ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಮಗು ಶಾಲೆಗೆ ಹೋಗಬೇಕೋ?

ನನ್ನ ಮಗು ಶಾಲೆಗೆ ಹೋಗಬೇಕೋ?

ನನ್ನ ಮಗು ಶಾಲೆಗೆ ಹೋಗಬೇಕೋ?

ಈ ಪುಟದಲ್ಲಿರುವ ಪದಗಳನ್ನು ನೀವು ಓದಲು ಅಶಕ್ತರಾಗಿರುವುದನ್ನು ನೀವು ಊಹಿಸಿಕೊಳ್ಳಬಲ್ಲಿರೋ? ನಿಮ್ಮ ದೇಶದ ಅಧಿಕೃತ ಭಾಷೆಯನ್ನು ನೀವು ಮಾತಾಡಲು ಅಸಮರ್ಥರಾಗಿರುವಲ್ಲಿ ಆಗೇನು? ಪ್ರಪಂಚದ ಭೂಪಟವೊಂದರಲ್ಲಿ ನಿಮ್ಮ ಸ್ವದೇಶವನ್ನು ಗುರುತಿಸಲು ನೀವು ಶಕ್ತರಾಗಿರದಿದ್ದಲ್ಲಿ ಆಗೇನು? ಇದೇ ರೀತಿಯ ಸನ್ನಿವೇಶದಲ್ಲಿ ಅಸಂಖ್ಯಾತ ಮಕ್ಕಳು ಬೆಳೆಯುತ್ತಾರೆ. ನಿಮ್ಮ ಮಗುವಿನ ಕುರಿತಾಗಿ ಏನು?

ನಿಮ್ಮ ಮಗು ಶಾಲೆಗೆ ಹೋಗಬೇಕೋ? ಅನೇಕ ದೇಶಗಳಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣವು ಕಡ್ಡಾಯವಾಗಿರುತ್ತದೆ ಮತ್ತು ಅನೇಕವೇಳೆ ಈ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ. ಮಕ್ಕಳ ಹಕ್ಕಿನ ಕುರಿತಾದ ಸಮ್ಮೇಳನವು, ವಿಧ್ಯುಕ್ತ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕಾಗಿ ಪರಿಗಣಿಸುತ್ತದೆ. ಮಾನವ ಹಕ್ಕುಗಳ ಸಾರ್ವತ್ರಿಕ ಪ್ರಕಟನೆಯು ಸಹ ಇದನ್ನು ಅನುಮೋದಿಸುತ್ತದೆ. ಆದರೂ, ಕೆಲವು ದೇಶಗಳಲ್ಲಿ ಶಾಲಾ ವಿದ್ಯಾಭ್ಯಾಸವು ಉಚಿತವಾಗಿಲ್ಲದಿರಬಹುದು ಮತ್ತು ಇದು ಹೆತ್ತವರ ಮೇಲೆ ಹಣಕಾಸಿನ ಒತ್ತಡವನ್ನು ಹೇರಬಹುದು. ವಿಧ್ಯುಕ್ತ ಶಾಲಾ ವಿದ್ಯಾಭ್ಯಾಸದ ಮೂಲಕ ಅಥವಾ ಇತರ ಮಾಧ್ಯಮಗಳ ಮೂಲಕ ತಮ್ಮ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡಲು ಬಯಸುವಂಥ ಕ್ರೈಸ್ತ ಹೆತ್ತವರ ದೃಷ್ಟಿಯಲ್ಲಿ ಈ ವಿಷಯವನ್ನು ನಾವೀಗ ಪರಿಗಣಿಸೋಣ.

ಸಾಕ್ಷರತೆಯ ಕುರಿತಾದ ಬೈಬಲ್‌ ಉದಾಹರಣೆಗಳು

ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ಅಧಿಕಾಂಶ ದೇವರ ಸೇವಕರು ಓದಲು ಮತ್ತು ಬರೆಯಲು ಸಮರ್ಥರಾಗಿದ್ದರು. ಯೇಸುವಿನ ಅಪೊಸ್ತಲರಾಗಿದ್ದ ಪೇತ್ರಯೋಹಾನರು ಯೆಹೂದಿ ಬೆಸ್ತರಾಗಿದ್ದರೂ, ಬೈಬಲ್‌ ಪುಸ್ತಕಗಳನ್ನು ಗಲಿಲಾಯದ ತಮ್ಮ ಭಾಷಾರೂಪದಲ್ಲಲ್ಲ, ಬದಲಾಗಿ ಗ್ರೀಕ್‌ ಭಾಷೆಯಲ್ಲಿ ಬರೆದರು. * ತಮ್ಮ ಮಕ್ಕಳು ಮೂಲಭೂತ ಶಿಕ್ಷಣವನ್ನು ಪಡೆದುಕೊಂಡಿದ್ದಾರೆಂಬುದನ್ನು ಅವರ ಹೆತ್ತವರು ಖಚಿತಪಡಿಸಿಕೊಂಡರೆಂಬುದು ಸುವ್ಯಕ್ತ. ತದ್ರೀತಿಯ ಸನ್ನಿವೇಶದಲ್ಲಿದ್ದ ಇತರ ಬೈಬಲ್‌ ಲೇಖಕರಲ್ಲಿ, ಕುರುಬನಾಗಿದ್ದ ದಾವೀದ, ಬೇಸಾಯಗಾರನಾಗಿದ್ದ ಆಮೋಸ, ಮತ್ತು ಬಹುಶಃ ಬಡಗಿಯಾಗಿದ್ದ ಯೇಸುವಿನ ಮಲತಮ್ಮನಾದ ಯೂದರು ಒಳಗೂಡಿದ್ದಾರೆ.

ಯೋಬನು ಓದಲು ಮತ್ತು ಬರೆಯಲು ಸಮರ್ಥನಾಗಿದ್ದ ಒಬ್ಬ ವ್ಯಕ್ತಿಯಾಗಿದ್ದನು, ಮತ್ತು ಅವನ ಹೆಸರನ್ನು ಹೊಂದಿರುವಂಥ ಬೈಬಲ್‌ ಪುಸ್ತಕವು, ಅವನಿಗೆ ವಿಜ್ಞಾನದ ಕುರಿತಾದ ತಿಳಿವಳಿಕೆಯೂ ಇತ್ತೆಂಬುದನ್ನು ಸೂಚಿಸುತ್ತದೆ. ಅವನಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಸಾಮರ್ಥ್ಯವೂ ಇದ್ದಿರಬಹುದು, ಏಕೆಂದರೆ ಯೋಬ ಪುಸ್ತಕದಲ್ಲಿ ಉದ್ಧರಿಸಲ್ಪಟ್ಟಿರುವ ಅವನ ಹೇಳಿಕೆಗಳು ಕವಿತೆಯ ಶೈಲಿಯಲ್ಲಿವೆ. ಮತ್ತು ಆದಿ ಕ್ರೈಸ್ತರು ಅಕ್ಷರ ಜ್ಞಾನವಿದ್ದವರಾಗಿದ್ದರು ಎಂಬುದು ನಮಗೆ ಗೊತ್ತು, ಏಕೆಂದರೆ ಯಾವುದು ಅವರ ಶಾಸ್ತ್ರೀಯ ಟಿಪ್ಪಣಿಯಾಗಿದ್ದಿರಬಹುದೋ ಅದು ಮಡಕೆಯ, ಮಣ್ಣಿನ ಪಾತ್ರೆಯ ಚೂರುಗಳ ಮೇಲೆ ಕಂಡುಬಂದಿದೆ.

