ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಣ ನಿರ್ವಹಣೆ

ಹಣ ನಿರ್ವಹಣೆ

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಹಣ ನಿರ್ವಹಣೆ

ಗಂಡ: “ನನ್ನ ಹೆಂಡತಿ ಲಾವಣ್ಯ * ಅನಗತ್ಯ ವಸ್ತುಗಳಿಗೆಲ್ಲಾ ಹಣವನ್ನು ನೀರಿನ ಹಾಗೆ ಖರ್ಚುಮಾಡುತ್ತಾಳೆ. ಅವೆಲ್ಲ ಬೇಕೇಬೇಕು ಅಂತ ನನಗನಿಸಲ್ಲ. ಅವಳು ಸ್ವಲ್ಪವೂ ಹಣ ತೆಗೆದಿಡುವುದಿಲ್ಲ! ಅಚಾನಕ್ಕಾಗಿ ಹಣ ಬೇಕಾದಾಗ ಪರದಾಡಬೇಕಾಗುತ್ತದೆ. ಅವಳ ಕೈಯಲ್ಲಿ ಒಂದು ರೂಪಾಯಿ ಕೂಡ ಉಳಿಯಲ್ಲ ಎಂದು ಎಷ್ಟೋ ಸಲ ಹೇಳುತ್ತಾ ಇರುತ್ತೇನೆ.”

ಹೆಂಡತಿ: “ನಾನೇನೊ ಹಣ ಕೂಡಿಸಿಡದೇ ಇರಬಹುದು. ಆಹಾರ ಸಾಮಗ್ರಿ, ಮನೆ ಸಾಮಾನುಗಳ ಏರುತ್ತಿರುವ ಬೆಲೆ ನನ್ನ ಯಜಮಾನರಿಗೆ ಏನು ಗೊತ್ತು? ಮನೆ ಖರ್ಚು ಒಂದಾ ಎರಡಾ? ಮೂರುಹೊತ್ತು ಮನೆಯಲ್ಲಿರುವವಳು ನಾನು. ಮನೆಗೆ ಏನು ಬೇಕು ಅಂತ ನನಗೆ ಗೊತ್ತು, ಕೊಂಡುಕೊಳ್ಳುತ್ತೇನೆ. ಇನ್ನೊಂದು ರಾದ್ಧಾಂತ ಆದರೂ ಪರವಾಗಿಲ್ಲ.”

ಗಂಡಹೆಂಡತಿ ಸಮಾಧಾನದಿಂದ ಕೂತು ಮಾತಾಡಲಾಗದಂಥ ಒಂದು ವಿಷಯವೆಂದರೆ ಹಣ. ಹೀಗಿರಲಾಗಿ ಗಂಡಹೆಂಡತಿಯರ ಜಗಳಕ್ಕಿರುವ ಸರ್ವೇಸಾಮಾನ್ಯ ಕಾರಣಗಳಲ್ಲಿ ಇದು ಪ್ರಮುಖ ಸ್ಥಾನದಲ್ಲಿದೆ.

ಹಣದ ಬಗ್ಗೆ ಸಮತೂಕ ನೋಟವಿಲ್ಲದ ದಂಪತಿಗಳು ಕಿರಿಕಿರಿ, ಜಗಳ, ಭಾವನಾತ್ಮಕ ಮಾತ್ರವಲ್ಲದೆ ಆಧ್ಯಾತ್ಮಿಕ ಹಾನಿಯನ್ನೂ ಅನುಭವಿಸಬಹುದು. (1 ತಿಮೊಥೆಯ 6:9, 10) ಹಣವನ್ನು ವಿವೇಚನೆಯಿಂದ ಉಪಯೋಗಿಸದ ಹೆತ್ತವರಿಗೆ ಹಗಲಿರುಳು ಕೆಲಸ ಮಾಡುವುದು ಅನಿವಾರ್ಯವಾಗಿ ಅವರ ಮಕ್ಕಳು ಮತ್ತು ಸ್ವತಃ ಅವರೇ ಪರಸ್ಪರ ಭಾವನಾತ್ಮಕ, ಆಧ್ಯಾತ್ಮಿಕ ಬೆಂಬಲದಿಂದ ವಂಚಿತರಾಗಬಹುದು. ಅಲ್ಲದೆ, ಮಕ್ಕಳಿಗೂ ಹಣವನ್ನು ಬೇಕಾಬಿಟ್ಟಿ ಖರ್ಚುಮಾಡುವುದನ್ನು ಅವರು ಕಲಿಸಿದಂತಾಗುತ್ತದೆ.

