ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನಿಗಾಗಿ ದುಡಿಯಿರಿ’

‘ಯೆಹೋವನಿಗಾಗಿ ದುಡಿಯಿರಿ’

“ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ. . . . ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸಿರಿ.”—ರೋಮ. 12:11.

1. ದಾಸತ್ವದ ಬಗ್ಗೆ ಅನೇಕರಲ್ಲಿರುವ ಯೋಚನೆಗೂ ರೋಮನ್ನರಿಗೆ 12:11ರಲ್ಲಿ ಪ್ರೋತ್ಸಾಹಿಸಿರುವುದಕ್ಕೂ ಇರುವ ವ್ಯತ್ಯಾಸವೇನು?

ಗುಲಾಮಗಿರಿ ಅಥವಾ ದಾಸತ್ವ ಎಂದಾಕ್ಷಣ ಒಡೆಯನ ಕ್ರೂರ ದಬ್ಬಾಳಿಕೆ, ಅನ್ಯಾಯವಾದ ವರ್ತನೆ ನಮ್ಮ ಮನಸ್ಸಿಗೆ ಬರುತ್ತದೆ. ಆದರೆ ಕ್ರೈಸ್ತ ದಾಸತ್ವ ಅನೇಕರು ಯೋಚಿಸುವುದಕ್ಕಿಂತ ಎಷ್ಟೋ ವಿಭಿನ್ನ. ದೇವರ ವಾಕ್ಯ ಹೇಳುವಂತೆ, ಕ್ರೈಸ್ತನೊಬ್ಬನು ಪ್ರೀತಿಯ ಯಜಮಾನನಿಗಾಗಿ ದುಡಿಯುವ ಆಯ್ಕೆಯನ್ನು ತಾನಾಗಿಯೇ ಮಾಡಬಹುದು. ಹಾಗಾಗಿ ಅಪೊಸ್ತಲ ಪೌಲನು “ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸಿರಿ” ಎಂದು ಕ್ರೈಸ್ತರನ್ನು ಪ್ರೋತ್ಸಾಹಿಸಿದನು. ದೇವರ ಮೇಲಿನ ಪ್ರೀತಿಯಿಂದ ಪವಿತ್ರ ಸೇವೆ ಸಲ್ಲಿಸುವಂತೆ ಅವನು ಹೇಳಿದನು. (ರೋಮ. 12:11) ಯಾವ ರೀತಿಯ ದಾಸತ್ವ ಇದು? ಸೈತಾನನಿಗೂ ಅವನ ಲೋಕಕ್ಕೂ ದಾಸರಾಗದಂತೆ ಜಾಗ್ರತೆವಹಿಸುವುದು ಹೇಗೆ? ಯೆಹೋವನಿಗಾಗಿ ದುಡಿಯುವುದರಿಂದ ಮತ್ತು ನಂಬಿಗಸ್ತರಾಗಿ ಸೇವೆಮಾಡುವುದರಿಂದ ದೊರೆಯುವ ಪ್ರತಿಫಲಗಳೇನು?

‘ನಾನು ನನ್ನ ಯಜಮಾನನನ್ನು ಪ್ರೀತಿಸುತ್ತೇನೆ’

2. (1) ಯಾವ ಕಾರಣದಿಂದ ಇಸ್ರಾಯೇಲ್ಯ ದಾಸನು ಸ್ವತಂತ್ರನಾಗದೆ ಯಜಮಾನ ಹತ್ತಿರವೇ ಉಳಿಯಲು ಬಯಸಬಹುದಿತ್ತು? (2) ಯಜಮಾನನು ದಾಸನ ಕಿವಿಯನ್ನು ಚುಚ್ಚುವುದು ಯಾವುದನ್ನು ಸೂಚಿಸುತ್ತಿತ್ತು?

2 ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಯಿಂದ ಆತನು ನಮ್ಮಿಂದ ಯಾವ ರೀತಿಯ ದಾಸತ್ವವನ್ನು ಬಯಸುತ್ತಾನೆ ಎನ್ನುವುದನ್ನು ಕಲಿಯಬಹುದು. ಸಾಮಾನ್ಯವಾಗಿ ಒಬ್ಬ ಹೀಬ್ರು ದಾಸನಿಗೆ ದಾಸತ್ವದ ಏಳನೆಯ ವರ್ಷದಲ್ಲಿ ಬಿಡುಗಡೆಯಾಗುತ್ತಿತ್ತು. (ವಿಮೋ. 21:2) ಆದರೂ ದಾಸನು ತನ್ನ ಧಣಿಯನ್ನು ನಿಜವಾಗಿಯೂ ಪ್ರೀತಿಸಿ, ಅವನ ಹತ್ತಿರವೇ ಉಳಿಯಲು ಬಯಸುವಲ್ಲಿ ಅವನು ಅಲ್ಲಿಯೇ ಇರಬಹುದಿತ್ತು. ಅದಕ್ಕಾಗಿ ಯೆಹೋವನು ಒಂದು ಗಮನಾರ್ಹ ಏರ್ಪಾಡನ್ನು ಮಾಡಿದನು. ಅದೇನೆಂದರೆ ಯಜಮಾನನು ಆ ದಾಸನನ್ನು ಮನೆಯ ಬಾಗಿಲಿಗೆ ಅಥವಾ ಬಾಗಿಲ ನಿಲುವುಪಟ್ಟಿಗೆ ಎದುರಾಗಿ ನಿಲ್ಲಿಸಿ ಸಲಾಕೆಯಿಂದ ಅವನ ಕಿವಿಯನ್ನು ಚುಚ್ಚಬೇಕಿತ್ತು. (ವಿಮೋ. 21:5, 6) ಯಾಕೆ ಹೀಗೆ ಮಾಡಬೇಕಿತ್ತು? ವಿಧೇಯತೆ ಅನ್ನುವುದು ಕೇಳಿಸಿಕೊಳ್ಳುವುದಕ್ಕೂ ಆಲಿಸುವುದಕ್ಕೂ ಸಂಬಂಧಿಸಿದೆ. ಹಾಗಾಗಿ ಕಿವಿಯನ್ನು ಚುಚ್ಚುವುದು, ದಾಸನು ತನ್ನ ಯಜಮಾನನಿಗೆ ವಿಧೇಯತೆಯ ಸೇವೆಯನ್ನು ಮುಂದುವರಿಸಲು ಬಯಸುತ್ತಾನೆ ಎನ್ನುವುದನ್ನು ಸೂಚಿಸುತ್ತಿತ್ತು. ಇದು, ಯೆಹೋವನಿಗೆ ನಾವು ಮಾಡುವ ಸಮರ್ಪಣೆಯನ್ನು ಹೋಲುತ್ತದೆ. ನಾವು ದೇವರಿಗೆ ಸಮರ್ಪಿಸಿಕೊಂಡಾಗ ಆತನ ಮೇಲೆ ನಮಗಿರುವ ಪ್ರೀತಿಯಿಂದ ಇಷ್ಟಪೂರ್ವಕವಾಗಿ ವಿಧೇಯರಾಗುತ್ತೇವೆ.

3. ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳಲು ಯಾವುದು ಪ್ರಚೋದಿಸುತ್ತದೆ?

3 ನಾವು ಯೆಹೋವನ ಸೇವೆಮಾಡಲು ಅಥವಾ ಆತನ ದಾಸರಾಗಲು ನಿರ್ಧರಿಸಿದೆವು. ನಂತರ ಯೆಹೋವನಿಗೆ ಸಮರ್ಪಿಸಿಕೊಂಡೆವು. ‘ನಿನಗೆ ವಿಧೇಯರಾಗುತ್ತೇವೆ, ನಿನ್ನ ಚಿತ್ತವನ್ನು ಮಾಡುತ್ತೇವೆ’ ಎಂದು ಮಾತುಕೊಟ್ಟೆವು. ಹೀಗೆ ಮಾಡಲು ನಮ್ಮನ್ನು ಯಾರೂ ಒತ್ತಾಯಿಸಲಿಲ್ಲ. ಅಷ್ಟೇಕೆ, ದೀಕ್ಷಾಸ್ನಾನ ಹೊಂದುವ ಎಳೆಯರು ಸಹ ಯೆಹೋವನಿಗೆ ತಮ್ಮ ಸ್ವಂತ ವೈಯಕ್ತಿಕ ಸಮರ್ಪಣೆಯನ್ನು ಮಾಡುತ್ತಾರೆ. ತಮ್ಮ ಹೆತ್ತವರನ್ನು ಮೆಚ್ಚಿಸಲು ಅವರು ಹೀಗೆ ಮಾಡಲ್ಲ. ಸ್ವರ್ಗೀಯ ಯಜಮಾನನ ಮೇಲಿರುವ ಪ್ರೀತಿಯೇ ಕ್ರೈಸ್ತ ಸಮರ್ಪಣೆಗೆ ಆಧಾರ. “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ” ಎಂದನು ಅಪೊಸ್ತಲ ಯೋಹಾನ.—1 ಯೋಹಾ. 5:3.

ಸ್ವತಂತ್ರರು, ಆದರೂ ದಾಸರೇ

4. ‘ನೀತಿಗೆ ದಾಸರಾಗಲು’ ನಾವೇನು ಮಾಡಬೇಕು?

4 ಯೆಹೋವನು ನಮಗೆ ತನ್ನ ದಾಸರಾಗುವ ಅವಕಾಶ ಕೊಟ್ಟಿದ್ದಾನೆ. ಅದಕ್ಕಾಗಿ ನಾವು ಆತನಿಗೆ ಎಷ್ಟೋ ಕೃತಜ್ಞರು! ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಾವು ನಂಬಿಕೆ ಇಡುವುದು ಪಾಪದ ದಾಸತ್ವದಿಂದ ಹೊರಬರುವಂತೆ ಮಾಡುತ್ತದೆ. ನಾವು ಅಪರಿಪೂರ್ಣರಾಗಿದ್ದರೂ ಯೆಹೋವನ ಮತ್ತು ಯೇಸುವಿನ ಅಧಿಕಾರದ ಕೆಳಗೆ ಇಷ್ಟಪೂರ್ವಕವಾಗಿ ಬಂದಿದ್ದೇವೆ. ಪೌಲ ತನ್ನ ಪ್ರೇರಿತ ಪತ್ರವೊಂದರಲ್ಲಿ ಇದನ್ನು ಸ್ಪಷ್ಟವಾಗಿ ವಿವರಿಸಿದನು: “ನಿಮ್ಮನ್ನು ಪಾಪದ ಪಾಲಿಗೆ ಸತ್ತವರಾಗಿಯೂ ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರಾಗಿಯೂ ಎಣಿಸಿಕೊಳ್ಳಿರಿ.” ಬಳಿಕ ಅವನು ಎಚ್ಚರಿಸಿದ್ದು: “ನೀವು ಯಾವನಿಗಾದರೂ ವಿಧೇಯತೆ ತೋರಿಸಲು ಅವನಿಗೆ ನಿಮ್ಮನ್ನು ದಾಸರನ್ನಾಗಿ ಒಪ್ಪಿಸಿಕೊಡುತ್ತೀರಾದರೆ ನೀವು ಅವನಿಗೆ ವಿಧೇಯರಾಗುವುದರಿಂದ ಅವನಿಗೆ ದಾಸರಾಗಿದ್ದೀರಿ, ಮರಣಕ್ಕೆ ನಡಿಸುವ ಪಾಪಕ್ಕೆ ನೀವು ದಾಸರು ಇಲ್ಲವೆ ನೀತಿಗೆ ನಡಿಸುವ ವಿಧೇಯತೆಗೆ ದಾಸರು ಎಂಬುದು ನಿಮಗೆ ತಿಳಿದಿಲ್ಲವೊ? ಆದರೆ ನೀವು ಹಿಂದೆ ಪಾಪಕ್ಕೆ ದಾಸರಾಗಿದ್ದರೂ ಈಗ ಯಾವುದಕ್ಕೆ ಒಪ್ಪಿಸಲ್ಪಟ್ಟಿರೋ ಆ ಬೋಧನಾ ರೀತಿಗೆ ಹೃದಯದಿಂದ ವಿಧೇಯರಾದದ್ದು ದೇವರಿಂದಾಗಿಯೇ. ಹೌದು, ನೀವು ಪಾಪದಿಂದ ಬಿಡುಗಡೆಮಾಡಲ್ಪಟ್ಟದ್ದರಿಂದ ನೀತಿಗೆ ದಾಸರಾದಿರಿ.” (ರೋಮ. 6:11, 16-18) ಅಪೊಸ್ತಲ ಪೌಲನು ಇಲ್ಲಿ ‘ಹೃದಯದಿಂದ ವಿಧೇಯತೆ’ ತೋರಿಸಿದ ಕ್ರೈಸ್ತರು ನೀತಿಗೆ ದಾಸರಾದರು ಎಂದು ಹೇಳಿದ್ದಾನೆ. ಹೌದು, ಹಾಗಾದರೆ ನಾವು ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಾಗ ‘ನೀತಿಗೆ ದಾಸರಾಗುತ್ತೇವೆ.’

