ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಕೆ ಯಾರೂ ನನ್ನನ್ನು ಸೇರಿಸಿಕೊಳ್ಳುವುದಿಲ್ಲ?

ಏಕೆ ಯಾರೂ ನನ್ನನ್ನು ಸೇರಿಸಿಕೊಳ್ಳುವುದಿಲ್ಲ?

ಯುವ ಜನರು ಪ್ರಶ್ನಿಸುವುದು . . .

ಏಕೆ ಯಾರೂ ನನ್ನನ್ನು ಸೇರಿಸಿಕೊಳ್ಳುವುದಿಲ್ಲ?

“ವಾರಾಂತ್ಯಗಳಲ್ಲಿ ನನ್ನೊಬ್ಬಳನ್ನು ಬಿಟ್ಟು ಇಡೀ ಪ್ರಪಂಚವೇ ಮಜಾ ಮಾಡುತ್ತಿರುವಂತೆ ತೋರುತ್ತದೆ.”​—⁠ರಿನೀ.

“ಹದಿವಯಸ್ಸಿನ ಮಕ್ಕಳೆಲ್ಲರು ಒಟ್ಟುಸೇರಿ ಮೋಜುಮಾಡುತ್ತಿರುವಾಗ ನನ್ನನ್ನು ಒಂಟಿಯಾಗಿ ಬಿಟ್ಟುಬಿಡುತ್ತಾರೆ.”​—⁠ಜೆರೆಮಿ.

ಅದೊಂದು ಸುಂದರ ದಿನ. ಅಂದು ಏನೆಲ್ಲ ಮಾಡಬೇಕೆಂದು ಎಲ್ಲರೂ ಪ್ಲ್ಯಾನ್‌ ಮಾಡಿದ್ದಾರೆ. ನೀವೇನೂ ಪ್ಲ್ಯಾನ್‌ ಮಾಡಿಲ್ಲ. ನಿಮ್ಮ ಎಲ್ಲ ಸ್ನೇಹಿತರು ಮಜಾಮಾಡುತ್ತಿದ್ದಾರೆ. ಆದರೆ ಈ ಬಾರಿಯೂ ಅವರು ನಿಮ್ಮನ್ನು ಸೇರಿಸಿಕೊಂಡಿಲ್ಲ!

ಮೋಜಿನಲ್ಲಿ ಸೇರಲು ನಿಮ್ಮನ್ನು ಕರೆಯಲಾಗಲಿಲ್ಲ ಎಂಬುದೇ ತುಂಬ ಬೇಸರದ ಸಂಗತಿ. ಆದರೆ ನಿಮ್ಮನ್ನು ಏಕೆ ಸೇರಿಸಿಕೊಳ್ಳಲಾಗಲಿಲ್ಲ ಎಂಬುದಕ್ಕಿರುವ ಕಾರಣವು ಇನ್ನಷ್ಟು ಹತಾಶೆ ತರುತ್ತದೆ. ‘ಪ್ರಾಯಶಃ ನನ್ನಲ್ಲಿ ಏನೋ ದೋಷವಿದೆ,’ ಇಲ್ಲದಿದ್ದಲ್ಲಿ ‘ನನ್ನ ಒಡನಾಟ ಏಕೆ ಯಾರಿಗೂ ಬೇಡ?’ ಎಂದು ನೀವು ನಿಮ್ಮಷ್ಟಕ್ಕೇ ಕೇಳುತ್ತೀರಿ.

ಅದೇಕೆ ಮನನೋಯಿಸುತ್ತದೆ?

ಒಂದು ಗುಂಪಿನ ಭಾಗವಾಗಿದ್ದು ಅದರಲ್ಲಿರುವ ಜನರಿಂದ ಮೆಚ್ಚಲ್ಪಡಬೇಕೆಂಬ ಬಯಕೆ ಸಹಜವಾದದ್ದೇ. ಮಾನವರು ಸಂಘಜೀವಿಗಳಾಗಿರುವ ಕಾರಣ ಇತರರೊಂದಿಗೆ ಪರಸ್ಪರ ಬೆರೆಯುವುದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ. ಹವ್ವಳನ್ನು ಸೃಷ್ಟಿಸುವ ಮುನ್ನ ಯೆಹೋವನು ಆದಾಮನಿಗಂದದ್ದು: “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ.” (ಆದಿಕಾಂಡ 2:18) ಸ್ಪಷ್ಟವಾಗಿಯೇ, ಮನುಷ್ಯರಿಗೆ ಮನುಷ್ಯರ ಅಗತ್ಯವಿದೆ ಮತ್ತು ನಮ್ಮನ್ನು ಇದೇ ರೀತಿಯಲ್ಲಿ ರಚಿಸಲಾಗಿತ್ತು. ಈ ಕಾರಣದಿಂದಲೇ ನಮ್ಮನ್ನು ಬೇರೆಯವರು ಸೇರಿಸಿಕೊಳ್ಳದಿರುವಾಗ ಮನಸ್ಸಿಗೆ ತುಂಬ ನೋವಾಗುತ್ತದೆ.

