ಮಾಹಿತಿ ಇರುವಲ್ಲಿ ಹೋಗಲು

ದೇವರಿಗೆ ಹತ್ರ ಆಗಲು ಏನು ಮಾಡಬೇಕು?

ದೇವರಿಗೆ ಹತ್ರ ಆಗಲು ಏನು ಮಾಡಬೇಕು?

ಬೈಬಲಿನ ಉತ್ತರ

 ದೇವರ ಫ್ರೆಂಡ್‌ ಆಗಲಿಕ್ಕೆ ನಿಮಗೆ ಇಷ್ಟ ಇದ್ಯಾ? ಹಾಗಾದ್ರೆ ನೀವು ಆತನ ಬಗ್ಗೆ ತಿಳ್ಕೊಬೇಕು. ಆತನಿಗೆ ಇಷ್ಟ ಆಗೋದನ್ನು ಮಾಡಬೇಕು. ಆಗ ದೇವರು ನಿಮಗೆ ಹತ್ರ ಆಗ್ತಾನೆ. (ಯಾಕೋಬ 4:8) ಆತನು ಒಬ್ಬರಿಗೂ ದೂರವಾಗಿಲ್ಲ ಅಂತ ಬೈಬಲ್‌ ಹೇಳುತ್ತೆ.—ಅಪೊಸ್ತಲರ ಕಾರ್ಯ 17:27.

 ದೇವರನ್ನು ತಿಳಿದುಕೊಳ್ಳಲು ಏನು ಮಾಡಬೇಕು?

 ಬೈಬಲನ್ನು ಓದಿ

  •  ಬೈಬಲ್‌ ಏನು ಹೇಳುತ್ತೆ? “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ.”—2 ತಿಮೊತಿ 3:16.

  •  ಅರ್ಥ: ದೇವರೇ ಬೈಬಲಿನ ಗ್ರಂಥಕರ್ತ. ಬೈಬಲನ್ನು ಬರೆದವರು ಮನುಷ್ಯರಾದ್ರೂ ಅದರಲ್ಲಿ ಏನೇನು ವಿಷ್ಯ ಬರೆಯಬೇಕು ಅಂತ ಹೇಳಿದ್ದು ದೇವರು. ನಮಗೆ ಎಂಥ ಜೀವನ ಸಿಗಬೇಕೆಂದು ಆತನ ಇಷ್ಟ, ಆತನು ಎಂಥ ವ್ಯಕ್ತಿ, ಆತನ ಪ್ರೀತಿ ನ್ಯಾಯ ಕನಿಕರದ ಬಗ್ಗೆ ಈ ಅದ್ಭುತವಾದ ಪುಸ್ತಕದಲ್ಲಿ ಹೇಳಿದ್ದಾನೆ.—ವಿಮೋಚನಕಾಂಡ 34:6; ಧರ್ಮೋಪದೇಶಕಾಂಡ 32:4.

  •  ನೀವೇನು ಮಾಡಬೇಕು? ಬೈಬಲನ್ನು ಪ್ರತಿದಿನ ಓದಿ. (ಯೆಹೋಶುವ 1:8) ಓದಿದ ವಿಷ್ಯದ ಬಗ್ಗೆ ಧ್ಯಾನಿಸಿ. ‘ಈ ವಚನ ದೇವರು ಎಂಥ ವ್ಯಕ್ತಿ ಅಂತ ನನಗೆ ಕಲಿಸುತ್ತೆ?’ ಎಂದು ಕೇಳಿಕೊಳ್ಳಿ.—ಕೀರ್ತನೆ 77:12.

     ಉದಾಹರಣೆಗೆ ಯೆರೆಮೀಯ 29:11 ಓದಿ. ಆಮೇಲೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ‘ನಾನು ನೆಮ್ಮದಿಯಿಂದ ಇರಬೇಕು ಅಂತ ದೇವರು ಇಷ್ಟಪಡ್ತಾನಾ ಅಥವಾ ಕಷ್ಟಪಡಬೇಕು ಅಂತ ಇಷ್ಟಪಡ್ತಾನಾ? ನಾವು ಹೇಗಾದ್ರೂ ಹಾಳಾಗಿ ಹೋಗಲಿ ಅನ್ನೋದು ಆತನ ಇಷ್ಟನಾ ಅಥವಾ ನಮ್ಮ ಭವಿಷ್ಯ ಚೆನ್ನಾಗಿರಬೇಕು ಅನ್ನೋದು ಆತನ ಇಷ್ಟನಾ?’

