ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಜೀವನ ಕಥೆ

ಬಲಹೀನತೆಯಲ್ಲೂ ಬಲ ಕಂಡುಕೊಂಡೆ

ಬಲಹೀನತೆಯಲ್ಲೂ ಬಲ ಕಂಡುಕೊಂಡೆ

ಗಾಲಿಕುರ್ಚಿಯಲ್ಲಿ ಕೂತಿರುವ ನನ್ನನ್ನು ನೋಡಿದರೆ ನನ್ನಲ್ಲಿ ಬಲವಿದೆ ಅಂತ ಖಂಡಿತ ಯಾರೂ ಹೇಳುವುದಿಲ್ಲ. ಏಕೆಂದರೆ ನನ್ನ ದೇಹ ತೂಕ ಬರೀ 29 ಕೆ.ಜಿ. ದೇಹ ಶಕ್ತಿಯನ್ನೆಲ್ಲಾ ಕಳೆದುಕೊಳ್ಳುತ್ತಿದ್ದರೂ ನನ್ನ ಮನೋಬಲ ನಾನು ಕುಗ್ಗಿಹೋಗದಂತೆ ಕಾಪಾಡಿದೆ. ಬಲ ಹಾಗೂ ಬಲಹೀನತೆ ಒಂದೇ ನಾಣ್ಯದ ಎರಡು ಮುಖಗಳಂತೆ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಹೇಗೆಂದು ಹೇಳುತ್ತೇನೆ.

ನಾಲ್ಕು ವರ್ಷದವಳಾಗಿದ್ದಾಗ

ದಕ್ಷಿಣ ಫ್ರಾನ್ಸ್‌ನ ಒಂದು ಹಳ್ಳಿಯಲ್ಲಿ ಅಪ್ಪ ಅಮ್ಮನೊಟ್ಟಿಗೆ ಕಳೆದ ಬಾಲ್ಯದ ನೆನಪುಗಳು ನನ್ನ ಮುಖದ ಮೇಲೆ ಮಂದಹಾಸ ಮೂಡಿಸುತ್ತವೆ. ಅಪ್ಪ ನನಗೊಂದು ಜೋಕಾಲಿ ಕಟ್ಟಿಕೊಟ್ಟಿದ್ದರು. ತೋಟದ ತುಂಬ ಓಡಿ ಆಡುವುದು ನನಗೆ ತುಂಬ ಇಷ್ಟ. 1966ರಲ್ಲಿ ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಭೇಟಿ ನೀಡಿದರು. ಅವರು ಬಂದಾಗಲೆಲ್ಲ ಅಪ್ಪ ಅವರ ಜೊತೆ ತುಂಬ ಹೊತ್ತು ಮಾತಾಡುತ್ತಿದ್ದರು. ಕೇವಲ 7 ತಿಂಗಳಲ್ಲಿ ಅಪ್ಪ ಯೆಹೋವನ ಸಾಕ್ಷಿಯಾಗುವ ನಿರ್ಧಾರಕ್ಕೆ ಬಂದರು. ಅಮ್ಮ ಸಹ ಅಪ್ಪನನ್ನು ಅನುಸರಿಸಿದರು. ಇಬ್ಬರೂ ನನ್ನನ್ನು ತುಂಬ ಪ್ರೀತಿ ಮಮತೆಯಿಂದ ಬೆಳೆಸಿದರು.