ನಿಮ್ಮನ್ನು ಯಾರೂ ಸೇರಿಸಿಕೊಳ್ಳದೆ ಪದೇ ಪದೇ ಒಂಟಿಯಾಗಿ ಬಿಡುವಾಗ ಇಲ್ಲವೇ ನೀವು ಸ್ನೇಹಬೆಳೆಸಲು ಬಯಸುತ್ತಿರುವ ವ್ಯಕ್ತಿಗಳ ಮಟ್ಟಗಳಿಗೆ ನೀವು ಸರಿಹೊಂದುತ್ತಿಲ್ಲ ಎಂಬ ಅನಿಸಿಕೆಯನ್ನು ನಿಮ್ಮಲ್ಲಿ ಮೂಡಿಸುವಾಗ ನಿಮಗೆ ನಿರಾಶೆಯಾಗಬಹುದು. ಮರೀ ಎಂಬ ಒಬ್ಬ ಯುವತಿ ಹೇಳುವುದು: “ಉತ್ತಮ ಗುರಿಗಳನ್ನಿಟ್ಟು ಅವುಗಳನ್ನು ಸಾಧಿಸುತ್ತಿರುವ ಯುವ ಜನರ ಗುಂಪುಗಳಿವೆ, ಆದರೆ ನೀವು ಅವರ ಸಂಗಡವಿರಲು ಯೋಗ್ಯರಲ್ಲ ಎಂಬ ಅನಿಸಿಕೆ ಅವರಿಗಿದೆ ಎಂದು ನೀವು ಕಣ್ಮುಚ್ಚಿ ಹೇಳಬಹುದು.” ಇತರರು ನಿಮ್ಮನ್ನು ತಮ್ಮ ಗುಂಪಿನಿಂದ ದೂರವಿರಿಸುವಾಗ ಒಂಟಿ ಭಾವನೆ ನಿಮಗಾಗಬಹುದು.

ಒಂದು ಗುಂಪಿನಲ್ಲಿರುವಾಗಲೂ ಕೆಲವೊಮ್ಮೆ ನಿಮಗೆ ಒಂಟಿತನ ಭಾಸವಾಗಬಹುದು. ನಿಕೋಲ್‌ ಎಂಬವಳು ಹೇಳುವುದು: “ನನ್ನ ಮಾತು ನಿಮಗೆ ವಿಚಿತ್ರವೆನಿಸಬಹುದು. ಒಂದು ಸಾಮಾಜಿಕ ಕೂಟದಲ್ಲಿದ್ದಾಗ ಒಂಟಿಭಾವನೆಗಳು ನನ್ನನ್ನು ಎಷ್ಟು ಕಾಡಿದವೆಂಬುದು ನನಗೀಗಲೂ ನೆನಪಿದೆ. ಅನೇಕ ಜನರ ನಡುವೆಯಿದ್ದರೂ ಅವರಲ್ಲಿ ಯಾರ ಕಡೆಗೂ ನನಗೆ ಅಪ್ತತೆಯ ಭಾವನೆ ಉಂಟಾಗದ ಕಾರಣ ಹೀಗನಿಸಿದ್ದಿರಬೇಕು.” ಕೆಲವರಿಗೆ ಕ್ರೈಸ್ತ ಸಮ್ಮೇಳನ ಹಾಗೂ ಅಧಿವೇಶನಗಳಲ್ಲಿರುವಾಗಲೂ ಒಂಟಿತನ ಭಾಸವಾಗುತ್ತದೆ. ಮೇಗನ್‌ ಹೇಳುವುದು: “ಎಲ್ಲರಿಗೆ ಎಲ್ಲರ ಪರಿಚಯವಿದ್ದಂತಿದೆ ಆದರೆ ನನ್ನ ಪರಿಚಯ ಮಾತ್ರ ಯಾರಿಗೂ ಇಲ್ಲ ಎಂಬಂತೆ ತೋರಿತು!” ಮರೀಯಾ ಎಂಬ ಒಬ್ಬ ಯುವತಿಗೂ ಅದೇ ಅನಿಸಿಕೆ ಇದೆ. “ನನ್ನ ಸುತ್ತಲೂ ಸ್ನೇಹಿತರಿದ್ದರೂ ನನಗೆ ಮಾತ್ರ ಸ್ನೇಹಿತರೇ ಇಲ್ಲದ ಹಾಗಿದೆ” ಎಂದವಳು ಹೇಳುತ್ತಾಳೆ.

