ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸಂಗಾತಿಗೆ ಗೌರವ ತೋರಿಸಿ

ನಿಮ್ಮ ಸಂಗಾತಿಗೆ ಗೌರವ ತೋರಿಸಿ

ಕುಟುಂಬ ಸಂತೋಷಕ್ಕೆ ಕೀಲಿಕೈ

ನಿಮ್ಮ ಸಂಗಾತಿಗೆ ಗೌರವ ತೋರಿಸಿ

ವಿಲ್‌ * ಹೇಳುವುದು: “ರೇಚಲ್‌ಗೆ ಬೇಜಾರಾದರೆ ತುಂಬಾ ಅಳುತ್ತಾಳೆ. ಪರಿಹರಿಸೋಣ ಅಂದರೆ ಅವಳಿಗೆ ಕಿರಿಕಿರಿ, ಮುಖ ಊದಿಸಿಕೊಂಡು ಸುಮ್ಮನೆ ಕೂತಿರುತ್ತಾಳೆ. ಪ್ರಯತ್ನ ಮಾಡೋದೆ ವ್ಯರ್ಥ ಅಂತ ಕೆಲವೊಮ್ಮೆ ಅನಿಸುತ್ತೆ.”

ರೇಚಲ್‌ ಹೇಳುವುದು: “ಅವರು ಮನೆಗೆ ಬಂದಾಗ ನಾನು ಅಳುತ್ತಿದೆ. ಯಾಕೆ ಅಳುತ್ತಿದ್ದೀನಿ ಅಂತ ಹೇಳಲು ಶುರುಮಾಡುತ್ತಿದಂತೆ, ಅದೆಲ್ಲಾ ಏನು ಮಹಾ ವಿಷಯ; ಮನಸ್ಸಿನಲ್ಲಿಟ್ಟುಕೊಳ್ಳಬೇಡ ಬಿಟ್ಟುಬಿಡು ಅಂತ ಸುಲಭವಾಗಿ ಹೇಳಿ ಸುಮ್ಮನಾದರು. ನಾನು ಇನ್ನಷ್ಟು ಕುಗ್ಗಿಹೋದೆ.”

ವಿಲ್‌ ಅಥವಾ ರೇಚಲ್‌ನಂತೆ ನಿಮಗೂ ಅನಿಸಿದ್ದುಂಟೊ? ಪರಸ್ಪರ ಮಾತಾಡಿ ಮನಸ್ತಾಪ ನೀಗಿಸಬೇಕೆಂಬ ಆಸೆ ಅವರಿಬ್ಬರಿಗೂ ಇದೆ. ಆದರೆ ಆಗುವುದು ಬರೀ ಕಚ್ಚಾಟ. ಯಾಕೆ ಹಾಗೆ?

ಪುರುಷರು ಮತ್ತು ಸ್ತ್ರೀಯರು ಸಂವಾದಿಸುವ ವಿಧ ಬೇರೆ ಬೇರೆ. ಅವರ ಬೇಕುಗಳೂ ಭಿನ್ನಭಿನ್ನ. ಸ್ತ್ರೀ ತನ್ನ ಭಾವನೆಗಳನ್ನು ಆಗಿಂದಾಗ್ಗೆ ತಿಳಿಸಲು, ಮನಬಿಚ್ಚಿ ಮಾತಾಡಲು ಬಯಸುತ್ತಾಳೆ. ಆದರೆ ಗಂಡಸರಿಗೆ ಜಗಳ ಕಿರಿಕಿರಿಯೆಲ್ಲ ಬೇಡ, ಸಮಸ್ಯೆ ತತ್‌ಕ್ಷಣ ಕೊನೆಗೊಳ್ಳಬೇಕು. ವಾಗ್ವಾದ ಅಂದರೆ ಪುರುಷರಿಗೆ ತಲೆಬಿಸಿ. ಇಂಥ ಭಿನ್ನತೆಗಳಿರುವಾಗ ಅವನ್ನೆಲ್ಲಾ ಮೀರಿ ನಿಮ್ಮ ಗಂಡ ಅಥವಾ ಹೆಂಡತಿಯೊಂದಿಗೆ ಸಂವಾದಿಸಿ ಪರಿಹಾರಕ್ಕೆ ಬರುವುದು ಹೇಗೆ? ಸಂಗಾತಿಯೊಂದಿಗೆ ಗೌರವದಿಂದ ನಡೆದುಕೊಳ್ಳುವ ಮೂಲಕವೇ.

