ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ನಿಮ್ಮ ಹದಿಪ್ರಾಯದ ಮಕ್ಕಳಿಗೆ ಸೆಕ್ಸ್‌ಟಿಂಗ್‌ ಬಗ್ಗೆ ಹೇಗೆ ಎಚ್ಚರಿಸುವಿರಿ?

ನಿಮ್ಮ ಹದಿಪ್ರಾಯದ ಮಕ್ಕಳಿಗೆ ಸೆಕ್ಸ್‌ಟಿಂಗ್‌ ಬಗ್ಗೆ ಹೇಗೆ ಎಚ್ಚರಿಸುವಿರಿ?

ಸಮಸ್ಯೆ

ಯುವಜನರಲ್ಲಿ ಸೆಕ್ಸ್‌ಟಿಂಗ್‌ ತುಂಬ ಸಾಮಾನ್ಯ ಅಂತ ಕೇಳಿದ್ದೀರಿ. ‘ವಯಸ್ಸಿಗೆ ಬಂದಿರುವ ನನ್ನ ಮಕ್ಕಳು ಅದನ್ನು ಮಾಡುತ್ತಾರಾ?’ ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿರಬಹುದು.

ನಿಮ್ಮ ಮಗ/ಮಗಳ ಜತೆ ಇದರ ಬಗ್ಗೆ ಮಾತಾಡಬೇಕೆಂದು ನಿಮಗನಿಸುತ್ತಿದೆ. ಆದರೆ ಮಾತಾಡುವುದು ಹೇಗೆ? ಉತ್ತರ ತಿಳಿಯುವ ಮುನ್ನ ಕೆಲವು ಯುವಜನರು ಸೆಕ್ಸ್‌ಟಿಂಗ್‍ನಲ್ಲಿ ಏಕೆ ತೊಡಗುತ್ತಾರೆ, ಇದರ ಬಗ್ಗೆ ನೀವೇಕೆ ಗಂಭೀರವಾಗಿ ಯೋಚಿಸಬೇಕೆಂದು ನೋಡಿ. *

ಯಾಕೆ ಹೀಗಾಗುತ್ತದೆ?

  • ತಾವು ಇಷ್ಟಪಡುವ ಹುಡುಗ/ಹುಡುಗಿಯ ಜತೆ ಚೆಲ್ಲಾಟವಾಡಲು ಕೆಲವು ಹದಿಪ್ರಾಯದವರು ಕಾಮಪ್ರಚೋದಕ ಸಂದೇಶಗಳನ್ನು ಕಳುಹಿಸುತ್ತಾರೆ.

  • ಇನ್ನು ಕೆಲವು ಸಲ ಹುಡುಗನ ಒತ್ತಡಕ್ಕೊಳಗಾಗಿ ಹುಡುಗಿ ಅವಳ ಒಂದು ಅಶ್ಲೀಲ ಫೋಟೊ ಕಳುಹಿಸುತ್ತಾಳೆ.

  • ಹುಡುಗನೊಬ್ಬ ತನ್ನ ಸ್ನೇಹಿತರನ್ನು ರಂಜಿಸಲು ಅಥವಾ ತನ್ನ ಪ್ರೇಮ ವೈಫಲ್ಯದ ಕಾರಣ ಸೇಡು ತೀರಿಸಲು ಹುಡುಗಿಯ ನಗ್ನ ಫೋಟೊವನ್ನು ಅನೇಕರಿಗೆ ಕಳುಹಿಸಬಹುದು.

ಕಾರಣ ಏನೇ ಇರಲಿ, ಒಬ್ಬ ಹದಿಪ್ರಾಯದವನ ಹತ್ತಿರ ಮೊಬೈಲ್‌ ಫೋನ್‌ ಇದ್ದರೆ ಕೈಯಲ್ಲಿ ಕೆಂಡ ಹಿಡಿದುಕೊಂಡ ಹಾಗೆ. “ಒಂದೇ ಒಂದು ಕ್ಲಿಕ್‌ ಅನೇಕರ ಬದುಕನ್ನು ತಲೆಕೆಳಗೆ ಮಾಡಬಲ್ಲದು” ಎನ್ನುತ್ತದೆ ಸೈಬರ್‌ ಸೇಫ್‌ ಎಂಬ ಪುಸ್ತಕ.