5. (1) ನಾವೆಲ್ಲರೂ ಯಾವ ಆಂತರಿಕ ಹೋರಾಟವನ್ನು ಮಾಡಬೇಕು? (2) ಏಕೆ?

5 ಹಾಗಿದ್ದರೂ, ನಮ್ಮ ಸಮರ್ಪಣೆಗನುಸಾರ ನಡೆಯಬೇಕಾದರೆ ನಾವು ಎರಡು ಹೋರಾಟ ಮಾಡಬೇಕು. ಒಂದು ನಮ್ಮಲ್ಲಿರುವ ಅಪರಿಪೂರ್ಣತೆ. ಈ ಹೋರಾಟವನ್ನು ಪೌಲ ಸಹ ಮಾಡಿದನು. ಅವನು ಹೇಳುವುದು: “ನನ್ನ ಹೃದಯದೊಳಗೆ ನಾನು ದೇವರ ನಿಯಮದಲ್ಲಿ ನಿಜವಾಗಿಯೂ ಆನಂದಿಸುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ.” (ರೋಮ. 7:22, 23) ಅನುವಂಶಿಕವಾದ ಅಪರಿಪೂರ್ಣತೆ ನಮ್ಮಲ್ಲಿರುವುದರಿಂದ, ಶಾರೀರಿಕ ಇಚ್ಛೆಗಳ ವಿರುದ್ಧ ನಾವು ಹೋರಾಡುತ್ತಲೇ ಇರಬೇಕು. ಹಾಗಾಗಿ ಅಪೊಸ್ತಲ ಪೇತ್ರನು ಸಲಹೆ ಕೊಟ್ಟದ್ದು: “ಸ್ವತಂತ್ರ ಜನರಂತಿರಿ, ಆದರೆ ಕೆಟ್ಟತನವನ್ನು ಮರೆಮಾಚುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಹಿಡಿದುಕೊಂಡಿರದೆ ದೇವರ ದಾಸರಂತಿರಿ.”—1 ಪೇತ್ರ 2:16.

6, 7. ಸೈತಾನನು ಹೇಗೆ ಈ ಲೋಕವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತಾನೆ?

6 ನಮಗಿರುವ ಎರಡನೆಯ ಹೋರಾಟ ದೆವ್ವಗಳ ಪ್ರಭಾವದಲ್ಲಿರುವ ಲೋಕದೊಂದಿಗೆ. ನಾವು ಯೆಹೋವನಿಗೂ ಯೇಸುವಿಗೂ ತೋರಿಸುವ ನಿಷ್ಠೆಯನ್ನು ಮುರಿಯುವಂತೆ ಮಾಡಲು ಈ ಲೋಕದ ಪ್ರಭುವಾದ ಸೈತಾನನು ಪ್ರಯತ್ನಿಸುತ್ತಾನೆ. ಅದಕ್ಕಾಗಿ ತನ್ನೆಲ್ಲ ಅಸ್ತ್ರಗಳನ್ನು ನಮ್ಮ ಕಡೆ ಗುರಿಮಾಡಿ ಎಸೆಯುತ್ತಾನೆ. ಅವನ ಗುರಿ ಏನೆಂದರೆ ನಮ್ಮನ್ನು ತನ್ನ ಭ್ರಷ್ಟ ಪ್ರಭಾವಕ್ಕೆ ಬಲಿಬೀಳುವಂತೆ ಪ್ರೇರಿಸುತ್ತಾ ತನ್ನ ದಾಸರನ್ನಾಗಿ ಮಾಡುವುದೇ. (ಎಫೆಸ 6:11, 12 ಓದಿ.) ಸೈತಾನನು ಇದನ್ನು ಮಾಡುವ ಒಂದು ವಿಧ ಈ ಲೋಕವನ್ನು ಆಕರ್ಷಕವಾಗಿ, ಮೋಹಕವಾಗಿ ಕಾಣುವಂತೆ ಮಾಡುವುದೇ. ಅಪೊಸ್ತಲ ಯೋಹಾನ ಎಚ್ಚರಿಸಿದ್ದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸುವುದಾದರೆ ತಂದೆಯ ಪ್ರೀತಿಯು ಅವನಲ್ಲಿ ಇಲ್ಲ. ಏಕೆಂದರೆ ಲೋಕದಲ್ಲಿರುವ ಸರ್ವವೂ—ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನ—ಇವು ತಂದೆಯಿಂದ ಉಂಟಾಗದೆ ಲೋಕದಿಂದ ಉಂಟಾದವುಗಳಾಗಿವೆ.”—1 ಯೋಹಾ. 2:15, 16.

7 ಆದಷ್ಟು ಹೆಚ್ಚು ಹಣ ಆಸ್ತಿ ಮಾಡಬೇಕೆನ್ನುವ ಆಶೆ ಲೋಕದಲ್ಲಿ ವ್ಯಾಪಿಸಿದೆ. ಹಣವಿದ್ದರೇ ಸಂತೋಷವಿದೆ ಎನ್ನುವ ಮನೋಭಾವವನ್ನು ಸೈತಾನನು ಪ್ರೋತ್ಸಾಹಿಸುತ್ತಾನೆ. ದೊಡ್ಡದೊಡ್ಡ ಮಾರ್ಕೆಟ್‌ಗಳು ಹೆಚ್ಚೆಚ್ಚಾಗುತ್ತಿವೆ. ಸ್ವತ್ತು ಗಳಿಸುವುದಕ್ಕೆ, ಆರಾಮದಾಯಕ ಜೀವನ ನಡೆಸುವುದಕ್ಕೆ ಜಾಹೀರಾತುಗಳು ಕುಮ್ಮಕ್ಕು ನೀಡುತ್ತವೆ. ಉದಾಹರಣೆಗೆ, ಪ್ರವಾಸೋದ್ಯಮ ಸಂಸ್ಥೆಗಳು ರಮಣೀಯ ಸ್ಥಳಗಳಿಗೆ ಪ್ರವಾಸ ಮಾಡುವ ಆಫರ್‌ ನೀಡುತ್ತವೆ. ಅದೂ ಹೆಚ್ಚಾಗಿ ಲೋಕದ ಮನೋಭಾವವಿರುವ ಜನರೊಂದಿಗೆ. ಹೌದು ನಮ್ಮ ಸುತ್ತಮುತ್ತಲೂ ಕೇಳಿಬರುವ ಮಾತು ಒಂದೇ: “ಜೀವನವನ್ನು ಉತ್ತಮಗೊಳಿಸಿಕೊಳ್ಳಿ.” ಆದರೆ ಲೋಕದ ಶೈಲಿಗನುಸಾರ!

8, 9. (1) ಯಾವುದು ತುಂಬ ಅಪಾಯಕಾರಿ? (2) ಏಕೆ?

8 ಒಂದನೆಯ ಶತಮಾನದ ಕ್ರೈಸ್ತ ಸಭೆಯಲ್ಲಿ ಯಾರಿಗೆ ಲೌಕಿಕ ದೃಷ್ಟಿಕೋನವಿತ್ತೋ ಅವರ ಕಡೆಗೆ ಬೊಟ್ಟುಮಾಡಿ ಪೇತ್ರನು ಎಚ್ಚರಿಸಿದ್ದು: “ಹಗಲು ಹೊತ್ತಿನಲ್ಲಿ ಐಷಾರಾಮವಾಗಿ ಜೀವಿಸುವುದನ್ನು ಅವರು ಸುಖವೆಂದೆಣಿಸುತ್ತಾರೆ. ಇವರು ನಿಮ್ಮೊಂದಿಗೆ ಔತಣಮಾಡುತ್ತಿರುವಾಗ ತಮ್ಮ ವಂಚನಾತ್ಮಕ ಬೋಧನೆಗಳಲ್ಲಿ ನಿಯಂತ್ರಣವಿಲ್ಲದ ಆನಂದದೊಂದಿಗೆ ತೊಡಗುವ ಕಳಂಕಿತರೂ ದೋಷಿಗಳೂ ಆಗಿದ್ದಾರೆ. ಇವರು ಲಾಭವಿಲ್ಲದ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ ಮತ್ತು ತಪ್ಪಾದ ಮಾರ್ಗದಲ್ಲಿ ನಡೆಯುವಂಥ ಜನರಿಂದ ಈಗ ತಾನೇ ತಪ್ಪಿಸಿಕೊಳ್ಳುತ್ತಿರುವವರನ್ನು ಶಾರೀರಿಕ ಇಚ್ಛೆಗಳಿಂದಲೂ ಸಡಿಲು ಹವ್ಯಾಸಗಳಿಂದಲೂ ಮರುಳುಗೊಳಿಸುತ್ತಾರೆ. ಅವರಿಗೆ ಸ್ವಾತಂತ್ರ್ಯ ಕೊಡುತ್ತೇವೆಂದು ಮಾತುಕೊಡುತ್ತಾರಾದರೂ ಅವರು ತಾವೇ ಭ್ರಷ್ಟತೆಯ ದಾಸರಾಗಿದ್ದಾರೆ. ಏಕೆಂದರೆ ಯಾವನಾದರೂ ಇನ್ನೊಬ್ಬನಿಗೆ ಸೋತುಹೋಗುವಲ್ಲಿ ಅವನು ಅವನ ದಾಸನಾಗುತ್ತಾನೆ.”—2 ಪೇತ್ರ 2:13, 18, 19.

9 ನಾವು ‘ಕಣ್ಣಿನಾಶೆಯನ್ನು’ ತೃಪ್ತಿಪಡಿಸಲು ಇಷ್ಟಪಡುವುದಾದರೆ ಸ್ವತಂತ್ರ ವ್ಯಕ್ತಿಗಳಾಗಿರುವುದಿಲ್ಲ. ಬದಲಿಗೆ, ಈ ಲೋಕದ ಅದೃಶ್ಯ ಯಜಮಾನನಾಗಿರುವ ಪಿಶಾಚನಾದ ಸೈತಾನನ ದಾಸರಾಗುತ್ತೇವೆ. (1 ಯೋಹಾ. 5:19) ಪ್ರಾಪಂಚಿಕತೆಗೆ ದಾಸರಾಗುವುದು ಅತಿ ಅಪಾಯಕಾರಿ. ಒಮ್ಮೆ ಅದರಲ್ಲಿ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಕಷ್ಟಕರ.

ತೃಪ್ತಿದಾಯಕ ಜೀವನಮಾರ್ಗ

10, 11. (1) ಸೈತಾನನ ಗುರಿಹಲಗೆ ಯಾರು? (2) ಉನ್ನತ ಶಿಕ್ಷಣವು ಅವರಿಗೆ ಹೇಗೆ ತೊಂದರೆಯನ್ನು ತರಬಲ್ಲದು?