ಒಂಟಿತನದಿಂದ ಯಾರೂ ವಿಮುಕ್ತರಲ್ಲ. ಜನಪ್ರಿಯರನ್ನೂ ಅಥವಾ ನಗುನಗುತ್ತಾ ಇರುವಂತೆ ತೋರುವವರನ್ನೂ ಅದು ಕಾಡುತ್ತದೆ. “ನಗುವವನಿಗೂ ಮನೋವ್ಯಥೆಯುಂಟು” ಎಂದೊಂದು ಬೈಬಲ್‌ ಉಕ್ತಿ ಹೇಳುತ್ತದೆ. (ಜ್ಞಾನೋಕ್ತಿ 14:13) ಒಂಟಿತನವು ತೀವ್ರವಾಗಿದ್ದು ಕಾಡುತ್ತಾ ಇರುವಲ್ಲಿ ಅದು ನಮ್ಮನ್ನು ಕುಗ್ಗಿಸಬಲ್ಲದು. ಬೈಬಲ್‌ ಹೇಳುವುದು: “ಮನೋವ್ಯಥೆಯಿಂದ ಆತ್ಮಭಂಗ.” ಬೇರೊಂದು ಅನುವಾದ ಹೇಳುವಂತೆ: “ಹೃದಯವೇದನೆಯಿಂದ ಆತ್ಮವು ಕುಂದಿಹೋಗುತ್ತದೆ.” (ಜ್ಞಾನೋಕ್ತಿ 15:​13, NIBV) ನಿಮ್ಮನ್ನು ಯಾರೂ ಸೇರಿಸಿಕೊಳ್ಳದೆ ಇರುವ ಕಾರಣ ಮನಗುಂದಿದ ಭಾವನೆ ನಿಮಗಾಗಿರುವಲ್ಲಿ ನೀವೇನು ಮಾಡಬಹುದು?

ಒಂಟಿತನವನ್ನು ಹೊಡೆದೋಡಿಸುವುದು

ಒಂಟಿತನದ ಅನಿಸಿಕೆಗಳನ್ನು ಹೊಡೆದೋಡಿಸಲು ಈ ಕೆಳಗಿನ ಹೆಜ್ಜೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ:

ನಿಮ್ಮ ಬಲವಾದ ಗುಣ/ಸಾಮರ್ಥ್ಯಗಳಿಗೆ ಗಮನ ಕೊಡಿ. (2 ಕೊರಿಂಥ 11:6) ನಿಮ್ಮನ್ನೇ ಕೇಳಿ, ‘ನನ್ನ ಬಲವಾದ ಗುಣಗಳಾವುವು?’ ನಿಮ್ಮಲ್ಲಿರುವ ಕೆಲವು ಪ್ರತಿಭೆಗಳ ಅಥವಾ ಧನಾತ್ಮಕ ಗುಣಗಳ ಕುರಿತು ಯೋಚಿಸಿರಿ ಮತ್ತು ಅವುಗಳನ್ನು ಕೆಳಗೆ ಪಟ್ಟಿಮಾಡಿ.

