ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಂತ್ವನ ಬೇಕಿದ್ದಾಗಲೇ ಸಿಕ್ಕಿತು

ಸಾಂತ್ವನ ಬೇಕಿದ್ದಾಗಲೇ ಸಿಕ್ಕಿತು

ಇದ್ದಕ್ಕಿದ್ದ ಹಾಗೆ ನಾನು ನೀರಲ್ಲಿ ಅಡಿಮುಖನಾಗಿ ಬಿದ್ದೆ. ಉಸಿರಾಡಲಿಕ್ಕಾಗಿ ತಲೆಯೆತ್ತಲು ಪ್ರಯತ್ನಿಸಿದೆ, ಆಗಲಿಲ್ಲ. ಕುತ್ತಿಗೆ ಅಲ್ಲಾಡಲೇ ಇಲ್ಲ. ತುಂಬ ಭಯ ಆಯಿತು. ಕೈಕಾಲು ಆಡಿಸಿ ತಿರುಗಲು ಪ್ರಯತ್ನಿಸಿದೆ. ಏನೂ ಪ್ರಯೋಜನ ಆಗಲಿಲ್ಲ. ನನ್ನ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳಲು ಶುರುವಾಯಿತು. ಇದು ನಡೆದದ್ದು 1991ರ ಬೇಸಿಗೆಕಾಲದಲ್ಲಿ. ನನ್ನ ಬದುಕೇ ಬದಲಾದ ವರ್ಷ.

ನಾನು ಹುಟ್ಟಿದ ನಗರದ ಹೆಸರು ಸೆರೆಂಚ್‌. ಬೆಳೆದದ್ದೆಲ್ಲಾ ಟಿಸಲಡಾನೀ ಎಂಬ ಹಳ್ಳಿಯಲ್ಲಿ. ಇದು ಹಂಗೇರಿಯ ಈಶಾನ್ಯ ಭಾಗದಲ್ಲಿದೆ. 1991ರ ಜೂನ್‌ ತಿಂಗಳಲ್ಲಿ ನಾನು ನನ್ನ ಸ್ನೇಹಿತರೆಲ್ಲಾ ಸೇರಿ ಟಿಸಾ ನದಿಯ ಒಂದು ಅಪರಿಚಿತ ಭಾಗಕ್ಕೆ ಹೋದೆವು. ಅಲ್ಲಿ ನೀರು ತುಂಬ ಆಳವಾಗಿದೆ ಅಂತ ನೆನಸಿ ನೀರಿಗೆ ತಲೆಮುಂದಾಗಿ ಧುಮುಕಿದೆ. ಅದೇ ನಾನು ಮಾಡಿದ ದೊಡ್ಡ ತಪ್ಪು! ಕುತ್ತಿಗೆಯಲ್ಲಿರುವ ಮೂರು ಮೂಳೆ ಮುರಿದು ಹೋಯಿತು. ಬೆನ್ನುಹುರಿಗೆ ಹಾನಿಯಾಯಿತು. ನಾನು ಚಲಿಸದೇ ಇರುವುದನ್ನು ಗಮನಿಸಿ ಸ್ನೇಹಿತನೊಬ್ಬ ಹುಷಾರಾಗಿ ನನ್ನನ್ನು ನೀರಿನಿಂದ ಎತ್ತಿ ತಂದ. ಹಾಗಾಗಿ ಬಚಾವಾದೆ.