10 ಸೈತಾನನು ಏದೆನಿನಲ್ಲಿ ಮಾಡಿದಂತೆಯೇ ಈಗಲೂ ಅನನುಭವಿಗಳ ಕಡೆಗೆ ಗುರಿಯಿಡುತ್ತಾನೆ. ಯುವ ಜನರೇ ಅವನ ಗುರಿಹಲಗೆ. ಒಬ್ಬ ಯುವ ವ್ಯಕ್ತಿ ಅಥವಾ ಬೇರೆ ಯಾರೇ ಆಗಲಿ ಯೆಹೋವನ ದಾಸನಾಗಲು ತನ್ನನ್ನು ಒಪ್ಪಿಸಿಕೊಡುವಾಗ ಸೈತಾನನಿಗೆ ಸಂತೋಷವಾಗುವುದಿಲ್ಲ. ಯೆಹೋವನಿಗೆ ಸಮರ್ಪಿಸಿಕೊಳ್ಳುವವರೆಲ್ಲರೂ ತಮ್ಮ ಭಕ್ತಿ ಮತ್ತು ಸಮಗ್ರತೆಯಲ್ಲಿ ಸೋಲಬೇಕೆಂದು ದೇವರ ಈ ಶತ್ರು ಬಯಸುತ್ತಾನೆ.

11 ಆ ದಾಸನ ಕುರಿತು ಪುನಃ ಪರಿಗಣಿಸೋಣ. ತನ್ನ ಕಿವಿಯನ್ನು ಚುಚ್ಚಿಸಿಕೊಳ್ಳುವಾಗ ಅವನಿಗೆ ಸ್ವಲ್ಪ ನೋವಾಗಿರಬಹುದು. ಆದರೆ ಅವನ ಕಿವಿಯ ಮೇಲಿರುವ ಆ ಗುರುತು ಅವನು ಯಜಮಾನನೊಂದಿಗೆ ಉಳಿದುಕೊಳ್ಳುವ ನಿರ್ಣಯಮಾಡಿದ್ದಾನೆ ಎನ್ನುವುದನ್ನು ಎಲ್ಲರಿಗೆ ತೋರಿಸುತ್ತಿತ್ತು. ಹಾಗೆಯೇ ಸಮಾನಸ್ಥರಿಗಿಂತ ಭಿನ್ನವಾಗಿರುವ ಮಾರ್ಗವನ್ನು ಆರಿಸಿಕೊಳ್ಳುವಾಗ ಒಬ್ಬ ಯುವವ್ಯಕ್ತಿಗೆ ಸ್ವಲ್ಪ ಕಷ್ಟವಾಗಬಹುದು. ಏಕೆಂದರೆ ಈ ಲೋಕಕ್ಕೆ ಅನುಸಾರವಾದ ಜೀವನಮಾರ್ಗ ಆರಿಸಿಕೊಂಡರೆ ಮಾತ್ರ ನಾವು ತೃಪ್ತಿಯಿಂದಿರುತ್ತೇವೆ ಎಂಬ ವಿಚಾರವನ್ನು ಸೈತಾನ ಪ್ರವರ್ಧಿಸುತ್ತಿದ್ದಾನೆ. ಆದರೆ ಕ್ರೈಸ್ತರಿಗೆ ಗೊತ್ತಿದೆ ತಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಎಷ್ಟು ಪ್ರಾಮುಖ್ಯ ಎಂದು. “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದು ಕಲಿಸಿದನು ಯೇಸು. (ಮತ್ತಾ. 5:3) ಸಮರ್ಪಿತ ಕ್ರೈಸ್ತರು ಜೀವಿಸುವುದು ದೇವರ ಚಿತ್ತವನ್ನು ಮಾಡಲಿಕ್ಕಾಗಿಯೇ ಹೊರತು ಸೈತಾನನದ್ದಲ್ಲ. ಅವರು ದೇವರ ಧರ್ಮಶಾಸ್ತ್ರದಲ್ಲಿ ಆನಂದಪಡುತ್ತಾರೆ ಮತ್ತು ಅದನ್ನು ಹಗಲಿರುಳು ಧ್ಯಾನಿಸುತ್ತಾರೆ. (ಕೀರ್ತನೆ 1:1-3 ಓದಿ.) ಆದರೆ ಇಂದಿನ ಉನ್ನತ ಶಿಕ್ಷಣದ ಹಿಂದೆ ಹೋದರೆ ಯೆಹೋವನ ಕುರಿತು ಧ್ಯಾನಿಸಲು ಮತ್ತು ಆತನ ಸೇವೆಮಾಡಲು ನಮ್ಮಲ್ಲಿ ಸಮಯವಿರುವುದಿಲ್ಲ.

12. ಅನೇಕ ಯುವಜನರಿಗೆ ಇಂದು ಯಾವ ಆಯ್ಕೆಯಿದೆ?