ಅಪ್ಪ-ಅಮ್ಮ ಸ್ಪೇನ್‌ ದೇಶದವರು. ನಾವು ಸ್ಪೇನ್‌ಗೆ ಹಿಂತಿರುಗಿದ ಸ್ವಲ್ಪದರಲ್ಲೇ ನನ್ನ ಸಮಸ್ಯೆಗಳು ಶುರುವಾದವು. ಕೈಗಳಲ್ಲಿ ಮತ್ತು ಕಣಕಾಲುಗಳಲ್ಲಿ ಚುಚ್ಚಿದ ಹಾಗೆ ನೋವಾಗುತ್ತಿತ್ತು. ಎರಡು ವರ್ಷಗಳ ವರೆಗೆ ತುಂಬ ವೈದ್ಯರನ್ನು ನೋಡಿದೆವು. ಕೊನೆಗೆ ಒಬ್ಬ ಒಳ್ಳೇ ಸಂಧಿವಾತಶಾಸ್ತ್ರಜ್ಞ ಸಿಕ್ಕಿದರು. ನನ್ನನ್ನು ಪರೀಕ್ಷಿಸಿ “ಇನ್ನೇನು ಮಾಡಲಿಕ್ಕಾಗಲ್ಲ. ವಿಷಯ ಕೈಮೀರಿ ಹೋಗಿದೆ” ಎಂದರು. ಅಮ್ಮ ಅಳಲಾರಂಭಿಸಿದರು. 10 ವರ್ಷದ ನನಗೆ ಏನೂ ಅರ್ಥವಾಗಲಿಲ್ಲ. “ಆಟೊ ಇಮ್ಯೂನ್‌ ಕ್ರಾನಿಕ್‌ ಇಲ್‌ನೆಸ್‌ ಮತ್ತು ಜುವೆನೈಲ್‌ ಪೊಲಿಆರ್‌ತ್ರೈಟಿಸ್‌” * ಅನ್ನೊ ಪದಗಳು ಮಾತ್ರ ಕೇಳಿಸಿದವು. ಆದರೆ ಮೊಬ್ಬಾದ ಕತ್ತಲು ಕೋಣೆಯಲ್ಲಿ ವೈದ್ಯರು ಹೇಳಿದ್ದು ಕೆಟ್ಟ ಸುದ್ದಿ ಅಂತ ನನಗೆ ಗೊತ್ತಾಯಿತು.

ವೈದ್ಯರ ಸಲಹೆಯಂತೆ ಹೆತ್ತವರು ನನ್ನನ್ನು ಚಿಕಿತ್ಸೆಗಾಗಿ ಮಕ್ಕಳ ಆರೋಗ್ಯಧಾಮಕ್ಕೆ ಸೇರಿಸಿದರು. ಆ ಕಟ್ಟಡಕ್ಕೆ ಸ್ವಲ್ಪವೂ ಕಳೆಯಿರಲಿಲ್ಲ. ಒಳಗಂತೂ ವಿಪರೀತ ಕಟ್ಟುನಿಟ್ಟು. ಅಲ್ಲಿದ್ದ ಕ್ರೈಸ್ತ ಸಂನ್ಯಾಸಿನಿಯರು ನನ್ನ ಕೂದಲು ಕತ್ತರಿಸಿದರು. ಮಂಕು ಬಣ್ಣದ ಬಟ್ಟೆ ತೊಡಿಸಿದರು. ‘ನಾನ್‌ ಹೇಗಪ್ಪ ಇಲ್ಲಿರಲಿ?’ ಅಂತ ಯೋಚಿಸುತ್ತಾ ಕಣ್ಣೀರು ಹಾಕಿದೆ.

ಹೆಜ್ಜೆಹೆಜ್ಜೆಯಲ್ಲೂ ಯೆಹೋವನ ಆರೈಕೆ

ನನ್ನ ಹೆತ್ತವರು ನನಗೆ ಯೆಹೋವನನ್ನು ಆರಾಧಿಸಲು ಕಲಿಸಿದ್ದರಿಂದ ಆ ಆರೋಗ್ಯಧಾಮದಲ್ಲಿ ಕ್ಯಾಥೊಲಿಕ್‌ ರೀತಿರಿವಾಜುಗಳಲ್ಲಿ ನಾನು ಭಾಗಿಯಾಗುತ್ತಿರಲಿಲ್ಲ. ಯಾಕೆ ಭಾಗಿಯಾಗುತ್ತಿರಲಿಲ್ಲ ಎಂಬುದು ಸಂನ್ಯಾಸಿನಿಯರಿಗೆ ಅರ್ಥ ಆಗುತ್ತಿರಲಿಲ್ಲ. ನನ್ನ ಕೈಬಿಡದಂತೆ ಯೆಹೋವನಲ್ಲಿ ಬೇಡಿಕೊಂಡೆ. ಒಬ್ಬ ತಂದೆ ತನ್ನ ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ಹಾಗೆ ದೇವರ ಸಂರಕ್ಷಣಾ ಹಸ್ತ ನನ್ನ ಮೇಲಿದೆ ಎಂದು ನನಗೆ ಸ್ವಲ್ಪದರಲ್ಲೇ ತಿಳಿದುಬಂತು.

