ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ

ಸಂಗಾತಿಯ ಇಷ್ಟ ನಿಮಗೆ ಕಷ್ಟವಾದಾಗ

ಸಂಗಾತಿಯ ಇಷ್ಟ ನಿಮಗೆ ಕಷ್ಟವಾದಾಗ

ಸಮಸ್ಯೆ

ನಿಮಗೆ ಆಟ ಇಷ್ಟವಾದರೆ ನಿಮ್ಮ ಸಂಗಾತಿಗೆ ಓದು. ನೀವು ತುಂಬ ಅಚ್ಚುಕಟ್ಟು, ಆದರೆ ನಿಮ್ಮ ಸಂಗಾತಿ ಅದಕ್ಕೆ ತದ್ವಿರುದ್ಧ. ನಿಮಗೆ ಜನರ ಜೊತೆ ಇರೋಕಿಷ್ಟ, ನಿಮ್ಮ ಸಂಗಾತಿಗೆ ಯಾರೂ ಬೇಡ.

‘ನಾನು ಪೂರ್ವ ಆದ್ರೆ ಅವರು ಪಶ್ಚಿಮ! ನಮ್ಮ ಮಧ್ಯೆ ಇಷ್ಟೊಂದು ವ್ಯತ್ಯಾಸ ಇದೆ ಅಂತ ಮದುವೆಗೆ ಮುಂಚೆ ಯಾಕೆ ಗೊತ್ತಾಗಲಿಲ್ಲ?’ ಅಂತ ನೀವು ಯೋಚಿಸುತ್ತಿರಬಹುದು.

ಸಾಮಾನ್ಯವಾಗಿ, ಮದುವೆಗೆ ಮುಂಚೆನೇ ಈ ವ್ಯತ್ಯಾಸಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಗೊತ್ತಾಗಿರುತ್ತೆ. ಆದರೆ ಆಗ ನೀವದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲ್ಲ. ಈಗಲೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇದಕ್ಕೆ ಬೇಕಾದ ಸಹಾಯವನ್ನು ಈ ಲೇಖನ ನಿಮಗೆ ಕೊಡುತ್ತದೆ. ಈಗ ಮೊದಲಾಗಿ ನಾವು, ಭಿನ್ನ ಅಭಿರುಚಿಗಳ ಬಗ್ಗೆ ತಿಳಿದಿರಲೇಬೇಕಾದ ಕೆಲವು ವಿಷಯಗಳನ್ನು ನೋಡೋಣ.

ನಿಮಗಿದು ತಿಳಿದಿರಲಿ

ಕೆಲವು ವ್ಯತ್ಯಾಸಗಳಿಗೆ ಹೊಂದಿಕೊಳ್ಳುವುದು ಕಷ್ಟ. ‘ಹೊಂದಿಕೊಂಡು ಹೋಗುವುದು ಸಾಧ್ಯನಾ’ ಅಂತ ಮದುವೆಗೆ ಮುಂಚೆನೇ ಯೋಚಿಸುವುದು ತುಂಬ ಒಳ್ಳೇದು. ಹೊಂದಿಕೊಳ್ಳಲು ಆಗದಷ್ಟು ದೊಡ್ಡ ವ್ಯತ್ಯಾಸ ಇದೆ ಎಂದು ತಿಳಿದಾಗ ಅನೇಕರು ಆ ಮದುವೆಯನ್ನೇ ಕೈಬಿಟ್ಟಿದ್ದಾರೆ. ಇದರಿಂದ ಮದುವೆಯಾಗಿ ಪಶ್ಚಾತ್ತಾಪಪಡುವುದು ತಪ್ಪಿದೆ. ಆದರೆ ಚಿಕ್ಕ-ಪುಟ್ಟ ವ್ಯತ್ಯಾಸಗಳು ಎಲ್ಲಾ ದಂಪತಿಗಳಲ್ಲೂ ಸಾಮಾನ್ಯ. ಅವುಗಳಿಗೆ ಹೊಂದಿಕೊಳ್ಳುವುದು ಹೇಗೆ?

