ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಮಕ್ಕಳಿಗೆ ಕೆಲಸ ಕೊಡಬೇಕಾ?

ಮಕ್ಕಳಿಗೆ ಕೆಲಸ ಕೊಡಬೇಕಾ?

ಸಮಸ್ಯೆ

ಮನೆಯ ಕೆಲಸದಲ್ಲಿ ಮಕ್ಕಳೂ ಕೈ ಜೋಡಿಸಬೇಕು ಅಂತ ಕೆಲವು ಮನೆಗಳಲ್ಲಿ ಬಯಸುತ್ತಾರೆ. ಮಕ್ಕಳೂ ಅದನ್ನು ಯಾವುದೇ ಬೇಸರ ಇಲ್ಲದೆ ಮಾಡುತ್ತಾರೆ. ಇನ್ನು ಕೆಲವು ಮನೆಗಳಲ್ಲಿ, ಮಕ್ಕಳಿಗೆ ಯಾವ ಕೆಲಸನೂ ಕೊಡಲ್ಲ. ಆದ್ದರಿಂದ ಮಕ್ಕಳೂ ಖುಷಿಯಾಗಿ ಯಾವುದೇ ಕೆಲಸಕ್ಕೆ ಕೈಹಾಕುವುದಿಲ್ಲ.

ಅನೇಕ ದೇಶಗಳಲ್ಲಿ ಇಂಥ ಪರಿಸ್ಥಿತಿನೇ ಇದೆ. ಅಲ್ಲಿ ಮಕ್ಕಳು ತೆಗೆದುಕೊಳ್ಳುತ್ತಾರೇ ಹೊರತು ಕೊಡೋದರ ಬಗ್ಗೆ ಯೋಚಿಸುವುದೇ ಇಲ್ಲ. “ಈಗಿನ ಕಾಲದಲ್ಲಿ, ಹೆತ್ತವರು ಮಕ್ಕಳನ್ನು ವಿಡಿಯೋ ಗೇಮ್‌ ಆಡಲು, ಇಂಟರ್‌ನೆಟ್‌ ಮತ್ತು ಟಿ.ವಿ. ನೋಡಲು ಬಿಟ್ಟುಬಿಡುತ್ತಾರೆ. ಅವರಿಗೆ ಯಾವ ಕೆಲಸನೂ ಕೊಡಲ್ಲ” ಎಂದು ಸ್ಟೀವನ್‌ ಎಂಬ ಒಬ್ಬ ತಂದೆ ತಾನು ಗಮನಿಸಿದ್ದನ್ನು ಹೇಳುತ್ತಾನೆ.

ಮಕ್ಕಳಿಗೆ ಕೆಲಸ ಕೊಡುವುದರಿಂದ ಮನೆ ನೀಟಾಗಿ ಇಡಲು ಸಹಾಯ ಆಗುತ್ತೆ ನಿಜ. ಆದರೆ ಅದಕ್ಕಿಂತ ಮುಖ್ಯವಾಗಿ ಕೆಲಸ ಕೊಡುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಏನಾದ್ರೂ ಪ್ರಯೋಜನ ಆಗುತ್ತಾ? ನಿಮಗೇನು ಅನಿಸುತ್ತೆ?

ನಿಮಗಿದು ತಿಳಿದಿರಲಿ

ಕೆಲವು ಹೆತ್ತವರು ಮಕ್ಕಳಿಗೆ ಕೆಲಸ ಕೊಡಲು ಹಿಂದೇಟು ಹಾಕುತ್ತಾರೆ. ಅದರಲ್ಲೂ ಮುಖ್ಯವಾಗಿ, ಮಕ್ಕಳಿಗೆ ತುಂಬ ಹೋಮ್‌ವರ್ಕ್‌ ಇದ್ದರೆ ಅಥವಾ ಆಟ ಮುಂತಾದ ಇತರ ಚಟುವಟಿಕೆಗಳಿದ್ದರೆ ಕೆಲಸನೇ ಕೊಡುವುದಿಲ್ಲ. ಆದರೆ, ಕೆಲಸ ಕೊಡುವುದರಿಂದ ಅನೇಕ ಪ್ರಯೋಜನಗಳಿವೆ. ಅವು:

ಮಕ್ಕಳು ಜವಾಬ್ದಾರಿಯುತ ವ್ಯಕ್ತಿಗಳಾಗುತ್ತಾರೆ. ಮನೆಯಲ್ಲಿ ಕೆಲಸ ಮಾಡುವ ಮಕ್ಕಳು ಶಾಲೆಯಲ್ಲೂ ಚುರುಕಾಗಿರುತ್ತಾರೆ. ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ದೃಢ ಮನಸ್ಸು ಹೆಚ್ಚಾಗುತ್ತದೆ. ಈ ಗುಣಗಳು ಶಾಲೆಯ ಓದಿಗೆ ತುಂಬ ಸಹಾಯಕಾರಿ.

