ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀನರು ಯೆಹೋವನಿಗೆ ಪ್ರಿಯರು

ದೀನರು ಯೆಹೋವನಿಗೆ ಪ್ರಿಯರು

ದೇವರ ಸಮೀಪಕ್ಕೆ ಬನ್ನಿರಿ

ದೀನರು ಯೆಹೋವನಿಗೆ ಪ್ರಿಯರು

ಅರಣ್ಯಕಾಂಡ 12:1-15

ಹೆಮ್ಮೆ, ಹೊಟ್ಟೆಕಿಚ್ಚು, ಹೆಬ್ಬಯಕೆ—ಇಂಥ ಗುಣಗಳು ಈ ಲೋಕದಲ್ಲಿ ಯಶಸ್ಸನ್ನು ಗಿಟ್ಟಿಸಿಕೊಳ್ಳಲು ಮುನ್ನುಗ್ಗುವವರಲ್ಲಿ ಸಾಮಾನ್ಯ. ಆದರೆ ಇಂಥ ಗುಣಗಳು ನಮ್ಮನ್ನು ಯೆಹೋವ ದೇವರ ಸಮೀಪಕ್ಕೆ ತರುತ್ತವೋ? ಇಲ್ಲ. ಏಕೆಂದರೆ ತನ್ನ ಆರಾಧಕರು ದೀನರಾಗಿರಬೇಕೆಂಬುದು ಯೆಹೋವನ ಅಪೇಕ್ಷೆ. ಇದು ಅರಣ್ಯಕಾಂಡ 12ನೇ ಅಧ್ಯಾಯದ ವೃತ್ತಾಂತದಿಂದ ವ್ಯಕ್ತವಾಗುತ್ತದೆ. ಈ ಘಟನೆ ನಡೆದದ್ದು, ಐಗುಪ್ತದಿಂದ ಇಸ್ರಾಯೇಲ್ಯರು ಬಿಡುಗಡೆಯಾಗಿ ಸಿನಾಯಿ ಅರಣ್ಯದಲ್ಲಿದ್ದಾಗ.

ಅಕ್ಕ ಮಿರ್ಯಾಮ ಮತ್ತು ಅಣ್ಣ ಆರೋನ ತಮ್ಮನಾದ ಮೋಶೆಯ ‘ವಿರೋಧವಾಗಿ ಮಾತಾಡುವವರಾದರು.’ (ವಚನ 1) ಬಹುಶಃ ಅವರು ಮೋಶೆಯ ವಿರುದ್ಧ ಪಾಳೆಯದಲ್ಲೆಲ್ಲ ಚಾಡಿಮಾತನ್ನು ಹಬ್ಬಿಸಿದರು. ವಚನದಲ್ಲಿ ಮೊದಲು ಮಿರ್ಯಾಮಳ ಹೆಸರು ಕಂಡುಬರುವುದರಿಂದ ಚಾಡಿಹೇಳಿದ್ದು ಮುಖ್ಯವಾಗಿ ಅವಳೇ ಆಗಿದ್ದಿರಬಹುದು. ಕೂಷ್‌ ದೇಶದ ಸ್ತ್ರೀಯನ್ನು ಮೋಶೆ ಮದುವೆಯಾದದ್ದೇ ಈ ಗುಣುಗುಟ್ಟುವಿಕೆಗೆ ಮೊದಲ ಕಾರಣ. ತನಗೆ ಸಿಗುತ್ತಿದ್ದ ಮಾನಮರ್ಯಾದೆಯನ್ನು ಇಸ್ರಾಯೇಲ್ಯಳಾಗಿರದ ಈ ಹೆಂಗಸು ಕಸಿದುಕೊಳ್ಳುವಳೆಂಬ ಹೊಟ್ಟೆಕಿಚ್ಚಿನಿಂದಾಗಿ ಮಿರ್ಯಾಮಳು ಹೀಗೆ ಮಾಡಿರಬಹುದೋ?

