಾಕ್ಷಿಗಳು ನಡೆಸುತ್ತಾರೊ?

▪ ಯೆಹೋವನ ಸಾಕ್ಷಿಗಳು ರೋಗವಾಸಿಮಾಡುವ ಅದ್ಭುತಗಳನ್ನು ಎಂದೂ ನಡೆಸುವುದಿಲ್ಲ. ಯೇಸುವಿನಂತೆ, ದೇವರ ರಾಜ್ಯದ ಅಂದರೆ ದೇವರ ಸರ್ಕಾರದ ಕುರಿತ ಶುಭವಾರ್ತೆ ಸಾರುವುದೇ ತಮ್ಮ ಪ್ರಧಾನ ಕೆಲಸವೆಂದು ಅವರು ನಂಬುತ್ತಾರೆ. ಸತ್ಯ ಕ್ರೈಸ್ತರನ್ನು ಗುರುತಿಸುವಂಥದ್ದು ರೋಗವಾಸಿಮಾಡುವ ಅದ್ಭುತಗಳಲ್ಲ, ಅದಕ್ಕಿಂತಲೂ ಎಷ್ಟೋ ಹೆಚ್ಚು ಮಹತ್ವದ ಸಂಗತಿಯೇ ಎಂಬುದೂ ಅವರ ನಂಬಿಕೆ.

ಒಂದನೇ ಶತಮಾನದಲ್ಲಿ ಯೇಸು ಕ್ರಿಸ್ತನು ಅಸ್ವಸ್ಥ ಜನರನ್ನು ಕರುಣೆಯಿಂದ ವಾಸಿಮಾಡಿದ್ದು ನಮಗೆಲ್ಲರಿಗೂ ತುಂಬ ಮಹತ್ವದ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಆತನು ದೇವರ ರಾಜ್ಯದ ರಾಜನಾಗಿ ಆಳುವಾಗ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂಬ ಮಾತಿಗೆ ಆ ಅದ್ಭುತಗಳು ಖಾತರಿಯನ್ನು ಕೊಟ್ಟವು.—ಯೆಶಾಯ 33:24.

ಆದರೆ ನಮ್ಮೀ ದಿನಗಳ ಕುರಿತೇನು? ಕ್ರೈಸ್ತಮತದಲ್ಲಿ ಹಾಗೂ ಕೆಲವೊಂದು ಕ್ರೈಸ್ತೇತರ ಧರ್ಮಗಳಲ್ಲಿರುವ ‘ಪವಾಡ ಪುರುಷರು’ ತಾವು ರೋಗವಾಸಿಯ ಅದ್ಭುತಗಳನ್ನು ನಡೆಸುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ತನ್ನ ಹೆಸರಿನಲ್ಲಿ “ಅನೇಕ ಅದ್ಭುತಕಾರ್ಯಗಳನ್ನು” ನಡೆಸುವವರ ಬಗ್ಗೆ ಸ್ವತಃ ಯೇಸುವೇ ಕಟುವಾಗಿ ಎಚ್ಚರಿಸಿದನು. ಅಂಥವರಿಗೆ ಆತನು, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಹೇಳುವನು. (ಮತ್ತಾಯ 7:22, 23, ಪರಿಶುದ್ಧ ಬೈಬಲ್‌ *) ಹೀಗಿರುವಾಗ, ಈ ಆಧುನಿಕ ದಿನದಲ್ಲಿ ‘ಪವಾಡ ಪುರುಷರು’ ಮಾಡುವ ರೋಗವಾಸಿಯ ಅದ್ಭುತಗಳು ನಿಜವಾಗಿಯೂ ದೇವರ ಅನುಗ್ರಹ ಇಲ್ಲವೆ ಆಶೀರ್ವಾದದ ಸೂಚನೆಯೋ?

