ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಎಲೆಕ್ಟ್ರಾನಿಕ್‌ ಸಾಧನಗಳ ಬಲೆಗೆ ಬಿದ್ದಿದ್ದೀರಾ?

ನೀವು ಎಲೆಕ್ಟ್ರಾನಿಕ್‌ ಸಾಧನಗಳ ಬಲೆಗೆ ಬಿದ್ದಿದ್ದೀರಾ?

ಜೆನ್ನಿಗೆ ವಿಡಿಯೋ ಗೇಮ್‌ ಆಡುವ ಹುಚ್ಚು. “ನಾನು ದಿನಕ್ಕೆ 8 ತಾಸು ವಿಡಿಯೋ ಗೇಮ್‌ ಆಡುತ್ತಿರುತ್ತೀನಿ. ಅದನ್ನು ಬಿಡಕ್ಕೆ ನನ್ನಿಂದ ಆಗುತ್ತಾನೇ ಇಲ್ಲ” ಎನ್ನುತ್ತಾಳೆ ಆಕೆ.

ಏಳು ದಿನ ಯಾವುದೇ ಎಲೆಕ್ಟ್ರಾನಿಕ್‌ ಸಾಧನಗಳನ್ನು ಮತ್ತು ಇಂಟರ್‌ನೆಟ್‌ನ್ನು ಉಪಯೋಗಿಸಬಾರದು ಅಂತ ಡೆನಿಸ್‌ ನಿರ್ಣಯಿಸಿದ್ದನು. ಆದರೆ ಅದಿಲ್ಲದೆ ಅವನಿಂದ 2 ದಿನ ಸಹ ಇರಲಿಕ್ಕೆ ಸಾಧ್ಯವಾಗಲಿಲ್ಲ.

ಜೆನ್ನಿ ಮತ್ತು ಡೆನಿಸ್‌ ಯುವ ಪ್ರಾಯದವರೇನಲ್ಲ. ಜೆನ್ನಿ ನಾಲ್ಕು ಮಕ್ಕಳ ತಾಯಿ, ಆಕೆಗೆ ಈಗ 40 ವರ್ಷ. ಡೆನಿಸ್‌ಗೆ 49 ವರ್ಷ.

ನೀವೂ ಆಧುನಿಕ ಎಲೆಕ್ಟ್ರಾನಿಕ್‌ ಸಾಧನಗಳನ್ನು ಉಪಯೋಗಿಸುತ್ತೀರಾ? * ತುಂಬ ಜನ, ‘ಹೌದು, ಅದರಿಂದ ತುಂಬ ಪ್ರಯೋಜನ ಇದೆ’ ಅಂತ ಹೇಳಬಹುದು. ಉದ್ಯೋಗದಲ್ಲಿ, ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು, ಮನೋರಂಜನೆಗಾಗಿ ಎಲೆಕ್ಟ್ರಾನಿಕ್‌ ಸಾಧನಗಳು ತುಂಬ ಪ್ರಯೋಜನಕರ.

ಜೆನ್ನಿ ಮತ್ತು ಡೆನಿಸ್‌ರಂತೆ ತುಂಬ ಜನ ಈ ಎಲೆಕ್ಟ್ರಾನಿಕ್‌ ಸಾಧನಗಳನ್ನು ಉಪಯೋಗಿಸುವುದರಲ್ಲೇ ಮುಳುಗಿ ಹೋಗಿದ್ದಾರೆ. ಉದಾಹರಣೆಗೆ, 20 ವರ್ಷದ ನೀಕೋಲ್‌ ಹೀಗೆ ಹೇಳುತ್ತಾಳೆ: “ನನ್ನ ಮೊಬೈಲೇ ನನ್ನ ಬೆಸ್ಟ್‌ ಫ್ರೆಂಡ್. ಯಾವಾಗಲೂ ಅದನ್ನು ನನ್ನ ಹತ್ರನೇ ಇಟ್ಟುಕೊಂಡಿರುತ್ತೀನಿ, ಅದನ್ನು ಬಿಟ್ಟು ಇರಕ್ಕೆ ನನ್ನ ಕೈಲಿ ಆಗೋದೇ ಇಲ್ಲ. ನೆಟ್‌ವರ್ಕ್‌ ಇಲ್ಲದಿರೋ ಜಾಗಕ್ಕೆ ಹೋದರೆ ಹುಚ್ಚು ಹಿಡಿದ ಹಾಗಾಗುತ್ತೆ, ಅಲ್ಲಿ ಅರ್ಧ ಗಂಟೆನೂ ಇರಕ್ಕಾಗಲ್ಲ, ಯಾವಾಗ ಮೆಸೇಜ್‌ ನೋಡ್ತೀನೋ ಅಂತ ಚಡಪಡಿಸ್ತಾ ಇರುತ್ತೀನಿ. ಇದೆಲ್ಲಾ ಯೋಚಿಸಿದ್ರೆ ‘ನಾನೆಂಥ ಹುಚ್ಚಿ’ ಅಂತ ಅನ್ಸುತ್ತೆ.”