ಈ ಗುಣುಗುಟ್ಟುವಿಕೆಗೆ ಇನ್ನಷ್ಟು ಕಾರಣಗಳಿದ್ದವು. “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ” ಎಂದು ಮಿರ್ಯಾಮ ಆರೋನರು ಹೇಳುತ್ತಾ ಇದ್ದರು. (ವಚನ 2) ಅವರ ಗುಣುಗುಟ್ಟುವಿಕೆಯ ಹಿಂದಿನ ನಿಜವಾದ ಇರಾದೆ ಹೆಚ್ಚಿನ ಅಧಿಕಾರ, ಮಾನಕ್ಕಾಗಿ ಅವರಿಗಿದ್ದ ಲಾಲಸೆ ಆಗಿದ್ದಿರಬಹುದೋ?

ಆ ವೃತ್ತಾಂತದಲ್ಲಿರುವಂತೆ, ಇಷ್ಟೆಲ್ಲ ಚಾಡಿಮಾತುಗಳನ್ನು ಕೇಳಿಸಿಕೊಂಡರೂ ಮೋಶೆ ಒಂದು ಮಾತನ್ನೂ ಆಡಲಿಲ್ಲ. ಅವನು ಮೌನವಾಗಿಯೇ ಆ ನಿಂದನೆಯನ್ನು ಸಹಿಸಿಕೊಂಡನು. ಅವನ ಈ ಸಹನಶೀಲ ಪ್ರತಿಕ್ರಿಯೆಯು, “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಎಂಬ ಅವನ ಕುರಿತ ಬೈಬಲ್‌ ವರ್ಣನೆಯನ್ನು ದೃಢೀಕರಿಸುತ್ತದೆ. * (ವಚನ 3) ಮೋಶೆ ತನ್ನನ್ನು ಸಮರ್ಥಿಸಿಕೊಳ್ಳಬೇಕಾಗಿರಲಿಲ್ಲ. ಏಕೆಂದರೆ ಯೆಹೋವನು ಇದೆಲ್ಲವನ್ನು ಕೇಳಿಸಿಕೊಳ್ಳುತ್ತಾ ಇದ್ದನು ಮತ್ತು ಆತನೇ ಮೋಶೆಯ ಪರವಹಿಸಿದನು.

ಮೋಶೆ ವಿರುದ್ಧ ಆಡಲಾದ ಮಾತುಗಳನ್ನು ತನ್ನ ವಿರುದ್ಧ ಆಡಲಾದ ಮಾತೆಂದು ಯೆಹೋವನು ಪರಿಗಣಿಸಿದನು. ಏಕೆಂದರೆ ಮೋಶೆಯನ್ನು ನೇಮಿಸಿದವನು ಆತನೇ ಅಲ್ಲವೇ? ಗುಣುಗುಟ್ಟುತ್ತಿದ್ದ ಮಿರ್ಯಾಮ ಆರೋನರನ್ನು ದೇವರು ಗದರಿಸುವಾಗ, ತನಗೂ ಮೋಶೆಗೂ ಇರುವ ಅಪೂರ್ವ ಸಂಬಂಧದ ಕುರಿತು ಅವರಿಗೆ ಮರುಜ್ಞಾಪಿಸಿದನು. ಆತನಂದದ್ದು: ‘ಅವನ ಸಂಗಡ ನಾನು ಪ್ರತ್ಯಕ್ಷದಲ್ಲಿ ಸ್ಪಷ್ಟವಾಗಿಯೇ ಮಾತಾಡುತ್ತೇನೆ.’ ನಂತರ ಅವನು ಮಿರ್ಯಾಮ ಆರೋನರಿಗೆ ಹೇಳಿದ್ದು: “ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತಾಡುವದಕ್ಕೆ ಭಯಪಡಬೇಕಾಗಿತ್ತು.” (ವಚನ 8) ಮೋಶೆಯ ವಿರುದ್ಧ ಮಾತಾಡಿ ಅವರು ನಿಜವಾಗಿ ದೇವರ ವಿರುದ್ಧ ಮಾತಾಡುವ ತಪ್ಪನ್ನು ಮಾಡಿದ್ದರು. ಇಂಥ ಘೋರ ಅಗೌರವಕ್ಕಾಗಿ ಅವರಿಗೆ ದೇವರ ಕೋಪದ ತಾಪ ತಟ್ಟಲಿತ್ತು.