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ನಿಮ್ಮನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ ಎಂಬ ಅನಿಸಿಕೆಯಾಗುವಾಗ ಮೇಲೆ ಪಟ್ಟಿಮಾಡಿದಂಥ ನಿಮ್ಮ ಬಲವಾದ ಗುಣಗಳನ್ನು ನೆನಪಿಗೆ ತನ್ನಿರಿ. ಬಲಹೀನತೆಗಳು ನಿಮ್ಮಲ್ಲಿ ಇವೆ ಎಂಬ ವಿಷಯವು ಒಪ್ಪುವಂಥದ್ದೇ ಮತ್ತು ಅವುಗಳನ್ನು ಜಯಿಸಲು ನೀವು ಪ್ರಯತ್ನಿಸಬೇಕು. ಹಾಗಿದ್ದರೂ, ನಿಮ್ಮ ತಪ್ಪುದೋಷಗಳ ಯೋಚನೆಯಲ್ಲೇ ಮುಳುಗಿಹೋಗಬೇಡಿರಿ. ಬದಲಾಗಿ ನಿಮ್ಮ ಒಳ್ಳೇ ಅಂಶಗಳ ಮೇಲೆ ಗಮನಕೇಂದ್ರೀಕರಿಸಿ! ಇದು, ದುರಸ್ತಿಕೆಲಸ ನಡೆಯುತ್ತಿರುವ ಒಂದು ಒಳ್ಳೇ ಮನೆಯಂತಿದೆ. ಅದರಲ್ಲಿ, ಎಲ್ಲವೂ ತಕ್ಕ ಸ್ಥಾನದಲ್ಲಿರದಿದ್ದರೂ ಕೆಲವೊಂದಾದರೂ ಸರಿಯಾದ ಸ್ಥಾನದಲ್ಲಿದೆ.

ವಿಶಾಲಗೊಳ್ಳಿರಿ. (2 ಕೊರಿಂಥ 6:11-13) ಜನರನ್ನು ಮಾತಾಡಿಸಲು ಮುಂದಾಗಿರಿ. ಇದು ತುಂಬ ಕಷ್ಟಕರವಾಗಿರಬಹುದು. 19ರ ಹರೆಯದ ಲಿಜ್‌ ಎಂಬವಳು ಹೇಳುವುದು: “ಜನರ ಗುಂಪುಗಳನ್ನು ನೋಡಿದೊಡನೆ ನಮ್ಮಲ್ಲಿ ಹಿಂಜರಿಕೆ ಉಂಟಾಗಬಹುದು. ಆದರೆ ನೀವು ಗುಂಪಿನ ಕೇವಲ ಒಬ್ಬ ವ್ಯಕ್ತಿಗೆ ‘ಹಲೋ’ ಹೇಳಿದರೆ ಸಾಕು. ತಕ್ಷಣ ನೀವು ಆ ಗುಂಪಿನ ಭಾಗವಾಗಿಬಿಡುತ್ತೀರಿ.” (“ಸಂಭಾಷಣಾ ನುಡಿಮುತ್ತುಗಳು” ಎಂಬ ಚೌಕ ನೋಡಿ.) ನಿಮ್ಮನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುವಾಗ, ಸ್ವತಃ ನೀವೇ ಎಲ್ಲರನ್ನೂ ಅಂದರೆ ದೊಡ್ಡವರನ್ನೂ ಸೇರಿಸಿಕೊಳ್ಳುತ್ತೀರಿ ಎಂಬುದನ್ನು ಖಚಿತಮಾಡಿಕೊಳ್ಳಿರಿ. ಕೋರೀ ಎಂಬ ಹದಿವಯಸ್ಕಳು ಹೇಳುವುದು: “ನಾನು ಸುಮಾರು 10-11 ವರ್ಷದವಳಾಗಿದ್ದಾಗ ನನಗಿಂತ ಎಷ್ಟೋ ದೊಡ್ಡವರಾಗಿರುವ ಒಬ್ಬ ಸ್ನೇಹಿತೆ ನನಗಿದ್ದಳು. ಪ್ರಾಯದಲ್ಲಿ ಇಷ್ಟೊಂದು ವ್ಯತ್ಯಾಸವಿದ್ದರೂ ನಾವು ನಿಜವಾಗಿಯೂ ತುಂಬ ಹತ್ತಿರವಾಗಿದ್ದೆವು.”

ನಿಮ್ಮ ಸಭೆಯಲ್ಲಿ ನೀವು ಹೆಚ್ಚು ಪರಿಚಯಮಾಡಿಕೊಳ್ಳ ಬಯಸುವ ಇಬ್ಬರು ವಯಸ್ಕರನ್ನು ಇಲ್ಲಿ ಹೆಸರಿಸಿರಿ.

