ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಾಯಕ್ಕೆ ತಕ್ಕಂತೆ ಜೀವನ ಹೇಗೆ?

ಆದಾಯಕ್ಕೆ ತಕ್ಕಂತೆ ಜೀವನ ಹೇಗೆ?

ಆದಾಯಕ್ಕೆ ತಕ್ಕಂತೆ ಜೀವನ ಹೇಗೆ?

ತೂತಿರುವ ಒಂದು ಬಲೂನು ನಿಮ್ಮ ಬಳಿ ಇದೆಯೆಂದು ನೆನಸಿ. ಅದರಲ್ಲಿ ಗಾಳಿ ತುಂಬಿಕೊಂಡೇ ಇರಬೇಕಾದರೆ ಏನು ಮಾಡಬೇಕು? ಅದರಿಂದ ಹೊರಹೋಗುತ್ತಿರುವಷ್ಟೇ ಗಾಳಿಯನ್ನು ನೀವು ತುಂಬಿಸುತ್ತಾ ಇರಬೇಕು.

ನಿಜ ಹೇಳಬೇಕೆಂದರೆ, ಆದಾಯಕ್ಕೆ ತಕ್ಕಂತೆ ಜೀವನ ಎಂಬುದರ ಅರ್ಥವೂ ಅದೇ. ನಿಮ್ಮ ಆದಾಯ ಆ ಬಲೂನಿಗೆ ನೀವು ತುಂಬಿಸುತ್ತಿರುವ ಗಾಳಿಯಂತಿದ್ದರೆ, ನಿಮ್ಮ ಖರ್ಚುವೆಚ್ಚಗಳು ಆ ತೂತಿನಿಂದ ಹೊರಹೋಗುತ್ತಿರುವ ಗಾಳಿಯಂತಿದೆ. ಖರ್ಚುವೆಚ್ಚ ಆದಾಯಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳುವುದೇ ನಿಮ್ಮ ಮುಂದಿರುವ ಸವಾಲು.

ಈ ವಿಚಾರ ತುಂಬ ಸರಳವೆಂಬಂತೆ ತೋರಿದರೂ ಅದನ್ನು ಕಾರ್ಯರೂಪಕ್ಕಿಳಿಸಿ, ಪ್ರಯೋಜನಪಡೆಯುವುದು ಸ್ವಲ್ಪ ಕಷ್ಟವೇ. ಆದರೆ ಈ ಮೂಲಭೂತ ವಿಚಾರವನ್ನು ಪಾಲಿಸಲು ಪ್ರಯತ್ನಿಸಿದರೆ ಮಾತ್ರ ಅನೇಕಾನೇಕ ಆರ್ಥಿಕ ಸಂಕಷ್ಟಗಳಿಂದ ತಪ್ಪಿಸಿಕೊಳ್ಳಬಹುದು. ಇದನ್ನು ಮಾಡುವುದು ಹೇಗೆ? ನಿಜವಾಗಿಯೂ ಪ್ರಾಯೋಗಿಕವಾದ ನಿರ್ದೇಶನಗಳು ನಮಗೆಲ್ಲಿ ಸಿಗುವವು? ಈ ವಿಷಯದಲ್ಲಿ ಬಹಳಷ್ಟು ಸಹಾಯಕಾರಿ ಮಾಹಿತಿ ಬೈಬಲಿನಲ್ಲಿದೆ. ಅದರತ್ತ ಈಗ ಸ್ವಲ್ಪ ಗಮನಹರಿಸೋಣ.

ಸಹಾಯಕಾರಿ ಬೈಬಲ್‌ ಸೂತ್ರಗಳು

ಹಣಕಾಸಿನ ನಿರ್ವಹಣೆಗೆ ನೆರವಾಗುವ ಅನೇಕ ಪ್ರಾಯೋಗಿಕ ಸೂತ್ರಗಳು ಬೈಬಲಿನಲ್ಲಿವೆ. ಇವುಗಳಲ್ಲಿ ಕೆಲವೊಂದನ್ನು ಪರಿಶೀಲಿಸೋಣ. ಈ ಸೂತ್ರಗಳು ನಿಮಗೆ ಆದಾಯಕ್ಕೆ ತಕ್ಕಂತೆ ಜೀವನಮಾಡಲು ನೆರವಾಗುವವೊ ಇಲ್ಲವೊ ಎಂಬದನ್ನು ನೀವೇ ನೋಡಿ.

