ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮದ್ಯಕ್ಕೆ ದಾಸರಾಗದೆ ಇರೋದು ಹೇಗೆ?

ಮದ್ಯಕ್ಕೆ ದಾಸರಾಗದೆ ಇರೋದು ಹೇಗೆ?

 ಕೆಲವು ಜನ್ರು ತುಂಬ ಟೆನ್ಶನ್‌ ಆದಾಗ, ಬೇಜಾರಾದಾಗ, ಒಂಟಿತನ ಕಾಡಿದಾಗ ಇಲ್ಲಾ ಬೋರಾದಾಗ ಕುಡಿತಾರೆ. ಈಗೀಗ ನೀವು ಜಾಸ್ತಿ ಕುಡಿಯೋಕೆ ಶುರುಮಾಡಿದ್ದೀರಾ? ಹಾಗಿದ್ರೆ ನಿಮ್ಮ ಕುಡಿತ ಕೈಮೀರಿ ಹೊಗದೇ ಇರೋಕೆ ಅಥವಾ ‘ಅದು ಇಲ್ಲ ಅಂದ್ರೆ ನಂಗೆ ಇರೋಕೇ ಆಗಲ್ಲ’ ಅಂತ ಅನಿಸದೆ ಇರೋಕೆ ಏನು ಮಾಡಬೇಕಂತ ನೋಡುವ. ಮಿತಿಮೀರಿ ಕುಡಿದೇ ಇರೋಕೆ ಮುಂದಿನ ವಿಷ್ಯಗಳು ನಿಮಗೆ ಸಹಾಯ ಮಾಡುತ್ತೆ ಅಂತ ನಾವು ನೆನಸ್ತೇವೆ.

 ನಾನು ಎಷ್ಟು ಕುಡಿಬಹುದು?

 ಬೈಬಲ್‌ ಏನು ಹೇಳುತ್ತೆ: ‘ಕುಡುಕರ ಜೊತೆ ಸೇರಬೇಡ.’—ಜ್ಞಾನೋಕ್ತಿ 23:20.

 ನೀವೇ ಯೋಚಿಸಿ: ತಕ್ಕಮಟ್ಟಿಗೆ ಮದ್ಯ ಕುಡಿಯೋದನ್ನ ಬೈಬಲ್‌ ತಪ್ಪು ಅಂತ ಹೇಳಲ್ಲ. (ಪ್ರಸಂಗಿ 9:7) ಹಾಗಿದ್ರೂ ಕುಡಿಯೋದಕ್ಕೂ, ಅತಿಯಾಗಿ ಕುಡಿಯೋದಕ್ಕೂ ಮತ್ತು ಕುಡಿಕರಾಗೋದಕ್ಕೂ ವ್ಯತ್ಯಾಸ ಇದೆ ಅಂತ ಬೈಬಲ್‌ ಹೇಳುತ್ತೆ. (ಲೂಕ 21:34; ಎಫೆಸ 5:18; ತೀತ 2:3) ನಾವು ಕುಡುಕರಾಗಿರದಿದ್ರೂ ಅತಿಯಾಗಿ ಕುಡಿಯೋದು ನಮ್ಮ ಯೋಚನಾ ಸಾಮರ್ಥ್ಯವನ್ನ, ಆರೋಗ್ಯವನ್ನ ಮತ್ತು ಸ್ನೇಹ-ಸಂಬಂಧಗಳನ್ನ ಹಾಳುಮಾಡುತ್ತೆ.—ಜ್ಞಾನೋಕ್ತಿ 23:29, 30.

 ಹೆಚ್ಚಿನ ಅಧಿಕಾರಿಗಳು ಒಬ್ಬ ವ್ಯಕ್ತಿ ಕಮ್ಮಿ ಕುಡಿತಾನಾ ಜಾಸ್ತಿ ಕುಡಿತಾನಾ ಅನ್ನೋದನ್ನ ಅವನು ದಿವಸದಲ್ಲಿ ಮತ್ತು ವಾರದಲ್ಲಿ ಎಷ್ಟು ಕುಡಿತಾನೆ ಅಂತ ನೋಡಿ ಅಳಿತಾರೆ. a ಆದ್ರೆ, ಕುಡಿದಾಗ ಒಬ್ಬೊಬ್ಬರು ಒಂದೊಂದು ತರ ವರ್ತಿಸ್ತಾರೆ. ಕೆಲವೊಂದು ಸಮಯದಲ್ಲಿ ಕುಡಿದೇ ಇದ್ರೆನೇ ಒಳ್ಳೇದು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ:

 “ಕೆಲವೊಂದು ಸಮಯದಲ್ಲಿ ಒಂದು ಅಥವಾ ಎರಡು ಪೆಗ್ಗೂ ಜಾಸ್ತಿನೇ—ಉದಾಹರಣೆಗೆ:

  •   ನೀವು ವಾಹನ ಅಥವಾ ಮಷಿನ್‌ ಚಲಾಯಿಸುವಾಗ.