ಒಬ್ಬ ಗೌರವಯುತ ವ್ಯಕ್ತಿ ಇತರರನ್ನು ಮಾನ್ಯಮಾಡುತ್ತಾನೆ. ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅಧಿಕಾರವುಳ್ಳ, ಅನುಭವವುಳ್ಳ ಜನರಿಗೆ ಗೌರವ ತೋರಿಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಚಿಕ್ಕವಯಸ್ಸಿನಿಂದಲೇ ಬೇರೂರಿರುತ್ತದೆ. ಆದರೆ ದಾಂಪತ್ಯ ಎನ್ನುವುದು ಸಲಿಗೆ, ಸಮಾನತೆಯ ಒಂದು ಅನುಬಂಧ. ಅದರಲ್ಲಿ ಗೌರವ ತೋರಿಸುವುದು ಸ್ವಲ್ಪ ಕಷ್ಟ. ಮದುವೆಯಾಗಿ ಎಂಟು ವರ್ಷಗಳಾಗಿರುವ ಕವಿತಾಳ ಮಾತನ್ನು ಗಮನಿಸಿ: “ಸಂತೋಷ್‌ ಎಲ್ಲರ ಮಾತನ್ನು ತಾಳ್ಮೆಯಿಂದ ಕೇಳುತ್ತಾರೆ, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ನನ್ನೊಂದಿಗೂ ಅದೇ ರೀತಿ ಇರಬೇಕೆಂದು, ಅನುಕಂಪ ತೋರಿಸಬೇಕೆಂದು ಬಯಸಿದೆ.” ಸ್ನೇಹಿತರಿಗೆ, ಅಷ್ಟೇಕೆ ಅಪರಿಚಿತರಿಗೂ, ನಾವು ತಾಳ್ಮೆಯಿಂದ ಕಿವಿಗೊಡುತ್ತೇವೆ, ಅವರೊಂದಿಗೆ ಗೌರವದಿಂದ ಮಾತಾಡುತ್ತೇವೆ. ಆದರೆ ಅದೇ ಪರಿಗಣನೆಯನ್ನು ನಮ್ಮ ಸಂಗಾತಿಗೆ ತೋರಿಸುತ್ತೇವಾ?

ಅಗೌರವವು ಮನೆಯಲ್ಲಿ ಒತ್ತಡದ ವಾತಾವರಣ ಉಂಟುಮಾಡುತ್ತದೆ. ಜಗಳ ಕಚ್ಚಾಟದಲ್ಲಿ ಕೊನೆಗೊಳ್ಳುತ್ತದೆ. “ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ ಸಮಾಧಾನದ ಒಣತುತ್ತೇ ಮೇಲು” ಎಂದು ವಿವೇಕಿ ರಾಜನೊಬ್ಬ ನುಡಿದ. (ಜ್ಞಾನೋಕ್ತಿ 17:1) ಗಂಡ ತನ್ನ ಪತ್ನಿಗೆ ಗೌರವ, ಮರ್ಯಾದೆ ಕೊಡಬೇಕು ಎಂದು ಬೈಬಲ್‌ ಆಜ್ಞಾಪಿಸುತ್ತದೆ. (1 ಪೇತ್ರ 3:7) ಅದೇ ರೀತಿಯಲ್ಲಿ “ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು.”—ಎಫೆಸ 5:33.

ಗೌರವಯುತವಾಗಿ ಸಂವಾದಿಸುವುದು ಹೇಗೆ? ಬೈಬಲ್‌ ಯಾವ ಸಲಹೆ ಕೊಡುತ್ತದೆ? ಮುಂದೆ ಓದಿ ನೋಡಿ.

ನಿಮ್ಮ ಸಂಗಾತಿ ಏನಾದರೂ ಹೇಳಲಿಚ್ಛಿಸುವಾಗ. . .