ಯೋಜನೆ ಇಲ್ಲವೆ ಬಜೆಟ್‌ ಮಾಡಿ. ಉತ್ತಮ ಹಣನಿರ್ವಹಣೆಗಾಗಿ ನಿಮ್ಮ ಆದಾಯ ಎಷ್ಟು, ಖರ್ಚು ಎಷ್ಟು ಎಂದು ನಿಮಗೆ ತಿಳಿದಿರಬೇಕು. “ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ; ಆತುರಪಡುವ ಪ್ರತಿಯೊಬ್ಬನಿಗೆ ಕೊರತೆ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 21:5, NIBV) ಕೆಲವರು ಹಣವನ್ನು ನಿರ್ದಿಷ್ಟ ಖರ್ಚುಗಳಿಗಾಗಿ, ಉದಾಹರಣೆಗೆ ಆಹಾರ, ಬಾಡಿಗೆ, ಬಟ್ಟೆಬರೆ ಮುಂತಾದವುಗಳಿಗೆಂದು ಬದಿಗಿರಿಸುತ್ತಾರೆ. ಹೀಗೆ ಯಾವುದಕ್ಕೆಲ್ಲ ಖರ್ಚು ಮಾಡಬೇಕೆಂದು ಯೋಜಿಸಲು ಸಹಾಯವಾಗುತ್ತದೆ. ನೀವು ಈ ಸರಳ ವಿಧಾನವನ್ನು ಇಲ್ಲವೆ ಬೇರಾವುದೇ ಜಟಿಲ ವಿಧಾನ ಬಳಸುತ್ತಿರಲಿ, ಹಣ ಯಾವುದಕ್ಕೆ ಖರ್ಚಾಗುತ್ತಿದೆಯೆಂದು ನಿಮಗೆ ತಿಳಿದಿರುವುದೇ ಮುಖ್ಯ. ಭೋಗವಸ್ತುಗಳಿಗಿಂತ ಅತ್ಯಗತ್ಯ ವಸ್ತುಗಳಿಗೆ ಆದ್ಯತೆ ಕೊಡಬೇಕು.

ಅಸೂಯೆ ಬೇಡ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿರುವ ಅನೇಕ ಜನರಿಗೆ, ಮುಂದುವರಿದ ದೇಶಗಳಲ್ಲಿನ ಜನರ ಬಳಿ ಇರುವ ವಸ್ತುಗಳು ಇರಬೇಕೆಂಬ ಹಂಬಲ. ಇನ್ನೂ ಅನೇಕ ವ್ಯಕ್ತಿಗಳಿಗೆ, ತಮ್ಮ ನೆರೆಯವರು ಆಡಂಬರದಿಂದ ಪ್ರದರ್ಶಿಸುತ್ತಿರುವ ವಸ್ತುಗಳು ತಮ್ಮ ಬಳಿಯೂ ಇರಬೇಕೆಂಬ ಆಶೆ. ಇದೊಂದು ರೀತಿಯ ಪಾಶ. ಬಹುಶಃ ಆ ನೆರೆಯವರು ಆ ವಸ್ತುಗಳನ್ನು ಸಾಲಮಾಡಿ ಖರೀದಿಸಿರಬಹುದು. ಹಾಗಾಗಿ ಅವರ ಮೂರ್ಖತನವನ್ನು ಅನುಸರಿಸಿ ನಾವೇಕೆ ಆರ್ಥಿಕ ಕಷ್ಟದಲ್ಲಿ ಸಿಕ್ಕಿಬೀಳಬೇಕು? “ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು; ತನಗೆ ಕೊರತೆಯಾಗುವದೆಂದು ಅರಿಯನು” ಎಂದು ಬೈಬಲ್‌ ಎಚ್ಚರಿಸುತ್ತದೆ.—ಜ್ಞಾನೋಕ್ತಿ 28:22.