  •   ನೀವು ಗರ್ಭಿಣಿಯಾಗಿದ್ದಾಗ ಅಥವಾ ಹಾಲುಣಿಸುವಾಗ.

  •   ಕೆಲವೊಂದು ಔಷಧಿ ತೆಗೆದುಕೊಳ್ಳುತ್ತಿರುವಾಗ.

  •   ನಿಮಗೆ ಯಾವುದಾದ್ರೂ ಆರೋಗ್ಯ ಸಮಸ್ಯೆ ಇರೋವಾಗ.

  •   ನಿಮಗೆ ಕುಡಿಯೋದನ್ನ ಕಂಟ್ರೋಲ್‌ ಮಾಡೋಕೆ ಆಗದೆ ಇರೋವಾಗ.”

 ನನ್ನ ಕುಡಿತ ಕೈಮೀರಿ ಹೋಗಿದೆ ಅಂತ ಹೇಗೆ ಕಂಡುಹಿಡಿಯೋದು?

 ಬೈಬಲ್‌ ಏನು ಹೇಳುತ್ತೆ: ‘ನಡತೆಯನ್ನು ಶೋಧಿಸಿ ಪರೀಕ್ಷಿಸಿ.’—ಪ್ರಲಾಪ 3:40.

 ನೀವೇ ಯೋಚಿಸಿ: ಆಗಾಗ ಮದ್ಯ ಕುಡಿಯೋ ರೂಢಿಯನ್ನ ನೀವು ಪರೀಕ್ಷಿಸಿ ಅಗತ್ಯ ಇದ್ರೆ ಕೆಲವು ಬದಲಾವಣೆ ಮಾಡ್ಕೊಂಡ್ರೆ ನೀವು ಅಪಾಯದಿಂದ ದೂರ ಇರಬಹುದು. ಮುಂದಿನ ವಿಷಯಗಳು ಕುಡಿಯುವವರು ಕುಡುಕರಾಗಿ ಬದಲಾಗೋದು ಯಾವಾಗ ಅಂತ ತೋರಿಸುತ್ತೆ.

  •   ನಿಮಗೆ ಕುಡಿದ್ರೆನೇ ಖುಷಿ ಸಿಗುತ್ತೆ ಅನ್ನೋ ಆಲೋಚನೆ ಇದ್ರೆ. ಅರಾಮಾಗಿ ಇರೋಕೆ, ಜನ್ರ ಜೊತೆ ಸೇರೋಕೆ ಅಥವಾ ಮಜಾ ಮಾಡೋಕೆ ಕುಡಿಲೇಬೇಕು ಅಂತ ಅನಿಸುತ್ತೆ. ಕಷ್ಟ ಸಮಸ್ಯೆಗಳನ್ನ ಮರಿಯೋಕೆ ಕುಡಿಲೇಬೇಕು ಅಂತ ಯೋಚಿಸ್ತೀರ.

  •   ಹಿಂದೆಗಿಂತ ಈಗಿಗ ನೀವು ಜಾಸ್ತಿ ಕುಡಿತಿದ್ದೀರ. ಆಗಾಗ ಕುಡಿತಿದ್ದೀರ. ಸ್ಟ್ರಾಂಗ್‌ ಸ್ಟ್ರಾಂಗಾಗಿ ಕುಡಿತಿದ್ದೀರ. ಈ ಮುಂಚೆ ಸ್ವಲ್ಪ ಕುಡಿದ್ರೆ ಕಿಕ್‌ ಏರ್ತಿತ್ತು. ಈಗ ಜಾಸ್ತಿ ಕುಡಿದ್ರೆ ಮಾತ್ರ ಕಿಕ್‌ ಏರುತ್ತೆ.