 ಸೃಷ್ಟಿಯನ್ನು ಗಮನ ಕೊಟ್ಟು ನೋಡಿ

  •  ಬೈಬಲ್‌ ಏನು ಹೇಳುತ್ತೆ? ದೇವರ ಅದೃಶ್ಯ ಗುಣಗಳು ಲೋಕ ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಾಣುತ್ತವೆ. ಏಕೆಂದರೆ ಸೃಷ್ಟಿಯಿಂದ ಅವುಗಳನ್ನು ಗ್ರಹಿಸಲು ಆಗುತ್ತದೆ.—ರೋಮನ್ನರಿಗೆ 1:20.

  •  ಅರ್ಥ: ದೇವರು ಎಂಥವನು ಅಂತ ಸೃಷ್ಟಿಯಿಂದ ತಿಳ್ಕೊಳ್ಳಬಹುದು. ಒಂದು ಚಿತ್ರ ನೋಡಿದಾಗ ಅದನ್ನು ಬಿಡಿಸಿದವನು ಎಷ್ಟು ಒಳ್ಳೇ ಚಿತ್ರಗಾರ ಅಂತ ತಿಳ್ಕೊಳ್ತೇವೆ. ಒಂದು ಯಂತ್ರದಲ್ಲಿರುವ ಬೇರೆಬೇರೆ ಭಾಗಗಳನ್ನು ನೋಡಿದಾಗ ಅದನ್ನು ತಯಾರಿಸಿದವನು ಎಷ್ಟು ಬುದ್ಧಿವಂತ ಅಂತ ತಿಳ್ಕೊಳ್ತೇವೆ. ಅದೇ ತರ ಮನುಷ್ಯನ ಮೆದುಳಿಗಿರುವ ಶಕ್ತಿ ಮತ್ತು ಅದನ್ನು ರಚಿಸಿದ ವಿಧ ನೋಡಿದಾಗ ದೇವರು ಎಷ್ಟು ವಿವೇಕಿ ಅಂತ ಗೊತ್ತಾಗುತ್ತೆ. ಸೂರ್ಯ ನಕ್ಷತ್ರಗಳಿಗೆ ಇರುವ ಅಪಾರ ಶಕ್ತಿಯನ್ನು ನೋಡುವಾಗ ದೇವರಿಗೆ ಎಷ್ಟು ಶಕ್ತಿಸಾಮರ್ಥ್ಯ ಇದೆ ಅಂತ ಗೊತ್ತಾಗುತ್ತೆ.—ಕೀರ್ತನೆ 104:24; ಯೆಶಾಯ 40:26.

  •  ನೀವೇನು ಮಾಡಬೇಕು? ಪ್ರಕೃತಿಯನ್ನು ನೋಡಲು ಮತ್ತು ಅದರ ಬಗ್ಗೆ ಕಲಿಯಲು ಸಮಯ ಮಾಡ್ಕೊಳ್ಳಿ. ಪ್ರಕೃತಿಯಲ್ಲಿ ಒಂದೊಂದು ಎಷ್ಟು ಚೆನ್ನಾಗಿ, ಎಷ್ಟು ಅದ್ಭುತವಾಗಿ ವಿನ್ಯಾಸ ಆಗಿದೆ ಅಂತ ನೋಡಿ. a ಹಾಗೆ ನೋಡುವಾಗ, ‘ಇದ್ರಿಂದ ದೇವರ ಬಗ್ಗೆ ನಾನೇನು ಕಲಿಬಹುದು?’ ಅಂತ ಕೇಳಿಕೊಳ್ಳಿ. ಆದ್ರೆ ಪ್ರಕೃತಿ ನಮ್ಮ ಸೃಷ್ಟಿಕರ್ತನ ಬಗ್ಗೆ ಎಲ್ಲ ವಿಷ್ಯ ಹೇಳಲ್ಲ. ಅದಕ್ಕೇ ಆತನು ನಮಗೆ ಬೈಬಲನ್ನು ಕೊಟ್ಟಿದ್ದಾನೆ.