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ಮುಂದಿನ ಸಭಾ ಕೂಟದಲ್ಲಿ, ಮೇಲೆ ಹೆಸರಿಸಿರುವ ಒಬ್ಬರ ಬಳಿ ಹೋಗಿ ನೀವಾಗಿಯೇ ಏಕೆ ಮಾತಾಡಲು ಆರಂಭಿಸಬಾರದು? ಅವರಿಗೆ ಬೈಬಲಿನ ಕುರಿತು ಆಸಕ್ತಿ ಹೇಗೆ ಮೂಡಿತೆಂಬುದನ್ನು ಕೇಳಿರಿ. ನೀವು “ಸಹೋದರರ” ಇಡೀ ಬಳಗವನ್ನು ಎಷ್ಟು ಹೆಚ್ಚಾಗಿ ಮಾತಾಡಿಸುತ್ತೀರೊ ಅಷ್ಟು ಹೆಚ್ಚಾಗಿ ‘ಯಾರೂ ಸೇರಿಸಿಕೊಳ್ಳುತ್ತಿಲ್ಲ’ ಎಂಬ ಅನಿಸಿಕೆ ಹಾಗೂ ಒಂಟಿ ಭಾವನೆ ದೂರವಾಗುವುದು.​—⁠1 ಪೇತ್ರ 2:17.

ಒಬ್ಬ ವಯಸ್ಕರೊಂದಿಗೆ ಮನಬಿಚ್ಚಿ ಮಾತಾಡಿರಿ. (ಜ್ಞಾನೋಕ್ತಿ 17:17) ನಿಮ್ಮ ಚಿಂತೆಗಳನ್ನು ಹೆತ್ತವರಿಗೊ ಬೇರೊಬ್ಬ ವಯಸ್ಕರಿಗೊ ಹೇಳುವುದು ಒಂಟಿತನದ ಅನಿಸಿಕೆಗಳನ್ನು ಕಡಿಮೆಗೊಳಿಸಲು ಸಹಾಯಕರ. 16ರ ಹರೆಯದ ಒಬ್ಬ ಹುಡುಗಿ ಇದನ್ನೇ ಕಲಿತುಕೊಂಡಳು. ತನ್ನನ್ನು ಯಾರೂ ಸೇರಿಸಿಕೊಳ್ಳುತ್ತಿಲ್ಲ ಎಂಬುದರ ಕುರಿತು ಅವಳಿಗೆ ಮೊದಮೊದಲು ತುಂಬ ವ್ಯಥೆಯಾಗುತ್ತಿತ್ತು. ಅವಳು ಹೇಳುವುದು: “ನನ್ನನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ ಎಂಬ ಭಾವನೆ ಹುಟ್ಟಿದಂಥ ಸನ್ನಿವೇಶದ ಕುರಿತು ನಾನು ಯೋಚಿಸುತ್ತಿದ್ದೆ. ಆ ಸನ್ನಿವೇಶವನ್ನು ಮತ್ತೆ ಮತ್ತೆ ನನ್ನ ಮನಸ್ಸಿಗೆ ತರುತ್ತಿದ್ದೆ. ಆದರೆ ತದನಂತರ ನನ್ನ ತಾಯಿಯೊಂದಿಗೆ ಅದರ ಕುರಿತು ಮಾತಾಡುತ್ತಿದ್ದೆ ಮತ್ತು ಆ ಸನ್ನಿವೇಶವನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ಆಕೆ ನನಗೆ ಸಲಹೆಕೊಡುತ್ತಿದ್ದಳು. ಆ ಕುರಿತು ಮನಬಿಚ್ಚಿ ಮಾತಾಡುವುದು ನಿಜವಾಗಿಯೂ ಸಹಾಯಕರ!”

ಕಾಡುತ್ತಿರುವ ಒಂಟಿ ಭಾವನೆಗಳ ಕುರಿತು ಮಾತಾಡಬೇಕು ಎಂದೆನಿಸುವಲ್ಲಿ, ನೀವು ಯಾರ ಬಳಿ ಹೋಗುವಿರಿ?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ಇತರರ ಕುರಿತು ಯೋಚಿಸಿರಿ. (1 ಕೊರಿಂಥ 10:24) ನಾವು “ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡ”ಬೇಕೆಂದು ಬೈಬಲ್‌ ಹೇಳುತ್ತದೆ. (ಫಿಲಿಪ್ಪಿ 2:4) ಯಾರೂ ನಿಮ್ಮನ್ನು ಸೇರಿಸಿಕೊಳ್ಳದಿರುವಾಗ ನೀವು ಸುಲಭವಾಗಿ ಖಿನ್ನರಾಗಬಹುದು ಇಲ್ಲವೆ ಬೇಸರಗೊಳ್ಳಬಹುದು. ಆದರೆ ಹತಾಶೆಯಲ್ಲೇ ಮುಳುಗಿ ಹೋಗುವ ಬದಲು ಅಗತ್ಯದಲ್ಲಿರುವ ಯಾರಿಗಾದರೂ ಏಕೆ ಸಹಾಯ ಮಾಡಬಾರದು? ಈ ಮೂಲಕ ನೀವು ಹೊಸ ಸ್ನೇಹಗಳನ್ನು ಸಹ ಬೆಸೆಯಲು ಸಾಧ್ಯವಾಗಬಹುದು!

