ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ

ದುಡ್ಡೇ ದೊಡ್ಡಪ್ಪ! ಆದ್ರೆ ಅದೇ ಎಲ್ಲ ಅಲ್ಲಪ್ಪ!

ದುಡ್ಡೇ ದೊಡ್ಡಪ್ಪ! ಆದ್ರೆ ಅದೇ ಎಲ್ಲ ಅಲ್ಲಪ್ಪ!

ಇದು ಕೇಳಕ್ಕೆ ಒಂಥರಾ ಅನಿಸಬಹುದು, ಆದರೆ ಇದೇ ನಿಜ. ಏಕೆಂದರೆ ಕೆಲವರು ಹಣಕ್ಕಾಗಿ ಕೆಲಸ, ಮನೆ, ಪೆನ್ಶನ್‌ ಎಲ್ಲವನ್ನೂ ಕಳೆದುಕೊಳ್ಳೋಕೆ ಸಿದ್ಧ ಇರುತ್ತಾರೆ. ಹಣದಿಂದ ಏನು ಬೇಕಾದರೂ ಕೊಂಡುಕೊಳ್ಳಬಹುದು ಅನ್ನುವುದು ಅವರ ಭಾವನೆ.

ಇಂಥವರು ಜಾಹಿರಾತುಗಳ ಮೋಡಿಗೆ ಸರಕ್ಕನೇ ಜಾರಿ ಬೀಳುತ್ತಾರೆ. ಜಾಹಿರಾತುಗಳು ಹೇಳೋದು ಇಷ್ಟೇ, ‘ನಿಮ್ಹತ್ರ ಒಂದು ದೊಡ್ಡ ಬಂಗಲೆ, ಪಕ್ಕದ ಮನೆಯವನಿಗಿಂತ ಒಳ್ಳೇ ಕಾರು, ಬಟ್ಟೆ ಮೇಲೆ ಪ್ರಸಿದ್ಧ ಬ್ರ್ಯಾ೦ಡ್‌ ಹೆಸರು ಇರಲೇಬೇಕು. ನಿಮ್ಮ ಹತ್ರ ದುಡ್ಡು ಇಲ್ವಾ? ಚಿಂತೆ ಮಾಡಬೇಡಿ! ಸಾಲ ತಗೊಂಡು ಖರೀದಿಸಿ!’ ಇದೇ ವಿಚಾರಧಾಟಿ ಅನೇಕ ಜನರಲ್ಲಿದೆ. ಜೀವನದಲ್ಲಿ ಸಿಕ್ಕಾಪಟ್ಟೆ ಸಾಲ ಇದ್ರೂ ಮೈಗೆ ಒಳ್ಳೇ ಬಟ್ಟೆ ಹಾಕಿ ಮೆರೆಯಬೇಕು.

ಇವತ್ತೋ ನಾಳೆನೋ ಇವರ ಬಣ್ಣ ಬಯಲಾಗುತ್ತೆ. ಚಟವೆಂಬ ಅಂಟುರೋಗ ಅನ್ನೋ ಇಂಗ್ಲಿಷ್‌ ಪುಸ್ತಕ ಹೀಗೆ ಹೇಳುತ್ತೆ: “ಶ್ರೀಮಂತರ ಥರ ಕಾಣಬೇಕಂತ ಸಾಲಮಾಡಿ ವಸ್ತುಗಳನ್ನು ಖರೀದಿಸುವ ಚಟ ಒಂದು ರೀತಿ ಮಾದಕ ವಸ್ತುಗಳನ್ನು ಸೇವಿಸುವ ಚಟದಂತೆ. ಮೊದಮೊದಲು ಎರಡೂ ಕಡಿಮೆ ರೇಟಿಗೆ ಸಿಗುತ್ತೆ ಮಜಾನೂ ಬರುತ್ತೆ, ಆದರೆ ಅದು ಸ್ವಲ್ಪ ಸಮಯಕ್ಕೆ ಮಾತ್ರ. ಆಮೇಲೆ ಕಿಸೆಗೆ ತೂತು, ಮಾಡಿದವನು ಹೋಗುತ್ತಾನೆ ಬೇಸತ್ತು.”