  •   ನಿಮ್ಮ ಕುಡಿತದಿಂದ ಸಮಸ್ಯೆಗಳ ಅಲೆ ಎದ್ದಿದೆ. ಮನೆಯಲ್ಲೂ ಸಮಸ್ಯೆ ಕೆಲಸದಲ್ಲೂ ಸಮಸ್ಯೆ. ಉದಾಹರಣೆಗೆ, ನಿಮ್ಮ ಕೈಯಲ್ಲಿ ಇರೋದಕ್ಕಿಂತ ಹೆಚ್ಚು ಹಣನ ಕುಡಿಯೋದಕ್ಕೆ ಖರ್ಚು ಮಾಡ್ತಿದ್ದೀರ.

  •   ಕುಡಿದು ಮನಸ್ಸಿಗೆ ಬಂದಂಗೆ ನಿರ್ಣಯ ಮಾಡ್ತಿದ್ದೀರ. ಉದಾಹರಣೆಗೆ, ಡ್ರೈವಿಂಗ್‌ ಮಾಡೋಕೆ, ಈಜಾಡೋಕೆ, ಮಿಶೀನ್‌ ಆಪರೇಟ್‌ ಮಾಡೋಕೆ ಹೋಗ್ತೀರ.

  •   ನೀವು ಕುಡಿಯೋದು ನೋಡಿ ಬೇರೆಯರಿಗೆ ಚಿಂತೆ ಆಗ್ತಿದೆ. ಅವರು ಅದನ್ನ ಹೇಳಿದಾಗ ನೀವು ನೆಪಕೊಡ್ತೀರ ಅಥವಾ ಬೇಜಾರ್‌ ಮಾಡ್ಕೊಳ್ತೀರ. ಕದ್ದುಮುಚ್ಚಿ ಕುಡಿಯೋಕೆ ಶುರುಮಾಡಿದ್ದೀರ ಅಥವಾ ನೀವು ಎಷ್ಟು ಕುಡಿದ್ರಿ ಅಂತ ಕೇಳಿದ್ರೆ ಸುಳ್ಳು ಹೇಳ್ತೀರ.

  •   ನಿಮಗೆ ನಿಲ್ಲಿಸೋಕೆ ಆಗ್ತಿಲ್ಲ. ನೀವು ಕಮ್ಮಿ ಕುಡಿಯೋಕೆ ಅಥವಾ ಕುಡಿಯೋದನ್ನ ನಿಲ್ಲಿಸೋಕೆ ಪ್ರಯತ್ನಿಸಿದ್ರಿ ಆದ್ರೆ ನಿಮ್ಮಿಂದ ಆಗ್ತಿಲ್ಲ.

 ಮಿತಿಮೀರಿ ಕುಡಿಯೋದಕ್ಕೆ ಬ್ರೇಕ್‌ ಹಾಕುವ 5 ಕಿವಿಮಾತುಗಳು

 1. ಒಳ್ಳೇ ಪ್ಲ್ಯಾನ್‌ ಮಾಡಿ.

 ಬೈಬಲ್‌ ಏನು ಹೇಳುತ್ತೆ: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ.”—ಜ್ಞಾನೋಕ್ತಿ 21:5.

 ಹೀಗೆ ಮಾಡಿ: ವಾರದಲ್ಲಿ ಯಾವೆಲ್ಲ ದಿವಸ ಕುಡಿಬೇಕು ಅಂತ ಆರಿಸಿಕೊಳ್ಳಿ. ಅದೇ ಸಮಯದಲ್ಲಿ ಎಷ್ಟು ಲಿಮಿಟಲ್ಲಿ ಕುಡಿಬೇಕು ಅಂತಾನೂ ಯೋಚಿಸಿ. ಕಮ್ಮಿಪಕ್ಷ ವಾರದಲ್ಲಿ ಎರಡು ದಿನ ಆದ್ರೂ ಕುಡಿದೆ ಇರೋಕೆ ನಿರ್ಣಯಿಸಿ.

 “ಕುಡುಕರಾಗದೇ ಇರೋಕೆ ಮಧ್ಯಮಧ್ಯ ಕೆಲವು ದಿವಸಗಳ ಬ್ರೇಕ್‌ ತಗೊಳ್ಳೋದು ಒಳ್ಳೇ ಪ್ಲ್ಯಾನ್‌ ಆಗಿದೆ” ಅಂತ ಬ್ರಿಟನ್ನಿನ ಒಂದು ಆಲ್ಕೊಹಾಲ್‌ ಎಜುಕೇಶನ್‌ ಚಾರಿಟಿ ಹೇಳುತ್ತೆ.

 2. ಆ ಪ್ಲ್ಯಾನಿನ ಪ್ರಕಾರ ಮಾಡಿ.

