ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹವಾಮಾನದ ಏರುಪೇರು ಮತ್ತು ನಮ್ಮ ಭವಿಷ್ಯ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಹವಾಮಾನದ ಏರುಪೇರು ಮತ್ತು ನಮ್ಮ ಭವಿಷ್ಯ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಹವಾಮಾನದ ಏರುಪೇರಿಂದಾಗಿ ಭೂಮಿಯಲ್ಲಿ ಜೀವನ ಮಾಡೋದು ಕಷ್ಟ ಆಗ್ತಿದೆ.—ದಿ ಗಾರ್ಡಿಯನ್‌.

 ಮನುಷ್ಯರು ತಮ್ಮ ಮೇಲೆ ತಾವೇ ಸಮಸ್ಯೆಗಳನ್ನ ಎಳ್ಕೊಳ್ತಿದ್ದಾರೆ. ಭೂಮಿಯಲ್ಲಿ ಜಾಗತಿಕ ತಾಪಮಾನ ಜಾಸ್ತಿ ಆಗೋಕೆ ಮನುಷ್ಯರೇ ಕಾರಣ ಅಂತ ಎಷ್ಟೋ ವಿಜ್ಞಾನಿಗಳು ಹೇಳ್ತಾರೆ. ತಾಪಮಾನ ಜಾಸ್ತಿ ಆಗ್ತಾ ಇರೋದ್ರಿಂದ ಹವಾಮಾನದಲ್ಲಿ ಬದಲಾವಣೆ ಆಗ್ತಿರೋದು ಮಾತ್ರ ಅಲ್ಲ ಬೇರೆ ಎಷ್ಟೋ ಗಂಭೀರ ಸಮಸ್ಯೆಗಳು ಆಗ್ತಿವೆ. ಅದ್ರಲ್ಲಿ ಕೆಲವು ಯಾವುದಂದ್ರೆ:

  •   ಬಿಸಿ ಗಾಳಿ, ಚಂಡಮಾರುತ, ಬರಗಾಲಗಳು ಜಾಸ್ತಿ ಆಗ್ತಿವೆ. ಇದ್ರಿಂದ ಅಲ್ಲಲ್ಲಿ ಪ್ರಳಯಗಳು, ಕಾಡ್ಗಿಚ್ಚುಗಳು ಆಗ್ತಿದೆ.

  •   ಹಿಮ ನದಿಗಳು ಮತ್ತು ಆರ್ಟಿಕ್‌ ಪ್ರದೇಶದಲ್ಲಿರೋ ಮಂಜುಗಡ್ಡೆಗಳು ಕರಗ್ತಿವೆ.

  •   ಸಮುದ್ರದ ನೀರಿನ ಮಟ್ಟ ಜಾಸ್ತಿ ಆಗ್ತಿದೆ.

 ಹವಾಮಾನದ ಬದಲಾವಣೆಯಿಂದ ಭೂಮಿಯ ಪ್ರತಿಯೊಂದು ಮೂಲೆಗೂ ಹಾನಿಯಾಗಿದೆ. 193 ದೇಶಗಳ ಪರಿಸ್ಥಿತಿ ನೋಡಿ ನ್ಯೂ ಯಾರ್ಕ್‌ ಟೈಮ್ಸ್‌ ಹೀಗೆ ಹೇಳ್ತು: ‘ಭೂಮಿ ಈಗ ಸಹಾಯ ಕೇಳ್ತಿದೆ.’ ಹವಾಮಾನದ ಬದಲಾವಣೆಯಿಂದ ಆಗ್ತಿರೋ ಸಾವು-ನೋವು ಮತ್ತು ತೊಂದರೆಯನ್ನ ನೋಡಿ ‘ಇದು ಮಾನವಕುಲಕ್ಕೆ ಬಂದಿರೋ ಒಂದು ದೊಡ್ಡ ಸಮಸ್ಯೆ ಅಥವಾ ಪಿಡುಗು’ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿತು.