ನಾನು ಪ್ರಜ್ಞೆ ಕಳೆದುಕೊಂಡಿರಲಿಲ್ಲ. ಆದರೆ ನನಗೆ ದೊಡ್ಡದ್ದೇನೊ ಆಗಿದೆ ಅಂತ ಗೊತ್ತಾಯಿತು. ತುರ್ತು ಸೇವೆಯವರನ್ನು ಯಾರೊ ಕರೆದರು. ಅವರು ಹೆಲಿಕಾಪ್ಟರ್‌ನಲ್ಲಿ ಬಂದು ನನ್ನನ್ನು ಆಸ್ಪತ್ರೆಗೆ ಕರಕೊಂಡು ಹೋಗಿ ದಾಖಲು ಮಾಡಿದರು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಬೆನ್ನುಹುರಿಗೆ ಹೆಚ್ಚು ಹಾನಿಯಾಗದಂತೆ ನೋಡಿಕೊಂಡರು. ಚೇತರಿಸಿಕೊಳ್ಳಲು ಆಮೇಲೆ ನನ್ನನ್ನು ಹಂಗೇರಿಯ ರಾಜಧಾನಿಯಾದ ಬುಡಾಪೆಸ್ಟ್‌ನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಮೂರು ತಿಂಗಳು ಹಾಸಿಗೆಯಲ್ಲೇ ಕಳೆದೆ. ಕುತ್ತಿಗೆ ತಿರುಗಿಸಲು ಆಗುತ್ತಿತ್ತು ಆದರೆ ಭುಜದಿಂದ ಕೆಳಗೆ ಶಕ್ತಿಯೇ ಇರಲಿಲ್ಲ. ಇನ್ನೊಬ್ಬರ ಸಹಾಯ ಇಲ್ಲದೆ ಏನೂ ಮಾಡಲಾಗದ ಸ್ಥಿತಿಗೆ ಬಂದು ಮುಟ್ಟಿದೆ. ಆಗ ನನಗೆ ಬರೀ 20 ವರ್ಷ! ಎಷ್ಟರ ಮಟ್ಟಿಗೆ ಬೇಜಾರಾಗುತ್ತಿತ್ತು ಎಂದರೆ ‘ಸತ್ತರೆ ಸಾಕಪ್ಪಾ’ ಎಂದೆಲ್ಲಾ ಅನಿಸುತ್ತಿತ್ತು.

ಕೊನೆಗೂ ಮನೆಗೆ ಹೋಗುವ ದಿನ ಬಂತು. ಅಪ್ಪಅಮ್ಮಗೆ ನನ್ನನ್ನು ಹೇಗೆ ನೋಡಿಕೊಳ್ಳಬೇಕು ಎಂಬ ವಿಷಯದಲ್ಲಿ ತರಬೇತಿ ಕೊಡಲಾಗಿತ್ತು. ಆದರೆ ಈ ಕೆಲಸ ಸುಲಭ ಆಗಿರಲಿಲ್ಲ. ನನ್ನಿಂದಾಗಿ ದೈಹಿಕವಾಗಿ ಭಾವನಾತ್ಮಕವಾಗಿ ಅವರಿಗೆ ತುಂಬ ಒತ್ತಡ ಆಗುತ್ತಿತ್ತು. ಮನೆಗೆ ಬಂದ ಸುಮಾರು ಒಂದು ವರ್ಷದ ನಂತರ ಖಿನ್ನತೆ ನನ್ನನ್ನು ಆವರಿಸಿತು. ಆ ಸಮಯದಲ್ಲಿ ನಾನು ಮನೋವೈದ್ಯರಿಂದ ಸಹಾಯಪಡೆದೆ. ಹಾಗಾಗಿ ನನ್ನ ದೈಹಿಕ ಅಸಾಮರ್ಥ್ಯದ ಬಗ್ಗೆ ನನಗಿದ್ದ ನೋಟ ಬದಲಾಯಿಸಲು ಸಹಾಯ ಆಯಿತು.