“ಧನವು . . . ಆಶ್ರಯ” ಎಂದು ಬೈಬಲ್‌ ಒಪ್ಪುತ್ತದೆ. (ಪ್ರಸಂಗಿ 7:12) ಹಣ ನಿಮ್ಮ ವೈವಾಹಿಕ ಬಂಧಕ್ಕೂ ಕುಟುಂಬಕ್ಕೂ ಆಶ್ರಯವಾಗುವುದು ಯಾವಾಗ? ನೀವು ಮಿತವ್ಯಯವನ್ನು ಕಲಿತಾಗ ಮಾತ್ರವಲ್ಲ ಹಣದ ಕುರಿತು ನಿಮ್ಮ ಸಂಗಾತಿಯೊಂದಿಗೆ ಹೇಗೆ ಮಾತಾಡಬೇಕೆಂದು ಕಲಿತಾಗಲೇ. * ವಾಸ್ತವದಲ್ಲಿ ಹಣದ ಕುರಿತ ಚರ್ಚೆ ಒಡಕಿಗೆ ಕಾರಣವಾಗಿರದೆ ನಿಮ್ಮಿಬ್ಬರ ಒಲವಿನ ಬಂಧವನ್ನು ಬಲಪಡಿಸಬಲ್ಲದು.

ಹಾಗಾದರೆ ಹಣದ ವಿಷಯದಲ್ಲಿ ಪತಿಪತ್ನಿಯರ ಮಧ್ಯೆ ಸಮಸ್ಯೆಗಳು ಏಳುವುದೇಕೆ? ಹಣದ ಕುರಿತ ಚರ್ಚೆಗಳು ಸಮಸ್ಯೆಗಳಿಗೆ ಕಾರಣವಾಗಿರುವ ಬದಲು ಸಮಸ್ಯೆಗಳನ್ನು ಬಗೆಹರಿಸುವಂತೆ ಮಾಡಲು ನೀವು ತೆಗೆದುಕೊಳ್ಳಬೇಕಾದ ವ್ಯಾವಹಾರಿಕ ಹೆಜ್ಜೆಗಳಾವುವು?

ಸಮಸ್ಯೆಗಳೇಕೆ?

ಅನೇಕವೇಳೆ ಸಮಸ್ಯೆಗೆ ಕಾರಣ ಹಣವಲ್ಲ ಬದಲಾಗಿ ನಂಬಿಕೆಯಿಲ್ಲದಿರುವಿಕೆ ಅಥವಾ ಭಯವೇ. ಉದಾಹರಣೆಗೆ, ಒಂದೊಂದು ರೂಪಾಯಿಗೂ ಲೆಕ್ಕ ಕೇಳುವ ಗಂಡನಿಗೆ ವಾಸ್ತವದಲ್ಲಿ ಮನೆಯ ಖರ್ಚುವೆಚ್ಚವನ್ನು ತನ್ನ ಹೆಂಡತಿ ಸರಿಯಾಗಿ ನೋಡಿಕೊಳ್ಳುವಳೆಂಬ ನಂಬಿಕೆಯಿಲ್ಲದಿರಬಹುದು. ಗಂಡ ಹಣ ಉಳಿಸುವುದಿಲ್ಲವೆಂದು ಗೊಣಗುವ ಹೆಂಡತಿಗಾದರೋ ವಾಸ್ತವದಲ್ಲಿ ಮುಂದೆ ಯಾವುದಕ್ಕಾದರೂ ಹಣ ಅವಶ್ಯವಿದ್ದಾಗ ಪರದಾಡುವ ಪರಿಸ್ಥಿತಿ ಬರಬಹುದೆಂಬ ಭಯ.

