ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬುದ್ಧಿವಂತಿಕೆಯಿಂದ ಮಿತ್ರರನ್ನು ಆಯ್ಕೆಮಾಡಿ

ಬುದ್ಧಿವಂತಿಕೆಯಿಂದ ಮಿತ್ರರನ್ನು ಆಯ್ಕೆಮಾಡಿ

ಸೂತ್ರ 4

ಬುದ್ಧಿವಂತಿಕೆಯಿಂದ ಮಿತ್ರರನ್ನು ಆಯ್ಕೆಮಾಡಿ

ಬೈಬಲ್‌ ಏನನ್ನುತ್ತದೆ? “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.”—ಜ್ಞಾನೋಕ್ತಿ 13:20.

ಸುಲಭವಲ್ಲ ಏಕೆ? ನಮ್ಮ ಸಂತೃಪ್ತ ಇಲ್ಲವೇ ಅಸಂತೃಪ್ತ ಮನೋಭಾವ ನಮ್ಮ ಮಿತ್ರರ ಮೇಲೂ ಹೊಂದಿಕೊಂಡಿದೆ. ಅವರ ಮನೋಭಾವ ಹಾಗೂ ಸಂಭಾಷಣೆಗಳು ಜೀವನದ ಬಗ್ಗೆ ನಮಗಿರುವ ನೋಟವನ್ನು ಖಂಡಿತ ಬಾಧಿಸುವವು.—1 ಕೊರಿಂಥ 15:33.

ಇದಕ್ಕೊಂದು ಉದಾಹರಣೆ ಬೈಬಲಿನಲ್ಲಿದೆ. ಕಾನಾನ್‌ ಎಂಬ ದೇಶವನ್ನು ನೋಡಿ ಹಿಂದಿರುಗಿ ಬಂದ 12 ಮಂದಿಯ ಕುರಿತ ವೃತ್ತಾಂತವದು. ಇವರಲ್ಲಿ 10 ಮಂದಿ “ತಾವು ಸಂಚರಿಸಿ ನೋಡಿದ ದೇಶದ ವಿಷಯವಾಗಿ ಇಸ್ರಾಯೇಲ್ಯರಿಗೆ ಅಶುಭಸಮಾಚಾರವನ್ನು” ಹೇಳಿದರು. ಆದರೆ ಅವರಲ್ಲಿ ಇಬ್ಬರು ಮಾತ್ರ ಕಾನಾನ್‌ ದೇಶದ ಬಗ್ಗೆ ಒಳ್ಳೇ ಮಾತುಗಳನ್ನಾಡುತ್ತಾ ಆ “ದೇಶವು ಅತ್ಯುತ್ತಮವಾದದ್ದು” ಎಂದು ಹೇಳಿದರು. ಹೀಗಿದ್ದರೂ, ಆ 10 ಮಂದಿಯ ನಕಾರಾತ್ಮಕ ಮನೋಭಾವವೇ ಉಳಿದ ಇಸ್ರಾಯೇಲ್ಯರೆಲ್ಲರಿಗೆ ಅಂಟಿಕೊಂಡಿತು. ‘ಜನಸಮೂಹದವರೆಲ್ಲರೂ ಗುಲ್ಲುಮಾಡಿ ಬಹಳ ಕೂಗಿಕೊಂಡರು. ಇಸ್ರಾಯೇಲ್ಯರೆಲ್ಲರೂ ಗುಣುಗುಟ್ಟಿದರು’ ಎನ್ನುತ್ತದೆ ಆ ವೃತ್ತಾಂತ.—ಅರಣ್ಯಕಾಂಡ 13:30–14:9.

ಹಾಗೆಯೇ ಇಂದು ಅನೇಕರು “ಗುಣುಗುಟ್ಟುವವರೂ ಜೀವನದಲ್ಲಿನ ತಮ್ಮ ಗತಿಯ ಕುರಿತು ದೂರುವವರೂ” ಆಗಿದ್ದಾರೆ. (ಯೂದ 16) ಎಂದೂ ತೃಪ್ತಿಪಡದ ಮಿತ್ರರ ಒಡನಾಟ ನಮಗಿರುವಲ್ಲಿ ಸಂತೃಪ್ತರಾಗಿರಲು ನಮಗೆ ಕಷ್ಟವಾಗುವುದು.