 ಬೈಬಲ್‌ ಏನು ಹೇಳುತ್ತೆ: ‘ಆರಂಭಿಸಿದನ್ನ ಮಾಡಿ ಮುಗಿಸಿರಿ.’—2 ಕೊರಿಂಥ 8:11.

 ಹೀಗೆ ಮಾಡಿ: ಮದ್ಯವನ್ನ ಅಳೆಯೋ ಸರಿಯಾದ ಪ್ರಮಾಣವನ್ನ ಚೆನ್ನಾಗಿ ತಿಳ್ಕೊಳ್ಳಿ. ಆಗ ನೀವು ಎಷ್ಟು ಕುಡಿತೀರ ಅಂತ ಅಳತೆ ಮಾಡೋಕೆ ಆಗುತ್ತೆ. ಕೆಲವೊಂದು ಆಲ್ಕೊಹಾಲ್‌ ಇಲ್ಲದ ಆರೋಗ್ಯಕರ ಪಾನೀಯನೂ ಇದೆ. ಅಂಥದ್ರಲ್ಲಿ ನಿಮಗೆ ಇಷ್ಟ ಆಗೋ ಪಾನೀಯ ಯಾವುದು ಅಂತ ತಿಳ್ಕೊಂಡು ಅದನ್ನ ಕೈಗೆ ಸಿಗೋ ತರ ಇಟ್ಕೊಳ್ಳಿ.

 “ನೀವು ಮಾಡೋ ಚಿಕ್ಕಪುಟ್ಟ ಬದಲಾವಣೆಗಳು ಮದ್ಯ ಸೇವನೆಯಿಂದ ಆಗೋ ಬೆಟ್ಟದಷ್ಟು ಸಮಸ್ಯೆಗಳನ್ನ ಕಮ್ಮಿ ಮಾಡಬಹುದು” ಅಂತ ಅಮೆರಿಕದ ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆನ್‌ ಆಲ್ಕೊಹಾಲ್‌ ಅಬ್ಯೂಸ್‌ ಆಂಡ್‌ ಆಲ್ಕೊಹಾಲಿಸಂ ಹೇಳುತ್ತೆ.

 3. ನಿಮ್ಮ ನಿರ್ಣಯಗಳನ್ನ ಬದಲಾಯಿಸಬೇಡಿ.

 ಬೈಬಲ್‌ ಏನು ಹೇಳುತ್ತೆ: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.”—ಯಾಕೋಬ 5:12.

 ಹೀಗೆ ಮಾಡಿ: ನಿಮ್ಮ ಪ್ಲ್ಯಾನಿಗೆ ವಿರುದ್ಧವಾಗಿ ಯಾರಾದ್ರೂ ನಿಮಗೆ ‘ಮದ್ಯ ತಗೊಳ್ಳಿ’ ಅಂತ ಹೇಳಿದ್ರೆ ಅವರಿಗೆ ಗೌರವದಿಂದ ಅದೇ ಸಮಯದಲ್ಲಿ ದೃಢವಾಗಿ “ಬೇಡ” ಅಂತ ಹೇಳೋಕೆ ತಯಾರಾಗಿರಿ.

 “ನೀವು ಒತ್ತಡಕ್ಕೆ ಮಣಿದೇ ಇರೋಕೆ ಆದಷ್ಟು ಬೇಗ ಬೇಡ ಅಂತ ಹೇಳೋಕೆ ಕಲೀಬೇಕು” ಅಂತ ಅಮೆರಿಕದ ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆನ್‌ ಆಲ್ಕೊಹಾಲ್‌ ಅಬ್ಯೂಸ್‌ ಆಂಡ್‌ ಆಲ್ಕೊಹಾಲಿಸಂ ಹೇಳುತ್ತೆ.

 4. ನಿರ್ಣಯಗಳಿಂದ ಆಗೋ ಪ್ರಯೋಜನಗಳ ಬಗ್ಗೆ ಯೋಚಿಸಿ.

 ಬೈಬಲ್‌ ಏನು ಹೇಳುತ್ತೆ: “ಆದಿಗಿಂತ ಅಂತ್ಯವು ಲೇಸು.”—ಪ್ರಸಂಗಿ 7:8.