ದಂಪತಿಗಳಿಗೆ ಸಮಸ್ಯೆಯನ್ನು ಉಂಟುಮಾಡುವ ಇನ್ನೊಂದು ವಿಷಯ ಅವರ ಹಿನ್ನೆಲೆ. ಮದುವೆಯಾಗಿ ಎಂಟು ವರ್ಷಗಳಾಗಿರುವ ಮನೋಹರ್‌ ಏನು ಹೇಳುತ್ತಾರೆಂದು ಕೇಳಿ: “ನನ್ನ ಹೆಂಡತಿ ಬೆಳೆದುಬಂದದ್ದು ಹಣದ ಉತ್ತಮ ನಿರ್ವಹಣೆಮಾಡುತ್ತಿದ್ದ ಕುಟುಂಬದಿಂದ. ಹಾಗಾಗಿ ಹಣದ ಬಗ್ಗೆ ನನಗಿರುವಂಥ ಭಯ ಅವಳಿಗಿಲ್ಲ. ನನ್ನ ತಂದೆ ಕುಡುಕರಾಗಿದ್ದರು, ಯಾವಾಗಲೂ ಅವರ ಕೈಯಲ್ಲಿ ಸಿಗರೇಟು ಇರುತ್ತಿತ್ತು. ಕೆಲವೊಮ್ಮೆ ತಿಂಗಳುಗಟ್ಟಲೆ ಅವರಿಗೆ ಕೆಲಸ ಇರುತ್ತಿರಲಿಲ್ಲ. ಎಷ್ಟೋ ಸಲ ನಮಗೆ ಹೊಟ್ಟೆ ಬಟ್ಟೆಗೂ ತುಂಬ ಕಷ್ಟವಿತ್ತು. ಸಾಲದಲ್ಲಿ ಸಿಕ್ಕಿಬೀಳುವ ಭಯ ನನಗೆ. ಇದರಿಂದ ಕೆಲವೊಮ್ಮೆ ಹಣದ ಮಾತೆತ್ತುವಾಗ ನನ್ನ ಹೆಂಡತಿಯ ಮೇಲೆ ರೇಗಾಡಿ ಬಿಡುತ್ತೇನೆ” ಎನ್ನುತ್ತಾರೆ ಮನೋಹರ್‌. ನಿಮ್ಮ ಟೆನ್ಷನ್‌ಗೆ ಕಾರಣ ಏನೇ ಇರಲಿ, ಹಣ ನಿಮ್ಮ ವೈವಾಹಿಕ ಜೀವನಕ್ಕೆ ಕಂಟಕವಾಗಿರದೆ ಪೂರಕವಾಗಿರುವಂತೆ ನೀವೇನು ಮಾಡಸಾಧ್ಯ?

ಯಶಸ್ಸಿಗೆ ನಾಲ್ಕು ಮೆಟ್ಟಿಲುಗಳು

ಬೈಬಲ್‌ ಹಣಕಾಸಿನ ಕೈಪಿಡಿಯಲ್ಲ. ಆದರೂ ಅದರಲ್ಲಿರುವ ವ್ಯಾವಹಾರಿಕ ಸಲಹೆಗಳು ಹಣದಿಂದೇಳುವ ಸಮಸ್ಯೆಗಳನ್ನು ತಪ್ಪಿಸಲು ದಂಪತಿಗಳಿಗೆ ಸಹಾಯಮಾಡುತ್ತವೆ. ಕೆಳಗಿರುವ ಬೈಬಲ್‌ ಸಲಹೆಸೂಚನೆಗಳನ್ನು ಅನ್ವಯಿಸಿ ನೋಡಿ.

1. ಹಣದ ವಿಷಯದಲ್ಲಿ ಸಮಾಧಾನದಿಂದ ಮಾತಾಡಲು ಕಲಿಯಿರಿ. “ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.” (ಜ್ಞಾನೋಕ್ತಿ 13:10) ನೀವು ಬೆಳೆದು ಬಂದ ರೀತಿಯಿಂದಾಗಿ ಹಣದ ವಿಷಯದಲ್ಲಿ ಬೇರೆಯವರ, ಅದರಲ್ಲೂ ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಕೇಳಿ ಅದಕ್ಕೆ ಕಿವಿಗೊಡುವುದು ನಿಮಗೆ ಮುಜುಗರವೆನಿಸಬಹುದು. ಹಾಗಿದ್ದರೂ ಇಂಥ ಪ್ರಾಮುಖ್ಯ ವಿಷಯದ ಬಗ್ಗೆ ಚರ್ಚಿಸಲು ಕಲಿಯುವುದು ವಿವೇಕಪ್ರದ. ಉದಾಹರಣೆಗೆ, ಹಣದ ಬಗ್ಗೆ ನಿಮ್ಮ ಹೆತ್ತವರ ನೋಟ ಹೇಗೆ ನಿಮ್ಮ ಮೇಲೆ ಪ್ರಭಾವ ಬೀರಿದೆಯೆಂದು ನಿಮ್ಮ ಬಾಳಸಂಗಾತಿಗೆ ತಿಳಿಸಬಹುದಲ್ಲವೆ? ಅಷ್ಟೇ ಅಲ್ಲ, ನಿಮ್ಮ ಸಂಗಾತಿಯ ಮೇಲೆ ಅವರ ಕುಟುಂಬ ಹಿನ್ನೆಲೆ ಹೇಗೆ ಪ್ರಭಾವ ಬೀರಿದೆಯೆಂದು ನೀವು ಕೂಡ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ.