ಇಬ್ಬರು ಒಂದೇ ರೀತಿ ಇರಲು ಸಾಧ್ಯವೇ ಇಲ್ಲ. ಗಂಡ-ಹೆಂಡತಿಯ ಮಧ್ಯೆ ಈ ಕೆಳಗಿನ ಕೆಲವು ವಿಷಯಗಳಲ್ಲಿ ವ್ಯತ್ಯಾಸ ಇರುವುದು ಸಾಮಾನ್ಯ:

ಅಭಿರುಚಿಗಳು. ‘ನಮ್ಮವರಿಗೆ ಹಿಮಪರ್ವತಗಳನ್ನು, ಗುಡ್ಡಗಾಡು ಪ್ರದೇಶಗಳನ್ನು ಹತ್ತುವುದಂದ್ರೆ ಇಷ್ಟ. ಆದರೆ ನನಗದು ಇಷ್ಟಾನೇ ಇಲ್ಲ’ ಎನ್ನುತ್ತಾಳೆ ಅದಿತಿ. *

ರೂಢಿಗಳು. “ನನ್ನ ಹೆಂಡತಿ ತಡರಾತ್ರಿವರೆಗೆ ಎಚ್ಚರವಿದ್ದರೂ ಬೆಳಿಗ್ಗೆ 5 ಗಂಟೆಗೆ ಎದ್ದುಬಿಡುತ್ತಾಳೆ. ಆದರೆ ನನಗೆ ಏಳರಿಂದ ಎಂಟು ಗಂಟೆ ನಿದ್ದೆ ಬೇಕೇ ಬೇಕು. ಇಲ್ಲದಿದ್ರೆ ಆ ಇಡೀ ದಿನ ನನ್ನ ಮೂಡೇ ಸರಿಯಿರಲ್ಲ” ಎನ್ನುತ್ತಾನೆ ಬ್ರಾಯನ್‌.

ಸ್ವಭಾವಗಳು. ನೀವು ನಿಮ್ಮ ಭಾವನೆಗಳನ್ನು ಯಾರಲ್ಲೂ ಹೇಳಿಕೊಳ್ಳದಿರಬಹುದು. ಆದರೆ ನಿಮ್ಮ ಸಂಗಾತಿಗೆ ಎಲ್ಲವನ್ನೂ ಹೇಳಿಕೊಳ್ಳುವ ಸ್ವಭಾವವಿರಬಹುದು. “ನಾನು ಚಿಕ್ಕಂದಿನಿಂದಲೂ ನನ್ನ ಸಮಸ್ಯೆಗಳ ಬಗ್ಗೆ ಯಾರ ಹತ್ತಿರನೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ, ನನ್ನ ಹೆಂಡತಿ ಎಲ್ಲವನ್ನೂ ಮುಚ್ಚುಮರೆ ಇಲ್ಲದೆ ಮಾತಾಡುವ ಕುಟುಂಬದಿಂದ ಬಂದವಳು” ಎನ್ನುತ್ತಾನೆ ಡೇವಿಡ್.

ವ್ಯತ್ಯಾಸಗಳಿಂದ ಪ್ರಯೋಜನನೂ ಇದೆ. “ನಾನು ಅನುಸರಿಸುವ ವಿಧಾನ ಸರಿ ಇದ್ದರೂ ಅದೊಂದೇ ವಿಧಾನ ಇರೋದು ಅಂತಲ್ಲ” ಎನ್ನುತ್ತಾಳೆ ಹೇಮ.