ಅಪ್ಪ-ಅಮ್ಮನಿಗೆ ಶನಿವಾರದಂದು ಬಂದು ನನ್ನನ್ನು ನೋಡಿಕೊಂಡು ಹೋಗುವ ಅನುಮತಿ ಸಿಕ್ಕಿತು. ನಂಬಿಕೆಯನ್ನು ಬಲವಾಗಿರಿಸಲು ನನಗೆ ಬೈಬಲ್‌ ಸಾಹಿತ್ಯವನ್ನು ತಂದುಕೊಡುತ್ತಿದ್ದರು. ಸಾಮಾನ್ಯವಾಗಿ ಅಲ್ಲಿನ ಮಕ್ಕಳು ಯಾವುದೇ ಪುಸ್ತಕ ಇಟ್ಟುಕೊಳ್ಳುವಂತಿರಲಿಲ್ಲ. ನನಗೆ ಮಾತ್ರ ಬೈಬಲ್‌ ಮತ್ತು ನಮ್ಮ ಸಾಹಿತ್ಯವನ್ನು ಇಟ್ಟುಕೊಳ್ಳಲು ಸಂನ್ಯಾಸಿನಿಯರು  ಅನುಮತಿಸಿದರು. ದಿನಾಲೂ ಬೈಬಲ್‌ ಓದುತ್ತಿದ್ದೆ. ಭೂಮಿ ಸುಂದರ ತೋಟವಾದಾಗ ಯಾರೂ ಸಾಯುವುದಿಲ್ಲ, ಅಸ್ವಸ್ಥರಾಗುವುದಿಲ್ಲ ಎಂಬದರ ಬಗ್ಗೆ ಬೇರೆ ಹುಡುಗಿಯರೊಟ್ಟಿಗೆ ಮಾತಾಡುತ್ತಿದ್ದೆ. (ಪ್ರಕಟನೆ 21:3, 4) ಕೆಲವು ಸಲ ಬೇಜಾರಾಗುತ್ತಿತ್ತು. ಒಂಟಿಭಾವ ಕಾಡುತ್ತಿತ್ತು. ಆದರೂ ಸಮಯ ಸಂದಂತೆ ಯೆಹೋವನ ಮೇಲಿನ ನಂಬಿಕೆ, ಭರವಸೆ ಬಲವಾಗುತ್ತಾ ಹೋಯಿತು.

ಆರು ತಿಂಗಳು ನಾನು ಆರೋಗ್ಯಧಾಮದಲ್ಲಿ ಕಳೆದ ನಂತರ ವೈದ್ಯರು ನನ್ನನ್ನು ಮನೆಗೆ ಕಳುಹಿಸಿದರು. ಆರೋಗ್ಯದಲ್ಲಿ ಯಾವುದೇ ಸುಧಾರಣೆ ಇಲ್ಲದಿದ್ದರೂ ಅಪ್ಪ-ಅಮ್ಮನ ಬಳಿ ಬಂದದ್ದಕ್ಕೆ ತುಂಬ ಖುಷಿಯಾಯಿತು. ನನ್ನ ಕೀಲುಗಳು ಇನ್ನಷ್ಟು ವಿರೂಪಗೊಂಡವು. ನೋವೂ ಜಾಸ್ತಿಯಾಯಿತು. ಹದಿವಯಸ್ಸನ್ನು ತಲುಪುವಷ್ಟರಲ್ಲಿ ತುಂಬ ಬಲಹೀನಳಾಗಿದ್ದೆ. ಹಾಗಿದ್ದರೂ 14ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ತೆಗೆದುಕೊಂಡೆ. ಯಾಕೆಂದರೆ ಸ್ವರ್ಗದಲ್ಲಿರುವ ನನ್ನ ತಂದೆಯಾದ ಯೆಹೋವನ ಸೇವೆಯನ್ನು ನನ್ನಿಂದಾದಷ್ಟು ಮಟ್ಟಿಗೆ ಮಾಡಬೇಕೆಂಬ ಛಲ ನನಗಿತ್ತು. ಆದರೆ ಕೆಲವೊಮ್ಮೆ ಆತನ ಬಗ್ಗೆ ನನಗೆ ನಿರಾಶೆ ಆಗುತ್ತಿತ್ತು. ಆಗೆಲ್ಲ “ನನಗೇ ಯಾಕೆ ಹೀಗೆ? ದಯವಿಟ್ಟು ನನ್ನನ್ನು ವಾಸಿಮಾಡು. ನಾನೆಷ್ಟು ಕಷ್ಟಪಡುತ್ತಿದ್ದೇನೆ ಅಂತ ನಿನಗೆ ಕಾಣಿಸುವುದಿಲ್ಲವಾ?” ಎಂದು ಪ್ರಾರ್ಥಿಸಿದ್ದೂ ಇದೆ.