 ಆದ್ರೆ ಮುಂದೆ ನಮಗೊಂದು ಒಳ್ಳೆ ನಿರೀಕ್ಷೆ ಇದೆ. ಇವತ್ತು ಏನೆಲ್ಲಾ ಆಗುತ್ತೆ ಅಂತ ಬೈಬಲ್‌ನಲ್ಲಿ ಮುಂಚೆನೇ ತಿಳಿಸಲಾಗಿತ್ತು. ಮುಂದೆ ದೇವರು ಏನು ಮಾಡ್ತಾನೆ ಮತ್ತು ಭೂಮಿಯನ್ನ ಹೇಗೆ ಸಂರಕ್ಷಿಸ್ತಾನೆ ಅಂತಾನೂ ಬೈಬಲಿನಲ್ಲಿದೆ.

ಹವಾಮಾನದ ಏರುಪೇರು ಬೈಬಲ್‌ ಭವಿಷ್ಯವಾಣಿಯನ್ನ ನೆರವೇರಿಸ್ತಿದ್ಯಾ?

 ಹೌದು. ಭೂಮಿಯ ತಾಪಮಾನದಿಂದ ಆಗ್ತಿರೋ ಹವಾಮಾನದ ಏರುಪೇರು ಬೈಬಲ್‌ ಭವಿಷ್ಯವಾಣಿಯನ್ನ ನಿಜ ಮಾಡ್ತಿದೆ.

 ಭವಿಷ್ಯವಾಣಿ: ದೇವರು “ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ ನಾಶಮಾಡೋ ಸಮಯ ಬಂದಿದೆ.”—ಪ್ರಕಟನೆ 11:18.

 ಮನುಷ್ಯರು ಮಾಡೋ ಕೆಲಸಗಳಿಂದಾನೆ ಈ ಭೂಮಿ ಹಾಳಾಗುತ್ತೆ ಅಂತ ಬೈಬಲ್‌ ಮುಂಚೆನೇ ತಿಳಿಸಿತ್ತು. ಮನುಷ್ಯರಿಂದಾನೆ ಈ ಭೂಮಿಯ ತಾಪಮಾನ ಹಿಂದೆಂದಿಗಿಂತಲೂ ಈಗ ಜಾಸ್ತಿಯಾಗಿದೆ.

 ಈ ಭವಿಷ್ಯವಾಣಿಯಿಂದ ಮನುಷ್ಯರು ಯಾಕೆ ಭೂಮಿಯನ್ನ ರಕ್ಷಣೆ ಮಾಡೋಕೆ ಆಗಲ್ಲ ಅಂತ ಗೊತ್ತಾಗುತ್ತೆ. ಮನುಷ್ಯರು‘ಭೂಮಿಯನ್ನ ನಾಶ ಮಾಡ್ತಿರುವಾಗ’’ ದೇವರು ಅದನ್ನ ನೋಡಿ ಸುಮ್ಮನಿರಲ್ಲ ಅಂತ ಅಲ್ಲಿ ಹೇಳುತ್ತೆ. ಹವಾಮಾನದ ಏರುಪೇರಿಂದ ಆಗ್ತಿರೋ ಸಮಸ್ಯೆಗಳನ್ನ ಸರಿ ಮಾಡೋಕೆ ಮನುಷ್ಯರು ತಲೆ ಕೆಳಗಾಗಿ ನಿಂತ್ರೂ ಅದರಿಂದ ಆಗ್ತಿರೋ ಎಲ್ಲಾ ತೊಂದರೆಗಳನ್ನ ಅವರು ಸಂಪೂರ್ಣವಾಗಿ ಸರಿ ಮಾಡೋಕೆ ಆಗಲ್ಲ ಅಂತ ಇದ್ರಿಂದ ಗೊತ್ತಾಗುತ್ತೆ.

 ಭವಿಷ್ಯವಾಣಿ: “ಭಯಾನಕ ದೃಶ್ಯಗಳು . . . ಕಾಣಿಸುತ್ತೆ.”—ಲೂಕ 21:11.

 ನಾವಿರೋ ದಿನಗಳಲ್ಲಿ “ಭಯಾನಕ ದೃಶ್ಯಗಳು” ಅಂದ್ರೆ ನಮ್ಮನ್ನ ಹೆದ್ರಿಸೋ ವಿಷಯಗಳು ಆಗುತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. ಹವಾಮಾನದಲ್ಲಿ ಆಗ್ತಿರೋ ಏರುಪೇರಿಂದ ಭೂಮಿ ತುಂಬಾನೇ ಹಾಳಾಗಿಬಿಟ್ಟಿದೆ. ಹೋಗ್ತಾಹೋಗ್ತಾ ಭೂಮಿಲಿ ಜೀವನ ಮಾಡೋಕೆ ಆಗಲ್ವೇನೋ ಅಂತ ತುಂಬ ಜನ ಹೆದರಿಕೊಂಡಿದ್ದಾರೆ.

