ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 25

ಆರಾಧೆನೆಗಾಗಿ ಒಂದು ಗುಡಾರ

ಆರಾಧೆನೆಗಾಗಿ ಒಂದು ಗುಡಾರ

ಮೋಶೆ ಸೀನಾಯಿ ಬೆಟ್ಟದಲ್ಲಿದ್ದಾಗ ಒಂದು ವಿಶೇಷ ಡೇರೆಯನ್ನು ಕಟ್ಟಲು ಯೆಹೋವನು ಹೇಳಿದನು. ಇದನ್ನು ಗುಡಾರ ಎನ್ನುತ್ತಾರೆ. ಈ ಗುಡಾರದಲ್ಲಿ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸಬಹುದಿತ್ತು. ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಡೇರೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು.

ಯೆಹೋವನು ಮೋಶೆಗೆ ‘ಗುಡಾರವನ್ನು ಕಟ್ಟಲು ತಮ್ಮಿಂದಾದ ಸಹಾಯವನ್ನು ಮಾಡಲು ಜನರಿಗೆ ಹೇಳು’ ಎಂದನು. ಇಸ್ರಾಯೇಲ್ಯರು ಚಿನ್ನ, ಬೆಳ್ಳಿ, ತಾಮ್ರ, ರತ್ನ ಮತ್ತು ಒಡವೆಗಳನ್ನು ಕೊಟ್ಟರು. ಅದರ ಜೊತೆಗೆ ಉಣ್ಣೆ, ನಾರಿನ ಬಟ್ಟೆ, ಪ್ರಾಣಿ ಚರ್ಮ ಮತ್ತು ಇತರ ವಸ್ತುಗಳನ್ನೂ ಕೊಟ್ಟರು. ಜನರು ಉದಾರವಾಗಿ ವಸ್ತುಗಳನ್ನು ಕೊಟ್ಟರು. ಎಷ್ಟರ ಮಟ್ಟಿಗೆಂದರೆ ಮೋಶೆ ಅವರಿಗೆ ‘ನಮ್ಮ ಹತ್ತಿರ ಸಾಕಷ್ಟು ವಸ್ತುಗಳಿವೆ! ಇನ್ನೇನನ್ನು ತರಬೇಡಿ’ ಎನ್ನಬೇಕಾಯಿತು.

ಅನೇಕ ಕುಶಲ ಸ್ತ್ರೀಪುರುಷರು ಗುಡಾರವನ್ನು ಕಟ್ಟಲು ಸಹಾಯಮಾಡಿದರು. ಯೆಹೋವನು ಅವರಿಗೆ ಬೇಕಾದ ವಿವೇಕವನ್ನು ಕೊಟ್ಟನು. ಕೆಲವರು ನೂಲು ಸುತ್ತಿದರು, ದಾರ ಹೆಣೆದರು, ಕಸೂತಿ ಹಾಕಿದರು. ಇತರರು ಹರಳುಗಳನ್ನು ಕಟ್ಟಿಕೊಟ್ಟರು, ಚಿನ್ನದ ಕೆಲಸ ಮಾಡಿದರು ಮತ್ತು ಮರ ಕೆತ್ತನೆ ಮಾಡಿದರು.

ಯೆಹೋವನು ಹೇಳಿದಂತೆಯೇ ಜನರು ಗುಡಾರವನ್ನು ಕಟ್ಟಿದರು. ಗುಡಾರವನ್ನು ಎರಡು ಭಾಗಗಳಾಗಿ ವಿಭಾಗಿಸಲು ಸುಂದರ ಪರದೆಯನ್ನು ಮಾಡಿದರು. ಒಂದು ಭಾಗ ಪವಿತ್ರ ಸ್ಥಳ ಮತ್ತು ಇನ್ನೊಂದು ಅತಿ ಪವಿತ್ರ ಸ್ಥಳ. ಅತಿ ಪವಿತ್ರ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷ ಇತ್ತು. ಅದನ್ನು ಜಾಲೀ ಮರ ಮತ್ತು ಚಿನ್ನದಿಂದ ಮಾಡಿದ್ದರು. ಪವಿತ್ರ ಸ್ಥಳದಲ್ಲಿ ಚಿನ್ನದ ದೀಪಸ್ತಂಭ, ಮೇಜು ಮತ್ತು ಧೂಪ ಸುಡಲು ವೇದಿ ಇತ್ತು. ಗುಡಾರದ ಅಂಗಳದಲ್ಲಿ ತಾಮ್ರದ ಬೋಗುಣಿ ಮತ್ತು ದೊಡ್ಡ ಯಜ್ಞವೇದಿ ಇತ್ತು. ಒಡಂಬಡಿಕೆಯ ಮಂಜೂಷ ‘ನಾವು ನಿನಗೆ ವಿಧೇಯರಾಗಿರುತ್ತೇವೆ’ ಎಂದು ಯೆಹೋವನಿಗೆ ಕೊಟ್ಟ ಮಾತನ್ನು ಇಸ್ರಾಯೇಲ್ಯರಿಗೆ ನೆನಪಿಸುತ್ತಿತ್ತು. ಒಡಂಬಡಿಕೆ ಅಂದರೇನು ಎಂದು ನಿನಗೆ ಗೊತ್ತಾ? ಅದು ಒಂದು ವಿಶೇಷ ಒಪ್ಪಂದ ಆಗಿದೆ.