ಒಂದು ಫೋಟೊ ಆನ್‌ಲೈನ್‌ ಹೋದ ನಂತರ ಅದು ಹೇಗೆಲ್ಲ ಬಳಕೆಯಾಗುತ್ತದೆ ಅನ್ನೋದರ ಮೇಲೆ ತಮಗೆ ನಿಯಂತ್ರಣ ಇರುವುದಿಲ್ಲ ಎಂದು ಅನೇಕರಿಗೆ ಗೊತ್ತಿಲ್ಲ. 18 ವರ್ಷದ ಹುಡುಗಿಯೊಬ್ಬಳ ಬಗ್ಗೆ ಅಮೆರಿಕಾದ ಫೆಡರಲ್‌ ಬ್ಯುರೊ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌.ಬಿ.ಐ) ಕೊಟ್ಟ ವರದಿ ಪ್ರಕಾರ “ಆಕೆ ತನ್ನ ಒಂದು ನಗ್ನ ಫೋಟೊವನ್ನು ತನ್ನ ಬಾಯ್‍ಫ್ರೆಂಡ್‌ಗೆ ಕಳುಹಿಸಿದ್ದಳು. ಇದು ಆಕೆಯ ಶಾಲೆಯಲ್ಲಿದ್ದ ನೂರಾರು ಹದಿಪ್ರಾಯದವರಿಗೂ ಹೋಯಿತು. ನಂತರ ಶಾಲಾ ವಿದ್ಯಾರ್ಥಿಗಳು ಆ ಫೋಟೊವನ್ನು ಇತರರಿಗೂ ದಾಟಿಸಿದರು. ಬೇರೆ ರೀತಿಯಲ್ಲೂ ಆಕೆಗೆ ಕಿರುಕುಳ ಕೊಟ್ಟರು. ಅವಮಾನ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಳು.”

ಸೆಕ್ಸ್‌ಟಿಂಗ್‌ ಕಾನೂನು ಸಂಬಂಧಿತ ವಿವಾದಗಳಿಗೂ ಎಡೆಮಾಡಿಕೊಡುತ್ತದೆ. ಕೆಲವು ಕಡೆ ಅಪ್ರಾಪ್ತ ವಯಸ್ಸಿನವರು ಕಾಮಪ್ರಚೋದಕ ಚಿತ್ರಗಳನ್ನು ಇನ್ನೊಬ್ಬ ಅಪ್ರಾಪ್ತನಿಗೆ ಕಳುಹಿಸಿದರೆ ಅವರನ್ನು ‘ಮಕ್ಕಳ ಅಶ್ಲೀಲಚಿತ್ರ ಅಪರಾಧಗಳು’ ಆರೋಪದಡಿ ಲೈಂಗಿಕ ಅಪರಾಧಿಗಳು ಎಂದು ದಾಖಲುಮಾಡಲಾಗುತ್ತದೆ! ಮೊಬೈಲ್‌ ಫೋನ್‌ ನಿಮ್ಮ ಹೆಸರಿನಲ್ಲಿದ್ದರೆ ಅಥವಾ ಮಕ್ಕಳು ಸೆಕ್ಸ್‌ಟಿಂಗ್‌ ಮಾಡದಂತೆ ನೀವು ಕ್ರಮ ತೆಗೆದುಕೊಳ್ಳದಿದ್ದರೆ ಹೆತ್ತವರಾದ ನಿಮ್ಮ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು.

 ಇದಕ್ಕೆ ಪರಿಹಾರ

ಸ್ಪಷ್ಟ ನಿಯಮಗಳನ್ನಿಡಿ. ಹದಿಪ್ರಾಯದ ಮಕ್ಕಳ ಫೋನ್‌ ಬಳಕೆಯನ್ನು ಪೂರ್ತಿ ನಿಯಂತ್ರಿಸಲು ನಿಮ್ಮಿಂದ ಆಗದಿದ್ದರೂ ನೀವಿಟ್ಟಿರುವ ನಿಯಮಗಳು ಅವರಿಗೆ ಚೆನ್ನಾಗಿ ಗೊತ್ತಿರುವಂತೆ ನೋಡಿಕೊಳ್ಳಿ. ಜತೆಗೆ ಅವನ್ನು ಮೀರಿದರೆ ಪರಿಣಾಮ ಏನೆಂದೂ ಅವರಿಗೆ ತಿಳಿದಿರಲಿ. ನೆನಪಿಡಿ, ಮಕ್ಕಳ ಫೋನ್‌ ಬಳಕೆ ಮೇಲೆ ನಿಗಾ ಇಡುವ ಹಕ್ಕು ಹೆತ್ತವರಾದ ನಿಮಗೆ ಇದೆ.—ಬೈಬಲ್‌ ತತ್ವ: ಎಫೆಸ 6:1.

