ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಮುರಿದಂಥ, ಜಜ್ಜಿದಂಥ ಹೃದಯವನ್ನು’ ಕ್ಷಮಿಸುವಾತನು

‘ಮುರಿದಂಥ, ಜಜ್ಜಿದಂಥ ಹೃದಯವನ್ನು’ ಕ್ಷಮಿಸುವಾತನು

ದೇವರ ಸಮೀಪಕ್ಕೆ ಬನ್ನಿರಿ

‘ಮುರಿದಂಥ, ಜಜ್ಜಿದಂಥ ಹೃದಯವನ್ನು’ ಕ್ಷಮಿಸುವಾತನು

2 ಸಮುವೇಲ 12:1-14

ನಾವೆಲ್ಲರೂ ಪದೇ ಪದೇ ತಪ್ಪುಗಳನ್ನು ಮಾಡುತ್ತೇವೆ. ಮಾಡಿದ ತಪ್ಪುಗಳಿಗೆ ಎಷ್ಟೇ ಪಶ್ಚಾತ್ತಾಪಪಟ್ಟರೂ ‘ದೇವರು ನನ್ನ ಪ್ರಾರ್ಥನೆಗಳನ್ನು ಕೇಳುತ್ತಾನಾ? ನನ್ನನ್ನು ಕ್ಷಮಿಸುತ್ತಾನಾ?’ ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿರುತ್ತವೆ. ಬೈಬಲ್‌ ಈ ಸಾಂತ್ವನದಾಯಕ ಉತ್ತರವನ್ನು ಕೊಡುತ್ತದೆ: ಯೆಹೋವ ದೇವರು ಪಾಪವನ್ನು ಗಂಭೀರವಾಗಿ ಪರಿಗಣಿಸುತ್ತಾನಾದರೂ ಪಾಪಮಾಡಿದ ವ್ಯಕ್ತಿಯು ಪಶ್ಚಾತ್ತಾಪಪಡುವಾಗ ಕ್ಷಮಿಸುತ್ತಾನೆ. ಇದು ಸತ್ಯವೆಂದು ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನ ವೃತ್ತಾಂತ ತೋರಿಸುತ್ತದೆ. ಆ ವೃತ್ತಾಂತ ಬೈಬಲಿನ 2 ಸಮುವೇಲ ಎಂಬ ಪುಸ್ತಕದ 12ನೇ ಅಧ್ಯಾಯದಲ್ಲಿದೆ.

ಏನು ನಡೆಯಿತೆಂಬುದನ್ನು ನಾವೀಗ ನೋಡೋಣ. ದಾವೀದನು ಗಂಭೀರ ಪಾಪಗಳನ್ನು ಮಾಡಿದ್ದನು. ಅವನು ಬತ್ಷೆಬೆ ಎಂಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡಿದ್ದನು. ಈ ಪಾಪವನ್ನು ಮುಚ್ಚಿಹಾಕಲು ಅವನು ಹೂಡಿದ ತಂತ್ರ ಫಲಿಸದಿದ್ದಾಗ ಅವಳ ಗಂಡನನ್ನೇ ಕೊಲ್ಲಿಸಿದನು. ಮಾತ್ರವಲ್ಲದೆ ತಾನು ಮಾಡಿದ ಪಾಪಗಳನ್ನು ಮುಚ್ಚಿಟ್ಟು ಹಲವಾರು ತಿಂಗಳುಗಳವರೆಗೆ ಏನೂ ಮಾಡದವನಂತೆ ಇದ್ದನು. ಆದರೆ ಯೆಹೋವನು ಇದೆಲ್ಲವನ್ನೂ ಗಮನಿಸುತ್ತಿದ್ದನು. ಆತನು ದಾವೀದನ ಪಾಪಗಳನ್ನೂ ನೋಡಿದನು; ಪಶ್ಚಾತ್ತಾಪಪಡಬಹುದಾದ ಅವನ ಹೃದಯವನ್ನೂ ನೋಡಿದನು. (ಜ್ಞಾನೋಕ್ತಿ 17:3) ಯೆಹೋವನು ಮುಂದೇನು ಮಾಡಿದನು?