 ಹೀಗೆ ಮಾಡಿ: ಯಾವೆಲ್ಲ ಕಾರಣಗಳಿಗಾಗಿ ಕುಡಿಯೋದನ್ನ ನೀವು ನಿಯಂತ್ರಣದಲ್ಲಿ ಇಡಬೇಕು ಅನ್ನೋದನ್ನ ಪಟ್ಟಿಮಾಡಿ. ಅದರಲ್ಲಿ ನಿದ್ರೆ, ಆರೋಗ್ಯ, ಹಣ ಮತ್ತು ಸ್ನೇಹ-ಸಂಬಂಧಗಳನ್ನ ಪ್ರಗತಿ ಮಾಡೋ ವಿಷ್ಯಗಳನ್ನ ಸೇರಿಸಿ. ಒಂದುವೇಳೆ ನೀವು ಮಾಡಿರೋ ನಿರ್ಣಯಗಳ ಬಗ್ಗೆ ಬೇರೆಯವರ ಹತ್ರ ಮಾತಾಡೋದಾದ್ರೆ ಆಗೋ ಪ್ರಯೋಜನಗಳ ಬಗ್ಗೆ ಮಾತಾಡಿ, ಅದನ್ನ ಬಿಟ್ಟು ಆಗೋ ತೊಂದರೆಗಳ ಬಗ್ಗೆ ಮಾತಾಡೋಕೆ ಹೋಗಬೇಡಿ.

 5. ಸಹಾಯಕ್ಕಾಗಿ ದೇವರನ್ನ ಕೇಳಿ.

 ಬೈಬಲ್‌ ಏನು ಹೇಳುತ್ತೆ: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.

 ಹೀಗೆ ಮಾಡಿ: ನಿಮಗೆ ನಿಮ್ಮ ಕುಡಿಯೋ ಚಟದ ಬಗ್ಗೆ ಚಿಂತೆ ಆಗ್ತಿದ್ರೆ ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿ. ಬಲ ಮತ್ತು ಸ್ವನಿಯಂತ್ರಣ ಕೊಡುವಂತೆ ಬೇಡಿ. b ದೇವರ ವಾಕ್ಯವಾದ ಬೈಬಲಿನಲ್ಲಿ ಇರೋ ತಿಳುವಳಿಕೆಯ ಮಾತುಗಳನ್ನ ಹುಡುಕೋಕೆ ಸಮಯ ಮಾಡ್ಕೊಳ್ಳಿ. ದೇವರೇ ನಿಮ್ಮ ಜೊತೆ ಇದ್ರೆ ನೀವು ನಿಮ್ಮ ಕುಡಿತವನ್ನ ನಿಯಂತ್ರಣದಲ್ಲಿ ಇಡೋಕೆ ಸಾಧ್ಯ.

a ಉದಾಹರಣೆಗೆ, ಅಮೆರಿಕಾದ ಒಂದು ಆರೋಗ್ಯ ಇಲಾಖೆ ಪ್ರಕಾರ ಜಾಸ್ತಿ ಕುಡಿಯೋದು ಅಂದ್ರೆ, “ಸ್ತ್ರೀಯರು ದಿನಕ್ಕೆ 4 ಅಥವಾ ವಾರಕ್ಕೆ 8ಕ್ಕಿಂತ ಜಾಸ್ತಿ ಪೆಗ್‌ ಕುಡಿಯೋದು, ಪುರುಷರು ದಿನಕ್ಕೆ 5 ಅಥವಾ ವಾರಕ್ಕೆ 15ಕ್ಕಿಂತ ಜಾಸ್ತಿ ಪೆಗ್‌ ಕುಡಿಯೋದಾಗಿದೆ.” ಈ ಪೆಗ್‌ ಅಳತೆ ದೇಶದಿಂದ ದೇಶಕ್ಕೆ ಬೇರೆಬೇರೆ ಇರುತ್ತೆ. ಹಾಗಾಗಿ ನಿಮ್ಮ ಮದ್ಯಪಾನದ ಮಿತಿಯನ್ನ ತಿಳ್ಕೊಳ್ಳೋಕೆ ನಿಮ್ಮ ಆರೋಗ್ಯ ನೋಡ್ಕೊಳ್ಳೋ ವೈದ್ಯನನ್ನ ಭೇಟಿ ಮಾಡಿ.

b ಒಂದುವೇಳೆ ಕುಡಿಯೋದನ್ನ ನಿಯಂತ್ರಿಸೋಕೆ ನಿಮ್ಮಿಂದ ಆಗ್ತಿಲ್ಲ ಅಂತಿದ್ರೆ ನಿಮಗೆ ವೈದ್ಯರಂಥ ಸೂಕ್ತ ವ್ಯಕ್ತಿಗಳ ಸಹಾಯನೂ ಬೇಕಾಗಬಹುದು.