ಯೇಸು ಮಾಡಿದ ರೋಗವಾಸಿಯ ಬಗ್ಗೆ ಬೈಬಲ್‌ನಲ್ಲಿರುವ ದಾಖಲೆಯನ್ನು ಪರಿಗಣಿಸಿರಿ. ಈ ದಾಖಲೆಯನ್ನು ಮತ್ತು ಇಂದಿನ ‘ಪವಾಡ ಪುರುಷರು’ ಬಳಸುವ ವಿಧಾನಗಳನ್ನು ಹೋಲಿಸುವಾಗ ನಮ್ಮೀ ದಿನಗಳ ಈ ಅದ್ಭುತಗಳ ಹಿಂದೆ ದೇವರಿದ್ದಾನೊ ಇಲ್ಲವೊ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಯೇಸು ರೋಗವಾಸಿ ಮಾಡಿದ್ದು ಇನ್ನಷ್ಟು ಹಿಂಬಾಲಕರನ್ನು ಇಲ್ಲವೇ ಪ್ರೇಕ್ಷಕರ ದೊಡ್ಡ ಸಮೂಹಗಳನ್ನು ಆಕರ್ಷಿಸಲಿಕ್ಕಾಗಿ ಅಲ್ಲ. ಆತನು ಹಲವಾರು ವಾಸಿಕಾರ್ಯಗಳನ್ನು ಜನರ ಗಮನಸೆಳೆಯದಂಥ ರೀತಿಯಲ್ಲಿ ನಡೆಸಿದನು. ನಡೆದ ಅದ್ಭುತದ ಬಗ್ಗೆ ಯಾರಿಗೂ ತಿಳಿಸಬಾರದೆಂದು ಆತನು ವಾಸಿಮಾಡಿದ ವ್ಯಕ್ತಿಗಳಿಗೆ ಅನೇಕ ಸಂದರ್ಭಗಳಲ್ಲಿ ತಾಕೀತು ಮಾಡಿದ್ದನು.—ಲೂಕ 5:13, 14.

ಯೇಸು ತನ್ನ ಅದ್ಭುತಕಾರ್ಯಗಳಿಗಾಗಿ ಎಂದೂ ಹಣ ವಸೂಲಿ ಮಾಡಲಿಲ್ಲ. (ಮತ್ತಾಯ 10:8) ಅಲ್ಲದೆ, ವಾಸಿಮಾಡುವುದರಲ್ಲಿ ಆತನು ಒಮ್ಮೆಯೂ ವಿಫಲನಾಗಲಿಲ್ಲ. ಆತನ ಬಳಿ ಬಂದ ಎಲ್ಲ ರೋಗಿಗಳು ಸಂಪೂರ್ಣ ಗುಣಮುಖರಾದರು. ಮಾತ್ರವಲ್ಲ ಒಬ್ಬ ವ್ಯಕ್ತಿಯ ರೋಗವಾಸಿಯು ಅವನಲ್ಲಿದ್ದ ನಂಬಿಕೆಯ ಮೇಲೆ ಹೊಂದಿಕೊಂಡಿರಲಿಲ್ಲ. (ಲೂಕ 6:19; ಯೋಹಾನ 5:5-9, 13) ಯೇಸು ಸತ್ತವರನ್ನೂ ಜೀವಿಸುವಂತೆ ಮಾಡಿದ್ದನಲ್ಲಾ!—ಲೂಕ 7:11-17; 8:40-56; ಯೋಹಾನ 11:38-44.

ಯೇಸು ಅಂಥ ಅದ್ಭುತಗಳನ್ನು ನಡಿಸಿದನಾದರೂ, ಭಾವಾವೇಶ ತುಂಬಿದ ಪವಾಡ-ಕಾರ್ಯಕ್ರಮಗಳ ಮೂಲಕ ಜನರನ್ನು ಮತಾಂತರಗೊಳಿಸುವುದು ಆತನ ಮುಖ್ಯ ಗುರಿ ಆಗಿರಲಿಲ್ಲ. ಬದಲಾಗಿ ಆತನ ಪ್ರಧಾನ ಕೆಲಸ ದೇವರ ರಾಜ್ಯದ ಕುರಿತ ಶುಭವಾರ್ತೆಯನ್ನು ಘೋಷಿಸುವುದೇ ಆಗಿತ್ತು. ಯೇಸು ತನ್ನ ಹಿಂಬಾಲಕರಿಗೆ ಶಿಷ್ಯರನ್ನು ಮಾಡುವ ಕೆಲಸ ಕೊಟ್ಟನು. ಅವರು ಜನರಿಗೆ ದೇವರ ರಾಜ್ಯದ ಆಳಿಕೆಯ ಕೆಳಗೆ ಪರಿಪೂರ್ಣ ಆರೋಗ್ಯವನ್ನು ಗಳಿಸುವ ನಿರೀಕ್ಷೆಯ ಕುರಿತು ಕಲಿಸಬೇಕಾಗಿತ್ತು.—ಮತ್ತಾಯ 28:19, 20.