12 ಈ ಲೋಕದ ಯಜಮಾನನೊಬ್ಬನಿಗೆ ದಾಸನಾಗಿರುವುದು ಒಬ್ಬ ಕ್ರೈಸ್ತನಿಗೆ ಕಷ್ಟವನ್ನು ತಂದೊಡ್ಡಬಹುದು. ಕೊರಿಂಥದವರಿಗೆ ಬರೆದ ತನ್ನ ಪ್ರಥಮ ಪತ್ರದಲ್ಲಿ ಪೌಲನು ಸಲಹೆ ಕೊಟ್ಟದ್ದು: “ದಾಸನಾಗಿದ್ದಾಗ ನೀನು ಕರೆಯಲ್ಪಟ್ಟಿಯೊ? ಅದಕ್ಕಾಗಿ ಚಿಂತೆಮಾಡಬೇಡ. ಒಂದುವೇಳೆ ನಿನಗೆ ಸ್ವತಂತ್ರನಾಗಲು ಸಾಧ್ಯವಿರುವುದಾದರೆ ಆ ಅವಕಾಶವನ್ನು ಸದುಪಯೋಗಿಸಿಕೊ.” (1 ಕೊರಿಂ. 7:21) ಹೌದು ಈ ಲೋಕದ ಯಜಮಾನನೊಬ್ಬನಿಂದ ಬಿಡುಗಡೆ ಹೊಂದುವುದು ಒಳ್ಳೆಯದಾಗಿದೆ. ಉದಾಹರಣೆಗೆ, ಅನೇಕ ದೇಶಗಳಲ್ಲಿ ಒಂದು ನಿರ್ದಿಷ್ಟ ವಯಸ್ಸಿನ ತನಕ ಶಿಕ್ಷಣ ಪಡೆಯುವುದು ಕಡ್ಡಾಯವಾಗಿದೆ. ಬಳಿಕ ಅದನ್ನು ಮುಂದುವರಿಸಬೇಕಾ ಇಲ್ಲವಾ ಎಂದು ವಿದ್ಯಾರ್ಥಿಗಳೇ ಆಯ್ಕೆಮಾಡಬಹುದು. ಒಬ್ಬನು ಕೇವಲ ಈ ಲೋಕದಲ್ಲಿ ಒಳ್ಳೆ ಜೀವನಮಾರ್ಗವನ್ನು ಮಾಡುವ ಸಲುವಾಗಿ ಉನ್ನತ ಶಿಕ್ಷಣವನ್ನು ತೆಗೆದುಕೊಳ್ಳುವಲ್ಲಿ ಯೆಹೋವನಿಗೆ ಪೂರ್ಣ ಸಮಯದ ಸೇವೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದು.1 ಕೊರಿಂಥ 7:23 ಓದಿ.

ಯಾವ ಯಜಮಾನನಿಗಾಗಿ ನೀವು ದುಡಿಯುವಿರಿ?

ಉನ್ನತ ಶಿಕ್ಷಣವೋ? ಅತ್ಯುನ್ನತ ಶಿಕ್ಷಣವೋ?

13. ಯೆಹೋವನ ಸೇವಕರು ಯಾವ ರೀತಿಯ ಶಿಕ್ಷಣ ಆರಿಸಿಕೊಂಡರೆ ಹೆಚ್ಚು ಪ್ರಯೋಜನವಿದೆ?

13 ಕೊಲೊಸ್ಸೆಯ ಕ್ರೈಸ್ತರಿಗೆ ಪೌಲನು ಹೇಳಿದ್ದು: “ಎಚ್ಚರವಾಗಿರಿ! ಕ್ರಿಸ್ತನಿಗೆ ಅನುಸಾರವಾಗಿರದೆ ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿಯೂ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ಅನುಸಾರವಾಗಿಯೂ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.” (ಕೊಲೊ. 2:8) ಇಂದು ಬುದ್ಧಿವಂತರೆನಿಸಿಕೊಳ್ಳುವ ಅನೇಕರು ಲೋಕಕ್ಕೆ ಸಂಬಂಧಪಟ್ಟ ವಿಷಯಗಳನ್ನು ಬೋಧಿಸುತ್ತಾರೆ. ಅವು ‘ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳೇ.’ ಉನ್ನತ ಶಿಕ್ಷಣ ಪಡೆದಿರುವ ಅನೇಕರಲ್ಲಿ ಪ್ರಾಯೋಗಿಕ ಕೌಶಲಗಳೇ ಇರುವುದಿಲ್ಲ ಅನ್ನಬಹುದು. ಹಾಗಾಗಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿ ಕಡಿಮೆಯಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನ ಸೇವಕರು ತಮಗೆ ಮುಂದೆ ಉಪಯೋಗಕ್ಕೆ ಬರುವಂಥ ಕೌಶಲಗಳನ್ನು ಕಲಿಸುವ ವಿದ್ಯಾಭ್ಯಾಸವನ್ನು ಆರಿಸಿಕೊಳ್ಳುತ್ತಾರೆ. ಹೀಗೆ ಅವರು ಸರಳ ಜೀವನವನ್ನು ನಡಿಸುತ್ತಾ ದೇವರ ಸೇವೆಯನ್ನು ಮಾಡುತ್ತಾ ಇರಲು ಸಾಧ್ಯವಾಗುತ್ತದೆ. ಪೌಲನು ತಿಮೊಥೆಯನಿಗೆ ಬರೆದ ಬುದ್ಧಿವಾದವನ್ನು ಅವರು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ: “ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ ಎಂಬುದಂತೂ ಖಂಡಿತ. ಆದುದರಿಂದ ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು.” (1 ತಿಮೊ. 6:6, 8) ತಮ್ಮ ಹೆಸರಿನೊಂದಿಗೆ ದೊಡ್ಡ ದೊಡ್ಡ ಡಿಗ್ರಿಗಳನ್ನು ಅಥವಾ ಬಿರುದುಗಳನ್ನು ಪಡೆಯುವ ಬದಲಿಗೆ ನಿಜ ಕ್ರೈಸ್ತರು ಕ್ಷೇತ್ರಸೇವೆಯಲ್ಲಿ ತಮ್ಮಿಂದ ಸಾಧ್ಯವಾಗುವಷ್ಟು ಹೆಚ್ಚು ಶ್ರಮಿಸಿ ‘ಶಿಫಾರಸ್ಸು ಪತ್ರಗಳನ್ನು’ ಪಡೆಯುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸುತ್ತಾರೆ.2 ಕೊರಿಂಥ 3:1-3 ಓದಿ.

14. ಫಿಲಿಪ್ಪಿ 3:8ರ ಪ್ರಕಾರ ದೇವರಿಗೆ ಮತ್ತು ಕ್ರಿಸ್ತನಿಗೆ ದಾಸನಾಗಿ ಸೇವೆ ಮಾಡುವ ವಿಷಯದಲ್ಲಿ ಪೌಲನ ಅನಿಸಿಕೆ ಏನಾಗಿತ್ತು?