ಕ್ರೈಸ್ತರಿಗೆ ಶಿಕ್ಷಣವು ಪ್ರಾಮುಖ್ಯವಾದದ್ದಾಗಿದೆ

ದೇವರನ್ನು ಮೆಚ್ಚಿಸಬೇಕಾದರೆ ಎಲ್ಲಾ ಕ್ರೈಸ್ತರು ಬೈಬಲ್‌ ಜ್ಞಾನದಲ್ಲಿ ಪ್ರಗತಿಯನ್ನು ಮಾಡುವ ಆವಶ್ಯಕತೆಯಿದೆ. (ಫಿಲಿಪ್ಪಿ 1:​9-11; 1 ಥೆಸಲೊನೀಕ 4:1) ಶಾಸ್ತ್ರವಚನಗಳ ಹಾಗೂ ಬೈಬಲ್‌ ಆಧಾರಿತ ಅಧ್ಯಯನ ಸಹಾಯಕಗಳ ಶ್ರದ್ಧಾಪೂರ್ವಕ ಉಪಯೋಗವು, ಆತ್ಮಿಕ ಪ್ರಗತಿಯನ್ನು ಉತ್ತೇಜಿಸಬಲ್ಲದು. ತನ್ನ ಲಿಖಿತ ವಾಕ್ಯವನ್ನು ದೇವರು ನಮಗೆ ಒದಗಿಸಿರುವುದರಿಂದ, ತನ್ನ ಆರಾಧಕರು ಸಾಧ್ಯವಿರುವಷ್ಟು ಮಟ್ಟಿಗೆ ಅಕ್ಷರಸ್ಥರಾಗಿರುವಂತೆ ಆತನು ನಿರೀಕ್ಷಿಸುತ್ತಾನೆ. ಅರ್ಥವಾಗುವಂಥ ರೀತಿಯಲ್ಲಿ ಬೈಬಲನ್ನು ಓದುವುದು, ಅದರ ಸಲಹೆಯನ್ನು ಅನ್ವಯಿಸಿಕೊಳ್ಳುವುದನ್ನು ಹೆಚ್ಚು ಸುಲಭವಾದದ್ದಾಗಿ ಮಾಡುತ್ತದೆ. ಕೆಲವು ಅಂಶಗಳ ಅರ್ಥವನ್ನು ಗ್ರಹಿಸಲು ಮತ್ತು ಅವುಗಳ ಕುರಿತು ಮನನ ಮಾಡಶಕ್ತರಾಗಲು, ಬೈಬಲಿನ ಕೆಲವು ಭಾಗಗಳನ್ನು ನಾವು ಒಂದಕ್ಕಿಂತಲೂ ಹೆಚ್ಚು ಬಾರಿ ಓದಬೇಕಾಗಬಹುದು ಎಂಬುದಂತೂ ಖಂಡಿತ.​—ಕೀರ್ತನೆ 119:104; 143:5; ಜ್ಞಾನೋಕ್ತಿ 4:7

ಪ್ರತಿ ವರ್ಷ ಯೆಹೋವನ ಜನರು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮಾರ್ಗದರ್ಶನದ ಕೆಳಗೆ ಸಿದ್ಧಪಡಿಸಲ್ಪಟ್ಟ ಸಹಾಯಕರವಾದ ಲಿಖಿತ ಮಾಹಿತಿಯ ನೂರಾರು ಪುಟಗಳನ್ನು ಪಡೆದುಕೊಳ್ಳುತ್ತಾರೆ. (ಮತ್ತಾಯ 24:​45-47) ಅಂಥ ಸಾಹಿತ್ಯವು ಕುಟುಂಬ ಜೀವನ, ಸಂಸ್ಕಾರಗಳು, ಧರ್ಮ, ವಿಜ್ಞಾನ ಹಾಗೂ ಇನ್ನಿತರ ವಿಷಯಗಳನ್ನು ಚರ್ಚಿಸುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಅದರಲ್ಲಿ ಶಾಸ್ತ್ರೀಯ ವಿಚಾರಗಳ ಕುರಿತಾದ ಸಲಹೆಯು ಒಳಗೂಡಿದೆ. ನಿಮ್ಮ ಮಕ್ಕಳು ಅದನ್ನು ಓದಲು ಅಶಕ್ತರಾಗುವಲ್ಲಿ, ಅತ್ಯಾವಶ್ಯಕವಾಗಿರುವ ಮಾಹಿತಿಯಿಂದ ಅವರು ವಂಚಿತರಾಗುವರು.

ಮಾನವಕುಲದ ಇತಿಹಾಸವನ್ನು ಕಲಿಯುವುದು ಪ್ರಾಮುಖ್ಯವಾಗಿದೆ, ಏಕೆಂದರೆ ದೇವರ ರಾಜ್ಯದ ಆವಶ್ಯಕತೆ ಏಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅದು ನಮಗೆ ಸಹಾಯಮಾಡುತ್ತದೆ. ಭೂಗೋಳಶಾಸ್ತ್ರದ ಕುರಿತಾದ ಮೂಲಭೂತ ಜ್ಞಾನವು ಸಹ ಅಪೇಕ್ಷಣೀಯ. ಬೈಬಲು ಇಸ್ರಾಯೇಲ್‌, ಐಗುಪ್ತ್ಯ, ಮತ್ತು ಗ್ರೀಸ್‌ಗಳಂಥ ಅನೇಕ ಸ್ಥಳಗಳ ಕುರಿತು ಮಾತಾಡುತ್ತದೆ. ಪ್ರಪಂಚದ ಭೂಪಟದಲ್ಲಿ ನಿಮ್ಮ ಮಗು ಅದನ್ನು ಗುರುತಿಸಲು ಶಕ್ತವಾಗಿದೆಯೋ? ತನ್ನ ಸ್ವಂತ ದೇಶವನ್ನು ಅದು ಕಂಡುಹಿಡಿಯಬಲ್ಲದೋ? ಒಂದು ಭೂಪಟವನ್ನು ಓದಲು ಅಶಕ್ತನಾಗಿರುವುದು, ಒಬ್ಬ ವ್ಯಕ್ತಿಯು ನೇಮಿತ ಕ್ಷೇತ್ರದಲ್ಲಿ ತನ್ನ ಶುಶ್ರೂಷೆಯನ್ನು ಪೂರೈಸುವ ಸಾಮರ್ಥ್ಯವನ್ನು ಕುಂದಿಸಲೂಬಹುದು.​—2 ತಿಮೊಥೆಯ 4:5.

ಸಭೆಯಲ್ಲಿ ಸುಯೋಗಗಳು

ಕ್ರೈಸ್ತ ಹಿರಿಯರು ಮತ್ತು ಶುಶ್ರೂಷಾ ಸೇವಕರಿಗೆ, ವಾಚನವನ್ನು ಒಳಗೂಡಿರುವಂಥ ಅನೇಕ ಜವಾಬ್ದಾರಿಗಳಿರುತ್ತವೆ. ಉದಾಹರಣೆಗಾಗಿ, ಸಭಾ ಕೂಟಗಳಿಗಾಗಿ ತಯಾರಿಸಲ್ಪಡಬೇಕಾಗಿರುವ ಭಾಗಗಳಿರುತ್ತವೆ. ಸಾಹಿತ್ಯ ಸರಬರಾಯಿಗಳು ಮತ್ತು ಹಣಕಾಸಿನ ಕಾಣಿಕೆಗಳ ಕುರಿತಾದ ದಾಖಲೆಗಳನ್ನು ಇಡುವ ಆವಶ್ಯಕತೆಯಿರುತ್ತದೆ. ಮೂಲಭೂತ ಶಿಕ್ಷಣದ ಹೊರತು ಒಬ್ಬ ವ್ಯಕ್ತಿಯು ಈ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ತುಂಬ ಕಷ್ಟಕರವಾದದ್ದಾಗಿ ಕಂಡುಕೊಳ್ಳುವನು.