ಪ್ರಾಯಶಃ ನಿಮ್ಮ ಕುಟುಂಬ ಅಥವಾ ಸಭೆಯಲ್ಲಿ ನಿಮ್ಮ ಒಡನಾಟದ ಇಲ್ಲವೆ ನಿಮ್ಮ ನೆರವಿನ ಅಗತ್ಯವಿರುವ ಯಾರಾದರೊಬ್ಬರ ಕುರಿತು ಯೋಚಿಸಿ. ಆ ವ್ಯಕ್ತಿಯ ಹೆಸರನ್ನು ಈ ಕೆಳಗೆ ಬರೆದು ಅವನಿಗೆ ಅಥವಾ ಅವಳಿಗೆ ನೀವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ವರ್ಣಿಸಿರಿ.

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ನಿಮ್ಮ ಬಗ್ಗೆ ಮಾತ್ರವಲ್ಲದೆ ಬೇರೆ ಜನರ ಕುರಿತೂ ನೀವು ಯೋಚಿಸುವಾಗ ಮತ್ತು ಅವರಿಗೆ ನಿಮ್ಮ ಸಹಾಯಹಸ್ತ ನೀಡುವಾಗ ಒಂಟಿ ಭಾವನೆಗೆ ಸಮಯಸಿಗದು. ಇದರಿಂದ ನಿಮ್ಮ ಹೊರನೋಟ ಹಾಗೂ ವರ್ತನೆಯಲ್ಲಿ ಹೆಚ್ಚು ಧನಾತ್ಮಕರಾಗುವಿರಿ ಮತ್ತು ಯಾರಾದರೂ ನಿಮ್ಮನ್ನು ತಮ್ಮ ಸ್ನೇಹಿತರನ್ನಾಗಿ ಮಾಡಲು ಹೆಚ್ಚು ಅಪೇಕ್ಷಣೀಯ ವ್ಯಕ್ತಿಯಾಗುವಿರಿ. ಜ್ಞಾನೋಕ್ತಿ 11:25 ಹೇಳುವುದು: “ನೀರು ಹಾಯಿಸುವವನಿಗೆ ನೀರು ಸಿಕ್ಕುವದು.”