ನಿಮ್ಮ ಜೀವನವನ್ನು ಸರಳವಾಗಿಡಿ. ಯೇಸು ತನ್ನ ಹಿಂಬಾಲಕರಿಗೆ ತಮ್ಮ ಕಣ್ಣನ್ನು “ಸರಳವಾಗಿ”ಡುವಂತೆ ಬುದ್ಧಿಹೇಳಿದನು. (ಮತ್ತಾಯ 6:22) ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪರ್ವಾಗಿಲ್ಲ ಜುಟ್ಟಿಗೆ ಮಲ್ಲಿಗೆ ಬೇಕು’ ಎಂಬಂತೆ ಖರ್ಚುಮಾಡಿದರೆ ನಾವು ಖಂಡಿತವಾಗಿ ಆರ್ಥಿಕ ಸಂಕಷ್ಟಕ್ಕೆ ಬೀಳುವೆವು. ಒಂದು ‘ಏಷ್ಯನ್‌ ಡಿವೆಲಪ್‌ಮೆಂಟ್‌ ಬ್ಯಾಂಕ್‌’ ವರದಿಗನುಸಾರ, ಫಿಲಿಪ್ಪೀನ್ಸ್‌ ದೇಶದಲ್ಲಿ ಹತ್ತಿರಹತ್ತಿರ ಶೇ. 33ರಷ್ಟು ಜನರು ಮತ್ತು ಭಾರತದಲ್ಲಿ ಶೇ. 50ಕ್ಕಿಂತ ಹೆಚ್ಚು ಜನರು ಏಷ್ಯಾ ಖಂಡಕ್ಕಿರುವ ಬಡತನ ರೇಖೆಗಿಂತಲೂ (ದಿನಕ್ಕೆ ಸುಮಾರು 60 ರೂ.) ಕೆಳಗಿನ ಮಟ್ಟದಲ್ಲಿ ಜೀವಿಸುತ್ತಾರೆ. ಇಷ್ಟು ಕಡಿಮೆ ಆದಾಯವಿರುವಾಗ, ಮೂಲಭೂತ ಅಗತ್ಯಗಳನ್ನು ಮಾತ್ರ ಪೂರೈಸಿಕೊಳ್ಳುವುದು ವಿವೇಕಯುತ. ಆದರೆ ಧನಿಕ ರಾಷ್ಟ್ರಗಳಲ್ಲೂ ಜನರು ಇದೇ ತತ್ವ ಅನ್ವಯಿಸಿದರೆ ಹಣಕಾಸಿನ ಅನೇಕ ತೊಂದರೆಗಳನ್ನು ತಪ್ಪಿಸಬಹುದು.

ನಿಜವಾಗಿ ಅಗತ್ಯವಿರುವ ವಿಷಯಗಳಲ್ಲೇ ತೃಪ್ತರಾಗಿರಿ. ಈ ಮಾತು, ನಿಮ್ಮ ಜೀವನವನ್ನು ಸರಳವಾಗಿಡುವ ಸಲಹೆಗೆ ಹೊಂದಿಕೆಯಲ್ಲಿದೆ. ಈ ಸಲಹೆಯನ್ನೇ ಬೈಬಲ್‌ 1 ತಿಮೊಥೆಯ 4:8ರಲ್ಲಿ ಕೊಡುತ್ತದೆ: “ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು.” ತುಂಬ ಸಂತೋಷದಿಂದಿರುವ ಜನರಲ್ಲಿ ಕೆಲವರ ಬಳಿ ತುಂಬ ಹಣ ಇರಲಿಕ್ಕಿಲ್ಲ. ಅವರು ತಮ್ಮ ಬಳಿ ಏನಿದೆಯೊ ಅದರಲ್ಲೇ ಅಂದರೆ ಕುಟುಂಬ ಹಾಗೂ ಸ್ನೇಹಿತರ ಪ್ರೀತಿಯಲ್ಲೇ ತೃಪ್ತರಾಗಿದ್ದಾರೆ, ಬರೇ ಭೌತಿಕ ವಸ್ತುಗಳಿಂದಲ್ಲ.—ಜ್ಞಾನೋಕ್ತಿ 15:17.