ಸಮಸ್ಯೆಯ ಬಗ್ಗೆ ಅವರೇ ಯೋಚಿಸುವಂತೆ ಸಹಾಯಮಾಡಿ. ನೀವು ಹೀಗನ್ನಬಹುದು: “ಸೆಕ್ಸ್‌ಟಿಂಗ್‌ ಅಂದರೆ ಏನು ಅನ್ನೋದರ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ನಿನ್ನ ಪ್ರಕಾರ ಸೆಕ್ಸ್‌ಟಿಂಗ್‌ ಅಂದರೆ ಏನು?” “ಯಾವ ತರದ ಫೋಟೊಗಳು ಸರಿಯಲ್ಲ ಎಂದು ನಿನಗನಿಸುತ್ತದೆ?” “ಕೆಲವು ಕಡೆ ಒಬ್ಬ ಅಪ್ರಾಪ್ತ ಇನ್ನೊಬ್ಬ ಅಪ್ರಾಪ್ತನ ನಗ್ನ ಫೋಟೊಗಳನ್ನು ಕಳುಹಿಸಿದರೆ ಅವನನ್ನು ಅಪರಾಧಿ ಎಂದೆಣಿಸಲಾಗುತ್ತದೆ. ಅದು ಅಷ್ಟು ದೊಡ್ಡ ತಪ್ಪು ಅಂತ ನಿನಗೆ ಅನಿಸುತ್ತದಾ?” “ಸೆಕ್ಸ್‌ಟಿಂಗ್‌ ನೈತಿಕವಾಗಿ ತಪ್ಪು ಏಕೆ?” ಅವನು ಅಥವಾ ಅವಳು ತರ್ಕಿಸುವ ರೀತಿಗೆ ಸೂಕ್ಷ್ಮ ಗಮನ ಕೊಡಿ. ಪರಿಣಾಮಗಳ ಬಗ್ಗೆ ಯೋಚಿಸಲು ನಿಮ್ಮ ಹದಿಪ್ರಾಯದ ಮಕ್ಕಳಿಗೆ ಸಹಾಯಮಾಡಿ.—ಬೈಬಲ್‌ ತತ್ವ: ಇಬ್ರಿಯ 5:14.

ದುಷ್ಪರಿಣಾಮಗಳ ಕುರಿತು ಯೋಚಿಸಿ

ಕಾಲ್ಪನಿಕ ಸನ್ನಿವೇಶಗಳನ್ನು ಅವರ ಮುಂದಿಡಿ: ನಿಮ್ಮ ಮಗಳಿಗೆ ಹೀಗೆ ಕೇಳಬಹುದು: “ಒಬ್ಬ ಹುಡುಗ ಒಬ್ಬ ಹುಡುಗಿಗೆ ‘ಸೆಕ್ಸ್‌ಟಿಂಗ್‌’ ಮಾಡುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ನೆನಸು. ಅವಳಾಗ ಏನು ಮಾಡಬೇಕು? ಅವನ ಜತೆ ಸ್ನೇಹ ಕಳಕೊಳ್ಳಬಾರದು ಅಂತ ಅವನಿಗೆ ಸೆಕ್ಸ್‌ಟಿಂಗ್‌ ಮಾಡಬೇಕಾ? ಅಥವಾ ಅದನ್ನು ಮಾಡಲು ನಿರಾಕರಿಸಿದರೂ ಅವನ ಜತೆ ಬೇರೆ ರೀತಿಯಲ್ಲಿ ಚೆಲ್ಲಾಟ ಮುಂದುವರಿಸಬೇಕಾ? ಇಲ್ಲವೇ ಸಂಬಂಧವನ್ನೇ ಕಡಿದು ಹಾಕಬೇಕಾ? ದೊಡ್ಡವರಿಗೆ ಹೇಳಬೇಕಾ?’ ಸನ್ನಿವೇಶದ ಬಗ್ಗೆ ಸರಿಯಾಗಿ ಯೋಚಿಸಲು ಮಗಳಿಗೆ ಸಹಾಯಮಾಡಿ. ಮಗನ ಜತೆಯೂ ಇಂಥದ್ದೇ ಸನ್ನಿವೇಶವನ್ನು ಬಳಸಿ ಮಾತಾಡಬಹುದು.—ಬೈಬಲ್‌ ತತ್ವ: ಗಲಾತ್ಯ 6:7.