ಮಕ್ಕಳಲ್ಲಿ ಇತರರಿಗೆ ಸಹಾಯ ಮಾಡುವ ಗುಣ ಬರುತ್ತದೆ. ಸಾಮಾನ್ಯವಾಗಿ, ಮನೆಯ ಕೆಲಸದಲ್ಲಿ ಸಹಾಯ ಮಾಡುವ ಮಕ್ಕಳು ದೊಡ್ಡವರಾದಾಗ ತಮ್ಮ ಸಮಾಜಕ್ಕೂ ಸಹಾಯವಾಗುವ ಕೆಲಸ ಮಾಡಿದ್ದನ್ನು ಕೆಲವರು ಗಮನಿಸಿದ್ದಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ, ಮನೆಯಲ್ಲಿ ಕೆಲಸ ಮಾಡುವಾಗ ಮಕ್ಕಳು ತಮ್ಮ ಸ್ವಂತ ವಿಷಯಗಳಿಗಿಂತ ಇತರರ ಅಗತ್ಯಗಳಿಗೆ ಪ್ರಾಮುಖ್ಯತೆ ಕೊಡಲು ಕಲಿಯುತ್ತಾರೆ. “ಮಕ್ಕಳಿಗೆ ಏನೂ ಕೆಲಸ ಕೊಡದಿದ್ದಾಗ ‘ನನ್ನ ಕೆಲಸ ಮಾಡಲಿಕ್ಕೆ ಬೇರೆಯವರು ಇದ್ದಾರೆ’ ಎಂಬ ಭಾವನೆ ಅವರಲ್ಲಿ ಬೆಳೆಯುತ್ತದೆ. ಅವರಿಗೆ ಜೀವನದ ಬಗ್ಗೆ ತಪ್ಪಾದ ಅಭಿಪ್ರಾಯ ಬರುತ್ತದೆ. ಜೀವನದಲ್ಲಿ ಅವರು ಜವಾಬ್ದಾರಿ ವಹಿಸಿಕೊಳ್ಳಬೇಕು ಮತ್ತು ಕಷ್ಟಪಟ್ಟು ಕೆಲಸ ಮಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ” ಎಂದು ಮೇಲೆ ತಿಳಿಸಲಾದ ಸ್ಟೀವನ್‌ ಹೇಳುತ್ತಾರೆ.

ಕುಟುಂಬ ಒಗ್ಗಟ್ಟಾಗಿರುತ್ತದೆ. ಮನೆಯಲ್ಲಿ ಕೆಲಸ ಮಾಡುವುದರಿಂದ ಕುಟುಂಬದಲ್ಲಿ ತಮಗೆ ಒಂದು ಸ್ಥಾನದ ಜೊತೆ ಜವಾಬ್ದಾರಿಯೂ ಇದೆ ಎಂದು ಮಕ್ಕಳಿಗೆ ಗೊತ್ತಾಗುತ್ತದೆ. ಹೆತ್ತವರು ಮನೆಯ ಕೆಲಸಗಳಿಗಿಂತ ಆಟ ಮುಂತಾದ ಇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ಕೊಟ್ಟರೆ ಈ ವಿಷಯ ಅವರಿಗೆ ಮನದಟ್ಟಾಗುವುದೇ ಇಲ್ಲ. ಆದ್ದರಿಂದ ಹೆತ್ತವರೇ, ‘ನನ್ನ ಮಗು ಫುಟ್‌ಬಾಲ್‌ ಟೀಮ್‌ಗೆ ಆಪ್ತನಾಗುತ್ತಾ ಕುಟುಂಬ ಎಂಬ ಟೀಮ್‍ನಿಂದ ದೂರ ಉಳಿದರೆ ಏನು ಪ್ರಯೋಜನ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.