ನೀವೇನು ಮಾಡಬಹುದು? ನಿಮ್ಮ ಮಿತ್ರರೊಂದಿಗಿನ ಸಂಭಾಷಣೆಗಳ ಬಗ್ಗೆ ಯೋಚಿಸಿ. ಅವರು ತಮ್ಮ ಬಳಿಯಿರುವ ವಸ್ತುಗಳ ಬಗ್ಗೆ ಕೊಚ್ಚಿಕೊಳ್ಳುತ್ತಾ ಇರುತ್ತಾರೊ? ಅಥವಾ, ತಮ್ಮ ಬಳಿ ಇದಿಲ್ಲ ಅದಿಲ್ಲ ಅಂತ ಯಾವಾಗಲೂ ಹೇಳುತ್ತಾ ಇರುತ್ತಾರೊ? ಇನ್ನೊಂದು ಕಡೆ, ನೀವು ಯಾವ ರೀತಿಯ ಮಿತ್ರರಾಗಿದ್ದೀರೆಂದೂ ಯೋಚಿಸಿ. ನಿಮ್ಮ ಬಗ್ಗೆ ನಿಮ್ಮ ಮಿತ್ರರಲ್ಲಿ ಅಸೂಯೆ ಹುಟ್ಟಿಸುತ್ತೀರೊ ಅಥವಾ ಇದ್ದುದರಲ್ಲೇ ತೃಪ್ತರಾಗಿರಲು ಅವರಿಗೆ ಸಹಾಯಮಾಡುತ್ತೀರೊ?

ದಾವೀದ ಮತ್ತು ಯೋನಾತಾನರ ಮಾದರಿಯನ್ನು ಪರಿಗಣಿಸಿರಿ. ಆ ಸಮಯದಲ್ಲಿ ಅರಸನಾಗಿ ಆಳುತ್ತಿದ್ದ ಸೌಲನ ಮಗನಾದ ಯೋನಾತಾನ ಮುಂದೆ ಪಟ್ಟಕ್ಕೇರಬೇಕಾಗಿತ್ತು. ಆದರೆ ದೇವರು ದಾವೀದನನ್ನು ರಾಜನನನ್ನಾಗಿ ಆಯ್ಕೆಮಾಡಿದ್ದನು. ಅವನಿಂದಾಗಿ ತನ್ನ ಸ್ಥಾನಕ್ಕೆ ಕುತ್ತು ಬರಬಹುದೆಂದು ನೆನಸಿ ರಾಜ ಸೌಲನು ಅವನನ್ನು ಕೊಲ್ಲಪ್ರಯತ್ನಿಸುತ್ತಿದ್ದನು. ಹಾಗಾಗಿ ದಾವೀದನು ಅರಣ್ಯದಲ್ಲಿ ನಿರಾಶ್ರಿತನಂತೆ ಬದುಕುತ್ತಿದ್ದನು. ಇಷ್ಟೆಲ್ಲ ಆದರೂ ಯೋನಾತಾನನು ದಾವೀದನ ಅತ್ಯಾಪ್ತ ಮಿತ್ರನಾದನು. ದೇವರೇ ದಾವೀದನನ್ನು ಆಯ್ಕೆಮಾಡಿದ್ದನೆಂದು ಯೋನಾತಾನನು ಒಪ್ಪಿಕೊಂಡು ತನ್ನ ಈ ಮಿತ್ರನನ್ನು ಬೆಂಬಲಿಸುವುದರಲ್ಲೇ ಸಂತೃಪ್ತನಾಗಿದ್ದನು.—1 ಸಮುವೇಲ 19:1, 2; 20:30-33; 23:14-18.

ಹಾಗೇ ನಿಮ್ಮ ಮಿತ್ರರೂ ಸಂತೃಪ್ತರಾಗಿರಲು ಶ್ರಮಿಸುವವರೂ ನಿಮ್ಮ ಹಿತವನ್ನೇ ಬಯಸುವವರೂ ಆಗಿರಬೇಕು. (ಜ್ಞಾನೋಕ್ತಿ 17:17) ಆದರೆ ಅಂಥ ಮಿತ್ರರನ್ನು ನಿಮ್ಮೆಡೆಗೆ ಆಕರ್ಷಿಸಲು ನೀವೂ ಅದೇ ರೀತಿಯ ಗುಣಗಳನ್ನು ತೋರಿಸಬೇಕು.—ಫಿಲಿಪ್ಪಿ 2:3, 4. (w10-E 11/01)

[ಪುಟ 7ರಲ್ಲಿರುವ ಚಿತ್ರ]

ಮಿತ್ರರು ನಿಮ್ಮ ಸಂತೃಪ್ತಿಯನ್ನು ಹೆಚ್ಚಿಸುತ್ತಾರೋ ಕಡಿಮೆಮಾಡುತ್ತಾರೋ?