ಒಂದನೇ ಶತಮಾನದಲ್ಲಿದ್ದ ಯೇಸುವಿನ ಹಿಂಬಾಲಕರಲ್ಲಿ ಕೆಲವರಿಗೆ ವಾಸಿಮಾಡುವ ವಿಶೇಷ ವರಗಳಿದ್ದವು ಹೌದು. ಆದರೆ ಅವು ಇಲ್ಲವಾಗಲಿದ್ದವು. (1 ಕೊರಿಂಥ 12:29, 30; 13:8, 13) ಇಂದು ನಿಜ ಕ್ರೈಸ್ತರನ್ನು, ವಾಸಿಮಾಡುವ ಕಾರ್ಯಗಳಿಂದಲ್ಲ ಬದಲಾಗಿ ಅವರ ಮಧ್ಯೆಯಿರುವ ಸ್ವತ್ಯಾಗದ ಪ್ರೀತಿಯಿಂದ ಗುರುತಿಸಲಾಗುತ್ತದೆ. (ಯೋಹಾನ 13:35) ಈ ಪ್ರೀತಿಯು ಎಲ್ಲ ಜಾತಿ ಹಾಗೂ ಹಿನ್ನೆಲೆಯ ಜನರನ್ನು ನಿಜ ಕ್ರೈಸ್ತರ ಒಂದು ಕುಟುಂಬವಾಗಿ ಐಕ್ಯಗೊಳಿಸಬೇಕು. ಆಧುನಿಕ ದಿನದ ವಾಸಿಮಾಡುವಂಥ ಪವಾಡಗಳಾದರೋ ಇದನ್ನು ಮಾಡಿಲ್ಲ.

ಆದರೆ ಅಂಥ ಪ್ರೀತಿಯ ಬಂಧದಲ್ಲಿ ಐಕ್ಯವಾಗಿರುವ ಕ್ರೈಸ್ತರು ಖಂಡಿತ ಇದ್ದಾರೆ. ಅವರ ಪ್ರೀತಿ ಎಷ್ಟು ಬಲವಾದದ್ದೆಂದರೆ ಅತ್ಯಂತ ಭೀಕರ ಘರ್ಷಣೆಗಳ ಸಮಯದಲ್ಲೂ ಪರಸ್ಪರರಿಗೇ ಆಗಲಿ, ಬೇರಾರಿಗೇ ಆಗಲಿ ಅವರು ಹಾನಿಮಾಡುವುದಿಲ್ಲ. ಇವರು ಯಾರು? ಯೆಹೋವನ ಸಾಕ್ಷಿಗಳೇ. ಕ್ರಿಸ್ತನು ತೋರಿಸಿದಂಥ ಪ್ರೀತಿಯನ್ನು ತೋರಿಸುವುದಕ್ಕಾಗಿ ಜಗತ್ತಿನಾದ್ಯಂತ ಇವರು ಹೆಸರುವಾಸಿ. ಇವರು ವಿಭಿನ್ನ ಜಾತಿ, ರಾಷ್ಟ್ರ, ಸಂಸ್ಕೃತಿ, ಕುಲಗಳವರಾಗಿದ್ದರೂ ಐಕ್ಯವಾಗಿದ್ದಾರೆ. ಇದನ್ನು ಪವಾಡವೆಂದೇ ಹೇಳಬಹುದು. ದೇವರ ಪವಿತ್ರಾತ್ಮದಿಂದ ಮಾತ್ರ ಇದು ಸಾಧ್ಯವಾಗಿದೆ. ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಒಂದಕ್ಕೆ ಹಾಜರಾಗಿ ಅದನ್ನು ನೀವೇ ಕಣ್ಣಾರೆ ನೋಡಬಹುದಲ್ಲವೇ? (w10-E 10/01)

[ಪಾದಟಿಪ್ಪಣಿ]

^ ಪ್ಯಾರ. 5 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 27ರಲ್ಲಿರುವ ಚಿತ್ರ]

ಆಧುನಿಕ ಕಾಲದ ಇಂಥ ‘ಪವಾಡ ಪುರುಷರಿಗೆ’ (ಬಲಗಡೆ) ನಿಜವಾಗಿ ದೇವರ ಬೆಂಬಲವಿದೆಯೋ?