ನೀವೇನು ಮಾಡಬಹುದು?

ಚಿಕ್ಕ ವಯಸ್ಸಿನಿಂದಲೇ ಕೆಲಸ ಕೊಡಿ. ಮಕ್ಕಳಿಗೆ ಮೂರು ವರ್ಷದಿಂದಲೇ ಹೆತ್ತವರು ಕೆಲಸ ಕೊಡಬೇಕು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಎರಡು ಅಥವಾ ಅದಕ್ಕೂ ಕಡಿಮೆ ವಯಸ್ಸಿನಲ್ಲೇ ಕೆಲಸ ಕೊಡಬೇಕು ಎನ್ನುತ್ತಾರೆ. ಯಾಕೆಂದರೆ, ಎಳೆ ಪ್ರಾಯದಲ್ಲಿ ಮಕ್ಕಳು ತಮ್ಮ ಹೆತ್ತವರ ಜೊತೆಯಲ್ಲಿ ಕೆಲಸ ಮಾಡಲು, ಹೆತ್ತವರನ್ನು ಅನುಕರಿಸಲು ಇಷ್ಟಪಡುತ್ತಾರೆ.—ಬೈಬಲ್‌ ತತ್ವ: ಜ್ಞಾನೋಕ್ತಿ 22:6.

ವಯಸ್ಸಿಗೆ ತಕ್ಕ ಕೆಲಸ ಕೊಡಿ. ಉದಾಹರಣೆಗೆ, ಮೂರು ವರ್ಷದ ಮಗುವಿಗೆ ಆಟದ ಸಾಮಾನುಗಳನ್ನು ಎತ್ತಿ ಜೋಡಿಸಿಡುವ, ಏನಾದರೂ ಚೆಲ್ಲಿದರೆ ಅದನ್ನು ಒರೆಸುವ, ತೆಗೆದ ಬಟ್ಟೆ ಎತ್ತಿಡುವ ಕೆಲಸ ಕೊಡಬಹುದು. ದೊಡ್ಡ ಮಕ್ಕಳಿಗೆ ಮನೆ ಗುಡಿಸುವ, ಗಾಡಿ ತೊಳೆಯುವ ಮತ್ತು ಅಡಿಗೆ ಮಾಡುವ ಕೆಲಸ ಕೊಡಬಹುದು. ಹೀಗೆ ನಿಮ್ಮ ಮಕ್ಕಳ ಸಾಮರ್ಥ್ಯಕ್ಕೆ ತಕ್ಕ ಕೆಲಸ ಕೊಡಬಹುದು. ಅವರು ಆಸಕ್ತಿಯಿಂದ ಆ ಕೆಲಸಗಳನ್ನು ಮಾಡುವುದನ್ನು ನೋಡುವಾಗ ನಿಮಗೇ ಆಶ್ಚರ್ಯ ಆಗುತ್ತೆ.

ಮನೆಯ ಕೆಲಸಕ್ಕೆ ಪ್ರಾಮುಖ್ಯತೆ ಕೊಡಿ. ನಿಮ್ಮ ಮಕ್ಕಳಿಗೆ ರಾಶಿ ಹೋಮ್‌ವರ್ಕ್‌ ಇದ್ದಾಗ ಮನೆಯಲ್ಲಿ ಕೆಲಸ ಮಾಡುವುದು ಕಷ್ಟ ಅನ್ನೋದು ನಿಜ. ಆದರೆ, ಹೆಚ್ಚು ಅಂಕ ಪಡೆಯಬೇಕೆಂದು ಕೆಲಸ ಕೊಡದೇ ಇದ್ದರೆ, ನೀವು ‘ತಪ್ಪಾದ ವಿಷಯಗಳಿಗೆ ಪ್ರಾಮುಖ್ಯತೆ ಕೊಟ್ಟಂತಾಗುತ್ತದೆ’ ಎಂದು ದ ಪ್ರೈಸ್‌ ಆಫ್‌ ಪ್ರಿವ್‌ಲೇಜ್‌ ಎಂಬ ಪುಸ್ತಕ ಹೇಳುತ್ತದೆ. ಈಗಾಗಲೇ ಗಮನಿಸಿದಂತೆ, ಮನೆಯಲ್ಲಿ ಕೆಲಸ ಮಾಡುವುದು ಮಕ್ಕಳು ಶಾಲೆಯಲ್ಲೂ ಚುರುಕಾಗಿರಲು ಸಹಾಯ ಮಾಡುತ್ತದೆ. ಈ ಚಿಕ್ಕ ವಯಸ್ಸಿನಲ್ಲಿ ಕಲಿಯುವ ಪಾಠಗಳು ಮುಂದೆ ದೊಡ್ಡವರಾಗಿ ಒಂದು ಕುಟುಂಬ ನಡೆಸುವಾಗ ತುಂಬ ಸಹಾಯ ಮಾಡುತ್ತವೆ.—ಬೈಬಲ್‌ ತತ್ವ: ಫಿಲಿಪ್ಪಿ 1:10.