ಹದಿವಯಸ್ಸಿನಲ್ಲಿ ತುಂಬಾನೇ ಕಷ್ಟಪಟ್ಟೆ. ಇನ್ನು ಯಾವತ್ತೂ ಆರೋಗ್ಯವಂತಳಾಗುವುದಿಲ್ಲ ಅನ್ನುವ ಸತ್ಯವನ್ನು ಒಪ್ಪಬೇಕಾಯಿತು. ನನ್ನ ಮಿತ್ರರ ಜೊತೆ ನನ್ನನ್ನೇ ಹೋಲಿಸಿಕೊಳ್ಳುತ್ತಿದ್ದೆ. ಅವರಿಗೆಷ್ಟು ಒಳ್ಳೇ ಆರೋಗ್ಯ ಇತ್ತು, ಜೀವನೋತ್ಸಾಹದಿಂದ ತುಂಬಿ ತುಳುಕುತ್ತಿದ್ದರು. ನನಗಾಗ ಕೀಳರಿಮೆಯಾಗುತ್ತಿತ್ತು. ಅಂತರ್ಮುಖಿಯಾದೆ. ಹಾಗಿದ್ದರೂ ನನ್ನ ಮಿತ್ರರು ಮತ್ತು ಹೆತ್ತವರು ತುಂಬ ಸಹಾಯಮಾಡಿದರು. ನನಗಿಂತ 20 ವರ್ಷ ದೊಡ್ಡವರಾದ ಅಲಿಸಿಯಾ ನನಗೆ ತುಂಬ ಪ್ರಿಯವಾದ ನಿಜ ಸ್ನೇಹಿತೆ. ನನ್ನ ಕಾಯಿಲೆಯಿಂದಾಚೆಗೆ ನೋಡಲು ಸಹಾಯಮಾಡಿದವರು. ಅಂದರೆ ನನ್ನ ಸಮಸ್ಯೆಗಳ ಬಗ್ಗೆಯೇ ಮೂರೂ ಹೊತ್ತು ಚಿಂತಿಸುತ್ತಾ ಇರುವ ಬದಲು ಬೇರೆಯವರಲ್ಲಿ ಆಸಕ್ತಿ ತೋರಿಸಲು ಕಲಿಸಿದರು.

ಜೀವನವನ್ನು ಅರ್ಥಭರಿತವಾಗಿಸುವ ಹಾದಿಯಲ್ಲಿ . . .