ದೇವರು ಪ್ರವಾದಿಯಾದ ನಾತಾನನನ್ನು ದಾವೀದನ ಬಳಿ ಕಳುಹಿಸಿದನು. (ವಚನ 1) ರಾಜನೊಂದಿಗೆ ಮಾತಾಡುವಾಗ ಸೂಕ್ತ ಪದಗಳನ್ನು ಬಳಸಬೇಕೆಂದು ಅರಿತ ನಾತಾನನು ದೇವರ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮದ ಮಾರ್ಗದರ್ಶನದಂತೆ ಜಾಣ್ಮೆಯಿಂದ ಮಾತಾಡಿದನು. ದಾವೀದನು ತನ್ನ ಮೇಲೇ ಹಾಕಿಕೊಂಡಿದ್ದ ಆತ್ಮವಂಚನೆಯ ಮುಸುಕನ್ನು ತೆಗೆದು, ತನ್ನ ಪಾಪಗಳ ಗಂಭೀರತೆಯನ್ನು ಗ್ರಹಿಸುವಂತೆ ಮಾಡಲು ನಾತಾನನು ಏನು ಮಾಡಸಾಧ್ಯವಿತ್ತು?

ತನ್ನ ತಪ್ಪನ್ನು ಸಮರ್ಥಿಸಿಕೊಳ್ಳದಂತೆ ದಾವೀದನನ್ನು ತಡೆಯಲು ನಾತಾನನು ಒಂದು ಕಥೆಯನ್ನು ಹೇಳಿದನು. ಅದು ಹಿಂದೆ ಒಬ್ಬ ಕುರುಬನಾಗಿದ್ದ ದಾವೀದನಿಗೆ ತನ್ನ ತಪ್ಪಿನ ಅರಿವನ್ನು ಮೂಡಿಸಿತು. ಆ ಕಥೆ ಒಬ್ಬ ಬಡವ ಹಾಗೂ ಒಬ್ಬ ಶ್ರೀಮಂತನದ್ದು. ಆ ಶ್ರೀಮಂತನಿಗೆ “ಬಹಳ ಕುರಿದನಗಳಿದ್ದವು” ಆದರೆ ಬಡವನಿಗೆ “ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ.” ಒಮ್ಮೆ ಶ್ರೀಮಂತನ ಮನೆಗೆ ಅತಿಥಿಯೊಬ್ಬ ಬಂದ. ಅವನಿಗಾಗಿ ಔತಣ ಮಾಡಬೇಕೆಂದು ಶ್ರೀಮಂತ ಅಂದುಕೊಂಡ. ಅದಕ್ಕಾಗಿ ತನ್ನ ಸ್ವಂತ ಕುರಿಯೊಂದನ್ನು ಕೊಯ್ಯುವ ಬದಲು ಬಡವನ ಬಳಿಯಿದ್ದ ಆ ಏಕೈಕ ಕುರಿಮರಿಯನ್ನು ಕೊಯ್ದ. ಇದು ಸತ್ಯ ಕಥೆಯೆಂದು ನೆನಸಿದ ದಾವೀದನು “ಆ ಮನುಷ್ಯನು ಸಾಯಲೇ ಬೇಕು” ಎಂದು ಸಿಟ್ಟಿನಿಂದ ಕಿರುಚಿದ. ಆ ಶ್ರೀಮಂತ “ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ” ಅವನಿಗೆ ಶಿಕ್ಷೆ ಆಗಲೇ ಬೇಕೆಂದನು. *—ವಚನಗಳು 2-6.

ಹೀಗೆ, ನಾತಾನನ ಕಥೆಯ ಉದ್ದೇಶ ಈಡೇರಿತು. ತಾನು ಅಪರಾಧಿ ಎಂದು ದಾವೀದನು ಸೂಚಿಸಿದನು. ತಪ್ಪುಮಾಡಿದ “ಆ ಮನುಷ್ಯನು ನೀನೇ” ಎಂದು ನಾತಾನನು ದಾವೀದನಿಗೆ ನೇರವಾಗಿ ಹೇಳಿದನು. (ವಚನ 7) ದೇವರನ್ನು ಪ್ರತಿನಿಧಿಸಿ ನಾತಾನನು ಆಡಿದ ಮಾತುಗಳು ದಾವೀದನ ಕೃತ್ಯಗಳು ದೇವರನ್ನು ನೋಯಿಸಿವೆ ಎಂಬುದನ್ನು ತಿಳಿಯಪಡಿಸಿದವು. ದಾವೀದನು ದೇವರ ನಿಯಮಗಳನ್ನು ಮುರಿಯುವ ಮೂಲಕ ಆ ನಿಯಮಗಳನ್ನು ಕೊಟ್ಟಾತನನ್ನು ಅವಮಾನಪಡಿಸಿದ್ದನು. ‘ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದಿ’ ಎಂದನು ದೇವರು. (ವಚನ 10) ಮಾಡಿದ ತಪ್ಪಿಗಾಗಿ ದಾವೀದನ ಮನಸ್ಸಾಕ್ಷಿ ಚುಚ್ಚುತ್ತಿತ್ತು. “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ” ಎಂದು ಅವನು ಒಪ್ಪಿಕೊಂಡನು. ಆದುದರಿಂದ ಯೆಹೋವನು ಅವನನ್ನು ಕ್ಷಮಿಸುತ್ತಾನೆಂದು ನಾತಾನನು ಆಶ್ವಾಸನೆಕೊಟ್ಟನು. ಆದರೆ ದಾವೀದನು ತನ್ನ ಪಾಪದ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದೂ ಹೇಳಿದನು.—ವಚನಗಳು 13, 14.

ತನ್ನ ತಪ್ಪು ಬೆಳಕಿಗೆ ಬಂದ ನಂತರ ದಾವೀದನು ಒಂದು ಕೀರ್ತನೆಯನ್ನು ಬರೆದನು. ಅದೀಗ ಬೈಬಲಿನಲ್ಲಿ 51ನೇ ಕೀರ್ತನೆ ಆಗಿದೆ. ಅದರಲ್ಲಿ ತನ್ನ ಹೃದಯವನ್ನು ತೋಡಿಕೊಳ್ಳುತ್ತಾ ತಾನೆಷ್ಟು ಪಶ್ಚಾತ್ತಾಪಪಟ್ಟಿದ್ದೇನೆ ಎಂಬುದನ್ನು ತಿಳಿಯಪಡಿಸಿದನು. ಅವನು ಪಾಪಮಾಡುವ ಮೂಲಕ ದೇವರನ್ನು ತಿರಸ್ಕರಿಸಿದ್ದನು. ಆದರೆ ತನಗೆ ದೇವರ ಕ್ಷಮಾಪಣೆ ದೊರೆತಾಗ ದಾವೀದನು “ಮುರಿದಂಥ, ಜಜ್ಜಿದಂಥ ಹೃದಯವನ್ನು, ದೇವರೇ ನೀನು ತಿರಸ್ಕರಿಸುವುದಿಲ್ಲ” ಎಂದು ಯೆಹೋವನಿಗೆ ಹೇಳಿದನು. (ಕೀರ್ತನೆ 51:17, NIBV) ಈ ಕೆಲವೇ ಮಾತುಗಳು ಯೆಹೋವನ ಕರುಣೆಗಾಗಿ ಹಂಬಲಿಸುತ್ತಿರುವ ಪಶ್ಚಾತ್ತಾಪಿಗೆ ಎಷ್ಟೋ ನೆಮ್ಮದಿ ತರುತ್ತವೆ. (w10-E 05/01)

[ಪಾದಟಿಪ್ಪಣಿ]

^ ಪ್ಯಾರ. 7 ಆ ಕಾಲದಲ್ಲಿ ಅತಿಥಿಗಾಗಿ ಕುರಿಮರಿಯನ್ನು ಕಡಿದು ಔತಣ ಮಾಡುವುದು ಅತಿಥಿಸತ್ಕಾರದ ಭಾಗವಾಗಿತ್ತು. ಆದರೆ ಕುರಿಮರಿಯನ್ನು ಕದಿಯುವುದು ಅಪರಾಧವಾಗಿತ್ತು. ಇದಕ್ಕೆ ಪ್ರತಿಯಾಗಿ 4 ಪಟ್ಟು ಹಿಂದಿರುಗಿಸಬೇಕಿತ್ತು. (ವಿಮೋಚನಕಾಂಡ 22:1) ಆ ಶ್ರೀಮಂತನು ಕುರಿಮರಿಯನ್ನು ತೆಗೆದುಕೊಂಡದ್ದು ದಾವೀದನ ದೃಷ್ಟಿಯಲ್ಲಿ ನಿರ್ದಯೆಯ ಕೃತ್ಯವಾಗಿತ್ತು. ಏಕೆಂದರೆ ಆ ಕುರಿಮರಿ ಮುಂದೊಂದು ದಿನ ಬಡವನ ಕುಟುಂಬಕ್ಕೆ ಹಾಲು, ಉಣ್ಣೆಯನ್ನು ಒದಗಿಸಲಿತ್ತು ಮತ್ತು ಬಹುಶಃ ಅದರ ಮೂಲಕ ಒಂದು ಕುರಿಹಿಂಡೇ ಉಂಟಾಗಸಾಧ್ಯವಿತ್ತು. ಇಂಥ ಪ್ರಾಣಿಯನ್ನು ಶ್ರೀಮಂತನು ಆ ಬಡವನಿಂದ ಕಸಿದುಕೊಂಡಿದ್ದನು.