ಗುಡಾರದಲ್ಲಿ ಯಾಜಕರಾಗಿ ಸೇವೆ ಮಾಡಲು ಯೆಹೋವನು ಆರೋನ ಮತ್ತು ಅವನ ಪುತ್ರರನ್ನು ಆರಿಸಿದನು. ಅವರು ಗುಡಾರವನ್ನು ನೋಡಿಕೊಳ್ಳಬೇಕಿತ್ತು ಮತ್ತು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಬೇಕಿತ್ತು. ಮಹಾ ಯಾಜಕನಾದ ಆರೋನ ಮಾತ್ರ ಅತಿ ಪವಿತ್ರ ಸ್ಥಳಕ್ಕೆ ಹೋಗಬಹುದಿತ್ತು. ವರ್ಷಕ್ಕೆ ಒಂದು ಸಲ ಅವನು ಅತಿ ಪವಿತ್ರ ಸ್ಥಳಕ್ಕೆ ಹೋಗಿ ಅವನ ಪಾಪಗಳಿಗಾಗಿ, ಅವನ ಕುಟುಂಬದವರ ಪಾಪಗಳಿಗಾಗಿ ಮತ್ತು ಇಡೀ ಇಸ್ರಾಯೇಲ್ಯ ಜನಾಂಗದ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಬೇಕಿತ್ತು.

ಈಜಿಪ್ಟನ್ನು ಬಿಟ್ಟುಬಂದ ಒಂದು ವರ್ಷದಲ್ಲಿ ಇಸ್ರಾಯೇಲ್ಯರು ಗುಡಾರವನ್ನು ಕಟ್ಟಿ ಮುಗಿಸಿದರು. ಈಗ ಅವರಿಗೆ ಯೆಹೋವನನ್ನು ಆರಾಧಿಸಲು ಒಂದು ಸ್ಥಳ ಇತ್ತು.

ಈ ಗುಡಾರವನ್ನು ಯೆಹೋವನು ಮೆಚ್ಚಿದನು. ಆತನು ಅದರ ಮೇಲೆ ಮೋಡವು ಕಾಣು ವಂತೆ ಮಾಡಿದನು. ಮೋಡ ಗುಡಾರದ ಮೇಲೆ ನೆಲೆಯಾಗಿರುವಾಗ ಇಸ್ರಾಯೇಲ್ಯರು ತಾವಿದ್ದ ಸ್ಥಳದಲ್ಲೇ ಇರುತ್ತಿದ್ದರು. ಆದರೆ ಮೋಡವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಅಲ್ಲಿಂದ ಹೊರಡುವ ಸಮಯ ಬಂತು ಎಂದು ತಿಳಿದುಕೊಳ್ಳುತ್ತಿದ್ದರು. ಆಮೇಲೆ ಅವರು ಗುಡಾರವನ್ನು ಬಿಚ್ಚಿ ಮೋಡವನ್ನು ಹಿಂಬಾಲಿಸುತ್ತಿದ್ದರು.

“ಆಗ ಸಿಂಹಾಸನದಿಂದ ಬಂದ ಗಟ್ಟಿಯಾದ ಧ್ವನಿಯು, ‘ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು.’”—ಪ್ರಕಟನೆ 21:3