ನಿಮ್ಮ ಉದ್ದೇಶವನ್ನು ಮರೆಯಬೇಡಿ. ನಿಮ್ಮ ಮಗು ಕೆಲಸವನ್ನು ಮಾಡಿ ಮುಗಿಸಲು ನೀವು ನೆನಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದು ನಿಮಗನಿಸಬಹುದು. ಆಗ, ನೀವೇ ಅದನ್ನು ಮಾಡಲು ಹೋಗಬೇಡಿ. ಯಾಕೆಂದರೆ, ಮಕ್ಕಳು ದೊಡ್ಡವರಷ್ಟೇ ಅಚ್ಚುಕಟ್ಟಾಗಿ ಕೆಲಸಮಾಡಬೇಕು ಅನ್ನುವುದು ನಿಮ್ಮ ಉದ್ದೇಶವಲ್ಲ, ಬದಲಿಗೆ ಮಕ್ಕಳಿಗೆ ಜವಾಬ್ದಾರಿ ವಹಿಸಿಕೊಳ್ಳಲು ಕಲಿಸುವುದು ಮತ್ತು ಕೆಲಸದಲ್ಲಿ ಸಿಗುವ ಸಂತೋಷವನ್ನು ತಿಳಿದುಕೊಳ್ಳಲು ಸಹಾಯ ಮಾಡುವುದೇ ನಿಮ್ಮ ಉದ್ದೇಶ ಆಗಿದೆ.—ಬೈಬಲ್‌ ತತ್ವ: ಪ್ರಸಂಗಿ 3:22.

ಕೆಲಸದಿಂದ ನಿಜ ಪ್ರಯೋಜನ ಪಡೆಯಲು ಸಹಾಯ ಮಾಡಿ. ಕೆಲಸ ಮಾಡಲು ಹಣ ಕೊಟ್ಟರೆ ಮಕ್ಕಳು ಜವಾಬ್ದಾರಿ ವಹಿಸುವುದನ್ನು ಕಲಿಯುತ್ತಾರೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು, ಹೀಗೆ ಮಾಡಿದರೆ ಮಕ್ಕಳು ‘ನನಗೇನು ಸಿಗುತ್ತೆ ಅಂತನೇ ಯೋಚಿಸುತ್ತಾರೆ ಹೊರತು ನಾನೇನು ಮಾಡಬಹುದು ಅಂತಲ್ಲ’ ಎಂದು ಹೇಳುತ್ತಾರೆ. ಮಾತ್ರವಲ್ಲ, ಮಕ್ಕಳ ಹತ್ತಿರ ಸಾಕಷ್ಟು ಹಣ ಇದ್ದಾಗ ಅವರು ಕೆಲಸ ಮಾಡಲು ಒಪ್ಪದೇ ಇರಬಹುದು ಅಂತನೂ ಅವರು ಎಚ್ಚರಿಸುತ್ತಾರೆ. ಹೀಗೆ, ಕೆಲಸದಿಂದ ಅವರಿಗೆ ನಿಜ ಪ್ರಯೋಜನ ಸಿಗುವುದಿಲ್ಲ. ಪಾಠ? ಮಕ್ಕಳ ಖರ್ಚಿಗೆ ಹಣ ಕೊಟ್ಟರೂ, ಮನೆಯಲ್ಲಿ ಕೆಲಸ ಮಾಡಿದ್ದಕ್ಕಾಗಿ ಹಣ ಕೊಡದೇ ಇರುವುದೇ ಒಳ್ಳೇದು. ▪