ಅನಾವಶ್ಯಕ ಸಾಲ ಮಾಡಬೇಡಿ. “ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.” ಬೈಬಲಿನ ಈ ಹೇಳಿಕೆ ಎಷ್ಟು ಸತ್ಯವಲ್ಲವೇ! (ಜ್ಞಾನೋಕ್ತಿ 22:7) ಕೆಲವೊಂದು ಪರಿಸ್ಥಿತಿಗಳಲ್ಲಿ ಸಾಲಮಾಡುವುದು ಅನಿವಾರ್ಯವಾಗಿರಬಹುದು. ಆದರೆ ತಾವು ಆಶಿಸುವಂಥ ವಸ್ತುವನ್ನು ಖರೀದಿಸಲೆಂದು ಅನಾವಶ್ಯಕ ಸಾಲಮಾಡುವವರು ಅತಿ ಭಾರದ ಬೀಸುವಕಲ್ಲನ್ನು ತಮ್ಮ ಕುತ್ತಿಗೆಗೆ ಕಟ್ಟಿಕೊಂಡಂತಿರುತ್ತದೆ. ಕ್ರೆಡಿಟ್‌ ಕಾರ್ಡುಗಳನ್ನು ಬಳಸುವಾಗ ಇದು ವಿಶೇಷವಾಗಿ ಸತ್ಯ. ಟೈಮ್‌ ಪತ್ರಿಕೆ ಹೇಳಿದ್ದು: “ಕೈಯಲ್ಲಿ ಕ್ರೆಡಿಟ್‌ ಕಾರ್ಡ್‌ ಇದ್ದರೆ ಸಾಕು, ಸಿಕ್ಕಾಪಟ್ಟೆ ಖರ್ಚು ಮಾಡುತ್ತೇವೆ.” ಫಿಲಿಪ್ಪೀನ್ಸ್‌ ನಿವಾಸಿ ಎರಿಕ್‌ ಹೇಳುವುದು: “ನಾನು ಕ್ರೆಡಿಟ್‌ ಕಾರ್ಡ್‌ ಬಳಸುವಾಗೆಲ್ಲ, ನಗದು ಕೊಟ್ಟು ಖರೀದಿಸುವುದಕ್ಕಿಂತ ಹೆಚ್ಚನ್ನೇ ಖರೀದಿಸುತ್ತೇನೆ. ಅದರ ಬಿಲ್‌ ಕಟ್ಟಬೇಕಾಗಿ ಬರುವಾಗ ನನ್ನ ಬಜೆಟ್‌ ಎಲ್ಲ ತಲೆಕೆಳಗಾಗುತ್ತದೆ.” ಹಾಗಾಗಿ ಸುಲಭ ಕ್ರೆಡಿಟ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ತುಂಬ, ತುಂಬ ಜಾಗ್ರತೆ ವಹಿಸಬೇಕು!—2 ಅರಸುಗಳು 4:1; ಮತ್ತಾಯ 18:25.

ಮೊದಲು ಹಣ ಉಳಿಸಿ, ಆಮೇಲೆ ಖರೀದಿಸಿ. ಏನಾದರೂ ಖರೀದಿ ಮಾಡುವ ಮುಂಚೆ ಅದಕ್ಕಾಗಿ ಹಣ ಉಳಿಸುವುದು ಹಳೇಕಾಲದ್ದೆಂಬಂತೆ ತೋರಿದರೂ, ಅದು ಆರ್ಥಿಕ ಸಂಕಷ್ಟವನ್ನು ತಪ್ಪಿಸುವ ಅತ್ಯಂತ ವಿವೇಕಯುತ ವಿಧಾನಗಳಲ್ಲೊಂದು. ಹೀಗೆ ಮಾಡಿ ಅನೇಕರು ಸಾಲಸೋಲಗಳಿಂದ ಬಚಾವಾಗಿದ್ದಾರೆ. ಅದರ ಜೊತೆಗೆ, ವಸ್ತುವಿನ ಬೆಲೆಯನ್ನು ಹೆಚ್ಚಿಸುವ ಅಧಿಕ ಬಡ್ಡಿಯಂಥ ಅನೇಕ ತಾಪತ್ರಯಗಳನ್ನು ತಪ್ಪಿಸಲು ಶಕ್ತರಾಗುತ್ತಾರೆ. ಬೈಬಲಿನಲ್ಲಿ, ಇರುವೆಯನ್ನು ಬುದ್ಧಿವಂತಿಕೆಯುಳ್ಳದ್ದೆಂದು ಚಿತ್ರಿಸಲಾಗಿದೆ. ಏಕೆಂದರೆ ಅದು ಮೊದಲು ‘ಸುಗ್ಗಿಯಲ್ಲಿ ತನ್ನ ತೀನಿಯನ್ನು ಕೂಡಿಸಿ’ ಮುಂದೆ ಅದನ್ನು ಬಳಸುತ್ತದೆ.—ಜ್ಞಾನೋಕ್ತಿ 6:6-8; 30:24, 25.