ಇದಕ್ಕೇನು ಪರಿಹಾರ

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಿ. “ನನ್ನ ಹೆಂಡತಿ ಕಾವ್ಯಗೆ ಆಟ ಆಡೋದಂದ್ರೆ ಸ್ವಲ್ಪನೂ ಇಷ್ಟ ಇಲ್ಲ. ಆದರೂ ಅವಳು ತುಂಬ ಸಾರಿ ನನ್ನ ಜೊತೆ ಆಡೋಕೆ ಬಂದಿದ್ದಾಳೆ, ಖುಷಿನೂ ಪಟ್ಟಿದ್ದಾಳೆ. ಅವಳಿಗೆ ಕಲಾಕೃತಿಯ ಸಂಗ್ರಹಾಲಯಗಳೆಂದರೆ ತುಂಬ ಇಷ್ಟ. ಆದ್ದರಿಂದ ನಾನು ಅವಳ ಜೊತೆ ಅಲ್ಲಿಗೆ ಹೋಗುತ್ತೇನೆ. ಅವಳಿಗೆ ಸಮಾಧಾನ ಆಗೋ ತನಕ ನಾವಲ್ಲಿ ಇರುತ್ತೇವೆ. ಅವಳಿಗಿಷ್ಟ ಅಂತ ಅದರ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಲು ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ” ಎನ್ನುತ್ತಾನೆ ಆನಂದ್‌.—ಬೈಬಲ್‌ ತತ್ವ: 1 ಕೊರಿಂಥ 10:24.

ವಿಶಾಲ ಮನೋಭಾವ ಬೆಳೆಸಿಕೊಳ್ಳಿ. ಸಂಗಾತಿಯ ದೃಷ್ಟಿಕೋನ ಅಥವಾ ಅಭಿರುಚಿ ಭಿನ್ನವಾಗಿದೆ ಅಂದ ಮಾತ್ರಕ್ಕೆ ಅದು ತಪ್ಪೆಂದು ಹೇಳಲಾಗುವುದಿಲ್ಲ ಅನ್ನೋ ಪಾಠವನ್ನು ಅಲೆಕ್ಸ್‌ ಕಲಿತುಕೊಂಡ. “ಒಂದು ಕೆಲಸವನ್ನು ಮಾಡುವಾಗ ನಾನು ಅನುಸರಿಸುತ್ತಿರುವ ವಿಧಾನವೇ ಅತ್ಯುತ್ತಮ ಅಂತ ನನಗೆ ಅನಿಸುತ್ತಿತ್ತು. ಆದರೆ ಅದನ್ನು ಮಾಡಲು ಇನ್ನೂ ಅನೇಕ ವಿಧಾನಗಳಿರುತ್ತವೆ ಮತ್ತು ಪ್ರತಿಯೊಂದು ವಿಧಾನಕ್ಕೂ ಅದರದ್ದೇ ಆದ ವಿಶೇಷತೆ ಇದೆ ಎಂದು ನನಗೆ ಮದುವೆಯಾದ ಮೇಲೆ ಅರ್ಥವಾಯಿತು” ಎಂದವನು ಹೇಳುತ್ತಾನೆ.—ಬೈಬಲ್‌ ತತ್ವ: 1 ಪೇತ್ರ 5:5.

ಸತ್ಯಾಂಶವನ್ನು ಒಪ್ಪಿಕೊಳ್ಳಿ. ಹೊಂದಿಕೊಂಡು ಹೋಗುವುದು ಅಂದರೆ ಇಬ್ಬರೂ ಒಂದೇ ರೀತಿ ಇರುವುದು ಎಂದರ್ಥವಲ್ಲ. ಆದ್ದರಿಂದ ನಿಮ್ಮಿಬ್ಬರ ಮಧ್ಯೆ ಕೆಲವು ವ್ಯತ್ಯಾಸಗಳಿವೆ ಅಂತ ಗೊತ್ತಾದ ಕೂಡಲೇ ‘ಮದುವೆಯಾಗಿದ್ದೇ ತಪ್ಪಾಯ್ತು’ ಅಂತ ಅಂದುಕೊಳ್ಳಬೇಡಿ. “ಪ್ರೀತಿ ತಮ್ಮ ಕಣ್ಣನ್ನು ಕುರುಡು ಮಾಡಿತ್ತೆಂದು ಅನೇಕರು ಪಶ್ಚಾತ್ತಾಪಪಡುತ್ತಾರೆ . . . ಆದರೂ ಪ್ರತಿದಿನ ಸಂತೋಷದಿಂದ ಸಮಯ ಕಳೆದಿರುತ್ತಾರೆ. ಅದು ದಂಪತಿಗಳ ಮಧ್ಯೆ ಯಾವುದೇ ವ್ಯತ್ಯಾಸ ಇದ್ದರೂ ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಇರಲು ಸಾಧ್ಯವೆಂದು ತೋರಿಸುತ್ತದೆ” ಎಂದು ದ ಕೇಸ್‌ ಅಗೇಯ್ನ್‌ಸ್ಟ್‌ ಡಿವೋರ್ಸ್‌ ಎಂಬ ಪುಸ್ತಕ ತಿಳಿಸುತ್ತದೆ. ಹಾಗಾಗಿ “ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು” ಹೋಗಲು ಪ್ರಯತ್ನಿಸಿ.—ಕೊಲೊಸ್ಸೆ 3:13.