ಹಣ ನಿರ್ವಹಣೆ ಬಗ್ಗೆ ಮಾತಾಡಲು ಒಂದು ಸಮಸ್ಯೆ ಏಳುವ ವರೆಗೆ ಕಾಯಬೇಕೆಂದಿಲ್ಲ. “ಗೊತ್ತುಮಾಡಿಕೊಳ್ಳದೆ ಇಬ್ಬರು ಜೊತೆಯಾಗಿ ನಡೆಯುವರೋ?” ಎಂದು ಕೇಳಿದನು ಒಬ್ಬ ಬೈಬಲ್‌ ಬರಹಗಾರ. (ಆಮೋಸ 3:3) ಇದರಲ್ಲಿರುವ ಸೂತ್ರ ಹೇಗೆ ಅನ್ವಯವಾಗುತ್ತದೆ? ಆರ್ಥಿಕ ಸಮಸ್ಯೆಗಳ ಕುರಿತು ಮಾತಾಡಲು ನೀವು ನಿರ್ದಿಷ್ಟ ಸಮಯವನ್ನು ಗೊತ್ತುಮಾಡುವಲ್ಲಿ ಹಣದ ವಿಷಯದಲ್ಲಿ ನಿಮ್ಮಿಬ್ಬರ ಮಧ್ಯೆ ಆಗುವ ಘರ್ಷಣೆಗಳನ್ನು ಬಹಳಷ್ಟು ಕಡಿಮೆಗೊಳಿಸುವಿರಿ.

ಪ್ರಯತ್ನಿಸಿ ನೋಡಿ: ಕುಟುಂಬದ ಖರ್ಚುವೆಚ್ಚಗಳ ಕುರಿತು ಕ್ರಮವಾಗಿ ಮಾತಾಡಲು ನಿರ್ದಿಷ್ಟ ಸಮಯವಿಡಿ. ಬಹುಶಃ ಪ್ರತಿ ತಿಂಗಳ ಮೊದಲನೇ ದಿನ ಅಥವಾ ಪ್ರತಿ ವಾರದ ನಿರ್ದಿಷ್ಟ ದಿನದಂದು ಅದರ ಬಗ್ಗೆ ನೀವು ಮಾತಾಡಬಹುದು. ಚರ್ಚೆ ಚುಟುಕಾಗಿರಲಿ. ಹೆಚ್ಚೆಂದರೆ 15 ನಿಮಿಷ ಅಥವಾ ಅದರೊಳಗೆ ಮುಗಿಸಿ. ನಿಮ್ಮಿಬ್ಬರ ಮನಸ್ಸು ಪ್ರಶಾಂತವಾಗಿರುವ ಸಮಯವನ್ನು ಆರಿಸಿಕೊಳ್ಳಿ. ಊಟಮಾಡುವಾಗ, ಮಕ್ಕಳೊಂದಿಗೆ ಇರುವಾಗ, ಇನ್ನಿತರ ನಿರ್ದಿಷ್ಟ ಸಮಯಗಳಲ್ಲಿ ದುಡ್ಡಿನ ಕುರಿತು ಮಾತೆತ್ತದಿರಲು ಇಬ್ಬರೂ ನಿರ್ಣಯಿಸಿ.

2. ಆದಾಯದ ಕುರಿತ ನಿಮ್ಮಿಬ್ಬರ ನೋಟ ಒಂದೇ ಆಗಿರಲಿ. “ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮನ್ನರಿಗೆ 12:10) ನಿಮ್ಮೊಬ್ಬರ ಸಂಪಾದನೆಯಿಂದ ಮನೆ ನಡೆಯುತ್ತಿರುವಲ್ಲಿ ‘ಇದು ನನ್ನ ಹಣ’ ಎಂದು ನೆನಸದೆ ಕುಟುಂಬಕ್ಕೆ ಸೇರಿದ ಹಣವಾಗಿ ವೀಕ್ಷಿಸಿ. ಹೀಗೆ ನಿಮ್ಮ ಸಂಗಾತಿಗೆ ಗೌರವ ತೋರಿಸುವಿರಿ.—1 ತಿಮೊಥೆಯ 5:8.