ಕೆಲವರು ರಾತ್ರಿಯೆಲ್ಲಾ ಮೆಸೇಜ್‌ ಮಾಡುತ್ತಾ, ಹೊಸ ಮಾಹಿತಿ ಏನಾದರೂ ಬಂದಿದೆಯಾ ಅಂತ ನೋಡುತ್ತಾ ಇರುತ್ತಾರೆ. ಈ ಅಭ್ಯಾಸವನ್ನು ನಿಲ್ಲಿಸಲು ಪ್ರಯತ್ನಿಸಿದರೂ ಅದು ಅವರಿಂದ ಆಗಲ್ಲ, ಅವರ ಮನಸ್ಥಿತಿಯೇ ಹಾಳಾಗುತ್ತೆ. ಈ ರೀತಿ ಇಂಟರ್‌ನೆಟ್‌, ಸ್ಮಾರ್ಟ್ ಫೋನ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್‌ ಸಾಧನಗಳ ಗೀಳನ್ನು ಒಂದು ದುಶ್ಚಟ ಎಂದು ಸಂಶೋಧಕರು ಹೇಳುತ್ತಾರೆ. ಆದರೆ ಇದನ್ನು ಒಪ್ಪಿಕೊಳ್ಳದ ಜನ ಅದೇನು ದುಶ್ಚಟ ಅಲ್ಲ, ಅದನ್ನು ಹಿಡಿತದಲ್ಲಿಡುವುದು ಸ್ವಲ್ಪ ಕಷ್ಟ ಅಷ್ಟೆ ಅಂತ ಹೇಳುತ್ತಾರೆ.

ಅದೇನೇ ಆಗಿರಲಿ, ಅದರಿಂದ ಸಮಸ್ಯೆ ಬರುತ್ತೆ ಅನ್ನುವುದಂತೂ ನಿಜ. ಈ ಎಲೆಕ್ಟ್ರಾನಿಕ್‌ ಸಾಧನಗಳಿಂದಾಗಿ ಕೆಲವೊಮ್ಮೆ ಕುಟುಂಬದವರ ಜೊತೆಯಲ್ಲೂ ಆಪ್ತತೆ ಇಲ್ಲದೇ ಹೋಗುತ್ತದೆ. ಉದಾಹರಣೆಗೆ, 20 ವರ್ಷದ ಒಬ್ಬ ಯುವತಿ ತನ್ನ ದುಃಖವನ್ನು ಹೀಗೆ ಹೇಳಿಕೊಳ್ಳುತ್ತಾಳೆ:“ನನ್ನ ಅಪ್ಪನಿಗೆ ನನ್ನ ಜೀವನದಲ್ಲಿ ಏನೇನಾಗುತ್ತಿದೆ ಅಂತನೇ ಗೊತ್ತಿಲ್ಲ. ಮನೆಯಲ್ಲಿರುವಾಗ, ನನ್ನ ಹತ್ತಿರ ಮಾತಾಡುವಾಗ ಸಹ ಇ-ಮೇಲ್‌ ಕಳಿಸುತ್ತಾ ಇರುತ್ತಾರೆ. ಒಂದು ನಿಮಿಷನೂ ಫೋನನ್ನ ಪಕ್ಕಕ್ಕಿಡಲ್ಲ. ನನ್ನ ಅಪ್ಪನಿಗೆ ನನ್ನ ಬಗ್ಗೆ ಕಾಳಜಿ ಇರಬಹುದೇನೋ, ಆದರೆ ಅವರು ಮಾಡುವುದನ್ನು ನೋಡುವಾಗ ಕೆಲವೊಮ್ಮೆ ಅದು ಸುಳ್ಳು ಅಂತ ಅನ್ಸುತ್ತೆ.”