 ಭವಿಷ್ಯವಾಣಿ: “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು . . . ನಂಬಿಕೆದ್ರೋಹ ಮಾಡುವವರು . . . ಯಾವುದಕ್ಕೂ ಒಪ್ಪದವರು . . . ಮಿತ್ರದ್ರೋಹಿಗಳು, ಹಠಮಾರಿಗಳು” ಇರ್ತಾರೆ.—2 ತಿಮೊತಿ 3:1-4.

 ಭೂಮಿ ಈ ಮಟ್ಟಕ್ಕೆ ಹಾಳಾಗೋಕೆ ಮನುಷ್ಯನಲ್ಲಿರೋ ಯಾವ ಸ್ವಭಾವ ಕಾರಣ ಆಗುತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. ಇವತ್ತಿನ ಸರ್ಕಾರ ಮತ್ತು ವ್ಯಾಪಾರ ವಹಿವಾಟುಗಳು ದುಡ್ಡಿನ ಬಗ್ಗೆ ಮಾತ್ರ ಯೋಚನೆ ಮಾಡುತ್ತೆ ಹೊರತು ಜನರ ಭವಿಷ್ಯದ ಬಗ್ಗೆ ಒಂಚೂರು ಯೋಚನೆ ಮಾಡಲ್ಲ. ಒಂದುವೇಳೆ ’ಎಲ್ಲಾ ಸರಿ ಮಾಡ್ತೀವಿ’ ಅಂತ ಅವರು ಒಟ್ಟಿಗೆ ಮುಂದೆ ಬಂದ್ರೂ ಜಾಗತಿಕ ತಾಪಮಾನವನ್ನ ಸರಿ ಮಾಡೋಕೆ ಅವರಿಂದ ಆಗಲ್ಲ.

 ಮುಂದೆ ಒಂದು ದಿನ ಎಲ್ಲ ಜನರು ಬದಲಾಗಿ ಭೂಮಿಯನ್ನ ಸಂರಕ್ಷಿಸ್ತಾರೆ ಅಂತ ನಾವು ನಿರೀಕ್ಷೆ ಇಟ್ಕೊಬಾರದು ಅಂತ ಈ ಭವಿಷ್ಯವಾಣಿಯಿಂದ ಗೊತ್ತಾಗುತ್ತೆ. ಯಾಕಂದ್ರೆ ಹೋಗ್ತಾಹೋಗ್ತಾ ಜನರು ಸ್ವಾರ್ಥಿಗಳಾಗಿ “ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ” ಅಂತ ಬೈಬಲ್‌ ಹೇಳುತ್ತೆ.—2 ತಿಮೊತಿ 3:13.

ದೇವರು ಇದನ್ನ ಸರಿ ಮಾಡ್ತಾನೆ ಅಂತ ನಾವು ಯಾಕೆ ನಂಬಬಹುದು?

 ಸೃಷ್ಟಿಕರ್ತನಾಗಿರೋ ಯೆಹೋವ a ದೇವರಿಗೆ ಭೂಮಿ ಮೇಲೆ, ಮನುಷ್ಯರ ಮೇಲೆ ತುಂಬ ಕಾಳಜಿ ಇದೆ ಅಂತ ಬೈಬಲ್‌ ಹೇಳುತ್ತೆ. ಭೂಮಿಲಿರೋ ಸಮಸ್ಯೆಗಳನ್ನ ನೋಡಿ ಆತನು ಕೈ ಕಟ್ಕೊಂಡು ಕೂರಲ್ಲ, ಅದನ್ನೆಲ್ಲ ಬೇಗ ಸರಿ ಮಾಡ್ತಾನೆ. ಇದನ್ನ ನಂಬೋಕೆ ಸಹಾಯ ಮಾಡೋ ಮೂರು ವಚನಗಳನ್ನ ನೋಡೋಣ.

  1.  1. ದೇವರು “[ಭೂಮಿಯನ್ನ] ಹಾಗೇ ಸುಮ್ಮನೆ ಸೃಷ್ಟಿಸಲಿಲ್ಲ, ಜನ ವಾಸಿಸಬೇಕಂತನೇ ರೂಪಿಸಿದನು.”—ಯೆಶಾಯ 45:18.