ಒಂದುವೇಳೆ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ದುಡಿಯುತ್ತಿರುವಲ್ಲಿ ನಿಮ್ಮ ಸಂಬಳವನ್ನು ಮತ್ತು ದೊಡ್ಡ ದೊಡ್ಡ ಖರ್ಚುಗಳನ್ನು ಮುಚ್ಚುಮರೆಯಿಲ್ಲದೆ ಪರಸ್ಪರ ತಿಳಿಸುವ ಮೂಲಕ ಗೌರವ ತೋರಿಸಿರಿ. ಇವುಗಳಲ್ಲಿ ಯಾವುದನ್ನೇ ಮುಚ್ಚಿಡುವಲ್ಲಿ ನಿಮ್ಮ ಸಂಗಾತಿಯ ವಿಶ್ವಾಸವನ್ನು ಕಳಕೊಂಡೀರಿ. ಇದರಿಂದ ನಿಮ್ಮ ಸಂಬಂಧದಲ್ಲಿ ಬಿರುಕುಂಟಾಗಬಹುದು. ಇದರರ್ಥ ಚಿಕ್ಕಪುಟ್ಟ ಖರ್ಚುಗಳನ್ನೆಲ್ಲಾ ನಿಮ್ಮ ಸಂಗಾತಿಯನ್ನು ಕೇಳಿ ಮಾಡಬೇಕೆಂದಲ್ಲ. ಆದರೆ ದೊಡ್ಡ ಖರ್ಚುಗಳನ್ನು ಮಾಡುವ ಮುಂಚೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸುವಲ್ಲಿ ಅವರ ಅಭಿಪ್ರಾಯಕ್ಕೆ ಬೆಲೆಕೊಡುತ್ತೀರೆಂದು ತೋರಿಸುವಿರಿ.

ಪ್ರಯತ್ನಿಸಿ ನೋಡಿ: ನೀವಿಬ್ಬರೂ ಪರಸ್ಪರ ಕೇಳದೆ ಖರ್ಚುಮಾಡಬಹುದಾದ ಹಣದ ಮೊತ್ತ ಎಷ್ಟೆಂದು ನಿರ್ಧರಿಸಿ. ಅದು 20, 200 ಅಥವಾ 2000 ರೂಪಾಯಿ ಆಗಿರಬಹುದು. ಅದಕ್ಕಿಂತ ಜಾಸ್ತಿ ಖರ್ಚುಮಾಡುವ ಮುಂಚೆ ಯಾವಾಗಲೂ ನಿಮ್ಮ ಸಂಗಾತಿಯನ್ನು ವಿಚಾರಿಸಿ.

3. ನಿಮ್ಮ ಯೋಜನೆಗಳನ್ನು ಬರೆದಿಡಿ. “ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ.” (ಜ್ಞಾನೋಕ್ತಿ 21:5, NIBV) ಭವಿಷ್ಯಕ್ಕಾಗಿ ಯೋಜನೆ ಮಾಡುವ ಮತ್ತು ನಿಮ್ಮ ಕಠಿನ ಪರಿಶ್ರಮ ನೀರುಪಾಲಾಗುವುದನ್ನು ತಪ್ಪಿಸುವ ಒಂದು ವಿಧ ಕುಟುಂಬ-ಬಜೆಟ್‌ ತಯಾರಿಸುವುದೇ ಆಗಿದೆ. ಮದುವೆಯಾಗಿ ಐದು ವರ್ಷವಾಗಿರುವ ನೀನಾ ಎಂಬಾಕೆ ಹೇಳುವುದು: “ಒಂದು ಕಾಗದದಲ್ಲಿ ನಿಮ್ಮ ಆದಾಯ-ಖರ್ಚು ಎರಡನ್ನೂ ಬರೆದಿಡುವಲ್ಲಿ ನಿಮಗೇ ಆಶ್ಚರ್ಯವಾಗಬಹುದು. ನಿಮ್ಮ ಕಣ್ಮುಂದಿರುವ ಆ ನಿಜಾಂಶಗಳನ್ನು ನೋಡುವಾಗ ವಾದವಾಗ್ವಾದಕ್ಕೆ ಆಸ್ಪದವೇ ಇರುವುದಿಲ್ಲ.”