ಸವಾಲು: ಅನೇಕರಿಗೆ ಕೇಳಿಸಿಕೊಳ್ಳುವುದಕ್ಕಿಂತ ಮಾತಾಡುವುದೇ ಬಲು ಇಷ್ಟ. ನೀವೂ ಹಾಗೆಯೊ? “ಸಂಗತಿಯನ್ನು ಕೇಳುವುದಕ್ಕೆ ಮುಂಚೆ ಉತ್ತರಕೊಡುವವ” ಮೂರ್ಖನು ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 18:13, NIBV) ಆದ್ದರಿಂದ ನೀವು ಮಾತಾಡುವ ಮುಂಚೆ, ಕಿವಿಗೊಡಿ. ಮದುವೆಯಾಗಿ 26 ವರ್ಷ ಕಳೆದಿರುವ ಕಾವ್ಯ ಎಂಬಾಕೆ ಹೇಳುವುದು: “ಸಮಸ್ಯೆಯೆದ್ದಾಕ್ಷಣ ಪರಿಹರಿಸಬೇಕು ಎಂದು ನನ್ನ ಗಂಡ ಹಾತೊರೆಯುತ್ತಾರೆ. ಆದರೆ ನನಗೆ ಬೇಕಾದದ್ದು ಅದಲ್ಲ. ಸಮಸ್ಯೆ ಏನು, ಹೇಗೆ ಉದ್ಭವಿಸಿತು ಎಂದೆಲ್ಲ ಕೇಳಲಿಲ್ಲವೆಂದರೂ ಪರವಾಗಿಲ್ಲ. ನಾನು ಹೇಳೋದನ್ನು ಗಮನಕೊಟ್ಟು ಕೇಳಿ ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡರೆ ಅಷ್ಟೇ ಸಾಕು.”

ಕೆಲವು ಸ್ತ್ರೀಪುರುಷರಿಗೆ ಮನಬಿಚ್ಚಿ ಮಾತಾಡುವುದಕ್ಕೆ ಸ್ವಲ್ಪ ಕಷ್ಟ. ಭಾವನೆಗಳನ್ನು ವ್ಯಕ್ತಪಡಿಸುವಂತೆ ಅವರನ್ನು ಒತ್ತಾಯ ಮಾಡುವುದು ಅವರಿಗೆ ಇಷ್ಟವಿರುವುದಿಲ್ಲ. ಇತ್ತೀಚೆಗೆ ಮದುವೆಯಾದ ಲಿಲ್ಲಿ ಕಂಡುಕೊಂಡದ್ದು ಅದೇ. ಮನಸ್ಸಿನಲ್ಲಿರುವುದನ್ನು ಹಂಚಿಕೊಳ್ಳಲು ಆಕೆಯ ಗಂಡ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಅವಳು ಅರಿತುಕೊಂಡು, “ಅವರಾಗಿಯೇ ದುಃಖ ತೋಡಿಕೊಳ್ಳುವ ತನಕ ನಾನು ತಾಳ್ಮೆಯಿಂದ ಕಾಯಲು ಪ್ರಯತ್ನಿಸುತ್ತೇನೆ” ಎನ್ನುತ್ತಾಳೆ.