ಲೋಕದಾದ್ಯಂತವಿರುವ ಬೆತೆಲ್‌ ಗೃಹಗಳಲ್ಲಿ ಸ್ವಯಂಸೇವಕರು ಸೇವೆಮಾಡುತ್ತಾರೆ. ಈ ಸ್ವಯಂಸೇವಕರು ಒಳ್ಳೇ ರೀತಿಯಲ್ಲಿ ಸಂವಾದಿಸಲಿಕ್ಕಾಗಿ ಮತ್ತು ಸಾಹಿತ್ಯವನ್ನು ಭಾಷಾಂತರಿಸುವ ಹಾಗೂ ಯಂತ್ರೋಪಕರಣಗಳನ್ನು ರಿಪೇರಿಮಾಡುವಂಥ ತಮ್ಮ ಕರ್ತವ್ಯಗಳನ್ನು ಪೂರೈಸಲಿಕ್ಕಾಗಿ, ಅವರು ವಾಸಿಸುತ್ತಿರುವ ದೇಶದ ಅಧಿಕೃತ ಭಾಷೆಯನ್ನು ಓದಲು ಮತ್ತು ಬರೆಯಲು ಶಕ್ತರಾಗಿರಬೇಕು. ನಿಮ್ಮ ಮಕ್ಕಳು ಎಂದಾದರೂ ಇಂಥ ಸುಯೋಗಗಳಲ್ಲಿ ಆನಂದಿಸಲು ನೀವು ಬಯಸುವುದಾದರೆ, ಇದಕ್ಕಾಗಿ ಸಾಮಾನ್ಯವಾಗಿ ಮೂಲಭೂತ ಶಿಕ್ಷಣದ ಆವಶ್ಯಕತೆಯಿದೆ. ನಿಮ್ಮ ಮಗುವು ಶಾಲೆಗೆ ಹೋಗಲು ಅಗತ್ಯವಿರುವ ಇತರ ಕೆಲವು ಪ್ರಾಯೋಗಿಕ ಕಾರಣಗಳು ಯಾವುವು?

ಬಡತನ ಮತ್ತು ಮೂಢನಂಬಿಕೆ

ಕೆಲವು ಸನ್ನಿವೇಶಗಳಲ್ಲಿ, ಬಡತನದಲ್ಲಿ ಜೀವಿಸುತ್ತಿರುವ ಜನರು ಕಾರ್ಯತಃ ನಿಸ್ಸಹಾಯಕರಾಗಿರಬಹುದು. ಆದರೂ, ಬೇರೆ ವಿದ್ಯಮಾನಗಳಲ್ಲಿ, ಗಮನಾರ್ಹ ಮಟ್ಟದ ಶಿಕ್ಷಣವು, ನಾವು ಹಾಗೂ ನಮ್ಮ ಮಕ್ಕಳು ಅನಗತ್ಯವಾದ ಕಷ್ಟಾನುಭವದಿಂದ ದೂರವಿರಲು ಸಹಾಯಮಾಡಬಹುದು. ಅನೇಕ ಅನಕ್ಷರಸ್ಥ ಜನರು ಬದುಕಲು ಸಹ ಸಾಕಷ್ಟು ಸ್ಥಿತಿಗತಿಯಿಲ್ಲದವರಾಗಿರಸಾಧ್ಯವಿದೆ. ಮಕ್ಕಳು ಹಾಗೂ ಹೆತ್ತವರು ಸಹ ಕೆಲವೊಮ್ಮೆ ಸಾಯುತ್ತಾರೆ, ಏಕೆಂದರೆ ತೀರ ಕಡಿಮೆ ಆದಾಯವು ಅವರು ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳುವುದನ್ನು ಅಸಾಧ್ಯವನ್ನಾಗಿ ಮಾಡುತ್ತದೆ. ಸ್ವಲ್ಪವೇ ವಿದ್ಯಾಭ್ಯಾಸವಿರುವ ಅಥವಾ ವಿದ್ಯಾಭ್ಯಾಸವೇ ಇಲ್ಲದಿರುವ ಜನರ ಪಾಡು ಅನೇಕವೇಳೆ ನ್ಯೂನ ಪೋಷಣೆ ಹಾಗೂ ಕೀಳ್ಮಟ್ಟದ ವಸತಿಸೌಕರ್ಯವೇ ಆಗಿರುತ್ತದೆ. ಈ ಸಂದರ್ಭಗಳಲ್ಲಿ ವಿದ್ಯಾಭ್ಯಾಸ ಅಥವಾ ಕಡಿಮೆಪಕ್ಷ ಓದುವ ಹಾಗೂ ಬರೆಯುವ ಸಾಮರ್ಥ್ಯವು ಸ್ವಲ್ಪಮಟ್ಟಿಗೆ ಪ್ರಯೋಜನಕ್ಕೆ ಬರಬಹುದು.

ಸಾಕ್ಷರತೆಯು ಮೂಢನಂಬಿಕೆಯ ಪ್ರವೃತ್ತಿಯನ್ನು ಸಹ ಕಡಿಮೆಮಾಡುತ್ತದೆ. ಮೂಢನಂಬಿಕೆಗಳು ವಿದ್ಯಾವಂತ ಹಾಗೂ ಅವಿದ್ಯಾವಂತ ಜನರ ನಡುವೆ ಸರ್ವಸಾಮಾನ್ಯವಾಗಿವೆ ಎಂಬುದಂತೂ ನಿಶ್ಚಯ. ಯಾರಿಗೆ ಶಿಕ್ಷಣದ ಕೊರತೆಯಿದೆಯೋ ಅವರು ಇತರರಿಗಿಂತಲೂ ಹೆಚ್ಚು ಸುಲಭವಾದ ರೀತಿಯಲ್ಲಿ ಮೋಸಗೊಳಿಸಲ್ಪಡಬಹುದು ಮತ್ತು ಶೋಷಣೆಗೊಳಗಾಗಬಹುದು. ಏಕೆಂದರೆ ಅಂಥ ಮೋಸಗಳನ್ನು ಬಯಲುಪಡಿಸುವ ವಿಷಯಗಳನ್ನು ಓದಲು ಇವರು ಅಶಕ್ತರಾಗಿರುತ್ತಾರೆ. ಆದುದರಿಂದ, ಅವರು ಹೆಚ್ಚು ಮೂಢನಂಬಿಕೆಯುಳ್ಳವರಾಗಿರುತ್ತಾರೆ ಮತ್ತು ಪ್ರೇತಾತ್ಮದ ಸಹಾಯದಿಂದ ವಾಸಿಮಾಡುವಂಥ ಒಬ್ಬ ವ್ಯಕ್ತಿಯು ಅದ್ಭುತಕರವಾದ ವಾಸಿಮಾಡುವಿಕೆಗಳನ್ನು ಮಾಡಬಲ್ಲನೆಂದು ನಂಬುತ್ತಾರೆ.​—ಧರ್ಮೋಪದೇಶಕಾಂಡ 18:​10-12; ಪ್ರಕಟನೆ 21:8.