ಹೀಗೆ ಮಾಡಿ: ನಿಮ್ಮ ಸಂಗಾತಿಯಲ್ಲಿ ನಿಮಗಿಷ್ಟವಾಗುವ ವಿಷಯಗಳನ್ನು ಮತ್ತು ನಿಮ್ಮಿಬ್ಬರಲ್ಲಿರುವ ಸಮಾನ ಅಭಿರುಚಿಗಳನ್ನು ಪಟ್ಟಿ ಮಾಡಿ. ನಂತರ, ನಿಮಗೆ ಇಷ್ಟವಿಲ್ಲದ ಆದರೆ ನಿಮ್ಮ ಸಂಗಾತಿ ಇಷ್ಟಪಡುವ ವಿಷಯಗಳನ್ನು ಪಟ್ಟಿ ಮಾಡಿ. ಆಗ ನಿಮ್ಮಿಬ್ಬರ ಮಧ್ಯೆ ಇರುವ ಭಿನ್ನ ಅಭಿರುಚಿಗಳು ದೊಡ್ಡ ಸಮಸ್ಯೆಯೇ ಅಲ್ಲವೆಂದು ನಿಮಗನಿಸಬಹುದು. ಅಷ್ಟೇ ಅಲ್ಲದೆ ಹೀಗೆ ಪಟ್ಟಿ ಮಾಡುವುದರಿಂದ ಯಾವ ವಿಷಯದಲ್ಲಿ ತಾಳ್ಮೆ ತೋರಿಸಬೇಕು, ಅರ್ಥಮಾಡಿಕೊಳ್ಳಬೇಕು ಎಂದು ತಿಳಿಯುತ್ತದೆ. “ನನ್ನ ಹೆಂಡತಿ ನನಗೋಸ್ಕರ ಹೊಂದಾಣಿಕೆ ಮಾಡಿಕೊಂಡಾಗ ನನಗೆ ತುಂಬ ಖುಷಿ ಆಗುತ್ತೆ, ಅದೇ ರೀತಿ ನಾನು ಅವಳಿಗಾಗಿ ಹೊಂದಾಣಿಕೆ ಮಾಡಿಕೊಂಡಾಗ ಅವಳಿಗೂ ಖುಷಿ ಆಗುತ್ತೆ. ನಾನು ತ್ಯಾಗ ಮಾಡಬೇಕಾಗಿ ಬಂದರೂ ಅವಳು ಸಂತೋಷವಾಗಿರುವುದನ್ನು ನೋಡುವಾಗ ನನಗೂ ಖುಷಿ ಆಗುತ್ತೆ” ಎಂದು ಕೆನೆತ್‌ ಹೇಳುತ್ತಾನೆ.—ಬೈಬಲ್‌ ತತ್ವ: ಫಿಲಿಪ್ಪಿ 4:5. ▪ (g15-E 12)

^ ಪ್ಯಾರ. 10 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.