18ನೇ ವಯಸ್ಸಿನಲ್ಲಿ ನನ್ನ ಆರೋಗ್ಯ ಒಮ್ಮೆಲೆ ಹದಗೆಟ್ಟಿತು. ಕೂಟಗಳಿಗೆ ಹೋಗಿಬರುವಷ್ಟರಲ್ಲಿ ಪೂರ್ತಿ ಸುಸ್ತಾಗಿಬಿಡುತ್ತಿದ್ದೆ. ಹಾಗಿದ್ದರೂ ನಾನು ಮನೆಯಲ್ಲಿರುತ್ತಿದ್ದ ಸಮಯದಲ್ಲಿ ಬೈಬಲನ್ನು ಜಾಗರೂಕತೆಯಿಂದ ಅಧ್ಯಯನ ಮಾಡಿದೆ. ಯೋಬ ಮತ್ತು ಕೀರ್ತನೆ ಪುಸ್ತಕಗಳಿಂದ ಒಂದು ಪಾಠ ಕಲಿತೆ. ಯೆಹೋವನು ಸದ್ಯಕ್ಕೆ ನಮ್ಮನ್ನು ಶಾರೀರಿಕ ಅಪಾಯದಿಂದ ಕಾಪಾಡುವುದಕ್ಕಿಂತ ಮುಖ್ಯವಾಗಿ ಆಧ್ಯಾತ್ಮಿಕವಾಗಿ ಕಾಪಾಡುತ್ತಾನೆಂದೇ. ಆಗಾಗ್ಗೆ ನಾನು ಮಾಡುತ್ತಿದ್ದ ಪ್ರಾರ್ಥನೆಗಳು ನನಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು” ಮತ್ತು “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು” ಪಡೆಯಲು ಸಹಾಯಮಾಡಿತು.—2 ಕೊರಿಂಥ 4:7; ಫಿಲಿಪ್ಪಿ 4:6, 7.

ನನ್ನ ಬದುಕು ಯಾವತ್ತೂ ಗಾಲಿಕುರ್ಚಿಯಲ್ಲೇ ಎಂಬ ಸಂಗತಿಯನ್ನು 22ನೇ ವಯಸ್ಸಿನಲ್ಲಿ ನಾನು ಒಪ್ಪಲೇಬೇಕಾಯಿತು. ಜನ ನನ್ನನ್ನು ನೋಡುವ ಬದಲು ಗಾಲಿಕುರ್ಚಿಯನ್ನು ನೋಡುತ್ತಾರೆ ಅನ್ನೋ ಭಯ ನನ್ನನ್ನು ಆವರಿಸಿತು. ಆದರೆ “ಶಾಪ” ಎಂದು ನಾನೆಣಿಸಿದ್ದ ಗಾಲಿಕುರ್ಚಿ ನನಗೆ ವರವಾಗಿ ನನ್ನ ಸ್ವಾತಂತ್ರ್ಯ ಹೆಚ್ಚಿಸಿತು. ನನ್ನ ಸ್ನೇಹಿತೆ ಇಸಬೆಲ್‌ ತನ್ನ ಜೊತೆ ಸುವಾರ್ತೆ ಸಾರುವುದರಲ್ಲಿ ಒಂದು ತಿಂಗಳಲ್ಲಿ 60 ತಾಸು ಮುಟ್ಟುವ ಗುರಿಯಿಡುವಂತೆ ನನ್ನನ್ನು ಪ್ರೋತ್ಸಾಹಿಸಿದಳು.