     ದೇವರು ಭೂಮಿಗಾಗಿರೋ ತನ್ನ ಇಷ್ಟವನ್ನು ಖಂಡಿತ ನೆರವೇರಿಸ್ತಾನೆ. (ಯೆಶಾಯ 55:11) ಜೀವನ ಮಾಡೋಕೆ ಆಗದೆ ಇರುವಷ್ಟರ ಮಟ್ಟಿಗೆ ಭೂಮಿ ಹಾಳಾಗೋಕೆ ಅಥವಾ ಸಂಪೂರ್ಣವಾಗಿ ನಾಶವಾಗೋಕೆ ಆತನು ಬಿಡಲ್ಲ.

  2.  2. “ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ. ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”—ಕೀರ್ತನೆ 37:11, 29.

     ಮನುಷ್ಯರು ಇದೇ ಭೂಮಿಯಲ್ಲಿ ನೆಮ್ಮದಿಯಿಂದ ಶಾಶ್ವತವಾಗಿ ಜೀವಿಸ್ತಾರೆ ಅಂತ ದೇವರು ಬೈಬಲ್‌ನಲ್ಲಿ ಮಾತು ಕೊಟ್ಟಿದ್ದಾನೆ.

  3.  3. “ಆದ್ರೆ ಕೆಟ್ಟವರು ಭೂಮಿ ಮೇಲಿಂದ ನಾಶ ಆಗ್ತಾರೆ.”—ಜ್ಞಾನೋಕ್ತಿ 2:22.

     ಕೆಟ್ಟವರನ್ನ ಮತ್ತು ಭೂಮಿ ನಾಶ ಮಾಡುವವರನ್ನ ಈ ಭೂಮಿಯಿಂದಾನೇ ಕಿತ್ತು ಬಿಸಾಡ್ತಿನಿ ಅಂತ ದೇವರು ಮಾತು ಕೊಟ್ಟಿದ್ದಾನೆ.

ದೇವರು ನಮ್ಮ ಭವಿಷ್ಯಕ್ಕೋಸ್ಕರ ಏನು ಮಾಡ್ತಾನೆ?

 ಭೂಮಿಗಾಗಿರೋ ತನ್ನ ಇಷ್ಟವನ್ನು ದೇವರು ಹೇಗೆ ನರವೇರಿಸ್ತಾನೆ? ಇಡೀ ಭೂಮಿ ಮೇಲೆ ಆತನು ತನ್ನ ಸರ್ಕಾರವನ್ನ ತರ್ತಾನೆ. ಅದು ಸ್ವರ್ಗದಿಂದ ಆಳ್ವಿಕೆ ಮಾಡುತ್ತೆ. (ಮತ್ತಾಯ 6:10) ಅದಕ್ಕೆ ಭೂಮಿಲಿ ಇರೋ ಯಾವುದೇ ಮಾನವ ಸರ್ಕಾರಗಳ ಜೊತೆ ಭೂಮಿ ಬಗ್ಗೆ ಮತ್ತು ಪರಿಸರ ಸರಿ ಮಾಡೋದ್ರ ಬಗ್ಗೆ ಒಪ್ಪಂದ ಮಾಡ್ಕೊಳೋ ಅವಶ್ಯಕತೆ ಇಲ್ಲ. ಯಾಕಂದ್ರೆ ದೇವರು ಮಾನವ ಸರ್ಕಾರಗಳನ್ನ ತೆಗೆದುಹಾಕಿ ತನ್ನ ಸರ್ಕಾರವನ್ನ ಸ್ಥಾಪಿಸ್ತಾನೆ.—ದಾನಿಯೇಲ 2:44.

 ಮನುಷ್ಯರಿಗೆ ಮತ್ತು ಪರಿಸರಕ್ಕೆ ದೇವರ ಸರ್ಕಾರ ಒಳ್ಳೇದು ಮಾಡುತ್ತೆ. (ಕೀರ್ತನೆ 96:10-13) ತನ್ನ ಸರ್ಕಾರದಲ್ಲಿ ಯೆಹೋವ ಏನೆಲ್ಲ ಮಾಡ್ತಾನೆ ಅಂತ ನೋಡೋಣ.

  •   ಹಾಳಾಗಿರೋ ಪರಿಸರವನ್ನ ಸರಿ ಮಾಡೋದು

     ಬೈಬಲ್‌ ಏನು ಹೇಳುತ್ತೆ: “ಕಾಡು ಮತ್ತು ಬರಡು ಭೂಮಿ ಸಂಭ್ರಮಪಡುತ್ತೆ, ಬಯಲು ಪ್ರದೇಶ ಉಲ್ಲಾಸಿಸ್ತಾ ಹೂಗಳಿಂದ ಕಂಗೊಳಿಸುತ್ತೆ.”—ಯೆಶಾಯ 35:1.

     ಇದ್ರಿಂದ ನಮ್ಮ ಭವಿಷ್ಯದ ಬಗ್ಗೆ ಏನು ಗೊತ್ತಾಗುತ್ತೆ: ಯೆಹೋವ ಇಡೀ ಭೂಮಿಯನ್ನ ಸರಿ ಮಾಡ್ತಾನೆ. ಅದ್ರಲ್ಲೂ ಮನುಷ್ಯರು ಈಗಾಗಲೇ ಹಾಳುಮಾಡಿರೋ ಸ್ಥಳಗಳನ್ನ ಸರಿ ಮಾಡಿ ಮುಂಚಿನ ತರಾನೇ ಮಾಡ್ತಾನೆ.

  •   ಹವಾಮಾನದ ನಿಯಂತ್ರಣ

     “ಬಿರುಗಾಳಿಯನ್ನ [ಯೆಹೋವ] ನಿಲ್ಲಿಸ್ತಾನೆ, ಸಮುದ್ರದ ಅಲೆಗಳು ಪ್ರಶಾಂತವಾಗ್ತವೆ.”—ಕೀರ್ತನೆ 107:29.

     ಇದ್ರಿಂದ ನಮ್ಮ ಭವಿಷ್ಯದ ಬಗ್ಗೆ ಏನು ಗೊತ್ತಾಗುತ್ತೆ: ಪ್ರಕೃತಿಯನ್ನ ನಿಯಂತ್ರಿಸೋ ಶಕ್ತಿ ಯೆಹೋವನಿಗಿದೆ. ಹವಾಮಾನದ ಏರುಪೇರಿಂದ ಮನುಷ್ಯರಿಗೆ ಇನ್ಯಾವತ್ತೂ ಹಾನಿ ಆಗಲ್ಲ.

  •   ಭೂಮಿಯನ್ನ ನೋಡಿಕೊಳ್ಳೋಕೆ ಮನುಷ್ಯರಿಗೆ ಕಲಿಸ್ತಾನೆ

     ಬೈಬಲ್‌ ಏನು ಹೇಳುತ್ತೆ: “ನಾನು ನಿನಗೆ ತಿಳುವಳಿಕೆ ಕೊಡ್ತೀನಿ. ನೀನು ಯಾವ ದಾರಿಯಲ್ಲಿ ನಡೀಬೇಕು ಅಂತ ಕಲಿಸ್ತೀನಿ.”—ಕೀರ್ತನೆ 32:8.

     ಇದ್ರಿಂದ ನಮ್ಮ ಭವಿಷ್ಯದ ಬಗ್ಗೆ ಏನು ಗೊತ್ತಾಗುತ್ತೆ: ಭೂಮಿಯನ್ನ ನೋಡ್ಕೊಳ್ಳೋ ಜವಾಬ್ದಾರಿಯನ್ನ ಯೆಹೋವ ಮನುಷ್ಯರಿಗೆ ಕೊಟ್ಟಿದ್ದಾನೆ. (ಆದಿಕಾಂಡ 1:28; 2:15) ಆ ಜವಾಬ್ದಾರಿಯನ್ನ ಹೇಗೆ ಚೆನ್ನಾಗಿ ಮಾಡ್ಕೊಂಡು ಹೋಗಬೇಕು ಮತ್ತು ಪರಿಸರವನ್ನ ಹಾಳು ಮಾಡದೆ ಇರೋಕೆ ಏನು ಮಾಡಬೇಕು ಅಂತಾನೂ ಆತನು ಕಲಿಸ್ತಾನೆ.

a ಯೆಹೋವ ಅನ್ನೋದು ದೇವರ ಹೆಸರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.