ಜೀವನದ ಬಗ್ಗೆ ತುಂಬ ಯೋಚಿಸಲು ಶುರುಮಾಡಿದೆ. ಅದಕ್ಕೊಂದು ಉದ್ದೇಶ ಇದೆಯಾ? ಇಂಥ ದುರಂತ ನನಗೆ ಯಾಕೆ ಆಯಿತು? ಉತ್ತರಕ್ಕಾಗಿ ತುಂಬ ಪುಸ್ತಕ, ಪತ್ರಿಕೆಗಳನ್ನು ಓದಿದೆ. ಬೈಬಲನ್ನೂ ಓದಿ ನೋಡಿದೆ. ಆದರೆ ಬೈಬಲನ್ನು ಅರ್ಥ ಮಾಡಿಕೊಳ್ಳಲು ತುಂಬ ಕಷ್ಟ ಆಯಿತು. ಆದ್ದರಿಂದ ಓದುವುದನ್ನೇ ನಿಲ್ಲಿಸಿದೆ. ಒಬ್ಬ ಪಾದ್ರಿ ಜೊತೆಯೂ ಮಾತಾಡಿ ನೋಡಿದೆ. ಆದರೆ ಅವರು ಹೇಳಿದ ವಿಷಯದಿಂದ ನನಗೆ ತೃಪ್ತಿ ಸಿಗಲಿಲ್ಲ.

1994ರ ವಸಂತಕಾಲದಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಭೇಟಿ ಮಾಡಿದರು. ಮೊದಲು ಅಪ್ಪನ ಹತ್ತಿರ ಮಾತಾಡಿದರು. ಆಮೇಲೆ ನನ್ನನ್ನು ಮಾತಾಡಿಸುವಂತೆ ಅಪ್ಪ ಅವರಿಗೆ ಹೇಳಿದರು. ದೇವರು ಇಡೀ ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡುತ್ತಾನೆ, ಎಲ್ಲಾ ಕಾಯಿಲೆ ನರಳಾಟವನ್ನು ತೆಗೆದು ಹಾಕಲಿದ್ದಾನೆ ಎಂದೆಲ್ಲಾ ಅವರು ಹೇಳಿದಾಗ ಚೆನ್ನಾಗಿ ಕೇಳಿಸಿಕೊಂಡೆ. ಇದೆಲ್ಲಾ ಕೇಳಲು ತುಂಬ ಚೆನ್ನಾಗಿದೆ ಆದರೆ ಹೀಗೆಲ್ಲಾ ಆಗುತ್ತದಾ ಅಂತ ನನಗೆ ತುಂಬ ಸಂಶಯ ಇತ್ತು. ಹಾಗಿದ್ದರೂ ಅವರು ಕೊಟ್ಟ ಎರಡು ಪುಸ್ತಕಗಳನ್ನು ತಕ್ಕೊಂಡು ಓದಿದೆ. ಓದಿದ ನಂತರ ಆ ಸಾಕ್ಷಿಗಳು ನನ್ನೊಂದಿಗೆ ಬೈಬಲ್‌ ಅಧ್ಯಯನ ಮಾಡಬಹುದಾ ಎಂದು ಕೇಳಿದರು. ‘ಸರಿ’ ಎಂದೆ. ಅವರು ನನಗೆ ಪ್ರಾರ್ಥನೆ ಮಾಡಲು ಪ್ರೋತ್ಸಾಹಿಸಿದರು.