ಈ ಹುಚ್ಚುತನವನ್ನೇ ಬೈಬಲ್‌ “ಜೀವನೈಶ್ವರ್ಯದ ಆಡಂಬರ ಪ್ರದರ್ಶನ” ಅನ್ನುತ್ತೆ. (1 ಯೋಹಾನ 2:16) ನಿಜ ಏನಂದರೆ, ಜಾಸ್ತಿ ಪಡಕೊಳ್ಳುವುದರ ಕುರಿತೇ ಚಿಂತೆ ಮಾಡಿದ್ರೆ ಜೀವನದಲ್ಲಿ ಏನು ಬೇಕೊ ಅವನ್ನೇ ನಾವು ಕಳಕೊಳ್ಳುತ್ತೇವೆ. ಅದರಲ್ಲೂ ಮುಖ್ಯವಾಗಿ ಮೂರು ವಿಷಯಗಳನ್ನು ಕಳಕೊಳ್ಳುತ್ತೇವೆ. ಅವನ್ನು ದುಡ್ಡಿ೦ದ ಖರೀದಿ ಮಾಡಕ್ಕಾಗಲ್ಲ. ಅವು ಯಾವಂತ ಈಗ ನೋಡೋಣ.

 1. ಸಂಸಾರದಲ್ಲಿ ಸುಖ-ನೆಮ್ಮದಿ

ಅಮೆರಿಕದ ಯುವತಿಯಾಗಿರುವ ಬೀನಾಳ * ಮನದಾಳದ ಮಾತು ಕೇಳಿ. ಅವಳ ತಂದೆ ಕೆಲಸಕ್ಕೆ, ಹಣಕ್ಕೆ ಜಾಸ್ತಿ ಮಹತ್ವ ಕೊಡುತ್ತಾರೆ. ಹಾಗಾಗಿಯೇ ಅವಳು ಹೇಳುತ್ತಾಳೆ: “ನಮಗೇನು ಬೇಕೊ ಅದೆಲ್ಲಾ ಇದೆ, ಆದ್ರೆ ಪಪ್ಪಾ ಯಾವಾಗಲೂ ಊರಿಂದ ಊರಿಗೆ ಕೆಲಸದ ಮೇಲೆ ಹೋಗ್ತಿರುತ್ತಾರೆ, ಮನೆಯಲ್ಲೇ ಇರಲ್ಲ. ನಂಗೊತ್ತು ಅದು ಅವರ ಕೆಲಸ ಅಂತ, ಆದರೆ ಕುಟುಂಬದ ಜವಾಬ್ದಾರಿ ಕೂಡ ಅವರಿಗೆ ಇದೆಯಲ್ಲ!”

ಮೆದುಳಿಗೆ ಮೇವು: ಬೀನಾಳ ತಂದೆಗೆ ಮುಂದೊಂದು ದಿನ ಯಾವ ವಿಷಾದ ಕಾಡಬಹುದು? ವಸ್ತು ವ್ಯಾಮೋಹದ ಮೋಡಿಯಿಂದಾಗಿ ಅವರ ಮತ್ತವರ ಮಗಳ ಸಂಬಂಧ ಹೇಗಾಗಿದೆ? ಹಣಕ್ಕಿಂತ ಜಾಸ್ತಿ ಅವರ ಪರಿವಾರಕ್ಕೆ ಯಾವುದು ಬೇಕು?

ಬೈಬಲಿನಲ್ಲಿರುವ ಬುದ್ಧಿವಾದ:

  • “ಹಣದಾಸೆ ಎಲ್ಲ ಕೆಟ್ಟತನಕ್ಕೆ ಕಾರಣ. ಕೆಲವರು ಇದರ ಹಿಂದೆ ಬಿದ್ದು ತಮಗೆ ತಾವೇ ಬಲವಾಗಿ ನೋವು ಮಾಡಿಕೊಂಡಿದ್ದಾರೆ.”—1 ತಿಮೊಥೆಯ 6:10, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌

  • ‘ದ್ವೇಷವಿರುವಲ್ಲಿ ಕೊಬ್ಬಿದ ಮಾಂಸದ ಊಟ ಮಾಡುವುದಕ್ಕಿಂತ ಪ್ರೇಮವಿರುವ ಕಡೆ ಸೊಪ್ಪಿನ ಊಟ ಮಾಡುವುದೇ ಉತ್ತಮ.’—ಜ್ಞಾನೋಕ್ತಿ 15:17.