ಉದ್ಯೋಗವನ್ನು ಪಡೆದುಕೊಳ್ಳುವುದೇ ಶಿಕ್ಷಣದ ಏಕಮಾತ್ರ ಉದ್ದೇಶವಾಗಿರುವುದಿಲ್ಲ

ಹಣವನ್ನು ಸಂಪಾದಿಸುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ ಎಂದು ಅನೇಕರು ನೆನಸುತ್ತಾರೆ. ಆದರೂ, ಶಿಕ್ಷಿತ ವ್ಯಕ್ತಿಗಳಲ್ಲಿ ಕೆಲವರು ನಿರುದ್ಯೋಗಿಗಳಾಗಿದ್ದಾರೆ ಅಥವಾ ಮೂಲಭೂತ ಆವಶ್ಯಕತೆಗಳನ್ನು ಪಡೆದುಕೊಳ್ಳಲು ಸಾಕಾಗುವಷ್ಟು ಹಣವನ್ನು ಸಂಪಾದಿಸುವುದಿಲ್ಲ. ಆದುದರಿಂದ, ಒಂದು ಮಗುವನ್ನು ಶಾಲೆಗೆ ಕಳುಹಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಕೆಲವು ಹೆತ್ತವರು ನೆನಸಬಹುದು. ಆದರೆ ಶಾಲಾ ವಿದ್ಯಾಭ್ಯಾಸವು ಒಬ್ಬನನ್ನು ಹಣ ಸಂಪಾದನೆಗಾಗಿ ಸಿದ್ಧಪಡಿಸುತ್ತದೆ ಮಾತ್ರವಲ್ಲ, ಇದು ಮಕ್ಕಳನ್ನು ಸಾಮಾನ್ಯ ಜೀವಿತಕ್ಕಾಗಿಯೂ ಸಜ್ಜುಗೊಳಿಸುತ್ತದೆ. (ಪ್ರಸಂಗಿ 7:12) ಒಬ್ಬ ವ್ಯಕ್ತಿಯು ತಾನು ವಾಸಿಸುತ್ತಿರುವ ದೇಶದ ಅಧಿಕೃತ ಭಾಷೆಯನ್ನು ಮಾತಾಡಲು, ಓದಲು, ಮತ್ತು ಬರೆಯಲು ಶಕ್ತನಾಗಿರುವಲ್ಲಿ, ವೈದ್ಯಕೀಯ ಸಿಬ್ಬಂದಿಯೊಂದಿಗೆ, ಪೌರ ಅಧಿಕಾರಿಗಳೊಂದಿಗೆ, ಅಥವಾ ಬ್ಯಾಂಕ್‌ ಕೆಲಸಗಾರರೊಂದಿಗೆ ವ್ಯವಹರಿಸುವುದು ಹೆಚ್ಚು ಸುಲಭವಾಗುತ್ತದೆ ಮತ್ತು ಅದು ಭೀತಿದಾಯಕವಾಗಿರುವುದಕ್ಕೆ ಬದಲಾಗಿ ಸರ್ವಸಾಮಾನ್ಯ ವಿಷಯವಾಗಿ ಪರಿಣಮಿಸುತ್ತದೆ.

ಕೆಲವು ಸ್ಥಳಗಳಲ್ಲಿ, ಅವಿದ್ಯಾವಂತ ಮಕ್ಕಳು ಇಟ್ಟಿಗೆ ಕೆಲಸ, ಮೀನು ಹಿಡಿಯುವಿಕೆ, ಹೊಲಿಗೆ ಕೆಲಸ ಅಥವಾ ಇನ್ನಿತರ ಕಸಬನ್ನು ಕಲಿಯುವಂತೆ ಅವರನ್ನು ಬೇರೆಯವರ ನಿರ್ವಹಣೆಗೆ ಬಿಡಲಾಗುತ್ತದೆ. ಒಂದು ಕಸಬನ್ನು ಕಲಿಯುವುದು ಪ್ರಯೋಜನದಾಯಕವಾಗಿದೆಯಾದರೂ, ಒಂದುವೇಳೆ ಈ ಮಕ್ಕಳು ಎಂದೂ ಶಾಲೆಗೆ ಹೋಗದಿರುವಲ್ಲಿ, ಬಹುಶಃ ಅವರು ಸರಿಯಾಗಿ ಓದಲು ಮತ್ತು ಬರೆಯಲು ಕಲಿಯುವುದಿಲ್ಲ. ಇವರು ಮೊದಲಾಗಿ ಮೂಲಭೂತ ಶಿಕ್ಷಣವನ್ನು ಪಡೆದುಕೊಂಡು, ನಂತರ ಒಂದು ಕಸಬನ್ನು ಕಲಿಯುವಲ್ಲಿ, ಇವರು ಶೋಷಣೆಗೆ ಒಳಗಾಗುವುದರಿಂದ ದೂರವಿರುತ್ತಾರೆ ಮತ್ತು ಹೆಚ್ಚು ಸಂತೃಪ್ತಿದಾಯಕ ಜೀವಿತವನ್ನು ನಡೆಸುವ ಸಾಧ್ಯತೆಯೂ ಇರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ.

ನಜರೇತಿನ ಯೇಸು ಒಬ್ಬ ಬಡಗಿಯಾಗಿದ್ದನು ಮತ್ತು ತನ್ನ ಸಾಕುತಂದೆಯಾಗಿದ್ದ ಯೋಸೇಫನ ಕೈಕೆಳಗೆ ಸ್ವಲ್ಪ ಮಟ್ಟಿಗಿನ ತರಬೇತಿಯನ್ನು ಪಡೆದುಕೊಂಡಿದ್ದನೆಂಬುದು ಸುವ್ಯಕ್ತ. (ಮತ್ತಾಯ 13:55; ಮಾರ್ಕ 6:3) ಯೇಸು ಸಹ ಅಕ್ಷರಸ್ಥನಾಗಿದ್ದನು, ಏಕೆಂದರೆ ಅವನು 12 ವರ್ಷ ಪ್ರಾಯದವನಾಗಿರುವಾಗಲೇ ದೇವಾಲಯದಲ್ಲಿ ಸುಶಿಕ್ಷಿತ ಬೋಧಕರ ನಡುವೆ ಕುಳಿತುಕೊಂಡು ಅವರೊಂದಿಗೆ ಅರ್ಥಭರಿತ ಚರ್ಚೆಗಳನ್ನು ನಡಿಸಲು ಸಮರ್ಥನಾಗಿದ್ದನು. (ಲೂಕ 2:​46, 47) ಯೇಸುವಿನ ವಿಷಯದಲ್ಲಿ ಹೇಳುವುದಾದರೆ, ಒಂದು ಕಸಬನ್ನು ಕಲಿಯುವುದು ಇತರ ರೀತಿಯ ಶಿಕ್ಷಣಕ್ಕೆ ಅಡ್ಡಬರಲಿಲ್ಲ.

ಹೆಣ್ಣುಮಕ್ಕಳಿಗೂ ವಿದ್ಯಾಭ್ಯಾಸ ನೀಡಿರಿ

ಹೆತ್ತವರು ಕೆಲವೊಮ್ಮೆ ತಮ್ಮ ಗಂಡುಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಆದರೆ ಹೆಣ್ಣುಮಕ್ಕಳನ್ನು ಕಳುಹಿಸುವುದಿಲ್ಲ. ತಮ್ಮ ಹೆಣ್ಣುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರಿಂದ ತುಂಬ ಹಣ ವೆಚ್ಚವಾಗುತ್ತದೆ ಹಾಗೂ ಇಡೀ ದಿನ ಮನೆಯಲ್ಲೇ ಉಳಿಯುವ ಮೂಲಕ ಹುಡುಗಿಯರು ತಮ್ಮ ತಾಯಂದಿರಿಗೆ ಪ್ರಯೋಜನದಾಯಕವಾಗಿರಬಲ್ಲರು ಎಂದು ಕೆಲವು ಹೆತ್ತವರು ನೆನಸಬಹುದು. ಆದರೆ ಅನಕ್ಷರತೆಯು ಒಬ್ಬ ಹುಡುಗಿಗೆ ಅಡಚಣೆಗಳನ್ನು ತರಬಹುದು. ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯೂನಿಸೆಫ್‌)ಯ ಒಂದು ಪ್ರಕಾಶನವು ತಿಳಿಸುವುದು: “ಅನೇಕ ಅಧ್ಯಯನಗಳು ತೋರಿಸಿವೆಯೇನೆಂದರೆ, ಹುಡುಗಿಯರಿಗೆ ವಿದ್ಯಾಭ್ಯಾಸವನ್ನು ಒದಗಿಸುವುದು, ಬಡತನದ ಹಿಡಿತವನ್ನು ನಿರ್ಮೂಲನಮಾಡಲಿಕ್ಕಾಗಿರುವ ಅತ್ಯುತ್ತಮ ತಂತ್ರೋಪಾಯಗಳಲ್ಲಿ ಒಂದಾಗಿದೆ.” (ಬಡತನ ಮತ್ತು ಮಕ್ಕಳು: ತೀರ ಕಡಿಮೆ ಅಭಿವೃದ್ಧಿಹೊಂದಿರುವ ದೇಶಗಳಿಗಾಗಿ 90ಗಳ ಪಾಠಗಳು) ಸುಶಿಕ್ಷಿತ ಹುಡುಗಿಯರು ಜೀವಿತದ ಸಮಸ್ಯೆಗಳನ್ನು ನಿಭಾಯಿಸಲು ಹೆಚ್ಚಿನ ಮಟ್ಟಿಗೆ ಸಿದ್ಧರಾಗಿರುತ್ತಾರೆ ಮತ್ತು ಹೆಚ್ಚು ವಿವೇಕಯುತವಾದ ನಿರ್ಣಯಗಳನ್ನು ಮಾಡುತ್ತಾರೆ; ಹೀಗೆ ಕುಟುಂಬದಲ್ಲಿರುವ ಎಲ್ಲರಿಗೂ ಪ್ರಯೋಜನಾರ್ಹರಾಗಿರುತ್ತಾರೆ.

ಪಶ್ಚಿಮ ಆಫ್ರಿಕದ ಬೆನಿನ್‌ನಲ್ಲಿ ಶಿಶುಗಳ ಮರಣ ಸಂಖ್ಯೆಯನ್ನು ಒಳಗೂಡಿರುವ ಒಂದು ಅಧ್ಯಯನವು, ಒಂದು ಗುಂಪಿನೋಪಾದಿ ಅನಕ್ಷರಸ್ಥ ತಾಯಂದಿರು ಐದು ವರ್ಷಗಳಿಗಿಂತ ಕೆಳಗಣ ಪ್ರಾಯದ ಮಕ್ಕಳನ್ನು 1,000ಕ್ಕೆ 167ರ ಪ್ರಮಾಣದಲ್ಲಿ ಮರಣದಲ್ಲಿ ಕಳೆದುಕೊಳ್ಳುತ್ತಾರೆ ಎಂದು ಸೂಚಿಸಿತು. ಯೂನಿಸೆಫ್‌ ಹೀಗೆ ಮುಕ್ತಾಯಗೊಳಿಸಿತು: “ಹೀಗಿರುವುದರಿಂದಲೇ, ಲೋಕದಾದ್ಯಂತ ಇರುವಂತೆಯೇ, ಬೆನಿನ್‌ನಲ್ಲಿ ಮಕ್ಕಳ ಮರಣ ಸಂಖ್ಯೆಯಲ್ಲಿ ನಿರ್ಣಾಯಕ ಅಂಶವು ಶಿಕ್ಷಣದ ಮಟ್ಟವೇ ಆಗಿದೆ.” ಆದುದರಿಂದ, ನಿಮ್ಮ ಹೆಣ್ಣುಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.

ಸಾಕ್ಷರತೆಯ ಕ್ಲಾಸುಗಳು ಮಾತ್ರ ಸಾಕೋ?

ಅಗತ್ಯವಿರುವಲ್ಲೆಲ್ಲಾ ಯೆಹೋವನ ಸಾಕ್ಷಿಗಳು ಓದಲು ಅಸಮರ್ಥರಾಗಿರುವ ಸಭಾ ಸದಸ್ಯರಿಗಾಗಿ ಸಾಕ್ಷರತೆಯ ಕ್ಲಾಸುಗಳನ್ನು ನಡೆಸುತ್ತಾರೆ. * ಪ್ರಯೋಜನಕರವಾದ ಈ ಒದಗಿಸುವಿಕೆಯು ಜನರು ಸಾಮಾನ್ಯವಾಗಿ ತಮ್ಮ ಸ್ಥಳಿಕ ಭಾಷೆಯಲ್ಲಿ ಓದಲು ಕಲಿಯುವಂತೆ ಸಹಾಯಮಾಡುತ್ತದೆ. ಇದು ವಿಧ್ಯುಕ್ತ ವಿದ್ಯಾಭ್ಯಾಸಕ್ಕೆ ಒಂದು ಸೂಕ್ತವಾದ ಬದಲಿಯಾಗಿದೆಯೋ? ಒಂದುವೇಳೆ ನಿಮ್ಮ ಮಕ್ಕಳಿಗೆ ಕ್ರಮವಾದ ಶಾಲಾ ವ್ಯಾಸಂಗವು ಲಭ್ಯವಿಲ್ಲದಿರುವಲ್ಲಿ, ಆ ಶಿಕ್ಷಣವನ್ನು ಸಭೆಯು ಒದಗಿಸುವಂತೆ ನಿರೀಕ್ಷಿಸಬೇಕೋ?

ಯೆಹೋವನ ಸಾಕ್ಷಿಗಳ ಸಭೆಯಿಂದ ನಡೆಸಲ್ಪಡುವ ಸಾಕ್ಷರತೆಯ ಕ್ಲಾಸುಗಳು ಪರಿಗಣನಾರ್ಹ ಏರ್ಪಾಡಾಗಿವೆಯಾದರೂ, ಮಕ್ಕಳಾಗಿದ್ದಾಗ ಎಂದೂ ಶಾಲೆಗೆ ಹೋಗದೆ ಇದ್ದಂಥ ಅನನುಕೂಲ ಪರಿಸ್ಥಿತಿಗಳಲ್ಲಿರುವ ವಯಸ್ಕರಿಗಾಗಿರುತ್ತವೆ. ಬಹುಶಃ ಆಗ ಅವರ ಹೆತ್ತವರಿಗೆ ಸಾಕ್ಷರತೆಯ ಪ್ರಾಮುಖ್ಯತೆಯ ಅರಿವು ಇದ್ದಿರಲಿಕ್ಕಿಲ್ಲ ಅಥವಾ ಆ ಕಾಲದಲ್ಲಿ ಶಾಲೆಗಳೂ ಇದ್ದಿರಲಿಕ್ಕಿಲ್ಲ. ಇಂಥ ವ್ಯಕ್ತಿಗಳು ಸಭೆಗಳಲ್ಲಿ ನಡೆಸಲ್ಪಡುವ ಸಾಕ್ಷರತೆಯ ಕ್ಲಾಸುಗಳಿಗೆ ಹಾಜರಾಗುವ ಮೂಲಕ ಸಹಾಯವನ್ನು ಪಡೆದುಕೊಳ್ಳಸಾಧ್ಯವಿದೆ. ಆದರೆ ಈ ಕ್ಲಾಸುಗಳು ಕ್ರಮವಾದ ಶಾಲಾ ವ್ಯಾಸಂಗಕ್ಕೆ ಒಂದು ಬದಲಿಯಾಗಿರುವುದಿಲ್ಲ ಮತ್ತು ಇವು ಪ್ರಾಥಮಿಕ ಶಿಕ್ಷಣವನ್ನು ನೀಡುವಂತೆ ವಿನ್ಯಾಸಿಸಲ್ಪಟ್ಟಿಲ್ಲ. ವಿಜ್ಞಾನ, ಗಣಿತ, ಮತ್ತು ಇತಿಹಾಸದಂಥ ಪಠ್ಯವಿಷಯಗಳು ಈ ಸಾಕ್ಷರತೆಯ ಕ್ಲಾಸುಗಳಲ್ಲಿ ಕಲಿಸಲ್ಪಡುವುದಿಲ್ಲ. ಆದರೂ, ಈ ಪಠ್ಯವಿಷಯಗಳು ಕ್ರಮವಾದ ಶಾಲಾ ವ್ಯಾಸಂಗ ಕ್ರಮದಲ್ಲಿ ಒಳಗೂಡಿರಬಹುದು.