ದೇವರು ನನ್ನ ಬಗ್ಗೆ ಕಾಳಜಿ ವಹಿಸುತ್ತಾನೆ ಎಂದು ಮನವರಿಕೆ ಆಯಿತು

ನಮ್ಮ ಚರ್ಚೆಗಳು ಮುಂದುವರಿಯುತ್ತಾ ಹೋದಂತೆ ನನಗಿದ್ದ ಪ್ರಶ್ನೆಗಳಿಗೆ ಉತ್ತರ ಬೈಬಲ್‍ನಿಂದಲೇ ಸಿಕ್ಕಿತು. ದೇವರಿಗೆ ನನ್ನ ಬಗ್ಗೆ ಚಿಂತೆ ಇದೆ, ಕಾಳಜಿ ಇದೆ ಎಂದೂ ಮನವರಿಕೆ ಆಯಿತು. ಎರಡು ವರ್ಷ ಬೈಬಲ್‌ ಅಧ್ಯಯನ ಮಾಡಿದ ಮೇಲೆ 1997 ಸೆಪ್ಟೆಂಬರ್‌ 13ರಂದು ನನ್ನ ಮನೆಯಲ್ಲೇ ಸ್ನಾನದ ತೊಟ್ಟಿಯಲ್ಲಿ ನನ್ನ ದೀಕ್ಷಾಸ್ನಾನ ಆಯಿತು. ನಾನು ಜೀವನದಲ್ಲಿ ತುಂಬ ಸಂತೋಷವಾಗಿದ್ದ ದಿನಗಳಲ್ಲಿ ಅದೂ ಒಂದು.

ದೈಹಿಕ ಅಸಾಮರ್ಥ್ಯ ಇದ್ದವರಿಗೆಂದೇ ಬುಡಾಪೆಸ್ಟ್‌ನಲ್ಲಿ ಇರುವ ಒಂದು ಕೇಂದ್ರಕ್ಕೆ 2007ರಲ್ಲಿ ಸ್ಥಳಾಂತರಿಸಿದೆ. ಅಂದಿನಿಂದ ನಾನು ಅಲ್ಲೇ ಇದ್ದೇನೆ. ನಾನು ಕಲಿತಿರುವ ಅದ್ಭುತ ವಿಷಯಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ನನಗಿಲ್ಲಿ ತುಂಬ ಅವಕಾಶಗಳು ಸಿಕ್ಕಿವೆ. ಹವಾಮಾನ ಚೆನ್ನಾಗಿರುವಾಗ ಹೊರಗೂ ಹೋಗಿ ಜನರೊಟ್ಟಿಗೆ ಮಾತಾಡುತ್ತೇನೆ. ಆಗ ನನಗೆಂದೇ ತಯಾರಿಸಲಾಗಿರುವ ಮೋಟಾರ್‌ ಗಾಲಿಕುರ್ಚಿಯನ್ನು ಬಳಸುತ್ತೇನೆ. ಇದನ್ನು ನನ್ನ ಗದ್ದದ ಸಹಾಯದಿಂದ ಚಲಾಯಿಸುತ್ತೇನೆ.

ನನ್ನ ಸಭೆಯಲ್ಲಿರುವ ಒಂದು ಕುಟುಂಬ ಕೊಟ್ಟ ಹಣ ಸಹಾಯದಿಂದ ಲ್ಯಾಪ್‌ಟಾಪ್‌ ಕಂಪ್ಯೂಟರ್‌ ಖರೀದಿಸಲು ಸಾಧ್ಯವಾಯಿತು. ಇದರ ವಿಶೇಷತೆ ಏನೆಂದರೆ ಇದು ನನ್ನ ತಲೆಯ ಚಲನೆಗನುಸಾರ ಕೆಲಸ ಮಾಡುತ್ತದೆ. ಇಂಟರ್‌ನೆಟ್‌ ಮೂಲಕ ಫೋನ್‌ ಮಾಡಿ ಜನರೊಟ್ಟಿಗೆ ಮಾತಾಡಲು, ನನ್ನ ಸಭೆಯ ಸದಸ್ಯರು ಸೇವೆಗೆ ಹೋದಾಗ ಮನೆಯಲ್ಲಿ ಸಿಗದಿದ್ದ ಜನರಿಗೆ ಪತ್ರ ಬರೆದು ಸಾಕ್ಷಿಕೊಡಲು ಇದರಿಂದ ಸಹಾಯವಾಗಿದೆ. ಹೀಗೆ ಬೇರೆಯವರಿಗೆ ಸಹಾಯ ಮಾಡುವ ಮೂಲಕ ಮಾತಾಡುವ ಕೌಶಲ ಉತ್ತಮವಾಗಿದೆ. ಜೊತೆಗೆ ನನ್ನ ಬಗ್ಗೆಯೇ ಯೋಚಿಸುತ್ತಾ ಕೂರದೆ ಇರಲು ಸಹಾಯಮಾಡಿದೆ.

