ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ಈಕ್ವಡಾರ್‌ನಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ಈಕ್ವಡಾರ್‌ನಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ಈಕ್ವಡಾರ್‌ನಲ್ಲಿ

ಇಟಲಿಯ ಬ್ರೂನೊ ಎಂಬ ಸಹೋದರ ಆಗಷ್ಟೇ ಹೈಸ್ಕೂಲ್‌ ಮುಗಿಸಿದ್ದ. ಅವನಿಗೀಗ ಪ್ರಾಮುಖ್ಯ ನಿರ್ಣಯ ಮಾಡಬೇಕಾದ ಸಂದರ್ಭ. ತರಗತಿಯಲ್ಲಿ ಶ್ರೇಷ್ಠ ಅಂಕ ಗಳಿಸಿದ್ದ ಅವನಿಗೆ ಸಂಬಂಧಿಕರಿಂದಲೂ ಶಿಕ್ಷಕರಿಂದಲೂ ಉನ್ನತ ಶಿಕ್ಷಣ ಪಡೆಯುವಂತೆ ಒತ್ತಡ. ಆದರೆ ಯೆಹೋವ ದೇವರಿಗೆ ಈಗಾಗಲೇ ತನ್ನನ್ನು ಸಮರ್ಪಿಸಿಕೊಂಡಿದ್ದ ಬ್ರೂನೊ ತನ್ನ ಜೀವನದಲ್ಲಿ ಆತನ ಸೇವೆಗೆ ಆದ್ಯತೆ ಕೊಡುತ್ತೇನೆಂದು ಮಾತುಕೊಟ್ಟಿದ್ದ. ಬ್ರೂನೊ ಈಗ ಏನು ಮಾಡುವನು? ಉನ್ನತ ಶಿಕ್ಷಣ ತೆಗೆದುಕೊಳ್ಳುವನೇ? ಅಥವಾ ದೇವರ ಸೇವೆಗೆ ಆದ್ಯತೆ ಕೊಡುವನೇ? ಅವನ ಮಾತುಗಳನ್ನೇ ಕೇಳೋಣ: “‘ದೇವರೇ, ನಿನಗೆ ಕೊಟ್ಟ ಮಾತಿಗನುಸಾರ ನಿನ್ನ ಸೇವೆಗೆ ಆದ್ಯತೆ ಕೊಡ್ತೇನೆ. ಆದ್ರೆ ನನಗೆ ಬೋರುಬೋರಾಗಿರೋ ಜೀವನ ಇಷ್ಟ ಇಲ್ಲ. ನಿನ್ನ ಸೇವೆಯಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳೋ ಅವಕಾಶ ಕೊಡು’ ಅಂತ ಪ್ರಾರ್ಥನೆ ಮಾಡಿದೆ.”

ಕೆಲವು ವರ್ಷಗಳ ನಂತರ ಬ್ರೂನೊ ಹೆಚ್ಚು ಪ್ರಚಾರಕರ ಅಗತ್ಯವಿರುವ ದಕ್ಷಿಣ ಅಮೆರಿಕದ ಈಕ್ವಡಾರ್‌ನಲ್ಲಿ ಸೇವೆಮಾಡಲು ಹೋದ. “ನಾನು ಕೇಳಿದ್ದಕ್ಕಿಂತ ಎಷ್ಟೋ ಹೆಚ್ಚು ಆಶೀರ್ವಾದಗಳನ್ನು ಯೆಹೋವನು ಕೊಟ್ಟಿದ್ದಾನೆ” ಎನ್ನುತ್ತಾನೆ ಬ್ರೂನೊ. ಅವನಂತೆ ಎಷ್ಟೋ ಮಂದಿ ತರುಣ ತರುಣಿಯರು ಹೆಚ್ಚು ಸೇವೆ ಮಾಡಲಿಕ್ಕಾಗಿ ಈಕ್ವಡಾರ್‌ಗೆ ಬಂದಿರುವುದನ್ನು ನೋಡಿ ಅವನಿಗೆ ಖುಷಿಯಾಯಿತು.

‘ಯೆಹೋವನನ್ನು ಪರೀಕ್ಷಿಸಿ’ ನೋಡಿದ ಯುವ ಜನರು

“ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ . . . ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು . . . ಪರೀಕ್ಷಿಸಿರಿ” ಎಂದು ಯೆಹೋವ ದೇವರು ಕರೆಕೊಡುತ್ತಾನೆ. (ಮಲಾ. 3:10) ಈ ಕರೆಗೆ ಬ್ರೂನೊ ಮತ್ತು ಜಗತ್ತಿನಾದ್ಯಂತವಿರುವ ಸಾವಿರಾರು ಯುವ ಕ್ರೈಸ್ತರು ಓಗೊಟ್ಟಿದ್ದಾರೆ. ದೇವರ ಮೇಲಿನ ಪ್ರೀತಿಯಿಂದ ಇವರೆಲ್ಲರು ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಗಳಲ್ಲಿ ಸೇವೆಮಾಡಲು ತಮ್ಮ ಸಮಯ, ಶಕ್ತಿ, ಸಂಪತ್ತನ್ನು ಮನಃಪೂರ್ವಕವಾಗಿ ವಿನಿಯೋಗಿಸುತ್ತಿದ್ದಾರೆ. ಹೀಗೆ ಯೆಹೋವ ದೇವರನ್ನು “ಪರೀಕ್ಷಿಸಿ” ನೋಡಲು ಮುಂದೆಬಂದಿದ್ದಾರೆ.

ಈಕ್ವಡಾರ್‌ನಲ್ಲಿ ಸೇವೆಮಾಡಲು ಬಂದ ಈ ಯುವ ಕ್ರೈಸ್ತರು ಕಂಡದ್ದೇನು? “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ.” (ಮತ್ತಾ. 9:37) ಉದಾಹರಣೆಗೆ, ಜರ್ಮನಿಯಿಂದ ಬಂದ ಯಾಕ್ಲಿನ್‌ ಎಂಬಾಕೆ ಈಕ್ವಡಾರ್‌ನ ಬ್ರಾಂಚ್‌ ಆಫೀಸಿಗೆ ಪತ್ರ ಬರೆದದ್ದು: “ನಾನು ಈಕ್ವಡಾರ್‌ಗೆ ಬಂದು ಎರಡೇ ವರ್ಷ ಆಯಿತು. ಈಗಾಗಲೇ 13 ಬೈಬಲ್‌ ಅಧ್ಯಯನ ನಡೆಸ್ತಾ ಇದ್ದೇನೆ. 4 ಮಂದಿ ಕೂಟಗಳಿಗೂ ಬರ್ತಾ ಇದ್ದಾರೆ. ನನಗೆಷ್ಟು ಖುಷಿಯಾಗಿದೆ ಅಂತ ಹೇಳಲಿಕ್ಕೇ ಆಗ್ತಿಲ್ಲ.” ಕೆನಡ ದೇಶದ ಶಾಂಟೆಲ್‌ ಏನನ್ನುತ್ತಾಳೆ ಕೇಳಿ: “ನಾನು 2008ರಲ್ಲಿ ಈಕ್ವಡಾರ್‌ನ ಕರಾವಳಿ ಪ್ರದೇಶವೊಂದಕ್ಕೆ ಬಂದಾಗ ಅಲ್ಲಿ ಒಂದೇ ಒಂದು ಸಭೆ ಇತ್ತು. ಈಗ ಮೂರು ಸಭೆಗಳಿವೆ! 30ಕ್ಕಿಂತ ಹೆಚ್ಚು ಪಯನೀಯರರು ಇದ್ದಾರೆ!! ಹೊಸಬರು ಪ್ರಗತಿ ಮಾಡೋದನ್ನು ನೋಡೋದೇ ದೊಡ್ಡ ಸಂತೋಷ!!!” ಶಾಂಟೆಲ್‌ ಮುಂದುವರಿಸುತ್ತಾ ಹೇಳುವುದು: “9,000 ಅಡಿ ಎತ್ತರದಲ್ಲಿರೋ ಒಂದು ನಗರಕ್ಕೆ ಇತ್ತೀಚೆಗೆ ಸ್ಥಳಾಂತರಿಸಿದೆ. ಆ್ಯಂಡಿಸ್‌ ಪರ್ವತದಲ್ಲಿರೋ ಈ ನಗರದ ಜನಸಂಖ್ಯೆ 75,000ಕ್ಕಿಂತ ಹೆಚ್ಚಿದೆಯಾದರೂ ಸಭೆಯಿರೋದು ಮಾತ್ರ ಒಂದೇ. ಇಷ್ಟೊಂದು ಜನರಿಗೆ ಸುವಾರ್ತೆ ಸಾರೋದಂದ್ರೆ ನನಗೆ ಖುಷಿಯೋ ಖುಷಿ. ತುಂಬ ಜನರು ಸತ್ಯ ಕಲಿತಾ ಇದ್ದಾರೆ.”

ಸವಾಲುಗಳು ಇಲ್ಲವೆಂದಲ್ಲ

ಅಗತ್ಯ ಹೆಚ್ಚಿರುವ ಸ್ಥಳಕ್ಕೆ ಅಥವಾ ದೇಶಕ್ಕೆ ಹೋಗಿ ಸೇವೆ ಮಾಡುವುದು ಅಷ್ಟೊಂದು ಸುಲಭವಲ್ಲ. ಅದರದ್ದೇ ಆದ ಸವಾಲುಗಳು ಇರುತ್ತವೆ. ವಿದೇಶದಲ್ಲಿ ಸೇವೆ ಮಾಡುವ ಗುರಿಯಿರುವ ಯುವ ಕ್ರೈಸ್ತರು ಕೆಲವೊಮ್ಮೆ ಅಲ್ಲಿಗೆ ಹೋಗುವ ಮೊದಲೇ ಸವಾಲುಗಳನ್ನು ಎದುರಿಸುತ್ತಾರೆ. ಈ ಅನುಭವ ಅಮೆರಿಕದ ಕೇಲಾಳಿಗೂ ಆಯಿತು. “ಅಗತ್ಯ ಹೆಚ್ಚಿರೋ ಕಡೆ ಹೋಗಿ ಸೇವೆ ಮಾಡಲು ಇಷ್ಟಪಡ್ತೇನೆ ಎಂದು ಹೇಳಿದಾಗ ಕೆಲವು ಸಹೋದರರ ಪ್ರತಿಕ್ರಿಯೆ ನೋಡಿ ನನ್ನ ಉತ್ಸಾಹ ಜರ್ರನೆ ಇಳಿದುಹೋಯಿತು. ಅವರ ಉದ್ದೇಶ ಒಳ್ಳೇದಿತ್ತು. ಆದರೆ ನಾನ್ಯಾಕೆ ಅಲ್ಲಿಗೆ ಹೋಗಿ ಪಯನೀಯರ್‌ ಸೇವೆ ಮಾಡೋಕೆ ಇಷ್ಟಪಡ್ತೇನೆ ಅನ್ನೋದು ಅವರಿಗೆ ಅರ್ಥ ಆಗಲಿಲ್ಲ. ಅವರು ಹೇಳೋದನ್ನ ನೋಡಿ ಕೆಲವೊಮ್ಮೆ ‘ನಾನು ಇಟ್ಟಿರೋ ಗುರಿ ಸರಿನಾ?’ ಅಂತ ಗೊಂದಲ ಆಗ್ತಿತ್ತು” ಎನ್ನುತ್ತಾಳೆ ಕೇಲಾ. ಹಾಗಿದ್ದರೂ ಅವಳು ತನ್ನ ಗುರಿ ಮುಟ್ಟಿದಳು. ಅವಳಿಗೆ ಯಾವುದು ಸಹಾಯ ಮಾಡಿತು? “ನಾನು ತುಂಬ ಸಲ ಪ್ರಾರ್ಥಿಸಿದೆ. ಪ್ರೌಢ ಸಹೋದರ ಸಹೋದರಿಯರೊಂದಿಗೆ ತುಂಬ ಹೊತ್ತು ಮಾತಾಡಿದೆ. ಯೆಹೋವನ ಸೇವೆ ಮಾಡಲು ಮುಂದೆ ಬಂದರೆ ಆತನು ತಪ್ಪದೆ ಆಶೀರ್ವದಿಸುತ್ತಾನೆ ಅಂತ ಇದರಿಂದ ತಿಳುಕೊಂಡೆ.”

ವಿದೇಶದಲ್ಲಿ ಸೇವೆಮಾಡುವ ನೇಮಕ ಪಡೆದ ನಂತರವೂ ಕೆಲವು ಸವಾಲುಗಳು ಎದುರಾಗುತ್ತವೆ. ಐರ್ಲೆಂಡ್‌ನ ಶೇಬಾನ್‌ಳಿಗೆ ಹೊಸ ಭಾಷೆ ಕಲಿಯುವುದು ದೊಡ್ಡ ಸವಾಲಾಗಿತ್ತು. “ನನಗೆ ಭಾಷೆ ಸಮಸ್ಯೆ. ಏನೋ ಹೇಳ್ಬೇಕು ಅಂತ ಅನಿಸಿದ್ರೂ ಹೇಳೋಕೆ ಗೊತ್ತಿಲ್ಲದೆ ತಲೆ ಚಚ್ಚಿಕೊಳ್ತಾ ಇದ್ದೆ. ತಾಳ್ಮೆ ಕಳಕೊಳ್ಳದೆ ಶ್ರದ್ಧೆಯಿಂದ ಭಾಷೆ ಕಲಿಬೇಕಿತ್ತು. ಎಷ್ಟೋ ಸಲ ತಪ್ಪುತಪ್ಪಾಗುತ್ತಿತ್ತು. ನನ್ನ ತಪ್ಪನ್ನು ನೋಡಿ ನಾನೇ ನಕ್ಕು ಇನ್ನೂ ಸ್ವಲ್ಪ ಪ್ರಯತ್ನ ಹಾಕೋ ಅಭ್ಯಾಸ ಮಾಡ್ಕೊಂಡೆ” ಎನ್ನುತ್ತಾಳೆ ಅವಳು. ಎಸ್ಟೋನಿಯದ ಆ್ಯನಳಿಗೆ ಕೂಡ ಇದೇ ಸಮಸ್ಯೆ. “ಇಲ್ಲಿ ತುಂಬ ಸೆಕೆ, ಉಸಿರುಗಟ್ಟಿಸುವಷ್ಟು ಧೂಳು, ತಣ್ಣೀರಲ್ಲೇ ಸ್ನಾನ. ಆದರೆ ಈ ಸ್ಪ್ಯಾನಿಷ್‌ ಭಾಷೆ ಕಲಿಯೋದಿದೆಯಲ್ಲ, ಅದರ ಮುಂದೆ ಇದೆಲ್ಲ ಏನೂ ಅಲ್ಲ ಬಿಡಿ. ಕೆಲವು ಸಲ ಅಂತೂ ‘ನನ್ನಿಂದ ಇದಾಗಲ್ಲಪ್ಪಾ, ಓಡೋಗೋಣ’ ಅಂತ ಅನಿಸ್ತಿತ್ತು. ಮಾತಾಡುವಾಗ ತಪ್ಪಾದರೆ ಬೇಸರಪಡುವ ಬದಲು ಮಾಡಿರೋ ಪ್ರಗತಿ ನೋಡಿ ಖುಷಿಪಡಲು ಕಲಿತೆ” ಎನ್ನುತ್ತಾಳೆ ಆ್ಯನ.

ಇನ್ನೊಂದು ಸವಾಲೆಂದರೆ ಮನೆ ನೆನಪು. ಅಮೆರಿಕದ ಜಾನತನ್‌ ಹೀಗನ್ನುತ್ತಾನೆ: “ನಾನು ಈಕ್ವಡಾರ್‌ಗೆ ಬಂದಾಗ ಮನೆಯ ನೆನಪು ತುಂಬ ಬರ್ತಿತ್ತು. ಗೆಳೆಯರನ್ನು ಮಿಸ್‌ ಮಾಡ್ಕೊಳ್ತಾ ಇದ್ದೆ. ವಾಪಸ್ಸು ಹೋಗಿ ಬಿಡೋಣ ಅನಿಸ್ತಿತ್ತು. ಆಗ ನಾನು ವೈಯಕ್ತಿಕ ಬೈಬಲ್‌ ಅಧ್ಯಯನ, ಕ್ಷೇತ್ರ ಸೇವೆ ಕಡೆ ಗಮನಕೊಟ್ಟೆ. ಹೋಗ್ತಾ ಹೋಗ್ತಾ ನನ್ನ ಬೇಸರ ಕಡಿಮೆಯಾಯ್ತು. ಸೇವೆಯಲ್ಲಿ ಹೆಚ್ಚೆಚ್ಚು ಆಸಕ್ತ ಜನರು ಸಿಕ್ಕಿದ್ರು. ಸಭೆಯಲ್ಲಿ ಹೊಸ ಹೊಸ ಸ್ನೇಹಿತರನ್ನು ಮಾಡಿಕೊಂಡೆ. ಇದು ನನ್ನಲ್ಲಿ ಹೊಸ ಚೈತನ್ಯ ತುಂಬಿತು.”

ಅಲ್ಲಿನ ಜೀವನಕ್ಕೆ ಹೊಂದಿಕೊಳ್ಳುವುದು ಸಹ ಒಂದು ಸವಾಲು. ಏಕೆಂದರೆ ಸ್ವದೇಶದಲ್ಲಿ ಇರುವಷ್ಟು ಸೌಕರ್ಯಗಳು ಅಲ್ಲಿರಲಿಕ್ಕಿಲ್ಲ. ಕೆನಡದ ಬೋ ಎಂಬ ತರುಣ ಹೇಳಿದಂತೆ, “ನಮ್ಮನೆಯಲ್ಲಿ ವಿದ್ಯುತ್‌, ನೀರು ಯಾವಾಗಲೂ ಇರುತ್ತಿತ್ತು. ಇಲ್ಲಿ ಹಾಗಲ್ಲ. ಅದು ಯಾವಾಗ ಬರುತ್ತೆ, ಯಾವಾಗ ಹೋಗುತ್ತೆ ಅನ್ನೋದೇ ಗೊತ್ತಾಗಲ್ಲ.” ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಬಡತನ, ಅನಕ್ಷರತೆ ಸಾಮಾನ್ಯ. ಒಳ್ಳೇ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಆದರೆ ಇಂಥ ಸಮಸ್ಯೆಗಳನ್ನು ಆಸ್ಟ್ರಿಯದ ಇನೆಸ್‌ ನಿಭಾಯಿಸುತ್ತಾಳೆ. ಹೇಗೆ? ಅಲ್ಲಿನ ಜನರ ಒಳ್ಳೇ ಗುಣಗಳ ಮೇಲೆ ಮನಸ್ಸಿಡುವ ಮೂಲಕ. “ಇಲ್ಲಿನ ಜನರು ಅತಿಥಿಸತ್ಕಾರದಲ್ಲಿ ಎತ್ತಿದ ಕೈ. ಅವರಲ್ಲಿರುವ ದಯೆ, ಸಹಾಯ ಮಾಡುವ ಗುಣ, ನಮ್ರತೆಯನ್ನು ನಿಜವಾಗಿ ಮೆಚ್ಚಬೇಕು. ದೇವರ ಬಗ್ಗೆ ಕಲಿಯುವುದರಲ್ಲಿ ಅವರು ತೋರಿಸೋ ಆಸಕ್ತಿ ನೋಡಿದ್ರೆ ನನಗೆ ತುಂಬ ಸಂತೋಷವಾಗುತ್ತೆ” ಎನ್ನುತ್ತಾಳವಳು.

“ಸ್ಥಳಹಿಡಿಯಲಾಗದಷ್ಟು ಸುವರ”

ಈಕ್ವಡಾರ್‌ನಲ್ಲಿ ಸೇವೆಮಾಡಲು ಅನೇಕ ತ್ಯಾಗಗಳನ್ನು ಮಾಡಿರುವ ಈ ಯುವ ಕ್ರೈಸ್ತರು ಊಹಿಸಿದ್ದಕ್ಕಿಂತ “ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ” ಯೆಹೋವನಿಂದ ಆಶೀರ್ವಾದವಾಗಿ ಪಡೆದಿದ್ದಾರೆ. (ಎಫೆ. 3:20) “ಸ್ಥಳಹಿಡಿಯಲಾಗದಷ್ಟು ಸುವರವನ್ನು” ಯೆಹೋವನು ಸುರಿಸಿದ್ದಾನೆ ಎಂಬುದು ಅವರ ಅಂಬೋಣ. (ಮಲಾ. 3:10) ತಾವು ಪಡೆದ ಆಶೀರ್ವಾದಗಳ ಕುರಿತು ಅವರು ಏನು ಹೇಳುತ್ತಾರೆಂದು ಗಮನಿಸಿ:

ಬ್ರೂನೊ: “ನಾನು ಮೊದಲು ಈಕ್ವಡಾರ್‌ನ ಅಮೆಜಾನ್‌ ಪ್ರಾಂತಕ್ಕೆ ಬಂದೆ. ಈ ರಮಣೀಯ ಸ್ಥಳದಲ್ಲಿ ಸೇವೆಮಾಡಿದ ನಂತರ ಈಕ್ವಡಾರ್‌ನ ಬ್ರಾಂಚ್‌ ಕಟ್ಟಡದ ವಿಸ್ತರಣಾ ಕಾರ್ಯದಲ್ಲಿ ಪಾಲ್ಗೊಂಡೆ. ಈಗ ಬೆತೆಲ್‌ನಲ್ಲಿ ಸೇವೆಮಾಡ್ತಿದ್ದೇನೆ. ನಾನು ದೇವರ ಸೇವೆಗೆ ಆದ್ಯತೆ ಕೊಡಲು ಮಾಡಿದ ನಿರ್ಣಯ ಸರಿಯಾಗಿತ್ತು. ದೇವರ ಸೇವೆಯಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ಆನಂದಿಸಬೇಕೆಂಬ ನನ್ನ ಆಸೆಯನ್ನು ಯೆಹೋವ ದೇವರು ಈಡೇರಿಸುತ್ತಿದ್ದಾನೆ.”

ಬೋ: “ಈಕ್ವಡಾರ್‌ನಲ್ಲಿ ನನ್ನ ಸಮಯವನ್ನೆಲ್ಲ ಯೆಹೋವನ ಸೇವೆಗಾಗಿಯೇ ಉಪಯೋಗಿಸಲು ಆಗ್ತಿದೆ. ಇದರಿಂದ ದೇವರಿಗೆ ತುಂಬ ಹತ್ತಿರ ಆಗಿದ್ದೇನೆ. ಅಷ್ಟೇ ಅಲ್ಲ ಸುಂದರ ಸ್ಥಳಗಳನ್ನು ನೋಡೋದಂದ್ರೆ ನನಗಿಷ್ಟ. ಅದು ಕೂಡ ಈಗ ಸಾಧ್ಯವಾಗಿದೆ.”

ಆ್ಯನ: “ಮಿಷನರಿಗಳಂತೆ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡೋದು ಅವಿವಾಹಿತಳಾದ ನನಗೆ ಸಾಧ್ಯವಿಲ್ಲ ಅಂದುಕೊಂಡಿದ್ದೆ. ಆದ್ರೆ ಸಾಧ್ಯ ಅಂತ ಈಗ ಗೊತ್ತಾಗಿದೆ. ಯೆಹೋವನು ನನ್ನನ್ನು ತುಂಬ ಆಶೀರ್ವದಿಸಿದ್ದಾನೆ. ಸತ್ಯ ಕಲಿಸುವ, ರಾಜ್ಯ ಸಭಾಗೃಹಗಳನ್ನು ಕಟ್ಟುವ ಕೆಲಸದಲ್ಲಿ ಆನಂದಿಸುತ್ತಿದ್ದೇನೆ. ಹೊಸ ಹೊಸ ಸ್ನೇಹಿತರೂ ಸಿಕ್ಕಿದ್ದಾರೆ.”

ಎಲ್ಕ: “ಆಸ್ಟ್ರಿಯದಲ್ಲಿದ್ದಾಗ ಒಂದಾದರೂ ಬೈಬಲ್‌ ಅಧ್ಯಯನ ಬೇಕೆಂದು ದೇವರಿಗೆ ಪ್ರಾರ್ಥಿಸುತ್ತಿದ್ದೆ. ಈಗ ಒಂದಲ್ಲ, 15 ಬೈಬಲ್‌ ಅಧ್ಯಯನ ಇದೆ! ಪ್ರಗತಿ ಮಾಡ್ತಾ ಇರೋ ವಿದ್ಯಾರ್ಥಿಗಳ ಮುಖದಲ್ಲಿರೋ ಸಂತೋಷ ನೋಡುವಾಗ ನನಗೆ ತುಂಬ ತೃಪ್ತಿಯಾಗ್ತದೆ.”

ಜೊಯೆಲ್‌: “ಹೊಸ ಸ್ಥಳಕ್ಕೆ ಬಂದು ಸೇವೆ ಮಾಡೋದೇ ಒಂದು ಅದ್ಭುತ ಅನುಭವ. ಯೆಹೋವನ ಮೇಲೆ ಆತುಕೊಳ್ಳೋದು ಏನಂತ ನಾನು ಇಲ್ಲಿ ಬಂದು ಕಲಿತೆ. ನನ್ನ ಪ್ರಯತ್ನಗಳನ್ನು ಯೆಹೋವನು ಎಷ್ಟು ಆಶೀರ್ವದಿಸಿದ್ದಾನೆ ಗೊತ್ತಾ? ನಾನು ಅಮೆರಿಕದಿಂದ ಬಂದಾಗ ಇಲ್ಲಿ ಬರೇ ಆರು ಮಂದಿ ಪ್ರಚಾರಕರಿದ್ದರು. ಈಗ 21 ಮಂದಿಯಿದ್ದಾರೆ. ಯೇಸುವಿನ ಮರಣದ ಸ್ಮರಣೆಗಂತೂ 110 ಮಂದಿ ಹಾಜರಿದ್ದರು.”

ನೀವು ಸ್ಥಳಾಂತರಿಸಬಲ್ಲಿರೋ?

ಯುವ ಸಹೋದರ ಸಹೋದರಿಯರೇ, ಪ್ರಚಾರಕರ ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆ ಮಾಡಲು ನಿಮ್ಮಿಂದ ಸಾಧ್ಯವೇ? ಇದೇನು ರಾತ್ರಿ ಬೆಳಗಾಗುವುದರೊಳಗೆ ಮಾಡುವ ನಿರ್ಣಯವಲ್ಲ. ಈ ಸೇವೆ ಮಾಡಲು ನೀವು ಬಯಸುವುದಾದರೆ ಜಾಗ್ರತೆಯಿಂದ ಯೋಜನೆ ಮಾಡಬೇಕು. ಮುಖ್ಯವಾಗಿ ಯೆಹೋವನ ಮೇಲೂ ಜನರ ಮೇಲೂ ಅಪಾರ ಪ್ರೀತಿ ಇರಬೇಕು. ಅಂಥ ಪ್ರೀತಿ ನಿಮ್ಮಲ್ಲಿರುವಲ್ಲಿ, ಬೇಕಾದ ಅರ್ಹತೆಗಳೂ ಇರುವಲ್ಲಿ ಇದರ ಕುರಿತು ಪ್ರಾರ್ಥಿಸಿ. ನಿಮ್ಮ ಹೆತ್ತವರ ಹತ್ತಿರ ಹಾಗೂ ಸಭಾ ಹಿರಿಯರ ಹತ್ತಿರ ನಿಮ್ಮ ಇಚ್ಛೆಯ ಕುರಿತು ಮಾತಾಡಿ. ಹಾಗೆ ಮಾಡುವಲ್ಲಿ ಸಂತೋಷ, ಸಂತೃಪ್ತಿ ತರುವ ಈ ಸೇವೆಯಲ್ಲಿ ಭಾಗಿಯಾಗಲು ನಿಮ್ಮಿಂದಲೂ ಸಾಧ್ಯವಾಗುವುದು.

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನು ತುಂಬ ಸಲ ಪ್ರಾರ್ಥಿಸಿದೆ. ಪ್ರೌಢ ಸಹೋದರ ಸಹೋದರಿಯರೊಂದಿಗೆ ತುಂಬ ಹೊತ್ತು ಮಾತಾಡಿದೆ. ಯೆಹೋವನ ಸೇವೆ ಮಾಡಲು ಮುಂದೆ ಬಂದರೆ ಆತನು ತಪ್ಪದೆ ಆಶೀರ್ವದಿಸುತ್ತಾನೆ ಅಂತ ಇದರಿಂದ ತಿಳುಕೊಂಡೆ.” —ಅಮೆರಿಕದ ಕೇಲಾ

[ಪುಟ 6ರಲ್ಲಿರುವ ಚೌಕ/ಚಿತ್ರ]

ಹೆಚ್ಚು ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡಲು ತಯಾರಿ

• ವೈಯಕ್ತಿಕ ಅಧ್ಯಯನವನ್ನು ತಪ್ಪದೆ ಮಾಡುವ ರೂಢಿಯಿರಲಿ

• 2011, ಆಗಸ್ಟ್‌ ತಿಂಗಳ ನಮ್ಮ ರಾಜ್ಯ ಸೇವೆ ಪುಟ 4-6 ನೋಡಿ

• ಈ ಸೇವೆ ಮಾಡಿದವರೊಂದಿಗೆ ಮಾತಾಡಿ

• ಅಲ್ಲಿನ ಸಂಸ್ಕೃತಿ, ಹಿನ್ನೆಲೆಯನ್ನು ತಿಳಿದುಕೊಳ್ಳಿ

• ಅಲ್ಲಿನ ಭಾಷೆ ಕಲಿಯಲು ಒಂದು ಕೋರ್ಸ್‌ ಮಾಡಿ

[ಪುಟ 6ರಲ್ಲಿರುವ ಚೌಕ/ಚಿತ್ರ]

ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು ಕೆಲವರು. . .

• ಕೆಲವು ತಿಂಗಳು ಕೆಲಸ ಮಾಡುತ್ತಾರೆ

• ತಮ್ಮ ಮನೆ, ಅಪಾರ್ಟ್‌ಮೆಂಟನ್ನು ಬಾಡಿಗೆಗೆ ಕೊಡುತ್ತಾರೆ. ವ್ಯಾಪಾರವಿದ್ದಲ್ಲಿ ಗುತ್ತಿಗೆಗೆ ಕೊಡುತ್ತಾರೆ

• ಇಂಟರ್‌ನೆಟ್‌ ಮೂಲಕ ಕೆಲಸ ಮಾಡುತ್ತಾರೆ

[ಪುಟ 4, 5ರಲ್ಲಿರುವ ಚಿತ್ರಗಳು]

1 ಯಾಕ್ಲಿನ್‌ ಜರ್ಮನಿಯಿಂದ

2 ಬ್ರೂನೊ ಇಟಲಿಯಿಂದ

3 ಬೋ ಕೆನಡದಿಂದ

4 ಶೇಬಾನ್‌ ಐರ್ಲೆಂಡ್‌ನಿಂದ

5 ಜೊಯೆಲ್‌ ಅಮೆರಿಕದಿಂದ

6 ಜಾನತನ್‌ ಅಮೆರಿಕದಿಂದ

7 ಆ್ಯನ ಎಸ್ಟೋನಿಯದಿಂದ

8 ಎಲ್ಕ ಆಸ್ಟ್ರಿಯದಿಂದ

9 ಶಾಂಟೆಲ್‌ ಕೆನಡದಿಂದ

10 ಇನೆಸ್‌ ಆಸ್ಟ್ರಿಯದಿಂದ