14 ಅಪೊಸ್ತಲ ಪೌಲನ ಮಾದರಿಯನ್ನು ಗಮನಿಸಿ. ಧರ್ಮಶಾಸ್ತ್ರದ ಯೆಹೂದಿ ಶಿಕ್ಷಕನಾಗಿದ್ದ ಗಮಲಿಯೇಲನ ಹತ್ತಿರ ಅವನು ಶಿಕ್ಷಣ ಪಡೆದಿದ್ದನು. ಪೌಲನಿಗೆ ಆಗ ದೊರೆತಿದ್ದ ವಿದ್ಯಾಭ್ಯಾಸ ಇಂದಿನ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೆ ಸಮ. ಆದರೆ ತನ್ನ ಶಿಕ್ಷಣವನ್ನು, ದೇವರಿಗೂ ಕ್ರಿಸ್ತನಿಗೂ ದಾಸನಾಗುವ ಅವಕಾಶಕ್ಕೆ ಹೋಲಿಸಿದಾಗ ಪೌಲನಿಗೆ ಹೇಗೆ ಅನಿಸಿತು? ಅವನು ಬರೆದದ್ದು: “ನನ್ನ ಕರ್ತನಾದ ಕ್ರಿಸ್ತ ಯೇಸುವಿನ ಕುರಿತಾದ ಜ್ಞಾನದ ಅಪಾರವಾದ ಮೌಲ್ಯದ ನಿಮಿತ್ತ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ.” ಅವನು ಮುಂದುವರಿಸಿ ಹೇಳಿದ್ದು: “[ಕ್ರಿಸ್ತನನ್ನು ಗಳಿಸಬೇಕೆಂಬ ಉದ್ದೇಶದ] ನಿಮಿತ್ತ ನಾನು ಎಲ್ಲವನ್ನೂ ನಷ್ಟವೆಂದು ಪರಿಗಣಿಸಿ ಅವುಗಳನ್ನು ಕಸವೆಂದೆಣಿಸುತ್ತೇನೆ.” (ಫಿಲಿ. 3:8) ಈ ವಿಷಯವನ್ನು ಮನಸ್ಸಿನಲ್ಲಿಡುವುದು ಯುವ ಕ್ರೈಸ್ತರಿಗೆ ಮತ್ತು ದೇವಭಯವುಳ್ಳ ಅವರ ಹೆತ್ತವರಿಗೆ ಶಿಕ್ಷಣದ ವಿಷಯದಲ್ಲಿ ವಿವೇಕದ ಆಯ್ಕೆಯನ್ನು ಮಾಡಲು ಸಹಾಯ ಮಾಡುತ್ತದೆ. (ಚಿತ್ರಗಳನ್ನು ನೋಡಿ.)

ಅತ್ಯುನ್ನತ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ

15, 16. (1) ಯೆಹೋವನ ಸಂಘಟನೆಯಿಂದ ನಮಗೆ ಯಾವ ಶಿಕ್ಷಣ ಸಿಗುತ್ತಿದೆ? (2) ಆ ಶಿಕ್ಷಣದ ಮುಖ್ಯ ಉದ್ದೇಶವೇನು?

15 ಈ ಲೋಕದ ಅನೇಕ ಉನ್ನತ ವಿದ್ಯಾಸಂಸ್ಥೆಗಳಲ್ಲಿ ವಾತಾವರಣ ಹೇಗಿರುತ್ತದೆ? ಅಲ್ಲಿ ಅನೇಕಬಾರಿ ರಾಜಕೀಯ ಹಾಗೂ ಸಾಮಾಜಿಕ ಅಶಾಂತಿಯನ್ನು ಹುಟ್ಟಿಸುವ ಚಟುವಟಿಕೆಗಳು ನಡೆಯುತ್ತವೆ. (ಎಫೆ. 2:2) ಆದರೆ ಯೆಹೋವನ ಸಂಘಟನೆಯು ಕ್ರೈಸ್ತ ಸಭೆಯ ಶಾಂತಿಯ ವಾತಾವರಣದಲ್ಲಿ ಅತ್ಯುತ್ತಮ ಶಿಕ್ಷಣವನ್ನು ಒದಗಿಸುತ್ತದೆ. ನಮ್ಮಲ್ಲಿ ಎಲ್ಲರೂ ಪ್ರತಿವಾರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯುತ್ತೇವೆ. ಅಷ್ಟೆ ಅಲ್ಲದೆ, ಅವಿವಾಹಿತ ಪಯನೀಯರ್‌ ಸಹೋದರರಿಗಾಗಿ ‘ಬೈಬಲ್‌ ಶಾಲೆ’ ಮತ್ತು ಕ್ರೈಸ್ತ ದಂಪತಿಗಳಿಗಾಗಿ ಬೈಬಲ್‌ ಶಾಲೆಗಳಿವೆ. ಇಂಥ ದೇವಪ್ರಭುತ್ವಾತ್ಮಕ ಶಿಕ್ಷಣ ನಾವು ಸ್ವರ್ಗದಲ್ಲಿರುವ ನಮ್ಮ ಯಜಮಾನನಾದ ಯೆಹೋವಗೆ ವಿಧೇಯರಾಗುವಂತೆ ಸಹಾಯಮಾಡುತ್ತದೆ.

16 ನಾವು ಸಮೃದ್ಧವಾದ ಆಧ್ಯಾತ್ಮಿಕ ನಿಕ್ಷೇಪಗಳಿಗಾಗಿ ವಾಚ್‌ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ನಲ್ಲಿ, ವಾಚ್‌ಟವರ್‌ ಲೈಬ್ರರಿಯಲ್ಲಿ ಹುಡುಕಬಹುದು. ಈ ಎಲ್ಲ ಶಿಕ್ಷಣದ ಮುಖ್ಯ ಉದ್ದೇಶ ಯೆಹೋವನ ಆರಾಧನೆಯೇ. ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವಂತೆ ನಾವು ಇತರರಿಗೆ ಹೇಗೆ ಸಹಾಯಮಾಡಬಹುದೆಂದು ಈ ಶಿಕ್ಷಣ ಕಲಿಸುತ್ತದೆ. (2 ಕೊರಿಂ. 5:20) ನಂತರ ಅವರು ಸಹ ಇನ್ನಿತರರಿಗೆ ಕಲಿಸುವಂತೆ ತಯಾರುಮಾಡುತ್ತದೆ.—2 ತಿಮೊ. 2:2.

ದಾಸನಿಗೆ ದೊರೆಯುವ ಪ್ರತಿಫಲ

17. ಅತ್ಯುನ್ನತ ಶಿಕ್ಷಣವನ್ನು ಆಯ್ಕೆಮಾಡುವುದರಿಂದ ಯಾವ ಪ್ರತಿಫಲ ಸಿಗುತ್ತದೆ?

17 ತಲಾಂತುಗಳ ಕುರಿತ ಯೇಸುವಿನ ಸಾಮ್ಯ ಗಮನಿಸಿ. ಅದರಲ್ಲಿ ಇಬ್ಬರು ನಂಬಿಗಸ್ತ ಆಳುಗಳು ಯಜಮಾನನಿಂದ ಶ್ಲಾಘನೆ ಪಡೆದರು. ಮತ್ತವರು ಹೆಚ್ಚು ಕೆಲಸವನ್ನು ಪಡೆಯುವ ಮೂಲಕ ಯಜಮಾನನ ಸಂತೋಷದಲ್ಲಿ ಭಾಗಿಗಳಾದರು. (ಮತ್ತಾಯ 25:21, 23 ಓದಿ.) ಇಂದು ನಾವು ಅತ್ಯುನ್ನತ ಶಿಕ್ಷಣ ಪಡೆಯುವ ಆಯ್ಕೆಮಾಡುವುದರಿಂದ ಆನಂದವನ್ನೂ ಪ್ರತಿಫಲಗಳನ್ನೂ ಪಡೆಯುತ್ತೇವೆ. ಸಹೋದರ ಮೈಕಲ್‌ ಮಾದರಿಯನ್ನು ಗಮನಿಸಿ. ಶಾಲೆಯಲ್ಲಿ ಅವನು ಎಷ್ಟು ಚೆನ್ನಾಗಿ ಓದಿದನೆಂದರೆ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಚರ್ಚಿಸಲು ಅವನ ಶಿಕ್ಷಕರು ಒಂದು ಕೂಟವನ್ನು ಏರ್ಪಡಿಸಿದರು. ಆದರೆ ಅವರಿಗೆ ಆಶ್ಚರ್ಯ ಕಾದಿತ್ತು. ಮೈಕಲ್‌ ಒಂದು ಅಲ್ಪಕಾಲಿಕ ವೃತ್ತಿ ತರಬೇತಿಯನ್ನು ಪಡೆಯುವ ಆಯ್ಕೆಮಾಡಿದನು. ಇದರಿಂದ ಅವನು ಮುಂದೆ ತನ್ನ ಅಗತ್ಯಗಳನ್ನು ಪೂರೈಸುತ್ತಾ ರೆಗ್ಯುಲರ್‌ ಪಯನೀಯರ್‌ ಸೇವೆಮಾಡಲು ಸಾಧ್ಯವಾಯಿತು. ‘ಸಿಕ್ಕಿದ ಸದವಕಾಶವನ್ನು ನಾನು ಕಳೆದುಕೊಂಡೆನಲ್ಲಾ’ ಎಂದು ಅವನು ನೆನಸಿದನಾ? ಅವರು ಏನು ಹೇಳುತ್ತಾರೆ ನೋಡಿ: “ಪಯನೀಯರನಾಗಿ ಮತ್ತು ಈಗ ಸಭೆಯ ಹಿರಿಯನಾಗಿ ನಾನು ಪಡೆದಿರುವ ದೇವಪ್ರಭುತ್ವಾತ್ಮಕ ಶಿಕ್ಷಣಕ್ಕೆ ಯಾವುದೂ ಸರಿಸಾಟಿಯಲ್ಲ. ನನಗೆ ಸಿಕ್ಕಿರುವ ಆಶೀರ್ವಾದಗಳು ಮತ್ತು ಸದವಕಾಶಗಳು ನಾನು ಗಳಿಸಬಹುದಾಗಿದ್ದ ಹಣಕ್ಕಿಂತ ಎಷ್ಟೋ ಮಿಗಿಲಾದದ್ದಾಗಿವೆ. ಉನ್ನತ ಶಿಕ್ಷಣಕ್ಕೆ ಹೋಗದೆ ಇದ್ದದ್ದಕ್ಕಾಗಿ ತುಂಬ ಸಂತೋಷಿಸುತ್ತೇನೆ.”

18. ಅತ್ಯುನ್ನತ ಶಿಕ್ಷಣವನ್ನು ಆರಿಸಿಕೊಳ್ಳಲು ನಿಮ್ಮನ್ನು ಯಾವುದು ಪ್ರಚೋದಿಸುತ್ತದೆ?

18 ಅತ್ಯುನ್ನತ ಶಿಕ್ಷಣ ನಮಗೆ ದೇವರ ಚಿತ್ತವೇನೆಂದು ಕಲಿಸಿ ಯೆಹೋವನಿಗಾಗಿ ದುಡಿಯಲು ಸಹಾಯಮಾಡುತ್ತದೆ. ನಾವು “ನಾಶದ ದಾಸತ್ವದಿಂದ ಬಿಡುಗಡೆಯಾಗಿ” ಕೊನೆಗೆ “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದುವ” ಪ್ರತೀಕ್ಷೆಯನ್ನು ನಮ್ಮ ಮುಂದಿಡುತ್ತದೆ. (ರೋಮ. 8:21) ಎಲ್ಲಕ್ಕೂ ಮಿಗಿಲಾಗಿ, ನಮ್ಮ ಯಜಮಾನನಾದ ಯೆಹೋವನನ್ನು ನಾವು ನಿಜವಾಗಿಯೂ ಪ್ರೀತಿಸುತ್ತೇವೆಂದು ತೋರಿಸುವುದು ಹೇಗೆಂದು ಇದು ಕಲಿಸುತ್ತದೆ.—ವಿಮೋ. 21:5.