ಪರಿಹಾರ: ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯ ಭಿನ್ನಾಭಿಪ್ರಾಯ ಎದ್ದರೆ ಅದನ್ನು ಆ ತಕ್ಷಣವೇ ನೀಗಿಸಲು ಪ್ರಯತ್ನಿಸಬೇಡಿ. ನಿಮ್ಮಿಬ್ಬರ ಮನಸ್ಥಿತಿ ಶಾಂತವಾಗಿದ್ದಾಗ ಇಬ್ಬರೂ ಸಿದ್ಧರಿರುವಾಗ ಅದರ ಬಗ್ಗೆ ಮಾತಾಡಿ. ಆದರೆ ಕೆಲವೊಮ್ಮೆ ನಿಮ್ಮ ಸಂಗಾತಿ ಮಾತಾಡಲು ಬಯಸದಿರಬಹುದು. ಆಗೇನು ಮಾಡುವಿರಿ? “ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು” ಎಂಬ ವಿವೇಕಯುತ ಸಲಹೆಯನ್ನು ಮನಸ್ಸಿನಲ್ಲಿಡಿ. (ಜ್ಞಾನೋಕ್ತಿ 20:5) ಬಾವಿಯಿಂದ ನೀರನ್ನು ಅವಸರವಸರದಿಂದ ಸೇದಿದರೆ ಅರ್ಧಕರ್ಧ ನೀರು ಹೊರಗೆ ಚೆಲ್ಲಿಹೋಗುತ್ತದೆ. ತದ್ರೀತಿಯಲ್ಲಿ ನಿಮ್ಮ ಸಂಗಾತಿ ಸಿದ್ಧರಿಲ್ಲದಿರುವಾಗ ಒತ್ತಾಯಿಸಿ ಸಮಸ್ಯೆಯನ್ನು ನೀಗಿಸಲು ಪ್ರಯತ್ನಿಸಿದರೆ ಅವರ ಮನಸ್ಸಿನ ಭಾವನೆಗಳನ್ನು ತಿಳುಕೊಳ್ಳುವ ಅವಕಾಶ ಕೈಜಾರಿಹೋಗುತ್ತದೆ. ಅವರು ತಮ್ಮನ್ನು ಸಮರ್ಥಿಸಿಕೊಳ್ಳಲು ಆರಂಭಿಸುತ್ತಾರೆ ವಿನಾ ಸಮಸ್ಯೆಯ ಒಳಹೊಕ್ಕಿ ನೋಡಲಾರರು. ಹಾಗಾಗಿ ಮೃದುವಾಗಿ, ಗೌರವಯುತವಾಗಿ ಪ್ರಶ್ನೆಗಳ ಮೂಲಕ ಅವರ ಭಾವನೆಗಳನ್ನು ಹೊರಸೆಳೆಯಿರಿ. ವ್ಯಕ್ತಪಡಿಸುವ ತನಕ ತಾಳ್ಮೆಯಿಂದ ಕಾಯಿರಿ.

ಅವರು ಮನಬಿಚ್ಚುವಾಗ ನೀವು “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.” (ಯಾಕೋಬ 1:19) ಬರೀ ಕಿವಿಯಿಂದ ಕೇಳಿಸಿಕೊಳ್ಳಬೇಡಿ ಹೃದಯದಾಳದಿಂದ ಆಲಿಸಿರಿ. ಅವರ ಮಾತುಗಳಲ್ಲಿ ಅಡಗಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಅವರನ್ನು ಗೌರವಿಸುತ್ತೀರೋ ಇಲ್ಲವೋ ಎನ್ನುವುದಕ್ಕೆ ನೀವು ಕಿವಿಗೊಡುವ ರೀತಿ ಕನ್ನಡಿ ಹಿಡಿದಂತೆ.

ಕಿವಿಗೊಡುವುದು ಹೇಗೆಂದು ಯೇಸುವಿನಿಂದ ಕಲಿಯಬಹುದು. ಒಬ್ಬ ರೋಗಿ ಗುಣಹೊಂದಲು ತನ್ನ ಬಳಿ ಬಂದಾಗ ಯೇಸು ಮೊದಲು ಆ ರೋಗಿ ಹೇಳುವುದನ್ನು ಮನಸ್ಸುಕೊಟ್ಟು ಕೇಳಿದನು. ಅ ಬಡಪಾಯಿಯ ಮಾತುಗಳು ಯೇಸುವಿನ ಮನಸ್ಪರ್ಶಿಸಿತು. ಅನುಕಂಪದಿಂದ ಅವನನ್ನು ವಾಸಿಮಾಡಿದನು. (ಮಾರ್ಕ 1:40-42) ನಿಮ್ಮ ಸಂಗಾತಿ ಮಾತಾಡುವಾಗ ಇದೇ ಮಾದರಿಯನ್ನು ಅನುಸರಿಸಿ. ಅವರು ನಿಮ್ಮ ಅನುಕಂಪವನ್ನು ಬಯಸುತ್ತಿರಬಹುದೇ ವಿನಾ ತಕ್ಷಣದ ಪರಿಹಾರವನ್ನಲ್ಲ. ಆದ್ದರಿಂದ ಕಿವಿಗೊಟ್ಟು ಕೇಳಿ. ಅವರ ಭಾವನೆಗಳು ನಿಮ್ಮ ಹೃದಯವನ್ನು ಸ್ಪರ್ಶಿಸಲಿ. ಆಗ ಮಾತ್ರವೇ ನಿಮ್ಮ ಸಂಗಾತಿಯ ಅಗತ್ಯಗಳಿಗೆ ಸ್ಪಂದಿಸಿ. ಹೀಗೆ ಅವರನ್ನು ಗೌರವಿಸುತ್ತೀರೆಂದು ತೋರಿಸುವಿರಿ.