ಆಫ್ರಿಕದಲ್ಲಿ ಹೆಚ್ಚಾಗಿ ಬುಡಕಟ್ಟಿನ ಭಾಷೆಗಳಲ್ಲಿ ಸಾಕ್ಷರತೆಯ ಕ್ಲಾಸುಗಳು ನಡೆಸಲ್ಪಡುತ್ತವೆ ಮತ್ತು ಒಂದು ದೇಶದ ಅಧಿಕೃತ ಭಾಷೆಯಲ್ಲಿ ನಡೆಸಲ್ಪಡುವುದು ತುಂಬ ವಿರಳ. ಆದರೂ, ವಿಧ್ಯುಕ್ತ ಶಾಲಾ ವಿದ್ಯಾಭ್ಯಾಸವು ಸಾಮಾನ್ಯವಾಗಿ ಅಧಿಕೃತ ಭಾಷೆಯಲ್ಲಿ ನಡೆಸಲ್ಪಡುತ್ತದೆ. ಇದು ಮಕ್ಕಳಿಗೆ ಹೆಚ್ಚು ಪ್ರಯೋಜನದಾಯಕವಾಗಿದೆ, ಏಕೆಂದರೆ ಹೆಚ್ಚಿನ ಪುಸ್ತಕಗಳು ಮತ್ತು ಬೇರೆ ಬೇರೆ ವಾಚನ ವಿಷಯಗಳು ಅಧಿಕೃತ ಭಾಷೆಯಲ್ಲಿ ಲಭ್ಯವಿವೆ. ಸಭೆಯ ಸಾಕ್ಷರತೆಯ ಕ್ಲಾಸುಗಳು ಒಂದು ಮಗುವಿನ ವಿಧ್ಯುಕ್ತ ಶಿಕ್ಷಣಕ್ಕೆ ಹೆಚ್ಚನ್ನು ಕೂಡಿಸಬಹುದಾದರೂ, ಅವು ಅದರ ಸ್ಥಾನವನ್ನು ತೆಗೆದುಕೊಳ್ಳಲಾರವು. ಹಾಗಾದರೆ, ಒಂದುವೇಳೆ ಪ್ರಾಯೋಗಿಕವಾಗಿರುವಲ್ಲಿ, ಮಕ್ಕಳಿಗೆ ವಿಧ್ಯುಕ್ತ ಶಿಕ್ಷಣವನ್ನು ಕೊಡುವುದು ಒಳ್ಳೇದಲ್ಲವೋ?

ಹೆತ್ತವರ ಜವಾಬ್ದಾರಿ

ಸಭೆಯ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ನಾಯಕತ್ವವನ್ನು ವಹಿಸುವ ಪುರುಷರು ಆದರ್ಶಪ್ರಾಯ ಕ್ರೈಸ್ತರಾಗಿರಬೇಕು. ಅವರು ತಮ್ಮ ಮನೆವಾರ್ತೆಗಳ ಮೇಲೆ ಮತ್ತು ಮಕ್ಕಳ ಮೇಲೆ “ಚೆನ್ನಾಗಿ” ಮೇಲ್ವಿಚಾರಣೆ ನಡೆಸುವವರಾಗಿರಬೇಕು. (1 ತಿಮೊಥೆಯ 3:​4, 12) “ಚೆನ್ನಾಗಿ” ಮೇಲ್ವಿಚಾರಣೆ ನಡೆಸುವುದರಲ್ಲಿ, ನಮ್ಮ ಮಕ್ಕಳಿಗೆ ಭವಿಷ್ಯತ್ತಿನಲ್ಲಿ ಅನಾನುಕೂಲತೆಗಳಾಗುವುದನ್ನು ತಪ್ಪಿಸಲಿಕ್ಕಾಗಿ ನೆರವು ನೀಡಲು ಸಾಧ್ಯವಿರುವುದೆಲ್ಲವನ್ನು ಮಾಡುವುದೂ ಒಳಗೂಡಿದೆ.

ದೇವರು ಕ್ರೈಸ್ತ ಹೆತ್ತವರಿಗೆ ಒಂದು ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾನೆ. ಅವರು ತಮ್ಮ ಮಕ್ಕಳನ್ನು ದೇವರ ವಾಕ್ಯಕ್ಕನುಸಾರ ಬೆಳೆಸಬೇಕು ಮತ್ತು ‘ಜ್ಞಾನವನ್ನು ಪ್ರೀತಿಸು’ವವರಾಗುವಂತೆ ಅವರಿಗೆ ಸಹಾಯಮಾಡಬೇಕು. (ಜ್ಞಾನೋಕ್ತಿ 12:​1, NW; 22:6; ಎಫೆಸ 6:4) ಅಪೊಸ್ತಲ ಪೌಲನು ಬರೆದುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ನಮ್ಮ ಮಕ್ಕಳಿಗಾಗಿ ಸೂಕ್ತವಾದ ವಿದ್ಯಾಭ್ಯಾಸವನ್ನೂ ಒದಗಿಸತಕ್ಕದ್ದು.

ಕೆಲವೊಮ್ಮೆ ಒಂದು ಶಾಲಾ ವ್ಯವಸ್ಥೆಯಲ್ಲಿ ಮಕ್ಕಳ ಶೈಕ್ಷಣಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುವ ಸಾಮರ್ಥ್ಯದಲ್ಲಿ ಕೊರತೆಯು ಕಂಡುಬರುತ್ತದೆ. ಇದಕ್ಕೆ ಕಾರಣ ಶಾಲೆಯಲ್ಲಿ ಅತ್ಯಧಿಕ ಸಂಖ್ಯೆಯ ಮಕ್ಕಳಿರುವುದು, ಸಾಕಷ್ಟು ಹಣಕಾಸಿಲ್ಲದಿರುವುದು, ಅಥವಾ ಅತೃಪ್ತ ಹಾಗೂ ಕಡಿಮೆ ಸಂಬಳವನ್ನು ಪಡೆಯುತ್ತಿರುವ ಶಿಕ್ಷಕರ ಸಿಬ್ಬಂದಿವರ್ಗವು ಇರುವುದೇ ಆಗಿರಬಹುದು. ಆದುದರಿಂದ, ಶಾಲೆಯಲ್ಲಿ ತಮ್ಮ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ ಎಂಬುದರಲ್ಲಿ ಹೆತ್ತವರು ಸಕ್ರಿಯ ಆಸಕ್ತಿಯನ್ನು ತೋರಿಸುವುದು ಪ್ರಾಮುಖ್ಯವಾದದ್ದಾಗಿದೆ. ವಿಶೇಷವಾಗಿ ಪ್ರತಿಯೊಂದು ಶಾಲಾವಧಿಯ ಆರಂಭದ ಸಮಯದಲ್ಲಿ, ಶಿಕ್ಷಕರೊಂದಿಗೆ ಚಿರಪರಿಚಿತರಾಗುವುದು, ಮಕ್ಕಳು ಹೆಚ್ಚು ಉತ್ತಮ ವಿದ್ಯಾರ್ಥಿಗಳಾಗುವಂತೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದರ ಕುರಿತು ಅವರಿಂದ ಸಲಹೆಯನ್ನು ಕೇಳುವುದು ಸಹ ವಿವೇಕಯುತವಾದದ್ದಾಗಿದೆ. ಈ ಮೂಲಕ ತಮ್ಮನ್ನು ಗಣ್ಯಮಾಡಲಾಗುತ್ತಿದೆ ಎಂದು ಶಿಕ್ಷಕರಿಗೆ ಅನಿಸಬಹುದು ಮತ್ತು ಅವರು ಮಕ್ಕಳ ಶೈಕ್ಷಣಿಕ ಆವಶ್ಯಕತೆಗಳನ್ನು ಪೂರೈಸಲು ಇನ್ನೂ ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ಪ್ರಚೋದಿಸಲ್ಪಡಸಾಧ್ಯವಿದೆ.