 ದೇವರ ಹೆಸರನ್ನು ಉಪಯೋಗಿಸಿ

  •  ಬೈಬಲ್‌ ಏನು ಹೇಳುತ್ತೆ? ನನ್ನ ನಾಮವನ್ನು ಅರಿತಿರುವುದರಿಂದ ಅವನನ್ನು ಕಾಪಾಡುವೆನು. ಅವನು ನನಗೆ ಮೊರೆಯಿಡುವಾಗ ಸದುತ್ತರ ಕೊಡುವೆನು.—ಕೀರ್ತನೆ 91:14, 15.

  •  ಅರ್ಥ: ಯೆಹೋವ ದೇವರು ತನ್ನ ಹೆಸರನ್ನು ತಿಳಿದಿರುವವರಿಗೆ ಮತ್ತು ಅದನ್ನು ಗೌರವಪೂರ್ವಕವಾಗಿ ಉಪಯೋಗಿಸುವವರಿಗೆ ವಿಶೇಷ ಗಮನ ಕೊಡ್ತಾನೆ. b (ಕೀರ್ತನೆ 83:18; ಮಲಾಕಿ 3:16) ದೇವರು ತನ್ನ ಹೆಸರನ್ನು ತಿಳಿಸುವ ಮೂಲಕ ನಮಗೆ ಆತನ ಪರಿಚಯ ಮಾಡಿಕೊಟ್ಟಿದ್ದಾನೆ. “ನಾನೇ ಯೆಹೋವನು; ಇದೇ ನನ್ನ ನಾಮ” ಅಂತ ಹೇಳಿದ್ದಾನೆ.—ಯೆಶಾಯ 42:8.

  •  ನೀವೇನು ಮಾಡಬೇಕು? ಯೆಹೋವನ ಬಗ್ಗೆ ಮಾತಾಡುವಾಗ ಆತನ ಹೆಸರನ್ನು ಉಪಯೋಗಿಸಿ.

 ಯೆಹೋವನಿಗೆ ಪ್ರಾರ್ಥಿಸಿ, ಮನಸ್ಸುಬಿಚ್ಚಿ ಮಾತಾಡಿ

  •  ಬೈಬಲ್‌ ಏನು ಹೇಳುತ್ತೆ? ‘ಯೆಹೋವನು ತನಗೆ ಮೊರೆಯಿಡುವವರಿಗೆ ಹತ್ತಿರವಾಗಿಯೇ ಇದ್ದಾನೆ.’—ಕೀರ್ತನೆ 145:18.

  •  ಅರ್ಥ: ಯೆಹೋವನ ಮೇಲೆ ನಂಬಿಕೆಯಿಟ್ಟು ಪ್ರಾರ್ಥನೆ ಮಾಡಿದ್ರೆ ಆತನು ನಮಗೆ ತುಂಬ ಹತ್ರ ಆಗ್ತಾನೆ. ಪ್ರಾರ್ಥನೆ ಮಾಡಿದ್ರೆ ನಾವು ಆತನನ್ನು ಆರಾಧಿಸಿದ ಹಾಗೆ. ನಾವು ಮಾಡುವ ಪ್ರಾರ್ಥನೆ ದೇವರ ಮೇಲೆ ನಮಗೆಷ್ಟು ಗೌರವ ಇದೆ ಅಂತ ತೋರಿಸಿಕೊಡುತ್ತೆ.

  •  ನೀವೇನು ಮಾಡಬೇಕು? ಆಗಾಗ ದೇವರಿಗೆ ಪ್ರಾರ್ಥನೆ ಮಾಡಿ. (1 ಥೆಸಲೊನೀಕ 5:17) ನಿಮಗೆ ಏನೇನು ಚಿಂತೆ ಇದೆ, ಏನು ಅನಿಸುತ್ತೆ ಅಂತ ಆತನಿಗೆ ಹೇಳಿ.—ಕೀರ್ತನೆ 62:8. c

 ದೇವರ ಮೇಲಿರೋ ನಂಬಿಕೆಯನ್ನು ಜಾಸ್ತಿ ಮಾಡಿ

  •  ಬೈಬಲ್‌ ಏನು ಹೇಳುತ್ತೆ? “ನಂಬಿಕೆಯಿಲ್ಲದೆ ಆತನನ್ನು ಮೆಚ್ಚಿಸುವುದು ಅಸಾಧ್ಯ.”—ಇಬ್ರಿಯ 11:6.