ಬಜೆಟ್‌ ಮಾಡುವ ವಿಧಾನ ಜಟಿಲವಾಗಿರಬೇಕಿಲ್ಲ. ಮದುವೆಯಾಗಿ 26 ವರ್ಷ ಕಳೆದಿರುವ, ಎರಡು ಗಂಡುಮಕ್ಕಳ ತಂದೆ ದೀಪಕ್‌ ಹೇಳುವುದು: “ನಾವು ಆರಂಭದಲ್ಲಿ ಊಟ, ಮನೋರಂಜನೆ, ಹೇರ್‌ಕಟ್‌ ಹೀಗೆ ಒಂದೊಂದಕ್ಕೆ ಒಂದೊಂದು ಲಕೋಟೆ ಇಡುತ್ತಿದ್ದೆವು. ಪ್ರತಿಯೊಂದರಲ್ಲಿ ಒಂದು ವಾರಕ್ಕೆ ಬೇಕಾಗುವ ಹಣ ಹಾಕಿಡುತ್ತಿದ್ದೆವು. ಯಾವುದಾದರೂ ಒಂದು ಲಕೋಟೆಯಲ್ಲಿರುವ ಹಣ ಖರ್ಚಿಗೆ ಸಾಲದೆ ಹೋದಲ್ಲಿ ಇನ್ನೊಂದರಿಂದ ಹಣ ತೆಗೆದು ಆದಷ್ಟು ಬೇಗನೆ ಅದರಲ್ಲಿ ವಾಪಸ್ಸು ಇಡುತ್ತಿದ್ದೆವು.” ನೀವು ಹೆಚ್ಚಾಗಿ ಎಲೆಕ್ಟ್ರಾನಿಕ್‌ ಬ್ಯಾಂಕಿಂಗ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕವೇ ಬಿಲ್‌ಗಳನ್ನು ಪಾವತಿಸುವಲ್ಲಿ ಯೋಜನೆ ಮಾಡುವುದು ಮತ್ತು ನಿಮ್ಮ ಖರ್ಚುಗಳನ್ನು ಬರೆದಿಡುವುದು ಅತ್ಯಗತ್ಯ.

ಪ್ರಯತ್ನಿಸಿ ನೋಡಿ: ಪ್ರತಿಸಲ ಪಾವತಿಸಬೇಕಾದಂಥ ನಿಗದಿತ ಮೊತ್ತದ ಖರ್ಚುಗಳನ್ನು ಬರೆದಿಡಿ. ನಿಮ್ಮ ವರಮಾನದಲ್ಲಿ ಎಷ್ಟನ್ನು ಉಳಿಸಬೇಕೆಂದು ಇಬ್ಬರು ಸೇರಿ ನಿರ್ಣಯಿಸಿ. ಬಳಿಕ, ಏರುಪೇರಾಗುವಂಥ ಖರ್ಚುಗಳನ್ನು ಉದಾಹರಣೆಗೆ ಊಟ, ಕರೆಂಟ್‌ ಮತ್ತು ಫೋನ್‌ ಬಿಲ್‌ನಂಥ ಖರ್ಚುಗಳನ್ನು ಪಟ್ಟಿಮಾಡಿ. ಮುಂದಿನ ಕೆಲವು ತಿಂಗಳುಗಳ ವರೆಗೆ ನಿಜವಾಗಿಯೂ ನೀವು ಎಷ್ಟು ಖರ್ಚುಮಾಡುತ್ತಿದ್ದೀರೆಂದು ಬರೆದಿಡಿ. ಸಾಲದಲ್ಲಿ ಮುಳುಗಿಹೋಗದಿರಲು ಅಗತ್ಯವಿದ್ದಲ್ಲಿ ನಿಮ್ಮ ಜೀವನಶೈಲಿಯನ್ನೂ ಬದಲಾಯಿಸಿರಿ.