ಈ ಬಲೆಯಿಂದ ಬಿಡಿಸಿಕೊಳ್ಳುವ ಬಗೆ

ಎಲೆಕ್ಟ್ರಾನಿಕ್‌ ಸಾಧನಗಳ ಚಟದಿಂದ ಬಿಡಿಸಲು ಚೀನಾ, ದಕ್ಷಿಣ ಕೊರಿಯಾ, ಬ್ರಿಟನ್‌ ಮತ್ತು ಅಮೆರಿಕದಂಥ ದೇಶಗಳಲ್ಲಿ ಕೆಲವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು “ಡಿಜಿಟಲ್‌ ಡಿಟಾಕ್ಸ್‌” ಎಂದು ಕರೆಯುತ್ತಾರೆ. ಇಂಥ ಕೇಂದ್ರಗಳಲ್ಲಿ ಅನೇಕ ದಿನಗಳ ವರೆಗೆ ಇಂಟರ್‌ನೆಟ್‌ ಮತ್ತು ಯಾವುದೇ ಎಲೆಕ್ಟ್ರಾನಿಕ್‌ ಸಾಧನಗಳನ್ನು ಉಪಯೋಗಿಸಲು ಕೊಡುವುದೇ ಇಲ್ಲ. ಬ್ರೆಟ್‌ ಎಂಬ ಯುವಕನ ಉದಾಹರಣೆಯನ್ನು ಗಮನಿಸಿ. ‘ಒಂದು ಸಮಯದಲ್ಲಿ ನಾನು ದಿನಕ್ಕೆ 16 ತಾಸು ಆನ್‌ಲೈನ್‍ನಲ್ಲಿ ಗೇಮ್‌ ಆಡುತ್ತಿದ್ದೆ. ಆಗ ನನಗೆ ಡ್ರಗ್ಸ್‌ (ಅಮಲೌಷಧ) ತಗೊಂಡಷ್ಟು ಮಜಾ ಸಿಗುತ್ತಿತ್ತು’ ಎಂದು ಅವನು ಹೇಳುತ್ತಾನೆ. ಇದರಿಂದಾಗಿ ಅವನು ತನ್ನ ಉದ್ಯೋಗವನ್ನು, ಸ್ನೇಹಿತರನ್ನು ಕಳೆದುಕೊಂಡನು, ಸ್ವಚ್ಛವಾಗಿರಲು ಕೂಡ ಅವನಿಂದಾಗಲಿಲ್ಲ. ನಂತರ ಅವನನ್ನು “ಡಿಜಿಟಲ್‌ ಡಿಟಾಕ್ಸ್‌” ಕೇಂದ್ರಕ್ಕೆ ಸೇರಿಸಲಾಯಿತು. ಇಂಥ ಪರಿಸ್ಥಿತಿ ನಮಗೆ ಬರಬಾರದೆಂದರೆ ನಾವೇನು ಮಾಡಬಹುದು?

ಸ್ವಪರೀಕ್ಷೆ ಮಾಡಿಕೊಳ್ಳಿ. ಎಲೆಕ್ಟ್ರಾನಿಕ್‌ ಸಾಧನಗಳು ನಿಮ್ಮ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ತಿಳಿಯಲು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ:

  • ಇಂಟರ್‌ನೆಟ್‌ ಅಥವಾ ಎಲೆಕ್ಟ್ರಾನಿಕ್‌ ಸಾಧನವನ್ನು ಉಪಯೋಗಿಸಲು ಸಾಧ್ಯವಾಗದಿದ್ದಾಗ, ಕಾರಣ ಇಲ್ಲದೆ ನನಗೆ ಕಿರಿಕಿರಿಯಾಗುತ್ತಾ ಅಥವಾ ಕೋಪ ಬರುತ್ತಾ?

  • ನಿರ್ಣಯಿಸಿದ್ದಕ್ಕಿಂತ ಹೆಚ್ಚು ಹೊತ್ತು ಅದನ್ನು ಉಪಯೋಗಿಸುತ್ತೇನಾ?

  • ನಿದ್ದೆ ಮಾಡದೆ ರಾತ್ರಿಯೆಲ್ಲಾ ಮೆಸೇಜ್‌ ನೋಡುತ್ತಾ ಇರುತ್ತೇನಾ?

  • ಎಲೆಕ್ಟ್ರಾನಿಕ್‌ ಸಾಧನವನ್ನು ಹೆಚ್ಚಾಗಿ ಉಪಯೋಗಿಸುತ್ತಾ ನನ್ನ ಕುಟುಂಬವನ್ನು ಕಡೆಗಣಿಸುತ್ತಿದ್ದೇನಾ? ಈ ವಿಷಯದಲ್ಲಿ ನನ್ನ ಕುಟುಂಬಕ್ಕೆ ಏನು ಅನಿಸುತ್ತೆ?