ನಿಮ್ಮ ಹದಿಪ್ರಾಯದ ಮಗನಲ್ಲಿ ಒಳ್ಳೇತನ ಇದೆಯೆಂದು ಒಪ್ಪಿಕೊಳ್ಳಿ. ಹೀಗೆ ಕೇಳಿ: ಒಳ್ಳೇ ಹೆಸರಿರುವುದು ಎಷ್ಟು ಮುಖ್ಯ ಅಂತ ನಿನಗನಿಸುತ್ತದೆ? ಯಾವ ಗುಣಗಳಿಂದ ಜನ ನಿನ್ನನ್ನು ಗುರುತಿಸಬೇಕು? ಯಾರದ್ದಾದರು ಕೆಟ್ಟ ಚಿತ್ರವನ್ನು ನೀನು ಬೇರೆಯವರಿಗೆ ಕಳುಹಿಸಿ ಅವರ ಮಾನ ತೆಗೆದ ನಂತರ ನಿನ್ನ ಬಗ್ಗೆ ನಿನಗೇ ಹೇಗನಿಸಬಹುದು? ಸರಿಯಾದದ್ದನ್ನು ಮಾಡಲು ನೀನು ಸ್ಥಿರವಾಗಿ ನಿಂತರೆ ನಿನಗೆ ಹೇಗನಿಸಬಹುದು? ನಿಮ್ಮ ಹದಿಪ್ರಾಯದ ಮಕ್ಕಳು ‘ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಲು’ ಸಹಾಯಮಾಡಿ.—1 ಪೇತ್ರ 3:16.

ಒಳ್ಳೇ ಮಾದರಿ ಇಡಿ. ದೇವರ ವಿವೇಕ ಶುದ್ಧವಾದದ್ದು ಮತ್ತು ಕಪಟವಿಲ್ಲದ್ದು ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 3:17) ನಿಮ್ಮಲ್ಲಿರುವ ಮೌಲ್ಯಗಳು ಈ ಗುಣಗಳನ್ನು ಪ್ರದರ್ಶಿಸುತ್ತದಾ? ಸೈಬರ್‌ಸೇಫ್‌ ಪುಸ್ತಕ ಹೇಳುವುದು: “ಕಾನೂನುಬಾಹಿರವಾದ ಇಲ್ಲವೆ ನೈತಿಕ ಮೌಲ್ಯವಿಲ್ಲದ ಚಿತ್ರಗಳನ್ನು ಹಾಗೂ ವೆಬ್ಸೈಟ್‌ಗಳನ್ನು ನೋಡದೆ ಇರುವ ಮೂಲಕ ಸ್ವತಃ ನಾವೇ ಒಳ್ಳೇ ಮಾದರಿ ಇಡಬೇಕು.” (g13-E 11)

^ ಪ್ಯಾರ. 5 “ಸೆಕ್ಸ್‌ಟಿಂಗ್‌” ಅಂದರೆ ಮೊಬೈಲ್‌ ಮೂಲಕ ಕಾಮಪ್ರಚೋದಕ ಸಂದೇಶ, ಫೋಟೊ, ವಿಡಿಯೋಗಳನ್ನು ಕಳುಹಿಸುವುದು. ಹೆಚ್ಚಿನ ಮಾಹಿತಿಗಾಗಿ jw.org ಆನ್‌ಲೈನ್‍ನಲ್ಲಿ ಈ ಲೇಖನ ಓದಿ: “ಯಂಗ್‌ ಪೀಪಲ್‌ ಆಸ್ಕ್‌—ವಾಟ್‌ ಶುಡ್‌ ಐ ನೋ ಎಬೌಟ್‌ ಸೆಕ್ಸ್‌ಟಿಂಗ್‌?”—BIBLE TEACHINGS > TEENAGERS ನೋಡಿ.