ಆರಿಸಿಕೊಳ್ಳುವವರಾಗಿರ್ರಿ. (ಜ್ಞಾನೋಕ್ತಿ 13:20) ನಿಮ್ಮನ್ನು ತೊಂದರೆಯಲ್ಲಿ ಸಿಕ್ಕಿಸಿಹಾಕಬಲ್ಲ ಅನೇಕ ಮಂದಿ ಸ್ನೇಹಿತರಿರುವುದಕ್ಕಿಂತ ನಿಮ್ಮ ಕುರಿತು ಕಾಳಜಿವಹಿಸುವ ಕೆಲವೇ ಮಂದಿ ಸ್ನೇಹಿತರಿರುವುದು ಲೇಸು. (1 ಕೊರಿಂಥ 15:33) ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟ ಯುವ ಸಮುವೇಲನ ಕುರಿತು ಪರಿಗಣಿಸಿರಿ. ದೇವದರ್ಶನದ ಗುಡಾರದಲ್ಲಿ ಅವನಿಗೆ ಒಂಟಿಭಾವನೆ ಆಗಿದ್ದಿರಬಹುದು. ಏಕೆಂದರೆ ಅವನೊಟ್ಟಿಗೆ ಕೆಲಸಮಾಡುತ್ತಿದ್ದ ಹೊಫ್ನಿ ಮತ್ತು ಫೀನೆಹಾಸರು ಮಹಾ ಯಾಜಕನ ಮಕ್ಕಳಾಗಿದ್ದರೂ ಅವರ ಕೆಟ್ಟ ಕಾರ್ಯಗಳಿಂದಾಗಿ ಅವರೊಂದಿಗೆ ಸಹವಾಸ ಮಾಡುವುದು ಯೋಗ್ಯವಾಗಿರಲಿಲ್ಲ. ಅವರನ್ನು ಮೆಚ್ಚಿಸುವ ರೀತಿಯಲ್ಲಿರಲು ಪ್ರಯತ್ನಿಸುವುದು ಸಮುವೇಲನಿಗೆ ಆಧ್ಯಾತ್ಮಿಕ ಆತ್ಮಹತ್ಯೆಗೆ ಸಮಾನವಾಗಿರುತ್ತಿತ್ತು! ಆದರೆ ಸಮುವೇಲನಿಗೆ ಅದು ಖಂಡಿತವಾಗಿ ಬೇಕಾಗಿರಲಿಲ್ಲ! ಬೈಬಲ್‌ ತಿಳಿಸುವುದು: “ಬಾಲಕನಾದ ಸಮುವೇಲನಾದರೋ ಬೆಳೆಯುತ್ತಾ ಬಂದ ಹಾಗೆಲ್ಲಾ ಯೆಹೋವನ ಮತ್ತು ಮನುಷ್ಯರ ದಯೆಗೆ ಪಾತ್ರನಾದನು.” (1 ಸಮುವೇಲ 2:26) ಯಾವ ಮನುಷ್ಯರ ದಯೆಗೆ ಅವನು ಪಾತ್ರನಾದನು? ಅವನ ಒಳ್ಳೇ ಕಾರ್ಯಗಳಿಗಾಗಿ ಬಹುಶಃ ಅವನನ್ನು ದೂರವಿಡುತ್ತಿದ್ದ ಹೊಫ್ನಿ ಫೀನೆಹಾಸರಂತೂ ಅಲ್ಲ. ಬದಲಾಗಿ ಯಾರು ದೇವರ ಮಟ್ಟಗಳನ್ನು ಎತ್ತಿಹಿಡಿಯುತ್ತಿದ್ದರೋ ಅಂಥ ಜನರಿಗೆ ಸಮುವೇಲನ ಮೆಚ್ಚತಕ್ಕ ಗುಣಗಳು ಅವನನ್ನು ಅತಿ ಪ್ರಿಯನಾಗಿ ಮಾಡಿದವು. ನಿಮಗೂ ಯೆಹೋವನನ್ನು ಪ್ರೀತಿಸುವಂಥ ಸ್ನೇಹಿತರೇ ಅಗತ್ಯ!

ಧನಾತ್ಮಕರಾಗಿರಿ. (ಜ್ಞಾನೋಕ್ತಿ 15:15) ತಮ್ಮನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ ಎಂಬ ಅನಿಸಿಕೆ ಪ್ರತಿಯೊಬ್ಬರಿಗೆ ಆಗಿಂದಾಗ್ಗೆ ಸ್ವಲ್ಪ ಮಟ್ಟಿಗಾದರೂ ಆಗುತ್ತದೆ. ಇದಕ್ಕೆ ಔಷಧಿ ಏನು? ಋಣಾತ್ಮಕ ಅಂಶಗಳ ಕುರಿತೇ ಯೋಚಿಸುವ ಬದಲು ಬದುಕಿನ ಕುರಿತ ಧನಾತ್ಮಕ ನೋಟವನ್ನು ತಾಳಲು ಪ್ರಯತ್ನಿಸಿ. ನೆನಪಿಡಿ: ನಿಮ್ಮ ಬದುಕಿನ ಪ್ರತಿಯೊಂದು ಅಂಶವನ್ನು ನಿಮಗೆ ನಿಯಂತ್ರಿಸಲು ಸಾಧ್ಯವಾಗದಿದ್ದರೂ ನಿಮ್ಮ ಪ್ರತಿಕ್ರಿಯೆಯನ್ನು ನೀವು ಖಂಡಿತ ನಿಯಂತ್ರಿಸಬಲ್ಲಿರಿ.