4. ಜವಾಬ್ದಾರಿಗಳನ್ನು ಹಂಚಿಕೊಳ್ಳಿ. “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ.” (ಪ್ರಸಂಗಿ 4:9, 10) ಕೆಲವು ಕುಟುಂಬಗಳಲ್ಲಿ ಗಂಡನು ಹಣ ನಿರ್ವಹಣೆ ಮಾಡಿದರೆ ಇನ್ನೂ ಕೆಲವು ಕುಟುಂಬಗಳಲ್ಲಿ ಹೆಂಡತಿ ಆ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಾಳೆ. (ಜ್ಞಾನೋಕ್ತಿ 31:10-28) ಅನೇಕ ದಂಪತಿಗಳಾದರೋ ಆ ಹೊರೆಯನ್ನು ಹಂಚಿಕೊಳ್ಳುತ್ತಾರೆ. 21 ವರ್ಷ ದಾಂಪತ್ಯ ಜೀವನ ನಡೆಸಿರುವ ಮನೋಜ್‌ ಹೇಳುವುದು: “ಬಿಲ್‌ಗಳ ಪಾವತಿ ಮತ್ತು ಸಣ್ಣಪುಟ್ಟ ಖರ್ಚುಗಳನ್ನೆಲ್ಲಾ ನನ್ನ ಹೆಂಡತಿ ನೋಡಿಕೊಳ್ಳುತ್ತಾಳೆ. ತೆರಿಗೆ, ಕಂತು, ಬಾಡಿಗೆಯನ್ನು ನಾನು ನೋಡಿಕೊಳ್ಳುತ್ತೇನೆ. ಹಣವನ್ನು ನಿರ್ವಹಿಸುವಾಗ ಪಾಲುಗಾರರಂತೆ ಒಬ್ಬರಿಗೊಬ್ಬರು ಎಲ್ಲವನ್ನೂ ತಿಳಿಸುತ್ತೇವೆ.” ಹಣ ನಿರ್ವಹಣೆಗೆ ನೀವು ಬಳಸುವ ವಿಧಾನ ಯಾವುದೇ ಆಗಿರಲಿ ನೀವಿಬ್ಬರೂ ಅದನ್ನು ಜೊತೆಯಾಗಿ ನಿರ್ವಹಿಸುವುದೇ ಯಶಸ್ಸಿನ ಗುಟ್ಟು.

ಪ್ರಯತ್ನಿಸಿ ನೋಡಿ: ನಿಮ್ಮಿಬ್ಬರಿಗೆ ಯಾವುದು ಸಾಧ್ಯ-ಅಸಾಧ್ಯ ಎಂಬುದನ್ನು ಪರಿಗಣಿಸಿ ಯಾರು ಯಾವ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವರೆಂದು ಚರ್ಚಿಸಿ. ಕೆಲವು ತಿಂಗಳುಗಳ ನಂತರ ಆ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆಯೋ ಎಂದು ಪರಿಶೀಲಿಸಿ. ಹೊಂದಾಣಿಕೆಗಳನ್ನು ಮಾಡಲು ಹಿಂದೆಮುಂದೆ ನೋಡಬೇಡಿ. ನಿಮ್ಮ ಸಂಗಾತಿ ಮಾಡುವ ಕೆಲಸಗಳನ್ನು ಗಣ್ಯಮಾಡಲು ಆಗಿಂದಾಗ್ಗೆ ಬಿಲ್‌ ಪಾವತಿ ಅಥವಾ ಸಾಮಾನುಗಳ ಖರೀದಿಯಂಥ ಕೆಲಸಗಳನ್ನು ಅದಲುಬದಲು ಮಾಡಿಕೊಳ್ಳಬಹುದು.

ಹಣದ ಕುರಿತ ಚರ್ಚೆಗಳ ಪರಿಣಾಮ?

ಹಣದ ಕುರಿತ ಚರ್ಚೆಗಳಿಂದಾಗಿ ನಿಮ್ಮ ಪ್ರೀತಿ ಆರಿಹೋಗಬೇಕಿಲ್ಲ. ಮದುವೆಯಾಗಿ ಐದು ವರ್ಷವಾಗಿರುವ ಲತಾ ಈ ಮಾತು ಸತ್ಯವೆಂದು ಅರಿತಳು. ಅವಳನ್ನುವುದು: “ನಾನು ಮತ್ತು ನನ್ನ ಯಜಮಾನರು ಹಣದ ವಿಷಯದಲ್ಲಿ ಯಾವುದನ್ನೂ ಮುಚ್ಚಿಡದೆ ಪ್ರಾಮಾಣಿಕವಾಗಿ ಮಾತಾಡಲು ಕಲಿತೆವು. ಫಲಿತಾಂಶವಾಗಿ ನಾವೀಗ ಒಟ್ಟೊಟಿಗೆ ಹಣ ನಿರ್ವಹಣೆ ಮಾಡುತ್ತೇವೆ, ನಮ್ಮ ಪ್ರೀತಿಯೂ ಇನ್ನಷ್ಟು ಗಾಢವಾಗಿದೆ.”