ಪ್ರಯತ್ನಿಸಿ ನೋಡಿ: ಮುಂದಿನ ಸಲ ನಿಮ್ಮ ಸಂಗಾತಿ ನಿಮ್ಮೊಂದಿಗೆ ಮಾತಾಡಲು ಬಂದಾಗ ತಕ್ಷಣವೇ ಪ್ರತಿಕ್ರಿಯಿಸುವ ಬದಲು ಸ್ವಲ್ಪ ಕಾಯಿರಿ. ಅವರು ಮಾತಾಡಿ ಮುಗಿಸುವ ತನಕ ಕೇಳಿ. ಅವರೇನು ಹೇಳಬಯಸುತ್ತಿದ್ದಾರೋ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. “ನಿನ್ನ ಮನಸ್ಸನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೀನಿ. ನಾನೆಲ್ಲಾದರು ತಪ್ಪಿದರೆ ನನಗೆ ಹೇಳು” ಎಂದು ಇನ್ನೊಮ್ಮೆ ಯಾವಾಗಾದರೂ ಪ್ರೀತಿಯಿಂದ ಕೇಳಿ.

ನಿಮಗೆ ಏನಾದರೂ ಹೇಳಲಿರುವಾಗ. . .

ಸವಾಲು: ಈ ಮುಂಚೆ ತಿಳಿಸಲಾದ ಕವಿತಾ ಹೇಳುವುದು: “ಸಂಗಾತಿಯ ಕುರಿತು ವ್ಯಂಗ್ಯವಾಗಿ ಮಾತಾಡುವುದು, ಅವರನ್ನು ಅಣಕಿಸುವುದು ಇದೆಲ್ಲಾ ಹಾಸ್ಯ ಕಾರ್ಯಕ್ರಮಗಳಲ್ಲಿ ಬರ್ತಾ ಬರ್ತಾ ಸರ್ವೇಸಾಮಾನ್ಯ ಆಗಿಬಿಟ್ಟಿದೆ.” ಕೆಲವು ಮನೆಗಳಲ್ಲಿ ಮರ್ಯಾದೆಯಿಲ್ಲದ ಮಾತುಗಳನ್ನಾಡುವುದು ಜೀವನದ ರೀತಿ ಆಗಿರುತ್ತದೆ. ಇಂಥ ವಾತಾವರಣದಲ್ಲಿ ಬೆಳೆದವರು ಮದುವೆಯ ನಂತರ ಬದಲಾಯಿಸಿಕೊಳ್ಳಲು ಒದ್ದಾಡುತ್ತಾರೆ. ಕೆನಡದಲ್ಲಿ ವಾಸಿಸುವ ಐವಿ ಹೇಳುವುದು: “ನಾನು ಬೆಳೆದ ಮನೆಯಲ್ಲಿ ಮಾತು ಮಾತಿಗೂ ಕೂಗಾಟ, ಕಿರಿಚಾಟ, ಕೀಳರಿಮೆ ಮೂಡಿಸುವ ಮಾತುಗಳು ಇದ್ದೇ ಇರುತ್ತಿದ್ದವು.”

ಪರಿಹಾರ: “ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು” ಎಂಬ ಬೈಬಲ್‌ ಸಲಹೆಯನ್ನು ನಿಮ್ಮ ಸಂಗಾತಿಯ ಕುರಿತು ಇತರ ಬಳಿ ಮಾತಾಡುವಾಗ ನೆನಪಿನಲ್ಲಿ ಇಟ್ಟುಕೊಳ್ಳಿ. (ಎಫೆಸ 4:29) ನೀವು ಆಡುವ ಮಾತುಗಳು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವಂತಿರಬೇಕು.

ನೀವಿಬ್ಬರೇ ಇರುವಾಗಲೂ ಕೊಂಕು ನುಡಿ, ಹೀನಾಯ ಮಾತುಗಳನ್ನು ಆಡಬೇಡಿ. ಬೈಬಲ್‌ನಲ್ಲಿ ಮೀಕಲಳು ತನ್ನ ಗಂಡ ರಾಜ ದಾವೀದನ ವಿಷಯದಲ್ಲಿ ಕೋಪಗೊಂಡ ಪ್ರಸಂಗದ ಬಗ್ಗೆ ತಿಳಿಸಲಾಗಿದೆ. ದಾವೀದನು “ನೀಚರಲ್ಲೊಬ್ಬನಂತೆ” ವರ್ತಿಸಿದನೆಂದು ಹೇಸಿಗೆಯಿಲ್ಲದೆ ನುಡಿದಳು. ಅವಳ ಮಾತುಗಳು ದಾವೀದನಿಗೆ ನೋವುಂಟುಮಾಡಿತು. ಎಲ್ಲಕ್ಕಿಂತ ಮಿಗಿಲಾಗಿ ಯೆಹೋವ ದೇವರಿಗೆ ಅದು ಸ್ವಲ್ಪವೂ ಇಷ್ಟವಾಗಲಿಲ್ಲ. (2 ಸಮುವೇಲ 6:20-23) ಇದರಿಂದ ಏನು ಕಲಿಯಬಹುದು? ನಿಮ್ಮ ಸಂಗಾತಿಯೊಂದಿಗೆ ಮಾತಾಡುವಾಗ ಮಾತುಗಳ ಮೇಲೆ ನಿಗಾ ಇರಲಿ. (ಕೊಲೊಸ್ಸೆ 4:6) ಎಂಟು ವರ್ಷಗಳಿಂದ ದಾಂಪತ್ಯ ನಡಿಸುತ್ತಿರುವ ಸಂತೋಷ್‌, ತನ್ನ ಮತ್ತು ತನ್ನ ಪತ್ನಿಯ ಮಧ್ಯೆ ಈಗಲೂ ಕಚ್ಚಾಟವಿರುತ್ತದೆ ಎಂದು ಒಪ್ಪಿಕೊಳ್ಳುತ್ತಾನೆ. ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದಾಗ ಪರಿಸ್ಥಿತಿ ಹದಗೆಡುತ್ತದೆ ಎನ್ನುವುದನ್ನು ಅರಿತಿದ್ದಾನೆ. “ನನ್ನ ಪತ್ನಿಯೊಂದಿಗೆ ವಾದಿಸಿ ಗೆದ್ದರೆ ಅದು ನನಗೆ ಸೋಲು. ಗೆಲುವಿಗಿಂತ ಬಾಂಧವ್ಯವೇ ಮುಖ್ಯ. ಅದನ್ನು ಬಲಪಡಿಸುವುದರಲ್ಲೇ ಸಂತೃಪ್ತಿ” ಎಂದು ಹೇಳುತ್ತಾನೆ.

ಒಬ್ಬಾಕೆ ವಯೋವೃದ್ಧೆ ತನ್ನ ಸೊಸೆಯಂದಿರನ್ನು ಪ್ರೋತ್ಸಾಹಿಸುತ್ತಾ “ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ” ಹೇಳಿದಳೆಂದು ಬೈಬಲ್‌ ತಿಳಿಸುತ್ತದೆ. (ರೂತ 1:9) ಪತಿಪತ್ನಿ ಒಬ್ಬರನ್ನೊಬ್ಬರು ಗೌರವಿಸುವಾಗ ಅವರ ಮನೆ “ವಿಶ್ರಾಂತಿ”ಯ ತಾಣವಾಗುತ್ತದೆ.

ಪ್ರಯತ್ನಿಸಿ ನೋಡಿ: ಈ ಸಲಹೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಲು ಸಮಯ ಮಾಡಿಕೊಳ್ಳಿ. “ನಿನ್ನ ಬಗ್ಗೆ ಬೇರೆಯವರ ಮುಂದೆ ಮಾತಾಡುವಾಗ ನಿನಗೆ ನೋವಾಗುವಂತೆ ಎಂದಾದರೂ ಮಾತಾಡಿದ್ದೀನಾ? ನಾನು ಹೇಗೆ ಮಾತಾಡಿದರೆ ನಿನಗೆ ಇಷ್ಟವಾಗುತ್ತೆ?” ಅಂತ ಕೇಳಿ. ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಗಮನಕೊಟ್ಟು ಆಲಿಸಿ. ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ಪ್ರಯತ್ನಿಸಿ.