ನಿಮ್ಮನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ ಎಂಬ ಅನಿಸಿಕೆಯಾಗುವಾಗ ಸನ್ನಿವೇಶವನ್ನು ಬದಲಾಯಿಸಲು ಯಾ ಕಡಿಮೆಪಕ್ಷ ಅದರೆಡೆಗಿರುವ ನಿಮ್ಮ ನೋಟವನ್ನಾದರೂ ಬದಲಾಯಿಸಲು ಧನಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳಿ. ಯೆಹೋವನು ನಿಮ್ಮ ರಚನೆಯನ್ನು ಬಲ್ಲವನಾದ ಕಾರಣ ನಿಮ್ಮ ಆವಶ್ಯಕತೆಗಳೇನು ಮತ್ತು ಅವುಗಳನ್ನು ಅತ್ಯುತ್ತಮ ರೀತಿಯಲ್ಲಿ ಹೇಗೆ ಪೂರೈಸಬೇಕೆಂಬುದು ಆತನಿಗೆ ತಿಳಿದಿದೆ ಎಂಬದನ್ನು ಸದಾ ನೆನಪಿನಲ್ಲಿಡಿ. ಒಂಟಿ ಭಾವನೆಗಳು ನಿಮ್ಮನ್ನು ಕಾಡುತ್ತಿರುವಲ್ಲಿ ಅದರ ಕುರಿತು ಯೆಹೋವನಿಗೆ ಪ್ರಾರ್ಥಿಸಿರಿ. ‘ಆತನು ನಿಮ್ಮನ್ನು ಉದ್ಧಾರಮಾಡುವನು’ ಎಂಬ ಖಾತ್ರಿ ನಿಮಗಿರಲಿ.​—⁠ಕೀರ್ತನೆ 55:22. (g 7/07)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು.

ಯೋಚಿಸಬೇಕಾದ ವಿಷಯಗಳು

◼ ನನ್ನನ್ನು ಯಾರೂ ಸೇರಿಸಿಕೊಳ್ಳುತ್ತಿಲ್ಲ ಎಂಬ ಅನಿಸಿಕೆಯಾದಾಗ ಯಾವ ಧನಾತ್ಮಕ ಹೆಜ್ಜೆಗಳನ್ನು ನಾನು ತೆಗೆದುಕೊಳ್ಳಬಲ್ಲೆ?

◼ ಋಣಾತ್ಮಕ ಯೋಚನೆಯಲ್ಲಿ ಮುಳುಗಿಹೋಗುವ ಬದಲು ನನ್ನ ಕುರಿತು ಸರಿಯಾದ ನೋಟವನ್ನಿಡಲು ಪವಿತ್ರ ಶಾಸ್ತ್ರದ ಯಾವ ವಚನಗಳು ನನಗೆ ಸಹಾಯ ಮಾಡಬಲ್ಲವು?

[ಪುಟ 14ರಲ್ಲಿರುವ ಚೌಕ/ಚಿತ್ರ]

ಸಂಭಾಷಣಾ ನುಡಿಮುತ್ತುಗಳು

ಮುಗುಳ್ನಗೆ ಬೀರಿ.ನಿಮ್ಮ ಸ್ನೇಹಭಾವ ಇತರರು ನಿಮ್ಮೊಂದಿಗೆ ಬಂದು ಮಾತಾಡುವಂತೆ ಆಮಂತ್ರಿಸುವುದು.

ನಿಮ್ಮನ್ನು ಪರಿಚಯಿಸಿರಿ.ನಿಮ್ಮ ಹೆಸರನ್ನು ಹೇಳಿ, ಯಾವ ಊರಿನವರೆಂದು ತಿಳಿಸಿರಿ.

ಪ್ರಶ್ನೆಗಳನ್ನು ಕೇಳಿ.ವೈಯಕ್ತಿಕ ವಿಷಯಗಳಲ್ಲಿ ತಲೆಹಾಕದೆ, ವ್ಯಕ್ತಿಯ ಹಿನ್ನೆಲೆಯ ಕುರಿತು ಸೂಕ್ತ ಪ್ರಶ್ನೆಗಳನ್ನು ಕೇಳಿ.

ಕಿವಿಗೊಡಿ.ಸಂಭಾಷಣೆಯನ್ನು ಸಾಗಿಸಲು ಮುಂದೇನು ಹೇಳಬೇಕೆಂಬುದರ ಕುರಿತು ಯೋಚಿಸದೆ ಮೊದಲು ಕಿವಿಗೊಡಿ. ನಿಮ್ಮ ಮುಂದಿನ ಪ್ರಶ್ನೆ ಅಥವಾ ಮಾತು ತಾನಾಗಿಯೇ ಬರುವುದು.

ಆರಾಮವಾಗಿರಿ!ಸಂಭಾಷಣೆಯು ಹೊಸ ಸ್ನೇಹಿತರನ್ನು ಮಾಡುವ ದ್ವಾರವನ್ನು ತೆರೆಯಬಲ್ಲದು. ಹಾಗಾಗಿ ಆ ಅನುಭವವನ್ನು ಸವಿಯಿರಿ!