  •  ಅರ್ಥ: ನಮಗೆ ದೇವರ ಮೇಲೆ ನಂಬಿಕೆ ಇದ್ದರೆ ಮಾತ್ರ ಆತನಿಗೆ ಹತ್ರ ಆಗಲಿಕ್ಕೆ ಆಗುತ್ತೆ. ದೇವರು ಇದ್ದಾನೆ ಅಂತ ನಂಬಿದ್ರೆ ಮಾತ್ರ ಸಾಕಾಗಲ್ಲ. ಆತನಲ್ಲಿ ಪೂರ್ತಿ ಭರವಸೆ ಇಡಬೇಕು, ಆತನು ಕೊಟ್ಟಿರುವ ಮಾತುಗಳೆಲ್ಲ ಖಂಡಿತ ನಿಜ ಆಗುತ್ತೆ ಮತ್ತು ಆತನು ಇಟ್ಟಿರುವ ಮಟ್ಟಗಳು ನಮ್ಮ ಒಳ್ಳೇದಕ್ಕೇ ಅಂತ ನಂಬಬೇಕು. ಸ್ನೇಹಕ್ಕೆ ನಂಬಿಕೆ ತುಂಬ ಮುಖ್ಯ ಅಲ್ವಾ?

  •  ನೀವೇನು ಮಾಡಬೇಕು? ಜ್ಞಾನ ಇದ್ರೆನೇ ನಿಜವಾದ ನಂಬಿಕೆ ಬೆಳೆಸಿಕೊಳ್ಳಲು ಆಗುತ್ತೆ. (ರೋಮನ್ನರಿಗೆ 10:17) ಹಾಗಾಗಿ ಬೈಬಲನ್ನು ಅಧ್ಯಯನ ಮಾಡಿ. ದೇವರನ್ನು ಪೂರ್ತಿ ನಂಬಬಹುದು ಅಂತ ಮತ್ತು ಆತನು ಕೊಡುವ ಸಲಹೆ ನಮ್ಮ ಒಳ್ಳೇದಕ್ಕೇ ಅಂತ ಅರ್ಥಮಾಡಿಕೊಳ್ಳಿ. ನಿಮಗೆ ಬೈಬಲ್‌ ಕಲಿಸೋಕೆ ಯೆಹೋವನ ಸಾಕ್ಷಿಗಳು ಸಹಾಯ ಮಾಡ್ತಾರೆ. d

 ದೇವರಿಗೆ ಇಷ್ಟ ಆಗಿರೋದನ್ನೇ ಮಾಡಿ

  •  ಬೈಬಲ್‌ ಏನು ಹೇಳುತ್ತೆ? “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ.”—1 ಯೋಹಾನ 5:3.

  •  ಅರ್ಥ: ಯೆಹೋವನು ಕೊಟ್ಟಿರೋ ಆಜ್ಞೆಗಳನ್ನು ಪಾಲಿಸಲು ನಿಮ್ಮಿಂದ ಆಗೋದನ್ನೆಲ್ಲ ಮಾಡಿದ್ರೆ ಆತನ ಮೇಲೆ ಪ್ರೀತಿ ಇದೆ ಅಂತ ತೋರಿಸ್ತಿರ. ಆಗ ದೇವರು ನಿಮಗೆ ತುಂಬ ಹತ್ರ ಆಗ್ತಾನೆ.

  •  ನೀವೇನು ಮಾಡಬೇಕು? ಬೈಬಲನ್ನು ಅಧ್ಯಯನ ಮಾಡುವಾಗ ದೇವರಿಗೆ ಏನು ಇಷ್ಟ, ಏನು ಇಷ್ಟ ಇಲ್ಲ ಅಂತ ಗಮನಿಸಿ. ‘ನನ್ನ ಸೃಷ್ಟಿಕರ್ತನನ್ನು ಖುಷಿಪಡಿಸಲು ನಾನೇನು ಬದಲಾವಣೆ ಮಾಡಬೇಕು?’ ಅಂತ ಕೇಳಿಕೊಳ್ಳಿ.—1 ಥೆಸಲೊನೀಕ 4:1.

 ದೇವರು ಕೊಡುವ ಸಲಹೆಯನ್ನು ಪಾಲಿಸಿ ಆತನಿಗಿರೋ ಅಕ್ಕರೆಯನ್ನು ಅನುಭವಿಸಿ ನೋಡಿ

  •  ಬೈಬಲ್‌ ಏನು ಹೇಳುತ್ತೆ? “ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿ.”—ಕೀರ್ತನೆ 34:8.