ಇತರರಿಂದ ಕಲಿಯುವುದು

ನಾವು ಇಲ್ಲಿ ವರೆಗೆ ಚರ್ಚಿಸಿದ ಈ ಎಲ್ಲ ಬೈಬಲ್‌ ಸಲಹೆ ಕೇಳಲಿಕ್ಕೇನೊ ಚೆನ್ನಾಗಿದೆ, ಆದರೆ ವಾಸ್ತವದಲ್ಲಿ ಅದು ಜನರಿಗೆ ಆದಾಯಕ್ಕೆ ತಕ್ಕಂತೆ ಜೀವನಮಾಡಲು ನೆರವಾಗುತ್ತಿದೆಯೇ? ಇಂಥ ಸಲಹೆ ಪಾಲಿಸಿ ಆರ್ಥಿಕ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕೆಲವರ ಅನುಭವಗಳನ್ನು ನಾವೀಗ ನೋಡೋಣ.

ಡಿಓಸ್‌ಡಾಡೊ ಎಂಬವನಿಗೆ ನಾಲ್ಕು ಮಕ್ಕಳು. ಇತ್ತೀಚಿನ ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟಿನಿಂದ ಅವನಿಗೆ ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಇನ್ನಷ್ಟು ಕಷ್ಟವಾಗಿದೆ. ಆದರೆ ಬಜೆಟ್‌ ಮಾಡುವುದರ ಮಹತ್ವ ಅವನಿಗೆ ತಿಳಿದಿದೆ. “ನಾನು ಸಂಪಾದಿಸುವ ಎಲ್ಲ ಹಣವನ್ನು ಬಜೆಟ್‌ ಮಾಡುತ್ತೇನೆ. ಎಲ್ಲೆಲ್ಲಿ ಎಷ್ಟೆಷ್ಟು ಖರ್ಚಾಗುತ್ತದೆಂದು ಪಟ್ಟಿಮಾಡುತ್ತೇನೆ.” ಡ್ಯಾನಿಲೊ ಸಹ ಇದೇ ಸೂತ್ರವನ್ನು ಅನ್ವಯಿಸುತ್ತಾನೆ. ಅವನೂ ಅವನ ಪತ್ನಿಯೂ ನಡೆಸುತ್ತಿದ್ದ ಒಂದು ಚಿಕ್ಕ ವ್ಯಾಪಾರದಲ್ಲಿ ನಷ್ಟವಾಯಿತು. ಹಾಗಿದ್ದರೂ ಅವರು ಯೋಚಿಸಿ ತಯಾರಿಸುವ ಬಜೆಟ್‌ ಮೂಲಕ ಅಗತ್ಯವಿದ್ದದ್ದನ್ನು ಖರೀದಿಸಲು ಶಕ್ತರಾಗಿದ್ದಾರೆ. ಅವನನ್ನುವುದು: “ಪ್ರತಿ ತಿಂಗಳು ಎಷ್ಟು ಹಣ ಬರುತ್ತದೆ, ಎಷ್ಟು ಹೋಗುತ್ತದೆಂದು ನಮಗೆ ಗೊತ್ತು. ಇದನ್ನು ಮನಸ್ಸಿನಲ್ಲಿಟ್ಟು ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚುಮಾಡಬಹುದೆಂದು ಚರ್ಚಿಸುತ್ತೇವೆ.”

ಬಜೆಟನ್ನು ಪಾಲಿಸಲಿಕ್ಕಾಗಿ ಕೆಲವರು ಕೆಲವೊಂದು ಕ್ಷೇತ್ರಗಳಲ್ಲಿ ಖರ್ಚು ಕಡಿಮೆಮಾಡುವುದು ಅಗತ್ಯವೆಂದು ಕಂಡಿದ್ದಾರೆ. ಮೂವರು ಮಕ್ಕಳಿರುವ ಮರ್ನಾ ಎಂಬ ವಿಧವೆ ಹೇಳುವುದು: “ಕ್ರೈಸ್ತ ಕೂಟಗಳಿಗೆ ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸುವ ಬದಲಿಗೆ ನಾನೂ ನನ್ನ ಮಕ್ಕಳು ಈಗ ನಡೆದುಕೊಂಡೇ ಹೋಗುತ್ತೇವೆ.” ಸರಳ ಜೀವನ ನಡೆಸುವುದರ ಮಹತ್ವವನ್ನು ಮರ್ನಾ ತನ್ನ ಮಕ್ಕಳಿಗೆ ಕಲಿಸಿದ್ದಾಳೆ. ಅವಳನ್ನುವುದು: “ಇದ್ದದ್ದರಲ್ಲೇ ತೃಪ್ತರಾಗಿರುವುದರ ಮಹತ್ವವನ್ನು ತೋರಿಸುವ 1 ತಿಮೊಥೆಯ 6:8-10ರಲ್ಲಿನ ಸೂತ್ರವನ್ನು ಸ್ವತಃ ನಾನೇ ಅನ್ವಯಿಸುವ ಮೂಲಕ ಒಳ್ಳೇ ಮಾದರಿಯನ್ನಿಡಲು ಪ್ರಯತ್ನಿಸಿದ್ದೇನೆ.”

ಇಬ್ಬರು ಮಕ್ಕಳ ತಂದೆ ಜೆರಾಲ್ಡ್‌ ಸಹ ಹಾಗೆ ಮಾಡಿದ್ದಾನೆ. “ನಿಜ ಮಹತ್ವದ ಅಂದರೆ ಆಧ್ಯಾತ್ಮಿಕ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಕ್ರೈಸ್ತರ ಅನುಭವಗಳನ್ನು ನಮ್ಮ ಕುಟುಂಬ ಬೈಬಲ್‌ ಅಧ್ಯಯನದಲ್ಲಿ ಚರ್ಚಿಸುತ್ತೇವೆ. ಇದರ ಫಲಿತಾಂಶ ಒಳ್ಳೇದಾಗಿದೆ. ನಮ್ಮ ಮಕ್ಕಳು ಅಪ್ರಾಮುಖ್ಯ ವಿಷಯಗಳಿಗಾಗಿ ಸುಮ್ಮಸುಮ್ಮನೆ ಹಠಹಿಡಿಯುವುದಿಲ್ಲ” ಎನ್ನುತ್ತಾನವನು.

ಜ್ಯಾನೆಟ್‌ ಎಂಬಾಕೆ ಅವಿವಾಹಿತೆ. ಫಿಲಿಪ್ಪೀನ್ಸ್‌ನಲ್ಲಿ ಪೂರ್ಣ ಸಮಯ ಬೈಬಲನ್ನು ಬೋಧಿಸುವ ಸ್ವಯಂಸೇವಕಿ. ಇತ್ತೀಚೆಗೆ ತನ್ನ ಐಹಿಕ ಉದ್ಯೋಗ ಕಳೆದುಕೊಂಡಳು. ಆದರೂ ತನ್ನ ಬಳಿ ಇದ್ದದ್ದರಲ್ಲೇ ಜೀವನ ಮಾಡುತ್ತಾಳೆ. “ಇದನ್ನು, ಕೈಯಲ್ಲಿರುವ ಹಣವನ್ನು ಅತ್ಯುತ್ತಮ ರೀತಿಯಲ್ಲಿ ಹೇಗೆ ಬಳಸಬಹುದೆಂದು ಯೋಜಿಸುವ ಮೂಲಕ, ಸ್ವನಿಯಂತ್ರಣ ತೋರಿಸುವ ಮೂಲಕ ಮಾಡುತ್ತೇನೆ. ದೊಡ್ಡ ಶಾಪಿಂಗ್‌ ಮಾಲ್‌ಗಳಿಗೆ ಹೋಗುವ ಬದಲು ಸಾಧಾರಣ ಅಂಗಡಿಗಳಿಗೆ ಹೋಗುತ್ತೇನೆ. ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುವಿಗೆ ಸುಮ್ಮನೆ ಜಾಸ್ತಿ ಹಣ ಏಕೆ ಕೊಡಬೇಕು? ಅಷ್ಟುಮಾತ್ರವಲ್ಲ ಯೋಚಿಸದೇ ಯಾವುದನ್ನೂ ನೋಡಿದಾಕ್ಷಣ ಖರೀದಿಸುವುದಿಲ್ಲ” ಅನ್ನುತ್ತಾಳಾಕೆ. ಹಣ ಕೂಡಿಡುವುದು ಜಾಣತನವೆಂದು ಆಕೆಗೆ ತಿಳಿದಿದೆ. “ನನ್ನ ಹತ್ತಿರ ಸ್ವಲ್ಪ ಹಣ ಉಳಿದರೂ ಅದನ್ನು ಕೂಡಿಸಿ ಇಡುತ್ತೇನೆ. ಮುಂದೆ ಏನಾದರೂ ಅನಿರೀಕ್ಷಿತ ಖರ್ಚು ಬಂದರೆ ಅದನ್ನು ಬಳಸಬಹುದಲ್ವಾ?” ಎನ್ನುತ್ತಾಳಾಕೆ.