ವಿದ್ಯಾಭ್ಯಾಸವು ಒಂದು ಮಗುವಿನ ಬೆಳವಣಿಗೆಯ ಒಂದು ಅವಿಭಾಜ್ಯ ಅಂಗವಾಗಿದೆ. “ಬುದ್ಧಿವಂತರು ಜ್ಞಾನವನ್ನು ನಿಕ್ಷೇಪದೋಪಾದಿ ಕಾಪಾಡಿಕೊಳ್ಳುತ್ತಾರೆ” ಎಂದು ಜ್ಞಾನೋಕ್ತಿ 10:14 (NW) ಹೇಳುತ್ತದೆ. ವಿಶೇಷವಾಗಿ ಬೈಬಲ್‌ ಜ್ಞಾನದ ವಿಷಯದಲ್ಲಿ ಇದು ಸತ್ಯವಾಗಿದೆ. ಆಬಾಲವೃದ್ಧರಾಗಿರುವ ಯೆಹೋವನ ಜನರೆಲ್ಲರೂ, ಇತರರಿಗೆ ಆತ್ಮಿಕವಾಗಿ ಸಹಾಯಮಾಡಲಿಕ್ಕಾಗಿ ಮತ್ತು ‘ದೇವರ ದೃಷ್ಟಿಗೆ ಯೋಗ್ಯರಾಗಿ ಕಾಣಿಸಿಕೊಳ್ಳುವುದಕ್ಕೆ ಹಾಗೂ ಅವಮಾನಕ್ಕೆ ಗುರಿಯಾಗದ ಕೆಲಸದವರೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರೂ’ ಆಗಿರಲಿಕ್ಕಾಗಿ, ಸಾಧ್ಯವಿರುವಷ್ಟು ಮಟ್ಟಿಗೆ ಸುಶಿಕ್ಷಿತರಾಗಿರಬೇಕು. (2 ತಿಮೊಥೆಯ 2:15; 1 ತಿಮೊಥೆಯ 4:15) ಹಾಗಾದರೆ ನಿಮ್ಮ ಮಕ್ಕಳು ಶಾಲೆಗೆ ಹೋಗಬೇಕೋ? ಖಂಡಿತವಾಗಿಯೂ ಹೋಗಬೇಕು ಎಂಬ ತೀರ್ಮಾನಕ್ಕೆ ನೀವು ಬರುವಿರಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೂ, ನಿಮ್ಮ ದೇಶದಲ್ಲಿ ಯಾವುದು ಪ್ರಾಯೋಗಿಕವಾಗಿದೆಯೋ ಅದರ ಮೇಲೆ ಹೆಚ್ಚಿನದ್ದು ಅವಲಂಬಿಸಿದೆ. ಆದರೆ ಕ್ರೈಸ್ತ ಹೆತ್ತವರು ‘ನನ್ನ ಮಕ್ಕಳಿಗೆ ವಿದ್ಯಾಭ್ಯಾಸವು ನೀಡಲ್ಪಡಬೇಕೋ?’ ಎಂಬ ಅತಿ ಪ್ರಾಮುಖ್ಯವಾಗಿರುವ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯವಿದೆ. ನೀವು ಎಲ್ಲಿಯೇ ಜೀವಿಸುತ್ತಿರಲಿ, ನಿಮ್ಮ ಉತ್ತರವು ಹೌದು ಎಂಬ ಗಟ್ಟಿಯಾದ ಘೋಷಣೆಯೇ ಆಗಿರಬೇಕು ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ?

[ಪಾದಟಿಪ್ಪಣಿಗಳು]

^ ಪ್ಯಾರ. 5 ಅವರ ಮಾತೃಭಾಷೆಯು ಆ್ಯರಮೇಯ ಭಾಷೆಯ ಗಲಿಲಾಯದ ಭಾಷಾರೂಪವಾಗಿತ್ತು ಅಥವಾ ಹೀಬ್ರುವಿನ ಒಂದು ಭಾಷಾರೂಪವಾಗಿತ್ತು. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಪುಸ್ತಕದ 1ನೇ ಸಂಪುಟದ 144-6ನೇ ಪುಟಗಳನ್ನು ನೋಡಿರಿ.

^ ಪ್ಯಾರ. 25 ಡಿಸೆಂಬರ್‌ 22, 2000 ಇಸವಿಯ ಎಚ್ಚರ! (ಇಂಗ್ಲಿಷ್‌)ದ 8 ಮತ್ತು 9ನೆಯ ಪುಟಗಳನ್ನು ನೋಡಿರಿ.

[ಪುಟ 12, 13ರಲ್ಲಿರುವ ಚೌಕ/ಚಿತ್ರ]

ಒಂದುವೇಳೆ ಶಾಲೆಗೆ ಹಾಜರಾಗುವುದು ಅಸಾಧ್ಯವಾಗಿರುವಲ್ಲಿ

ಕೆಲವು ಸನ್ನಿವೇಶಗಳಲ್ಲಿ ಶಾಲೆಗೆ ಹಾಜರಾಗುವುದು ಅಸಾಧ್ಯವಾಗಿರುತ್ತದೆ. ಉದಾಹರಣೆಗೆ, ನಿರಾಶ್ರಿತರು (ಇಂಗ್ಲಿಷ್‌) ಎಂಬ ಪತ್ರಿಕೆಯು ವರದಿಸಿದ್ದೇನೆಂದರೆ, ನಿರಾಶ್ರಿತರ ಶಿಬಿರಗಳಲ್ಲಿ 5ಮಂದಿ ಮಕ್ಕಳಲ್ಲಿ ಸಾಮರ್ಥ್ಯವುಳ್ಳ ಒಂದೇ ಒಂದು ಮಗು ಶಾಲೆಗೆ ಹಾಜರಾಗಸಾಧ್ಯವಿದೆ. ಕೆಲವು ಸಂದರ್ಭಗಳಲ್ಲಿ, ಮುಷ್ಕರಗಳು ಸ್ಥಳಿಕ ಶಾಲೆಗಳನ್ನು ತುಂಬ ದೀರ್ಘ ಕಾಲಾವಧಿಯ ವರೆಗೆ ಮುಚ್ಚಿಬಿಡುತ್ತವೆ. ಕೆಲವೊಂದು ಪ್ರಾಂತಗಳಲ್ಲಿ ಶಾಲೆಗಳು ತುಂಬ ದೂರವಿರಬಹುದು ಅಥವಾ ಶಾಲೆಗಳೇ ಇಲ್ಲದಿರಬಹುದು. ಕ್ರೈಸ್ತರಿಗೆ ಬರುವ ಹಿಂಸೆಗಳು ಸಹ ಮಕ್ಕಳು ಶಾಲೆಯಿಂದ ಹೊರಹಾಕಲ್ಪಡುವಂತೆ ಮಾಡುತ್ತವೆ.

ಇಂಥ ಪರಿಸ್ಥಿತಿಗಳಲ್ಲಿ ನೀವು ನಿಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಸಾಧ್ಯವಿದೆ? ನಿಮಗೆ ಅನೇಕ ಮಕ್ಕಳಿದ್ದು, ಅತ್ಯಧಿಕ ಖರ್ಚುವೆಚ್ಚಗಳ ಕಾರಣದಿಂದಾಗಿ ಅವರೆಲ್ಲರೂ ಒಂದು ಔಪಚಾರಿಕ ಶಾಲೆಗೆ ಹೋಗುವುದು ಅಸಾಧ್ಯವಾಗಿರುವಂಥ ಒಂದು ಕ್ಷೇತ್ರದಲ್ಲಿ ನೀವು ವಾಸಿಸುತ್ತಿರುವಲ್ಲಿ ಏನು ಮಾಡಸಾಧ್ಯವಿದೆ? ನೀವು ನಿಮ್ಮ ಮಕ್ಕಳಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನು ಶಾಲೆಗೆ ಕಳುಹಿಸಲು ಬೇಕಾಗುವಷ್ಟು ಹಣ ನಿಮ್ಮಲ್ಲಿದೆಯೋ? ಅವರನ್ನು ಆತ್ಮಿಕ ಅಪಾಯಕ್ಕೆ ಒಳಪಡಿಸದೆ ನೀವು ಅವರನ್ನು ಶಾಲೆಗೆ ಕಳುಹಿಸಬಲ್ಲಿರೋ? ಹಾಗಿರುವಲ್ಲಿ, ಅವರು ಶಾಲೆಯಲ್ಲಿ ಏನನ್ನು ಕಲಿಯುತ್ತಿದ್ದಾರೋ ಅದನ್ನು ನಿಮ್ಮ ಇತರ ಮಕ್ಕಳಿಗೆ ಕಲಿಸುವ ಸಹಾಯವನ್ನು ಮಾಡಲು ಶಕ್ತರಾಗಬಹುದು.