ಎಲೆಕ್ಟ್ರಾನಿಕ್‌ಸಾಧನಗಳನ್ನು ಉಪಯೋಗಿಸುವುದರಿಂದ ‘ಹೆಚ್ಚು ಪ್ರಮುಖವಾದ ವಿಷಯಗಳಿಗೆ’ ಅಂದರೆ ನಿಮ್ಮ ಕುಟುಂಬ ಮತ್ತು ಇತರ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತಾ? (ಫಿಲಿಪ್ಪಿ 1:10) ಇಲ್ಲವಾದರೆ ಕೂಡಲೇ ಬದಲಾವಣೆ ಮಾಡಿಕೊಳ್ಳಿ. ಆದರೆ ಹೇಗೆ?

ಇತಿ-ಮಿತಿಗಳನ್ನಿಡಿ. ಅತಿಯಾದರೆ ಹಾಲೂ ವಿಷದಂತೆ. ಆದ್ದರಿಂದ ಉದ್ಯೋಗ, ಮನರಂಜನೆ ಅಥವಾ ಇನ್ಯಾವುದೇ ಕಾರಣಕ್ಕಾಗಿ ಎಲೆಕ್ಟ್ರಾನಿಕ್‌ ಸಾಧನಗಳನ್ನು ಉಪಯೋಗಿಸುವುದಾದರೂ ಅದಕ್ಕೆ ಮಿತಿಯಿರಲಿ. ನೀವು ನಿರ್ಣಯಿಸಿದ್ದಕ್ಕಿಂತ ಹೆಚ್ಚು ಹೊತ್ತು ಅದನ್ನು ಉಪಯೋಗಿಸಬೇಡಿ.

ಕಿವಿಮಾತು: ಎಲೆಕ್ಟ್ರಾನಿಕ್‌ ಸಾಧನಗಳನ್ನು ಹೆಚ್ಚಾಗಿ ಉಪಯೋಗಿಸುವ ಅಭ್ಯಾಸ ನಿಮಗಿದ್ದರೆ, ನಿಮ್ಮ ಕುಟುಂಬ ಸದಸ್ಯರ ಅಥವಾ ಸ್ನೇಹಿತರಿಂದ ಸಹಾಯ ಪಡೆಯಿರಿ. ಯಾಕೆಂದರೆ, “ಒಬ್ಬನಿಗಿಂತ ಇಬ್ಬರು ಲೇಸು . . . ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು” ಎಂದು ಬೈಬಲ್‌ ತಿಳಿಸುತ್ತದೆ.—ಪ್ರಸಂಗಿ 4:9, 10.

ಆಕರ್ಷಣೆ ಆಪತ್ತಿಗೆ ನಡೆಸದಂತೆ ಜಾಗ್ರತೆ ವಹಿಸಿ

ಹೊಸ ಹೊಸ ಸಾಧನಗಳನ್ನು ಕಂಡುಹಿಡಿದಂತೆ ಜನರು ಅದರ ಬಲೆಗೆ ಬೀಳುವುದು ಸಹ ಹೆಚ್ಚಾಗುತ್ತದೆ. ಆದರೆ ಆಕರ್ಷಣೆ ಆಪತ್ತಿಗೆ ನಡೆಸದಂತೆ ಜಾಗ್ರತೆ ವಹಿಸಿ. ಎಲೆಕ್ಟ್ರಾನಿಕ್‌ ಸಾಧನಗಳನ್ನು ಮಿತವಾಗಿ ಬಳಸುತ್ತಾ ನಿಮಗಿರುವ ಸಮಯವನ್ನು ಸರಿಯಾಗಿ ಉಪಯೋಗಿಸಿ.—ಎಫೆಸ 5:16. ▪ (g15-E 04)

^ ಪ್ಯಾರ. 5 ಈ ಲೇಖನದಲ್ಲಿ ಎಲೆಕ್ಟ್ರಾನಿಕ್‌ ಸಾಧನ ಎಂಬ ಪದ ಇ-ಮೇಲ್‌, ಫೋನ್‌ ಕರೆಗಳು, ಮೆಸೇಜ್‌, ವಿಡಿಯೋ, ಸಂಗೀತ, ಗೇಮ್ಸ್ ಮತ್ತು ಫೊಟೋ ಮುಂತಾದವುಗಳನ್ನು ನೋಡಲು ಮತ್ತು ಕಳುಹಿಸಲು ಉಪಯೋಗಿಸುವ ಸಾಧನಗಳನ್ನು ಸೂಚಿಸುತ್ತದೆ.