ಕ್ರೆಡಿಟ್‌ ಕಾರ್ಡುಗಳ ಬಗ್ಗೆ ಈ ಮುಂಚೆ ಮಾತಾಡಿದ ಎರಿಕ್‌ ಹೇಳುವುದು: “ಕ್ರೆಡಿಟ್‌ ಕಾರ್ಡನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸುತ್ತೇನೆ.” ಡಿಓಸ್‌ಡಾಡೊ ಸಹ ಇದನ್ನು ಒಪ್ಪುತ್ತಾ ಹೇಳುವುದು: “ನನ್ನನ್ನೇ ನಿಯಂತ್ರಿಸಲು, ಹೆಚ್ಚಾಗಿ ನನ್ನ ಕ್ರೆಡಿಟ್‌ ಕಾರ್ಡನ್ನು ಆಫೀಸಿನಲ್ಲಿ ಬಿಟ್ಟುಬರುತ್ತೇನೆ.”

ಆದಾಯಕ್ಕೆ ತಕ್ಕಂತೆ ಜೀವನ—ಖಂಡಿತ ಸಾಧ್ಯ!

ಬೈಬಲ್‌ ಮುಖ್ಯವಾಗಿ ಆಧ್ಯಾತ್ಮಿಕ ಮೌಲ್ಯಗಳ ಕುರಿತು ತಿಳಿಸುತ್ತದಾದರೂ, ಭೌತಿಕ ರೀತಿಯಲ್ಲಿ ಪ್ರಯೋಜನತರುವ ನಿರ್ದೇಶನಗಳೂ ಅದರಲ್ಲಿವೆಯೆಂದು ಅನೇಕರು ಕಂಡುಕೊಂಡಿದ್ದಾರೆ. (ಜ್ಞಾನೋಕ್ತಿ 2:6; ಮತ್ತಾಯ 6:25-34) ಈ ಲೇಖನದಲ್ಲಿ ಚರ್ಚಿಸಲಾದ ಬೈಬಲ್‌ ಸೂತ್ರಗಳನ್ನು ಅನ್ವಯಿಸುವ ಮೂಲಕ ಮತ್ತು ಈ ಸೂತ್ರಗಳಿಂದ ಪ್ರಯೋಜನ ಪಡೆದಿರುವ ಇತರರಿಂದ ಕಲಿಯುವ ಮೂಲಕ ನೀವು ಸಹ ಆದಾಯಕ್ಕೆ ತಕ್ಕಂತೆ ಜೀವನ ಮಾಡಬಲ್ಲಿರಿ. ಹೀಗೆ ಮಾಡಿದರೆ, ಇಂದು ಲಕ್ಷಾಂತರ ಜನರು ಅನುಭವಿಸುತ್ತಿರುವ ತಾಪತ್ರಯ, ಚಿಂತೆಗಳಿಂದ ಮುಕ್ತರಾಗಿರಬಲ್ಲಿರಿ. (w11-E 06/01)

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚುಮಾಡಬಹುದೆಂದು ಚರ್ಚಿಸುತ್ತೇವೆ”

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ಕ್ರೈಸ್ತ ಕೂಟಗಳಿಗೆ ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸುವ ಬದಲಿಗೆ ನಾವೀಗ ನಡೆದುಕೊಂಡೇ ಹೋಗುತ್ತೇವೆ’

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಯೋಚಿಸದೆ ಯಾವುದನ್ನೂ ನೋಡಿದಾಕ್ಷಣ ಖರೀದಿಸುವುದಿಲ್ಲ”