ಸಂಗಾತಿಯ ಗುಣಗಳು ಭಿನ್ನವಾಗಿದ್ದರೂ ಸ್ವೀಕರಿಸಿ

ಸವಾಲು: ಗಂಡ ಹೆಂಡತಿ “ಒಂದೇ ಶರೀರ” ಎಂದು ಬೈಬಲ್‌ ಹೇಳುತ್ತದೆ. ಇದನ್ನು ಅಪಾರ್ಥ ಮಾಡಿಕೊಂಡ ಕೆಲವು ನವದಂಪತಿಗಳು ತಮ್ಮ ಅಭಿಪ್ರಾಯ, ವ್ಯಕ್ತಿತ್ವ ಎಲ್ಲವೂ ಒಂದೇ ಆಗಿರಬೇಕೆಂದು ಎದುರುನೋಡುತ್ತಾರೆ. (ಮತ್ತಾಯ 19:5) ಆದರೆ ಮದುವೆಯಾದ ಸ್ವಲ್ಪದರಲ್ಲೇ, ಇಂಥ ಅಪೇಕ್ಷೆ ಅವಾಸ್ತವಿಕವೆಂದು ಅರಿತು ಕೊಳ್ಳುತ್ತಾರೆ. ಅವರಲ್ಲಿರುವ ಭಿನ್ನತೆಗಳು ಕಚ್ಚಾಟದಲ್ಲಿ ಅಂತ್ಯಗೊಳ್ಳುತ್ತವೆ. ಕವಿತಾ ಹೇಳುವುದು: “ಕೆಲವೊಂದು ವಿಷಯಗಳಲ್ಲಿ ನನ್ನ ಮತ್ತು ಅವರ ಅಭಿಪ್ರಾಯ ಭೂಮಿ ಆಕಾಶದಂತೆ. ಸಂತೋಷ್‌ ಯಾವುದರ ಬಗ್ಗೆನೂ ಟೆನ್ಶನ್‌ ತೆಗೆದುಕೊಳ್ಳುವುದಿಲ್ಲ. ನಾನು ಹಾಗಲ್ಲ. ಕೆಲವೊಮ್ಮೆ ನಾನು ಟೆನ್ಶನ್‌ ತೆಗೆದುಕೊಳ್ಳುವ ವಿಷಯದ ಬಗ್ಗೆ ಅವರಿಗೆ ಒಂದ್ಚೂರೂ ಚಿಂತೆಯಿಲ್ಲ ಅಂತ ಅನಿಸತೊಡಗುತ್ತೆ. ಆಗ ನನ್ನ ಕೋಪ ನೆತ್ತಿಗೇರುತ್ತೆ.”

ಪರಿಹಾರ: ನಿಮ್ಮ ಸಂಗಾತಿಯ ಗುಣ ಭಿನ್ನವಾಗಿದ್ದರೂ ಅದನ್ನು ಸ್ವೀಕರಿಸಿ. ಅವರ ಭಿನ್ನತೆಯನ್ನು ಕೊರತೆಯಾಗಿ ವೀಕ್ಷಿಸಬೇಡಿ ಬದಲಾಗಿ ಗೌರವಿಸಿ. ನಿಮ್ಮ ಕಣ್ಣುಗಳ ಕೆಲಸ ಭಿನ್ನ ಕಿವಿಗಳ ಕೆಲಸ ಭಿನ್ನ. ಹಾಗಿದ್ದರೂ ರಸ್ತೆಯನ್ನು ಜೋಪಾನವಾಗಿ ದಾಟಬೇಕಾದರೆ ಅವೆರಡೂ ಬೇಕು. ಮೂವತ್ತು ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಅನಿತಾರವರ ಮಾತನ್ನು ಗಮನಿಸಿ: “ನನ್ನ ಮತ್ತು ಅವರ ಅಭಿಪ್ರಾಯಗಳು ಭಿನ್ನವಾಗಿದ್ದರೂ ನಾವು ಅದನ್ನು ಸ್ವೀಕರಿಸಿಕೊಳ್ಳುತ್ತೇವೆ. ಒಂದೇನೆಂದರೆ ಅವು ದೇವರ ವಾಕ್ಯಕ್ಕೆ ವಿರುದ್ಧವಾಗಿ ಇರಬಾರದು. ನಮ್ಮ ಭಾವನೆ ಅಭಿಪ್ರಾಯಗಳೆಲ್ಲಾ ಒಂದೇ ರೀತಿ ಇರೋದಿಕ್ಕೆ ಸಾಧ್ಯವಿಲ್ಲ ಅಲ್ವಾ.”

ಯಾವುದೇ ವಿಷಯದಲ್ಲಿ ನಿಮ್ಮದೇ ಹಟಸಾಧಿಸಬೇಡಿ. ನಿಮ್ಮ ಸಂಗಾತಿಯ ಅಭಿಪ್ರಾಯ ಭಿನ್ನವಾಗಿದ್ದರೆ ಮೊದಲು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. (ಫಿಲಿಪ್ಪಿ 2:4) ಈ ವಿಷಯದಲ್ಲಿ ಅನಿತಾಳ ಗಂಡ ಸಾಗರ್‌ ಏನು ಹೇಳುತ್ತಾರೆಂದು ಗಮನಿಸಿ: “ಕೆಲವೊಮ್ಮೆ ಅನಿತಾ ಯಾವ ಅರ್ಥದಲ್ಲಿ ಮಾತಾಡುತ್ತಿದ್ದಾಳೆ ಅಂತ ನನಗೆ ಗೊತ್ತಾಗೋದಿಲ್ಲ. ಅವಳ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದೂ ಕೆಲವೊಮ್ಮೆ ಕಷ್ಟ. ಅಂಥ ಸಮಯಗಳಲ್ಲಿ ನನ್ನ ಮನಸ್ಸಿಗೆ ಹೊಳೆಯುವುದೇನೆಂದರೆ ನನ್ನ ಅಭಿಪ್ರಾಯ ಸಾಧಿಸುವುದಕ್ಕಿಂತ ಅವಳು, ಅವಳ ಸಂತೋಷವೇ ಮುಖ್ಯ. ಅವಳ ಸಂತೋಷವೇ ನನ್ನ ಸಂತೋಷ.”

ಪ್ರಯತ್ನಿಸಿ ನೋಡಿ: ಒಂದು ವಿಷಯವನ್ನು ನೀವು ಹೇಗೆ ನಿರ್ವಹಿಸುತ್ತೀರಿ ನಿಮ್ಮ ಸಂಗಾತಿ ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಗಮನಿಸಿ ಯಾವೆಲ್ಲ ರೀತಿಯಲ್ಲಿ ನಿಮ್ಮ ಸಂಗಾತಿ ನಿಮಗಿಂತ ಶ್ರೇಷ್ಠರು ಎಂದು ಪಟ್ಟಿಮಾಡಿ.—ಫಿಲಿಪ್ಪಿ 2:3.

ಸಂತೋಷದಿಂದ ಕೂಡಿರುವ ಮುರಿಯಲಾರದ ವಿವಾಹ ಬಾಂಧವ್ಯಕ್ಕೆ ಗೌರವ ಒಂದು ಮುಖ್ಯ ಕೀಲಿಕೈ. “ಗೌರವ ಇದ್ದರೆ ಸಂತೃಪ್ತಿ ಭದ್ರತೆ ಖಾಯಂ. ಅದನ್ನು ಬೆಳೆಸಿಕೊಳ್ಳುವುದು ಕಷ್ಟವೆಂದೆನಿಸಿದರೂ ಸಾರ್ಥಕ” ಎನ್ನುತ್ತಾಳೆ ಕವಿತಾ. (w11-E 08/01)

[ಪಾದಟಿಪ್ಪಣಿ]

^ ಪ್ಯಾರ. 3 ಹೆಸರುಗಳು ಬದಲಾಯಿಸಲ್ಪಟ್ಟಿವೆ.

ಕೇಳಿಕೊಳ್ಳಿ. . .

▪ ನನ್ನ ಸಂಗಾತಿಯ ಭಿನ್ನತೆಗಳು ನಮ್ಮ ಕುಟುಂಬವನ್ನು ಕಟ್ಟಲು ಹೇಗೆ ಸಹಾಯನೀಡಿದೆ?

▪ ಬೈಬಲ್‌ ಮೂಲತತ್ವಗಳನ್ನು ಮೀರುತ್ತಿಲ್ಲವೆಂದರೆ ನನ್ನ ಸಂಗಾತಿಯ ಇಷ್ಟಗಳಿಗೆ ಮಣಿಯುವುದೇ ಒಳ್ಳೆಯದು ಏಕೆ?