  •  ಅರ್ಥ: ದೇವರು ಎಷ್ಟು ಒಳ್ಳೇಯವನೆಂದು ನೀವೇ ತಿಳ್ಕೊಳ್ಳಬೇಕು ಅಂತ ಆತನು ಹೇಳ್ತಿದ್ದಾನೆ. ಆತನು ನಿಮ್ಮನ್ನು ತುಂಬ ಪ್ರೀತಿಸ್ತಾನೆ, ಬೆಂಬಲ ಕೊಡ್ತಾನೆ ಅಂತ ಗೊತ್ತಾದಾಗ ಆತನಿಗೆ ಹತ್ರ ಆಗಬೇಕು ಅಂತ ನಿಮಗೇ ಅನಿಸುತ್ತೆ.

  •  ನೀವೇನು ಮಾಡಬೇಕು? ಬೈಬಲನ್ನು ಓದೋದು ಮಾತ್ರ ಅಲ್ಲ ಬೈಬಲ್‌ ಹೇಳೋ ತರನೇ ಮಾಡಬೇಕು. ಆ ತರ ಮಾಡಿದ್ರೆ ಎಷ್ಟು ಪ್ರಯೋಜನ ಇದೆ ಅಂತ ನೀವೇ ನೋಡಿ. (ಯೆಶಾಯ 48:17, 18) ಬೇರೆಯವರು ಎಷ್ಟು ಪ್ರಯೋಜನ ಪಡೆದಿದ್ದಾರೆ ಅಂತ ನೋಡಿ. ದೇವರ ಸಹಾಯದಿಂದ ಎಷ್ಟೋ ಜನ ಸವಾಲುಗಳನ್ನು ಜಯಿಸಿದ್ದಾರೆ, ಒಳ್ಳೆಯವರಾಗಿ ಬದಲಾಗಿದ್ದಾರೆ, ಕುಟುಂಬದವರ ಜೊತೆ ಸಂತೋಷವಾಗಿ ಇದ್ದಾರೆ, ನಿಜ ಖುಷಿ ಏನಂತ ಸವಿದಿದ್ದಾರೆ. ಅವರ ಅನುಭವಗಳನ್ನು ಓದಿ. e

 ದೇವರನ್ನು ತಿಳಿದುಕೊಳ್ಳುವುದರ ಬಗ್ಗೆ ತಪ್ಪು ಕಲ್ಪನೆಗಳು

 ತಪ್ಪು ಕಲ್ಪನೆ: ದೇವರು ತುಂಬ ಶಕ್ತಿಶಾಲಿ, ತುಂಬ ದೊಡ್ಡ ವ್ಯಕ್ತಿ. ಆತನು ನಮಗೆ ಹತ್ರವಾಗೋದು ದೂರದ ಮಾತೇ ಬಿಡಿ.

 ನಿಜ: ಇಡೀ ವಿಶ್ವದಲ್ಲಿ ದೇವರೇ ದೊಡ್ಡ ವ್ಯಕ್ತಿ, ತುಂಬ ಶಕ್ತಿಶಾಲಿ. ಹಾಗಿದ್ರೂ ಆತನಿಗೆ ಹತ್ರ ಆಗಲು ನಮ್ಮನ್ನು ಕರೆಯುತ್ತಿದ್ದಾನೆ. ಅನೇಕ ಸ್ತ್ರೀಪುರುಷರು ಆತನಿಗೆ ಆಪ್ತ ಸ್ನೇಹಿತರಾಗಿದ್ರು. ಅವರ ಬಗ್ಗೆ ಬೈಬಲಲ್ಲಿದೆ.—ಅಪೊಸ್ತಲರ ಕಾರ್ಯ 13:22; ಯಾಕೋಬ 2:23.

 ತಪ್ಪು ಕಲ್ಪನೆ: ಮನುಷ್ಯರಿಗೆ ದೇವರನ್ನು ತಿಳಿದುಕೊಳ್ಳಲು ಆಗೋದೇ ಇಲ್ಲ.