ಮೊದಮೊದಲು ನನಗದು ಮೂರ್ಖತನ ಎಂದನಿಸಿದರೂ ಯೆಹೋವನ ಬಳಿ ಸಹಾಯಕ್ಕಾಗಿ ಬೇಡಿದೆ. ನನ್ನ ಹೆತ್ತವರ ಮತ್ತು ಸ್ನೇಹಿತರ ನೆರವಿನಿಂದ ಆ ಗುರಿ ತಲುಪಿದೆ. ಆ ತಿಂಗಳು ಪೂರ್ತಿ ತುಂಬ ಕಾರ್ಯಮಗ್ನಳಾಗಿದ್ದೆ, ಸಮಯ ಹೋದದ್ದೇ ಗೊತ್ತಾಗಲಿಲ್ಲ. ನನಗಿದ್ದ ಭಯ-ಹೆದರಿಕೆ, ಸಂಕೋಚ ಇವನ್ನು ಜಯಿಸಿದ್ದೇನೆ ಅಂತ ನನ್ನರಿವಿಗೆ ಬಂದಿತು. ನಾನೆಷ್ಟು ಆನಂದಿಸಿದೆ ಅಂದರೆ 1996ರಲ್ಲಿ ರೆಗ್ಯುಲರ್‌ ಪಯನೀಯರಳಾಗುವ ಅಂದರೆ ತಿಂಗಳಿಗೆ 90 ತಾಸುಗಳನ್ನು ಸುವಾರ್ತೆ ಸಾರುವುದರಲ್ಲಿ ಕಳೆಯುವ ನಿರ್ಧಾರ ಮಾಡಿದೆ. ಇದು ನನ್ನ ಬದುಕಿನ ಅತಿ ಉತ್ತಮ ನಿರ್ಧಾರ. ಇದರಿಂದಾಗಿ ದೇವರಿಗೆ ಹೆಚ್ಚು ಆಪ್ತಳಾದೆ ಅಷ್ಟೇ ಅಲ್ಲ ನನಗೆ ದೈಹಿಕ ಬಲವೂ ದೊರಕಿದೆ. ಸುವಾರ್ತೆ ಸಾರುವ ಮೂಲಕ ನನ್ನ ನಂಬಿಕೆಯನ್ನು ಅನೇಕರೊಂದಿಗೆ ಹಂಚಿಕೊಳ್ಳಲು ಮತ್ತು ಕೆಲವರಿಗೆ ಯೆಹೋವನ ಸ್ನೇಹಿತರಾಗುವಂತೆ ಮಾಡಲು ನೆರವಾಗಿದೆ.

ಯೆಹೋವನು ನನ್ನನ್ನು ಕಾಪಾಡುತ್ತಾ ಬಂದಿದ್ದಾನೆ

2001ರ ಬೇಸಿಗೆ ಸಮಯದಲ್ಲಿ ನನಗೆ ಭೀಕರ ಕಾರ್‌ ಅಪಘಾತ ಆಯಿತು. ನನ್ನೆರೆಡೂ ಕಾಲು ಮುರಿದುಕೊಂಡೆ. ಸಹಿಸಲಾರದ ನೋವಿನಲ್ಲಿ ಆಸ್ಪತ್ರೆಯಲ್ಲಿದ್ದಾಗ ಮೌನವಾಗಿ ಪ್ರಾರ್ಥಿಸುತ್ತಾ “ಯೆಹೋವನೇ ದಯವಿಟ್ಟು ನನ್ನ ಕೈಬಿಡಬೇಡಪ್ಪ!” ಎಂದು ಹೇಳಿದೆ. ಆಗಲೇ ಪಕ್ಕದ ಮಂಚದಲ್ಲಿದ್ದ ಸ್ತ್ರೀಯೊಬ್ಬಳು “ನೀವು ಯೆಹೋವನ ಸಾಕ್ಷಿನಾ?” ಎಂದು ಕೇಳಿದಳು. ಉತ್ತರ ಕೊಡುವಷ್ಟು ತ್ರಾಣ ಇಲ್ಲದಿದ್ದರೂ ಹೌದೆಂದು ತಲೆಯಾಡಿಸಿದೆ. ಆಗ ಆಕೆ “ನನಗೆ ನಿಮ್ಮ ಬಗ್ಗೆ ಗೊತ್ತು. ನಿಮ್ಮ ಪತ್ರಿಕೆಗಳನ್ನು ಓದುತ್ತಿರುತ್ತೇನೆ” ಎಂದಳು. ಆ ಮಾತುಗಳು ನನಗೆ ತುಂಬ ಸಾಂತ್ವನ ತಂದವು. ಇಂಥ ಸ್ಥಿತಿಯಲ್ಲೂ ನಾನು ಯೆಹೋವನಿಗೆ ಸಾಕ್ಷಿಕೊಡಲು ಶಕ್ತಳಾಗಿದ್ದೆ. ಆತನಿಗೆ ಇದೆಂಥ ಮಹಿಮೆ!