ಕೆಲವು ದೇಶಗಳಲ್ಲಿ ಗೃಹ ಶಾಲಾ ಶಿಕ್ಷಣ (ಹೋಮ್‌ ಸ್ಕೂಲಿಂಗ್‌) ಎಂದು ಯಾವುದನ್ನು ಕರೆಯಲಾಗುತ್ತದೋ ಆ ಏರ್ಪಾಡಿದೆ. * ಈ ಏರ್ಪಾಡಿನಲ್ಲಿ, ಹೆತ್ತವರಲ್ಲಿ ಒಬ್ಬರು ಸಾಮಾನ್ಯವಾಗಿ ಪ್ರತಿ ದಿನ ಮಗುವಿಗೆ ಪಾಠವನ್ನು ಕಲಿಸುವುದರಲ್ಲಿ ಕೆಲವು ತಾಸುಗಳನ್ನು ವ್ಯಯಿಸುತ್ತಾರೆ. ಮೂಲಪಿತೃಗಳ ಕಾಲಗಳಲ್ಲಿ, ತಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಹೆತ್ತವರು ಬಹಳಷ್ಟು ಸಾಫಲ್ಯವನ್ನು ಪಡೆದಿದ್ದರು. ಬಹುಶಃ ಹೆತ್ತವರ ಒಳ್ಳೇ ತರಬೇತಿಯ ಕಾರಣದಿಂದಲೇ, ಯಾಕೋಬನ ಮಗನಾಗಿದ್ದ ಯೋಸೇಫನು ತೀರ ಚಿಕ್ಕ ಪ್ರಾಯದಲ್ಲೇ ಇತರರ ಮೇಲ್ವಿಚಾರಣೆ ನಡೆಸಲು ಸಮರ್ಥನಾಗಿದ್ದನು ಎಂಬುದು ಸುವ್ಯಕ್ತ.

ನಿರಾಶ್ರಿತರ ಶಿಬಿರದಂಥ ಸ್ಥಳಗಳಲ್ಲಿ ಒಂದು ವಿಧ್ಯುಕ್ತ ವ್ಯಾಸಂಗ ಕ್ರಮ ಅಥವಾ ಶಿಕ್ಷಣ ಕಾರ್ಯಕ್ರಮವನ್ನು ಪಡೆದುಕೊಳ್ಳುವುದು ತುಂಬ ಕಷ್ಟಕರವಾಗಿರಬಹುದು, ಆದರೆ ಹೆತ್ತವರು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಸಾಹಿತ್ಯವನ್ನು ಮಕ್ಕಳ ಉಪದೇಶಕ್ಕೆ ಆಧಾರವಾಗಿ ಉಪಯೋಗಿಸಲು ಶಕ್ತರಾಗಿರಬಹುದು. ಉದಾಹರಣೆಗೆ, ಬೈಬಲ್‌ ಕಥೆಗಳ ನನ್ನ ಪುಸ್ತಕವು ಚಿಕ್ಕ ಮಕ್ಕಳಿಗೆ ಕಲಿಸುವುದರಲ್ಲಿ ಸಹಾಯಕರವಾಗಿರಬಹುದು. ಎಚ್ಚರ! ಪತ್ರಿಕೆಯಲ್ಲಿ ಬೇರೆ ಬೇರೆ ರೀತಿಯ ವಿಷಯಗಳ ಕುರಿತಾದ ಲೇಖನಗಳು ಇರುತ್ತವೆ. ಜೀವ​—ಅದು ಇಲ್ಲಿ ಹೇಗೆ ಬಂತು? ವಿಕಾಸದಿಂದಲೋ ಅಥವಾ ಸೃಷ್ಟಿಯಿಂದಲೋ? (ಇಂಗ್ಲಿಷ್‌) ಎಂಬ ಪುಸ್ತಕವನ್ನು, ವೈಜ್ಞಾನಿಕ ವಿಷಯಗಳನ್ನು ಕಲಿಸುವುದರಲ್ಲಿ ಉಪಯೋಗಿಸಸಾಧ್ಯವಿದೆ. ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ದಲ್ಲಿ ಪ್ರಪಂಚದ ಒಂದು ಚಿಕ್ಕ ಭೂಪಟವಿದೆ ಮತ್ತು ಇದು ಬೇರೆ ಬೇರೆ ದೇಶಗಳ ಜೀವನದ ಕುರಿತು ಮತ್ತು ಸಾರುವ ಚಟುವಟಿಕೆಗಳ ಕುರಿತು ತಿಳಿಸುತ್ತದೆ.

ತಿಳಿಸಬೇಕಾದ ಮಾಹಿತಿಯನ್ನು ಚೆನ್ನಾಗಿ ತಯಾರಿಸಿ, ಮಕ್ಕಳ ತಿಳಿವಳಿಕೆಯ ಮಟ್ಟಕ್ಕನುಸಾರ ಹೊಂದಿಸಿಕೊಳ್ಳುವಲ್ಲಿ, ತುಂಬ ಒಳಿತನ್ನು ಪೂರೈಸಸಾಧ್ಯವಿದೆ. ಒಂದುವೇಳೆ ಅವರು ಓದುವುದನ್ನು ಹಾಗೂ ಕಲಿಯುವುದನ್ನು ಮುಂದುವರಿಸುವಲ್ಲಿ, ಮುಂದೆ ಎಂದಾದರೂ ಕ್ರಮವಾದ ಶಾಲೆಗೆ ಹೋಗಬೇಕಾದಾಗ ಅವರು ಹೆಚ್ಚು ಸುಲಭವಾಗಿ ಅದಕ್ಕೆ ಹೊಂದಿಕೊಳ್ಳುವರು. ಆರಂಭದ ಹೆಜ್ಜೆ ಮತ್ತು ಪ್ರಯತ್ನದ ಮೂಲಕ ನಿಮ್ಮ ಮಕ್ಕಳು ಸುಶಿಕ್ಷಿತರಾಗುವಂತೆ ನೀವು ಅವರಿಗೆ ಸಹಾಯಮಾಡಸಾಧ್ಯವಿದೆ, ಮತ್ತು ಅದೆಷ್ಟು ಪ್ರತಿಫಲದಾಯಕವಾದದ್ದಾಗಿದೆ!

[ಪಾದಟಿಪ್ಪಣಿ]

^ ಪ್ಯಾರ. 40 ಇಸವಿ 1993, ಜಲೈ 8ರ ಎಚ್ಚರ! ಪತ್ರಿಕೆಯ 9-12ನೆಯ ಪುಟಗಳಲ್ಲಿರುವ “ಗೃಹ ಶಾಲಾ ಶಿಕ್ಷಣ​—ಅದು ನಿಮಗೊ?” ಎಂಬ ಲೇಖನವನ್ನು ನೋಡಿರಿ.

[ಚಿತ್ರ]

ನಿಮ್ಮ ಮಕ್ಕಳು ಒಂದು ವಿಧ್ಯುಕ್ತ ಶಾಲೆಗೆ ಹಾಜರಾಗಲು ಅಸಮರ್ಥರಾಗಿರುವಂಥ ಸ್ಥಳದಲ್ಲಿ ನೀವು ವಾಸಿಸುತ್ತಿರುವಲ್ಲಿ ಏನು ಮಾಡಸಾಧ್ಯವಿದೆ?