 ನಿಜ: ದೇವರ ಬಗ್ಗೆ ಕೆಲವು ವಿಷ್ಯಗಳು ಅರ್ಥಮಾಡಿಕೊಳ್ಳೋಕೆ ತುಂಬ ಕಷ್ಟ. ಉದಾಹರಣೆಗೆ, ಆತನು ನಮ್ಮ ಕಣ್ಣಿಗೆ ಕಾಣಲ್ಲ. ಹಾಗಿದ್ದರೂ ಆತನನ್ನು ನಾವು ತಿಳಿದುಕೊಳ್ಳಲು ಆಗುತ್ತೆ. ನಿತ್ಯಜೀವ ಸಿಗಬೇಕಾದ್ರೆ ನಾವು ಆತನನ್ನು ತಿಳ್ಕೊಳ್ಳಲೇಬೇಕು ಅನ್ನುತ್ತದೆ ಬೈಬಲ್‌. (ಯೋಹಾನ 17:3) ನಮ್ಮ ಸೃಷ್ಟಿಕರ್ತನ ಬಗ್ಗೆ, ಆತನ ಗುಣಗಳ ಬಗ್ಗೆ, ಭೂಮಿ ಮತ್ತು ಮನುಷ್ಯರನ್ನು ಸೃಷ್ಟಿಮಾಡಿರೋ ಕಾರಣದ ಬಗ್ಗೆ, ಆತನ ಮಟ್ಟಗಳ ಬಗ್ಗೆ ನಾವು ತಿಳ್ಕೊಳ್ಳಬಹುದು. ಏಕೆಂದ್ರೆ ಅದೆಲ್ಲ ಬೈಬಲಲ್ಲಿ ಇದೆ. (ಯೆಶಾಯ 45:18, 19; 1 ತಿಮೊತಿ 2:4) ಈಗಾಗಲೇ ನಾವು ನೋಡಿದ ಹಾಗೆ ದೇವರ ಹೆಸರು ಏನು ಅಂತನೂ ಬೈಬಲ್‌ ತಿಳಿಸುತ್ತೆ. (ಕೀರ್ತನೆ 83:18) ಹಾಗಾಗಿ ನಾವು ದೇವರನ್ನು ತಿಳ್ಕೊಳ್ಳಲು ಆಗುತ್ತೆ. ಮಾತ್ರವಲ್ಲ ಆತನಿಗೆ ಹತ್ರನೂ ಆಗಬಹುದು.—ಯಾಕೋಬ 4:8.

a ಪ್ರಕೃತಿಯನ್ನು ನೋಡಿ ದೇವರ ವಿವೇಕದ ಬಗ್ಗೆ ತಿಳ್ಕೊಳ್ಳಬಹುದು. “ವಿಕಾಸವೇ? ವಿನ್ಯಾಸವೇ?” ಅನ್ನೋ ಸರಣಿ ಲೇಖನ ನೋಡಿ. ಅದ್ರಲ್ಲಿ ಅನೇಕ ಉದಾಹರಣೆಗಳಿವೆ.

b ಹೆಚ್ಚಿನವರ ಪ್ರಕಾರ ಯೆಹೋವ ಹೆಸರಿನ ಅರ್ಥ “ಆಗುವಂತೆ ಮಾಡುತ್ತಾನೆ.” ಆತನು ತನ್ನ ಹೆಸರನ್ನು ನಮಗೆ ತಿಳಿಸುವ ಮೂಲಕ ಹೀಗೆ ಹೇಳ್ತಿದ್ದಾನೆ: ‘ನಾನು ನನ್ನ ಇಷ್ಟವನ್ನು, ಉದ್ದೇಶವನ್ನು ನಿಜ ಮಾಡ್ತೀನಿ. ನಾನು ಯಾವಾಗ್ಲೂ ಹೇಳಿದ ಹಾಗೆ ಮಾಡ್ತೀನಿ.’

cಯಾಕೆ ಪ್ರಾರ್ಥನೆ ಮಾಡಬೇಕು? ನನ್ನ ಪ್ರಾರ್ಥನೆಗೆ ದೇವರು ಉತ್ತರ ಕೊಡ್ತಾನಾ?” (ಇಂಗ್ಲಿಷ್‌) ಲೇಖನ ನೋಡಿ.

d ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ಅಧ್ಯಯನ ಅಂದರೇನು? ವಿಡಿಯೋ ನೋಡಿ.

eಬದುಕು ಬದಲಾದ ವಿಧ” ಲೇಖನಗಳನ್ನು ನೋಡಿ.