ನೀತಿಪಾಠ: ಸಂಸಾರಕ್ಕೆ ಬೇಕಾದ ಸುಖನೆಮ್ಮದಿಯನ್ನು ಹಣದಿಂದ ಕೊಂಡುಕೊಳ್ಳಕ್ಕೆ ಆಗಲ್ಲ. ಪರಿವಾರದೊಂದಿಗೆ ಸಮಯ ಕಳೆದಾಗ ಮತ್ತು ಸದಸ್ಯರಿಗೆ ಬೇಕಾದ ಪ್ರೀತಿಕಾಳಜಿಯನ್ನು ತೋರಿಸಿದಾಗಲೇ ಅದು ಸಿಗೋದು.—ಕೊಲೊಸ್ಸೆ 3:18-21.

 2. ನಿಜ ಭದ್ರತೆ

“‘ಆಗರ್ಭ ಶ್ರೀಮಂತನನ್ನು ನೋಡಿ ಮದುವೆ ಮಾಡ್ಕೋ ಮತ್ತು ಚೆನ್ನಾಗಿ ಓದಿ ನೀನೂ ಒಳ್ಳೇ ಕೆಲಸ ನೋಡ್ಕೊ’ ಅಂತ ಮಮ್ಮಿ ಯಾವಾಗಲೂ ನಂಗೆ ಹೇಳುತ್ತಿರುತ್ತಾರೆ. ಮುಂದೊಂದು ದಿನ ಗಂಡನ ಸಂಪಾದನೆ ಕಮ್ಮಿಯಾದ್ರೂ ನನಗಿರೋ ಕೆಲಸ ಭದ್ರತೆ ಕೊಡುತ್ತೆ ಅನ್ನೋದು ಅವರ ನಂಬೋಣ” ಅಂತಾಳೆ ಹದಿನೇಳು ವರ್ಷದ ಸಾರಾ. “ದುಡ್ಡನ್ನು ಹೇಗೆ ಸಂಪಾದಿಸೋದು ಅನ್ನೋ ಯೋಚನೆನೇ ಮಮ್ಮಿ ತಲೆಯಲ್ಲಿ ಯಾವಾಗ್ಲೂ ಓಡ್ತಾ ಇರುತ್ತೆ.”

ಮೆದುಳಿಗೆ ಮೇವು: ಭವಿಷ್ಯತ್ತಿನ ಬಗ್ಗೆ ಯೋಚಿಸುವಾಗ ಮುಖ್ಯವಾಗಿ ಯಾವ ಚಿಂತೆಗಳು ನಿಮ್ಮನ್ನು ಕಾಡುತ್ತೆ? ಆ ಚಿಂತೆಗಳು ಮೇರೆ ದಾಟಿ ಅನಾವಶ್ಯಕ ಚಿಂತೆಗಳಾಗೋದು ಯಾವಾಗ? ಸಾರಾಳ ತಾಯಿ ಆರ್ಥಿಕ ಭದ್ರತೆ ಬಗ್ಗೆ ಮಗಳಿಗೆ ಸರಿಯಾದ ಮಾರ್ಗದರ್ಶನೆ ಕೊಡಲು ಏನು ಮಾಡಬೇಕು?

ಬೈಬಲಿನಲ್ಲಿರುವ ಬುದ್ಧಿವಾದ:

  • “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ; ಇಲ್ಲಿ ನುಸಿ ಮತ್ತು ಕಿಲುಬು ಅದನ್ನು ಹಾಳುಮಾಡಿಬಿಡುತ್ತದೆ; ಕಳ್ಳರು ಒಳನುಗ್ಗಿ ಕದಿಯುತ್ತಾರೆ.”—ಮತ್ತಾಯ 6:19.

  • “ನಾಳೆ ನಿಮ್ಮ ಜೀವನವು ಹೇಗಿರುವುದು ಎಂಬುದು ನಿಮಗೆ ತಿಳಿದಿಲ್ಲ.”—ಯಾಕೋಬ 4:14.

ನೀತಿಪಾಠ: ಸಾಕಷ್ಟು ಹಣ ಮಾಡಿದರೆ ಜೀವನ ಭದ್ರವಾಗಿರುತ್ತೆ ಅಂದುಕೊಳ್ಳೋದು ಶುದ್ಧ ಮೂರ್ಖತನ. ಹಣವನ್ನು ಕಳ್ಳರು ಕದ್ದುಕೊಂಡು ಹೋಗಬಹುದು. ಹಣದಿಂದ ರೋಗಗಳನ್ನು ವಾಸಿಮಾಡಕ್ಕೆ, ಸಾವನ್ನು ತಡೆಯಕ್ಕೆ ಆಗಲ್ಲ. (ಪ್ರಸಂಗಿ 7:12) ಬೈಬಲ್‌ ಹೇಳಿದಂಗೆ ನಿಜ ಭದ್ರತೆ ದೇವರ ಬಗ್ಗೆ ಆತನ ಉದ್ದೇಶಗಳ ಬಗ್ಗೆ ಕಲಿತಾಗಲೇ ಸಿಗೋದು.—ಯೋಹಾನ 17:3.

 3. ಸ್ವತೃಪ್ತಿ

“ನನ್ನ ಹೆತ್ತವರು ನನ್ನನ್ನು ಸಾದಾ ಜೀವನ ಮಾಡುವಂಥ ರೀತಿಯಲ್ಲಿ ಬೆಳೆಸಿದರು. ನಮಗೆ ಎಷ್ಟು ಬೇಕೊ ಅಷ್ಟೇ ಇದ್ದರೂ ನಾನು ಮತ್ತು ಅಕ್ಕ ಸಂತೋಷವಾಗಿ ಬೆಳೆದ್ವಿ” ಅನ್ನುತ್ತಾರೆ 24 ವರ್ಷದ ತಾನಿಯಾ.

ಮೆದುಳಿಗೆ ಮೇವು: ಎಷ್ಟು ಇದೆಯೋ ಅಷ್ಟರಲ್ಲೇ ತೃಪ್ತಿಯಿಂದ ಇರೋದು ಕಷ್ಟನಾ? ಹಣದ ವಿಷಯದಲ್ಲಿ ನೀವು ನಿಮ್ಮ ಕುಟುಂಬಕ್ಕೆ ಯಾವ ಮಾದರಿ ಇಟ್ಟಿದ್ದೀರಾ?

ಬೈಬಲಿನಲ್ಲಿರುವ ಬುದ್ಧಿವಾದ:

  • “ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು.”—1 ತಿಮೊಥೆಯ 6:8.

  • “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3.

ನೀತಿಪಾಠ: ಹಣ ಮತ್ತು ಅದರಿಂದ ಕೊಂಡುಕೊಳ್ಳಬಹುದಾದ ವಸ್ತುಗಳೇ ಜೀವನ ಅಲ್ಲ. ಬೈಬಲ್‌ ಹೇಳುತ್ತೆ: “ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು” ಅಂತ. (ಲೂಕ 12:15) ನಿಜ ಹೇಳಬೇಕಂದರೆ, ಯಾವಾಗ ನಾವು ಜೀವನದಲ್ಲಿ ತಿಳಿದುಕೊಳ್ಳಬೇಕಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತೇವೋ ಆವಾಗಲೇ ಸ್ವತೃಪ್ತಿ ಸಿಗೋದು. ಅಂಥ ಪ್ರಶ್ನೆಗಳಲ್ಲಿ ಕೆಲವು ಇಲ್ಲಿವೆ:

  • ನಾವು ಭೂಮಿಯಲ್ಲಿ ಬದುಕುತ್ತಿರುವ ಉದ್ದೇಶವಾದರೂ ಏನು?

  • ನನಗಾಗಿ ಭವಿಷ್ಯದಲ್ಲಿ ಏನು ಕಾದಿದೆ?

  • ನನ್ನ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಬೇಕಾ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂತೆ ನಿಮಗೆ ನೆರವಾಗಲು ಈ ಪತ್ರಿಕೆಯ ಪ್ರಕಾಶಕರು ಅಂದರೆ ಯೆಹೋವನ ಸಾಕ್ಷಿಗಳು ಇಷ್ಟಪಡುತ್ತಾರೆ. ಅವರನ್ನು ಸ್ವತಃ ನೀವೇ ಭೇಟಿಯಾಗಬಹುದು ಅಥವಾ ಅವರ ವೆಬ್ಸೈಟ್‌ jw.orgನ್ನು ಸಂದರ್ಶಿಸಬಹುದು. (g13-E 10)

^ ಪ್ಯಾರ. 8 ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.