ಸ್ವಲ್ಪ ಚೇತರಿಸಿಕೊಂಡ ಮೇಲೆ ಇನ್ನೂ ಹೆಚ್ಚು ಸುವಾರ್ತೆ ಸಾರಬೇಕು ಎಂದನಿಸಿತು. ಹಾಗಾಗಿ ಅಮ್ಮ ನನ್ನನ್ನು ಗಾಲಿಕುರ್ಚಿಯಲ್ಲಿ ತಳ್ಳಿಕೊಂಡು ಆಸ್ಪತ್ರೆಯ ವಾರ್ಡ್‌ ಸುತ್ತ ಕರೆದುಕೊಂಡು ಹೋಗುತ್ತಿದ್ದರು. ನನ್ನೆರಡೂ ಕಾಲುಗಳಿಗೆ ಪ್ಲಾಸ್ಟರ್‌ ಹಾಕಲಾಗಿತ್ತು. ಪ್ರತಿದಿನ ಕೆಲವು ರೋಗಿಗಳನ್ನು ಭೇಟಿಮಾಡಿ ಕ್ಷೇಮ ವಿಚಾರಿಸಿ, ಕೆಲವೊಂದು ಸಾಹಿತ್ಯ ಕೊಟ್ಟು ಬರುತ್ತಿದ್ದೆವು. ಸುಸ್ತಾಗುತ್ತಿತ್ತು ಆದರೆ ಬೇಕಾದ ಶಕ್ತಿಯನ್ನು ಯೆಹೋವನೇ ಒದಗಿಸಿದನು.

ನನ್ನ ಹೆತ್ತವರೊಟ್ಟಿಗೆ 2003ರಲ್ಲಿ

ಕಳೆದ ಕೆಲವು ವರ್ಷಗಳಲ್ಲಿ ನನ್ನ ನೋವು ಜಾಸ್ತಿಯಾಗಿದೆ. ಅಪ್ಪ ಸಹ ತೀರಿಕೊಂಡರು. ನನಗಿದ್ದ ನೋವಿಗೆ ಇದು ಮತ್ತಷ್ಟನ್ನು ಸೇರಿಸಿತು.  ಹಾಗಿದ್ದರೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ. ಹೇಗೆ ಅಂತೀರಾ? ನನ್ನಿಂದ ಸಾಧ್ಯವಾದಾಗಲೆಲ್ಲ ನೆಂಟರಿಷ್ಟರೊಟ್ಟಿಗೆ ಇರಲು ಪ್ರಯತ್ನಿಸುತ್ತೇನೆ. ನನ್ನ ಆರೋಗ್ಯದ ಬಗ್ಗೆಯೇ ಯೋಚಿಸುತ್ತಾ ಇರದಂತೆ ಇದು ಸಹಾಯಮಾಡುತ್ತದೆ. ಒಬ್ಬಳೇ ಇರುವಾಗ ಬೈಬಲ್‌ ಓದುತ್ತೇನೆ, ಫೋನ್‌ ಮೂಲಕ ಸುವಾರ್ತೆ ಸಾರುತ್ತೇನೆ.

ನಾನು ಕಣ್ಣುಮುಚ್ಚಿ ನನ್ನ ಮನಸ್ಸಿನ ‘ಕಿಟಕಿ’ ತೆರೆದು ದೇವರು ವಾಗ್ದಾನಿಸಿರುವ ಹೊಸ ಲೋಕವನ್ನು ನೋಡುತ್ತೇನೆ

ಸಣ್ಣಸಣ್ಣ ವಿಷಯಗಳಲ್ಲಿ ಆನಂದ ಕಂಡುಕೊಳ್ಳುತ್ತೇನೆ. ಉದಾಹರಣೆಗೆ, ಮುಖವನ್ನು ಸೋಕುವ ತಂಗಾಳಿ, ತೇಲಿಬರುವ ಹೂಗಳ ಪರಿಮಳ ನನಗೆ ಸಂತೋಷ ತರುತ್ತವೆ. ಕೃತಜ್ಞತಾಭಾವ ಮೂಡಿಸುತ್ತವೆ. ನನಗಿರುವ ಹಾಸ್ಯ ಪ್ರವೃತ್ತಿಯಿಂದಲೂ ಸಹಾಯವಾಗುತ್ತದೆ. ಒಂದು ದಿನ ನನ್ನ ಸ್ನೇಹಿತೆ ಜೊತೆ ಸುವಾರ್ತೆ ಸಾರುತ್ತಾ ಇದ್ದೆ. ಅವಳು ನನ್ನ ಗಾಲಿಕುರ್ಚಿಯನ್ನು ತಳ್ಳಿಕೊಂಡು ಬರುತ್ತಿದ್ದಳು. ಏನೋ ಬರೆದುಕೊಳ್ಳಲು ಸ್ವಲ್ಪ ನಿಂತಳು. ಆಗ ನಾನು ಕೂತಿದ್ದ ಗಾಲಿಕುರ್ಚಿ ಆ ಇಳಿಜಾರಿನಲ್ಲಿ ನಿಯಂತ್ರಣತಪ್ಪಿ ಮುಂದಕ್ಕೆ ಓಡುತ್ತಾ, ನಿಂತಿದ್ದ ಒಂದು ಕಾರ್‌ಗೆ ಡಿಕ್ಕಿ ಹೊಡೆಯಿತು. ನನಗೂ ನನ್ನ ಗೆಳತಿಗೂ ತುಂಬ ಗಾಬರಿಯಾಯಿತು. ಆದರೆ ಏನೂ ಅಪಾಯವಾಗಲಿಲ್ಲ. ಆಮೇಲೆ ಇಬ್ಬರಿಗೂ ತುಂಬ ನಗು ಬಂತು.

ನನ್ನ ಬದುಕಲ್ಲಿ ಮಾಡಲಾಗದ ತುಂಬ ವಿಷಯಗಳಿವೆ. ಅವನ್ನೆಲ್ಲ ನನ್ನ ‘ಈಡೇರಬೇಕಾದ ಆಸೆಗಳು’ ಎಂದು ಕರೆಯುತ್ತೇನೆ. ಅನೇಕ ಸಲ ನಾನು ಕಣ್ಣುಮುಚ್ಚಿ, ನನ್ನ ಮನಸ್ಸಿನ ‘ಕಿಟಿಕಿ’ ತೆರೆದು ದೇವರು ಮಾತು ಕೊಟ್ಟಿರುವ ಹೊಸ ಲೋಕವನ್ನು ನೋಡುತ್ತೇನೆ. (2 ಪೇತ್ರ 3:13) ನಾನಲ್ಲಿ ಆರೋಗ್ಯದಿಂದಿರುವುದನ್ನು, ನಡೆದಾಡುವುದನ್ನು, ಬದುಕಿನ ಆನಂದ ಸವಿಯುತ್ತಿರುವುದನ್ನು ಊಹಿಸಿಕೊಳ್ಳುತ್ತೇನೆ. ರಾಜ ದಾವೀದನ ಈ ಮಾತುಗಳನ್ನು ಪಾಲಿಸುತ್ತೇನೆ: “ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ.” (ಕೀರ್ತನೆ 27:14) ದಿನದಿಂದ ದಿನಕ್ಕೆ ನನ್ನ ದೇಹ ದುರ್ಬಲವಾಗುತ್ತಾ ಇದ್ದರೂ ಯೆಹೋವನು ನನ್ನನ್ನು ಬಲಗೊಳಿಸಿದ್ದಾನೆ. ನನ್ನ ಬಲಹೀನತೆಯಿಂದಲೇ ಬಲ ಪಡೆಯುತ್ತಾ ಇದ್ದೇನೆ. (w14-E 03/01)

^ ಪ್ಯಾರ. 6 ಜುವೆನೈಲ್‌ ಪೊಲಿಆರ್‌ತ್ರೈಟಿಸ್‌ ಅನ್ನುವುದು ಮಕ್ಕಳನ್ನು ಬಾಧಿಸುವ ಸಂಧಿವಾತ ರೋಗ. ಈ ರೋಗದಲ್ಲಿ ದೇಹದ ರೋಗ ನಿರೋಧಕ ಶಕ್ತಿ ಆರೋಗ್ಯವಂತ ಅಂಗಾಂಶಗಳನ್ನು ನಾಶಮಾಡುತ್ತದೆ. ಇದರಿಂದ ಸಂಧಿಗಳಲ್ಲಿ ಊತ, ನೋವು ಕಾಣಿಸಿಕೊಳ್ಳುತ್ತದೆ.