ದಂಪತಿಗಳು ಖರ್ಚುವೆಚ್ಚಗಳ ಬಗ್ಗೆ ಜೊತೆಗೂಡಿ ಚರ್ಚಿಸುವಾಗ ವಾಸ್ತವದಲ್ಲಿ ಅವರು ತಮ್ಮ ಆಸೆಆಕಾಂಕ್ಷೆಗಳನ್ನೂ ಕನಸುಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಾರೆ ಹಾಗೂ ತಮ್ಮ ವಿವಾಹ ಪ್ರತಿಜ್ಞೆಗೂ ನಿಷ್ಠೆಯಿಂದ ಅಂಟಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಖರ್ಚುಗಳನ್ನು ಮಾಡುವ ಮುನ್ನ ತಮ್ಮ ಸಂಗಾತಿಯನ್ನು ವಿಚಾರಿಸುವ ಮೂಲಕ ಪರಸ್ಪರರ ಅಭಿಪ್ರಾಯ ಮತ್ತು ಭಾವನೆಗಳಿಗೆ ಗೌರವ ತೋರಿಸುತ್ತಾರೆ. ಪರಸ್ಪರ ಕೇಳದೆ ನಿರ್ದಿಷ್ಟ ಮೊತ್ತದ ವರೆಗೆ ಹಣ ವ್ಯಯಿಸುವ ಸ್ವಾತಂತ್ರ್ಯ ಇರುವಲ್ಲಿ ಅದು ಒಬ್ಬರಿಗೊಬ್ಬರ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ. ಇವೆಲ್ಲವೂ ಪ್ರೀತಿಯ ಬಾಂಧವ್ಯಕ್ಕೆ ಅತ್ಯಾವಶ್ಯಕ. ಇಂಥ ಬಂಧ ಹಣಕ್ಕಿಂತಲೂ ಮಿಗಿಲಾದದ್ದು. ಹೀಗಿರುವಾಗ ಹಣದ ಬಗ್ಗೆ ವಾದವಿವಾದ ಏಕೆ? (w09 08/01)

[ಪಾದಟಿಪ್ಪಣಿಗಳು]

^ ಪ್ಯಾರ. 3 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 7 “ಗಂಡನು ತನ್ನ ಹೆಂಡತಿಗೆ ಶಿರಸ್ಸಾಗಿದ್ದಾನೆ” ಅಂದರೆ ಯಜಮಾನನಾಗಿದ್ದಾನೆ ಎಂದು ಬೈಬಲ್‌ ತಿಳಿಸುತ್ತದೆ. ಆದುದರಿಂದ ಕುಟುಂಬದ ಹಣ ನಿರ್ವಹಣೆ ಮಾಡುವ ಮತ್ತು ಅದೇ ಸಮಯದಲ್ಲಿ ತನ್ನ ಹೆಂಡತಿಯನ್ನು ನಿಸ್ವಾರ್ಥವಾಗಿ, ಪ್ರೀತಿಯಿಂದ ಉಪಚರಿಸುವ ಮುಖ್ಯ ಜವಾಬ್ದಾರಿ ಗಂಡನದ್ದು.—ಎಫೆಸ 5:23, 25.

ಕೇಳಿಕೊಳ್ಳಿ . . .

ಹಣದ ವಿಷಯದಲ್ಲಿ ನಾವಿಬ್ಬರು ಸಮಾಧಾನದಿಂದ ಕೊನೆ ಬಾರಿ ಕೂತು ಮಾತಾಡಿದ್ದು ಯಾವಾಗ?

ಹಣಕಾಸಿನ ವಿಷಯದಲ್ಲಿ ನನ್ನ ಸಂಗಾತಿಯ ನೆರವನ್ನು ಗಣ್ಯಮಾಡುತ್ತೇನೆಂದು ತೋರಿಸಲು ನಾನೇನು ಹೇಳಲಿ ಮತ್ತು ಮಾಡಲಿ?

[ಪುಟ 20ರಲ್ಲಿರುವ ಚಿತ್ರ]

ನಿಮಗೆ ಯಾವುದು ಮುಖ್ಯ—ದುಡ್ಡೋ ದಾಂಪತ್ಯವೋ?