ಈ ಗುಣುಗುಟ್ಟುವಿಕೆಯನ್ನು ಚಿತಾಯಿಸಿದ ಮಿರ್ಯಾಮಳಿಗೆ ಕುಷ್ಠರೋಗ ತಗಲಿತು. ಆರೋನನು ಆ ಕೂಡಲೇ ಅವಳ ಪರವಾಗಿ ದೇವರಿಗೆ ಬೇಡುವಂತೆ ಮೋಶೆಯನ್ನು ಅಂಗಲಾಚಿದನು. ಸ್ವಲ್ಪ ಊಹಿಸಿಕೊಳ್ಳಿ: ಅವರು ಯಾರಿಗೆ ಅನ್ಯಾಯಮಾಡಿದ್ದರೋ ಅವನು ದೇವರನ್ನು ಬೇಡಿದರೆ ಮಾತ್ರ ಮಿರ್ಯಾಮಳು ವಾಸಿಯಾಗಬಹುದಿತ್ತು! ಆರೋನನು ಹೇಳಿದ್ದನ್ನು ಮೋಶೆ ದೀನತೆಯಿಂದ ಮಾಡುತ್ತಾ ತನ್ನ ಅಕ್ಕನ ಪರವಾಗಿ ಯೆಹೋವನ ಬಳಿ ಬೇಡಿದನು. ಈ ವೃತ್ತಾಂತದಲ್ಲಿ ಮೋಶೆ ಮಾತಾಡಿದ್ದು ಇದೇ ಮೊತ್ತಮೊದಲ ಬಾರಿ. ಮಿರ್ಯಾಮಳು ವಾಸಿಯಾದಳು. ಆದರೆ ಆಕೆ ಏಳು ದಿನಗಳ ವರೆಗೆ ಪಾಳೆಯದಿಂದ ಪ್ರತ್ಯೇಕವಾಗಿ ವಾಸಿಸುವ ನಾಚಿಕೆಗೆ ಗುರಿಯಾಗಲೇಬೇಕಾಯಿತು.

ಈ ವೃತ್ತಾಂತದಿಂದ, ಯೆಹೋವನು ಮೆಚ್ಚುವ ಮತ್ತು ದ್ವೇಷಿಸುವ ಗುಣಗಳ ಒಳನೋಟ ನಮಗೆ ಸಿಗುತ್ತದೆ. ನಾವು ದೇವರ ಸಮೀಪಕ್ಕೆ ಬರಬೇಕಾದರೆ ನಮ್ಮಲ್ಲಿರಬಹುದಾದ ಹೆಮ್ಮೆ, ಹೊಟ್ಟೆಕಿಚ್ಚು, ಹೆಬ್ಬೆಯಕೆಯ ಎಲ್ಲ ಜಾಡನ್ನು ಕಿತ್ತೊಗೆಯಲು ಶ್ರಮಿಸಬೇಕು. ಯೆಹೋವನು ದೀನರನ್ನು ಪ್ರೀತಿಸುತ್ತಾನೆ. ಆದುದರಿಂದಲೇ ಆತನು ವಾಗ್ದಾನಿಸುವುದು: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11; ಯಾಕೋಬ 4:6. (w09 08/01)

[ಪಾದಟಿಪ್ಪಣಿ]

^ ಪ್ಯಾರ. 7 ದೀನಭಾವ ಒಂದು ಪ್ರಬಲ ಗುಣ. ಸೇಡಿನ ಭಾವನೆಯನ್ನು ಮನಸ್ಸಿನಲ್ಲಿಡದೆ ತಾಳ್ಮೆಯಿಂದ ಅನ್ಯಾಯವನ್ನು ಸಹಿಸಿಕೊಳ್ಳುವಂತೆ ಒಬ್ಬನನ್ನು ಶಕ್ತಗೊಳಿಸುತ್ತದೆ.