ನನ್ನ ತಲೆಯ ಚಲನೆಯನ್ನು ಗುರುತು ಹಿಡಿಯುವ ಲ್ಯಾಪ್‌ಟಾಪ್‌ ಸಹಾಯದಿಂದ ಇಂಟರ್‌ನೆಟ್‌ ಮೂಲಕ ಬೈಬಲ್‌ ಸಂದೇಶ ಸಾರುತ್ತಿರುವುದು

ನಾನು ಕ್ರೈಸ್ತ ಕೂಟಗಳಿಗೂ ಹೋಗುತ್ತೇನೆ. ಕೂಟ ನಡೆಯುವುದು ಒಂದನೇ ಮಹಡಿಯಲ್ಲಿ. ಹಾಗಾಗಿ ನಾನು ರಾಜ್ಯ ಸಭಾಗೃಹ ತಲುಪಿದ ತಕ್ಷಣ ನನ್ನ ಆಧ್ಯಾತ್ಮಿಕ ಸಹೋದರರು ಬಂದು ಗಾಲಿಕುರ್ಚಿ ಸಮೇತ ನನ್ನನ್ನು ಜಾಗ್ರತೆಯಿಂದ ಎತ್ತಿಕೊಂಡು ಸಭಾಗೃಹಕ್ಕೆ ಕರಕೊಂಡು ಹೋಗುತ್ತಾರೆ. ಕೂಟ ನಡೆಯುವಾಗ ಉತ್ತರ ಕೊಡುವ ಸಮಯದಲ್ಲಿ ನನ್ನ ಪಕ್ಕ ಕೂತಿರುವ ಸಹೋದರ ನನಗೋಸ್ಕರ ಕೈ ಎತ್ತುತ್ತಾರೆ. ನಂತರ ನಾನು ಉತ್ತರ ಕೊಡುವಾಗ ಅಧ್ಯಯನ ನಡೆಯುತ್ತಿರುವ ಪ್ರಕಾಶನ ಅಥವಾ ಬೈಬಲನ್ನು ನನಗೆ ಕಾಣುವ ಹಾಗೆ ಎತ್ತಿ ತೋರಿಸುತ್ತಾರೆ.

ನನ್ನ ದೇಹದಲ್ಲಿ ಯಾವಾಗಲೂ ನೋವು ಇದ್ದೇ ಇರುತ್ತದೆ. ನನ್ನೆಲ್ಲಾ ಕೆಲಸಗಳನ್ನು ಮಾಡಲು ಯಾರಾದರೂ ನನ್ನ ಜೊತೆ ಇರಲೇ ಬೇಕು. ಹಾಗಾಗಿ ಕೆಲವೊಮ್ಮೆ ತುಂಬ ಬೇಜಾರಾಗುತ್ತದೆ. ಆದರೆ ಯೆಹೋವ ದೇವರ ಜೊತೆ ಇರುವ ಸ್ನೇಹ ನನಗೆ ಸಾಂತ್ವನ ಕೊಡುತ್ತದೆ. ಏಕೆಂದರೆ ಏನೇ ಚಿಂತೆಗಳಿದ್ದರೂ ಅವನ್ನು ಆತನ ಹತ್ತಿರ ಹೇಳಿಕೊಂಡಾಗ ಆತನು ಕೇಳಿಸಿಕೊಳ್ಳುತ್ತಾನೆ ಎಂಬ ಭರವಸೆ ನನಗಿದೆ. ದಿನಾಲೂ ಬೈಬಲ್‌ ಓದುವುದರಿಂದ ಮತ್ತು ನನ್ನ ಆಧ್ಯಾತ್ಮಿಕ ಸಹೋದರ ಸಹೋದರಿಯರಿಂದ ