ಮಾಹಿತಿ ಇರುವಲ್ಲಿ ಹೋಗಲು

“ಯೆಹೋವ ಯಾರು?”

“ಯೆಹೋವ ಯಾರು?”

ಬೈಬಲ್‌ ಕೊಡುವ ಉತ್ತರ

 ಯೆಹೋವ ಅನ್ನೋದು ಸತ್ಯ ದೇವರ ಹೆಸರು, ಎಲ್ಲದರ ಸೃಷ್ಟಿಕರ್ತ ಆತನೇ ಎಂದು ಬೈಬಲ್‌ ಹೇಳುತ್ತದೆ. (ಪ್ರಕಟನೆ 4:11) ಪ್ರವಾದಿಗಳಾದ ಅಬ್ರಹಾಮ, ಮೋಶೆ ಆತನನ್ನೇ ಆರಾಧಿಸಿದರು. ಯೇಸು ಕೂಡ ಆತನನ್ನೇ ಆರಾಧಿಸಿದನು. (ಆದಿಕಾಂಡ 24:27; ವಿಮೋಚನಕಾಂಡ 15:1, 2; ಯೋಹಾನ 20:17) ಆತನು ಒಂದು ಜಾತಿ ಜನಾಂಗದ ದೇವರಲ್ಲ, “ಇಡೀ ಭೂಮಿಗೆ” ದೇವರು.—ಕೀರ್ತನೆ 47:2.

 ದೇವರಿಗಿರುವ ಯೆಹೋವ ಅನ್ನೋ ಹೆಸರು ತುಂಬ ವಿಶೇಷವಾದದ್ದು ಎಂದು ಬೈಬಲ್‌ ಹೇಳುತ್ತದೆ. (ವಿಮೋಚನಕಾಂಡ 3:15; ಕೀರ್ತನೆ 83:18) ಹೀಬ್ರು ಭಾಷೆಯಲ್ಲಿ ಯೆಹೋವ ಎಂಬ ಹೆಸರಿಗೆ ಬಳಸಿರುವ ಕ್ರಿಯಾಪದದ ಅರ್ಥ “ಆಗುತ್ತಾನೆ” ಎಂದಾಗಿದೆ. ಹಾಗಾಗಿ ಅನೇಕ ಪಂಡಿತರು ಆ ಹೆಸರಿನ ಅರ್ಥ “ಆಗುವಂತೆ ಮಾಡುತ್ತಾನೆ” ಅನ್ನುತ್ತಾರೆ. ಯೆಹೋವ ಸೃಷ್ಟಿಕರ್ತನು, ತನ್ನ ಉದ್ದೇಶವನ್ನು ನೆರವೇರಿಸುವವನು ಆಗಿರುವುದರಿಂದ ಆ ಹೆಸರಿನ ಅರ್ಥ ಆತನಿಗೆ ಸರಿಯಾಗಿ ಹೊಂದುತ್ತದೆ. (ಯೆಶಾಯ 55:10, 11) ಯೆಹೋವ ನಿಜವಾಗಿ ಎಂಥ ವ್ಯಕ್ತಿ ಅಂತ ತಿಳಿಯಲು ಬೈಬಲ್‌ ಸಹಾಯ ಮಾಡುತ್ತದೆ. ಆತನ ಮುಖ್ಯ ಗುಣವಾದ ಪ್ರೀತಿಯ ಬಗ್ಗೆನೂ ಬೈಬಲಲ್ಲಿದೆ.—ವಿಮೋಚನಕಾಂಡ 34:5-7; ಲೂಕ 6:35; 1 ಯೋಹಾನ 4:8.

 ಯೆಹೋವ ಅನ್ನುವ ಹೆಸರು ಹೀಬ್ರು ಭಾಷೆಯಲ್ಲಿ ನಾಲ್ಕು ಅಕ್ಷರಗಳಲ್ಲಿದೆ. ಇದಕ್ಕೆ ಚತುರಕ್ಷರಿ (ಇಂಗ್ಲಿಷ್‌ನಲ್ಲಿ, YHWH) ಎಂದು ಹೆಸರು. ಹಿಂದಿನ ಕಾಲದಲ್ಲಿ ಜನ ದೇವರ ಹೆಸರನ್ನು ಹೀಬ್ರು ಭಾಷೆಯಲ್ಲಿ ಹೇಗೆ ಉಚ್ಚರಿಸುತ್ತಿದ್ದರು ಅಂತ ಯಾರಿಗೂ ಗೊತ್ತಿಲ್ಲ. ಇಂಗ್ಲಿಷ್‌ ಭಾಷೆಯಲ್ಲಿ “ಜೆಹೋವ” ಅನ್ನುವ ಹೆಸರು ತುಂಬ ವರ್ಷಗಳಿಂದನೇ ಬಳಕೆಯಲ್ಲಿದೆ. ಈ ಹೆಸರನ್ನು ಮೊದಲು ಉಪಯೋಗಿಸಿದ್ದು ವಿಲ್ಯಮ್‌ ಟಿಂಡೇಲ್‌ ಭಾಷಾಂತರಿಸಿದ ಬೈಬಲಿನಲ್ಲಿ. ಇದು 1530 ರಲ್ಲಿ ಬಿಡುಗಡೆ ಆಯಿತು. a

ಹಿಂದಿನ ಕಾಲದ ಹೀಬ್ರು ಭಾಷೆಯಲ್ಲಿದ್ದ ದೇವರ ಹೆಸರಿನ ಉಚ್ಚರಣೆ ಯಾಕೆ ಗೊತ್ತಿಲ್ಲ?

 ಹಿಂದಿನ ಕಾಲದಲ್ಲಿ ಹೀಬ್ರು ಭಾಷೆಯನ್ನು ಬರೆಯುವಾಗ ಸ್ವರಾಕ್ಷರಗಳಿಲ್ಲದೆ ಬರೀ ವ್ಯಂಜನಾಕ್ಷರಗಳಲ್ಲಿ ಬರೆಯುತ್ತಿದ್ದರು. ಆ ಭಾಷೆ ಓದಲು ಗೊತ್ತಿರುವವರು ಓದುವಾಗ ಸರಿಯಾದ ಸ್ವರಾಕ್ಷರಗಳನ್ನು ಕೂಡಿಸಿ ಸುಲಭವಾಗಿ ಓದುತ್ತಿದ್ದರು. ಹೀಬ್ರು ಶಾಸ್ತ್ರಗ್ರಂಥದ (“ಹಳೇ ಒಡಂಬಡಿಕೆ”) ಭಾಷಾಂತರ ಮುಗಿದ ಮೇಲೆ ಕೆಲವು ಯೆಹೂದ್ಯರು ದೇವರ ಹೆಸರನ್ನು ಉಚ್ಚರಿಸುವುದು ತಪ್ಪು ಅನ್ನುವ ಮೂಢನಂಬಿಕೆಯನ್ನು ನಂಬಲು ಶುರುಮಾಡಿದರು. ಒಂದು ವಚನ ಓದುವಾಗ ಮಧ್ಯದಲ್ಲಿ ದೇವರ ಹೆಸರು ಬಂದರೆ ಆ ಹೆಸರಿಗೆ ಬದಲಾಗಿ “ಕರ್ತನು” ಅಥವಾ “ದೇವರು” ಅಂತ ಓದುತ್ತಾ ಇದ್ದರು. ಶತಮಾನಗಳು ಕಳೆದಂತೆ ಈ ಮೂಢನಂಬಿಕೆ ಎಲ್ಲ ಕಡೆ ಹರಡಿಕೊಂಡಿತು. ಹೀಗೆ ಹಿಂದಿನ ಕಾಲದಲ್ಲಿ ದೇವರ ಹೆಸರನ್ನು ಹೇಗೆ ಉಚ್ಚರಿಸುತ್ತಿದ್ದರು ಅನ್ನೋದು ಮರೆಯಾಯಿತು. b

 ದೇವರ ಹೆಸರನ್ನು “ಯಾಹ್ವೆ” ಅಂತ ಉಚ್ಚರಿಸುತ್ತಿದ್ದರೆಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಬೇರೆ ಬೇರೆ ರೀತಿಯ ಉಚ್ಚಾರಣೆಗಳನ್ನು ಹೇಳುತ್ತಾರೆ. ಮೃತ ಸಮುದ್ರದ ಹತ್ತಿರ ಸಿಕ್ಕಿದ ಒಂದು ಸುರುಳಿಯಲ್ಲಿ ಗ್ರೀಕ್‌ ಭಾಷೆಯಲ್ಲಿ ಯಾಜಕಕಾಂಡ ಪುಸ್ತಕದ ಒಂದು ಭಾಗ ಇದೆ. ಅದರಲ್ಲಿ ದೇವರ ಹೆಸರನ್ನು ಗ್ರೀಕ್‌ನಲ್ಲಿ ಯಾಓ ಎಂದು ಬರೆಯಲಾಗಿದೆ. ಆರಂಭದ ಗ್ರೀಕ್‌ ಬರಹಗಾರರು ದೇವರ ಹೆಸರನ್ನು ಯಾಎ, ಯಾಬೆ, ಮತ್ತು ಯಾಊವೆ ಅಂತ ಉಚ್ಚರಿಸಬಹುದು ಎಂದು ಹೇಳುತ್ತಾರೆ. ಆದರೆ ಪ್ರಾಚೀನ ಕಾಲದ ಹೀಬ್ರು ಭಾಷೆಯಲ್ಲಿ ದೇವರ ಹೆಸರನ್ನು ಹೀಗೆ ಉಚ್ಚರಿಸುತ್ತಿದ್ದರು ಅಂತ ಹೇಳಕ್ಕಾಗಲ್ಲ. c

ಬೈಬಲಲ್ಲಿರುವ ದೇವರ ಹೆಸರಿನ ಬಗ್ಗೆ ತಪ್ಪು ಕಲ್ಪನೆ

 ತಪ್ಪು: “ಯೆಹೋವ” ಅನ್ನೋ ಹೆಸರನ್ನು ಸೇರಿಸಿದ್ದು ಭಾಷಾಂತರಕಾರರು.

 ಸರಿ: ಹೀಬ್ರು ಭಾಷೆಯಲ್ಲಿ ಚತುರಕ್ಷರಿಯಲ್ಲಿರುವ ದೇವರ ಹೆಸರು ಬೈಬಲಲ್ಲಿ ಸುಮಾರು 7,000 ಸಲ ಇದೆ. d ಆದರೆ ಹೆಚ್ಚಿನ ಭಾಷಾಂತರಕಾರರು ದೇವರ ಹೆಸರನ್ನು ಮನಸ್ಸು ಬಂದ ಹಾಗೆ ತೆಗೆದುಹಾಕಿದರು. ಅಲ್ಲದೆ ಆ ಹೆಸರಿಗೆ ಬದಲಾಗಿ “ಕರ್ತನು” ಎಂಬ ಬಿರುದನ್ನು ಬಳಸಿದರು.

 ತಪ್ಪು: ಸರ್ವಶಕ್ತ ದೇವರಿಗೆ ಒಂದು ವಿಶೇಷ ಹೆಸರು ಬೇಕಾಗಿಲ್ಲ.

 ಸರಿ: ತನ್ನ ಹೆಸರನ್ನು ಸಾವಿರಾರು ಸಲ ಬಳಸುವಂತೆ ದೇವರೇ ಬೈಬಲ್‌ ಬರಹಗಾರರಿಗೆ ಹೇಳಿದನು. ಆತನನ್ನು ಆರಾಧಿಸುವವರು ಆ ಹೆಸರನ್ನು ಉಪಯೋಗಿಸಬೇಕೆಂದು ಆತನೇ ಹೇಳಿದ್ದಾನೆ. (ಯೆಶಾಯ 42:8; ಯೋವೇಲ 2:32; ಮಲಾಕಿ 3:16; ರೋಮನ್ನರಿಗೆ 10:13) ನಿಜ ಹೇಳಬೇಕಾದ್ರೆ, ಸುಳ್ಳು ಪ್ರವಾದಿಗಳು ದೇವರ ಹೆಸರನ್ನು ಜನ ಮರೆತು ಹೋಗುವಂತೆ ಮಾಡಿದಾಗ ಆತನು ಅವರನ್ನು ಬೈದನು.—ಯೆರೆಮೀಯ 23:27.

 ತಪ್ಪು: ಯೆಹೂದ್ಯರ ಸಂಪ್ರದಾಯ ಪ್ರಕಾರ ಬೈಬಲಿಂದ ದೇವರ ಹೆಸರನ್ನು ತೆಗೆದುಹಾಕಬೇಕು.

 ಸರಿ: ಕೆಲವು ಯೆಹೂದಿ ಪಂಡಿತರು ದೇವರ ಹೆಸರನ್ನು ಉಚ್ಚರಿಸುತ್ತಿರಲಿಲ್ಲ ನಿಜ. ಆದರೆ ಅವರ ಹತ್ತಿರ ಇದ್ದ ಬೈಬಲಿಂದ ದೇವರ ಹೆಸರನ್ನು ತೆಗೆದುಹಾಕಲಿಲ್ಲ. ವಿಷಯ ಏನೇ ಆಗಿರಲಿ ಮನುಷ್ಯರು ಮಾಡಿರುವ ಈ ಸಂಪ್ರದಾಯಗಳನ್ನು ಪಾಲಿಸಿ ದೇವರ ಆಜ್ಞೆಗಳನ್ನು ಮುರಿಯುವುದು ಆತನಿಗೆ ಇಷ್ಟ ಇಲ್ಲ.—ಮತ್ತಾಯ 15:1-3.

 ತಪ್ಪು: ಹೀಬ್ರುವಿನಲ್ಲಿ ದೇವರ ಹೆಸರನ್ನು ಹೇಗೆ ಉಚ್ಚರಿಸುತ್ತಿದ್ದರು ಅಂತ ಯಾರಿಗೂ ಗೊತ್ತಿಲ್ಲ. ಹಾಗಾಗಿ ಈ ಹೆಸರನ್ನು ಬೈಬಲಲ್ಲಿ ಉಪಯೋಗಿಸಬಾರದು.

 ಸರಿ: ಇದು ನಿಜವಾಗಿದ್ದರೆ ಭಾಷೆ ಬೇರೆ ಬೇರೆ ಆಗಿದ್ದರೂ ದೇವರ ಹೆಸರನ್ನು ಒಂದೇ ರೀತಿ ಉಚ್ಚರಿಸಬೇಕು ಅಂತ ಆತನು ಹೇಳುತ್ತಿದ್ದಾನೆ ಎಂದಾಗುತ್ತೆ. ಆದರೆ ಅದು ನಿಜ ಅಲ್ಲ. ಹಿಂದಿನ ಕಾಲದಲ್ಲೂ ಬೇರೆ ಬೇರೆ ಭಾಷೆ ಮಾತಾಡುತ್ತಿದ್ದ ದೇವರ ಆರಾಧಕರು ಕೆಲವು ಹೆಸರುಗಳನ್ನು ಬೇರೆ ಬೇರೆ ರೀತಿ ಉಚ್ಚರಿಸುತ್ತಿದ್ದರು.

 ಉದಾಹರಣೆಗೆ, ಇಸ್ರಾಯೇಲ್ಯರ ನ್ಯಾಯಾಧೀಶ ಯೆಹೋಶುವ ಹೆಸರನ್ನು ತೆಗೆದುಕೊಳ್ಳಿ. ಒಂದನೇ ಶತಮಾನದಲ್ಲಿ ಹೀಬ್ರು ಭಾಷೆ ಮಾತಾಡುತ್ತಿದ್ದ ಕ್ರೈಸ್ತರು ಅವನ ಹೆಸರನ್ನು ಯೆಹೋಶುವ ಅಂತ ಉಚ್ಚರಿಸುತ್ತಿದ್ದರು. ಆದರೆ ಗ್ರೀಕ್‌ ಭಾಷೆ ಮಾತಾಡುತ್ತಿದ್ದವರು ಈಸೊಸ್‌ ಅಂತ ಉಚ್ಚರಿಸುತ್ತಿದ್ದರು. ಬೈಬಲಲ್ಲಿ ಯೆಹೋಶುವ ಎಂಬ ಹೀಬ್ರು ಹೆಸರನ್ನು ಗ್ರೀಕಿಗೆ ಭಾಷಾಂತರ ಮಾಡಿ ಈಸೊಸ್‌ ಅಂತ ಹಾಕಲಾಗಿದೆ. ಇದರಿಂದ ಏನು ಗೊತ್ತಾಗುತ್ತದೆ? ಆರಂಭದ ಕ್ರೈಸ್ತರು ಹೆಸರುಗಳನ್ನು ಅವರವರ ಭಾಷೆಗೆ ತಕ್ಕ ಹಾಗೆ ಉಚ್ಚರಿಸುತ್ತಿದ್ದರು.—ಅಪೊಸ್ತಲರ ಕಾರ್ಯ 7:45; ಇಬ್ರಿಯ 4:8.

 ಇದು ದೇವರ ಹೆಸರಿನ ವಿಷಯದಲ್ಲೂ ನಿಜ. ದೇವರ ಹೆಸರನ್ನು ಹೇಗೆ ಉಚ್ಚರಿಸಬೇಕು ಅನ್ನೋದಕ್ಕಿಂತ ಬೈಬಲಲ್ಲಿ ದೇವರ ಹೆಸರು ಎಲ್ಲೆಲ್ಲಿ ಇರಬೇಕೋ ಅಲ್ಲೆಲ್ಲ ಅದನ್ನು ಇಡುವುದೇ ತುಂಬ ಮುಖ್ಯ.

a ಟಿಂಡೇಲ್‌ ತಾನು ಭಾಷಾಂತರಿಸಿದ ಬೈಬಲಿನ ಆರಂಭದ ಐದು ಪುಸ್ತಕಗಳಲ್ಲಿ“Iehouah” (ಯೆಹೂವಾ) ಅಂತ ಬಳಸಿದನು. ಸಮಯ ಹೋದಂತೆ ಇಂಗ್ಲಿಷ್‌ ಭಾಷೆ ಬದಲಾಯಿತು. ದೇವರ ಹೆಸರಿನ ಅಕ್ಷರಗಳೂ ಬದಲಾದವು. ಉದಾಹರಣೆಗೆ, 1612 ರಲ್ಲಿ ಹೆನ್ರಿ ಏನ್ಸ್‌ವರ್ತ್‌ ಕೀರ್ತನೆ ಪುಸ್ತಕ ಭಾಷಾಂತರ ಮಾಡುವಾಗ ಎಲ್ಲ ಕಡೆ “Iehovah” (ಯೆಹೋವ) ಅಂತ ಬಳಸಿದನು. ಆದರೆ ಅವನು 1639 ರಲ್ಲಿ ಆ ಭಾಷಾಂತರವನ್ನು ಪರಿಷ್ಕರಿಸಿದಾಗ “Jehovah” (ಜೆಹೋವ) ಅಂತ ಬಳಸಿದನು. 1901 ರಲ್ಲಿ ಅಮೆರಿಕನ್‌ ಸ್ಟ್ಯಾಂಡರ್ಡ್‌ ವರ್ಷನ್‌ ಬೈಬಲಿನ ಅನುವಾದಕರು ಹೀಬ್ರು ಗ್ರಂಥದಲ್ಲಿ ದೇವರ ಹೆಸರಿರುವ ಕಡೆಯೆಲ್ಲ “ಜೆಹೋವ” ಅಂತ ಬಳಸಿದರು.

b “ಯೆಹೂದ್ಯರು ಬಾಬೆಲಿಂದ ಬಿಡುಗಡೆಯಾಗಿ ಬಂದ ಸ್ವಲ್ಪದರಲ್ಲಿ ಯಾಹ್ವೆ ಹೆಸರನ್ನು ಜನ ತುಂಬ ಭಯಭಕ್ತಿಯಿಂದ ಕಾಣಲು ಶುರುಮಾಡಿದರು. ಅಲ್ಲದೆ ಆ ಹೆಸರಿಗೆ ಬದಲಾಗಿ ಅಧೊನೈ ಅಥವಾ ಎಲೊಹಿಮ್‌ ಎಂಬ ಪದವನ್ನು ಬಳಸೋದು ರೂಢಿಗೆ ಬಂತು” ಎಂದು ಹೇಳುತ್ತದೆ ಹೊಸ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌) 2 ನೇ ಆವೃತ್ತಿ, ಸಂಪುಟ 14, ಪುಟ 883-884.

c ಹೆಚ್ಚು ವಿಷಯ ತಿಳಿಯಲು ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರದ ಪರಿಶಿಷ್ಟ ಎ4 “ಹೀಬ್ರು ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು” ನೋಡಿ.

d ಹಳೇ ಒಡಂಬಡಿಕೆಯ ದೇವತಾಶಾಸ್ತ್ರ ನಿಘಂಟು (ಇಂಗ್ಲಿಷ್‌) ಸಂಪುಟ 2, ಪುಟ 523-524 ನೋಡಿ.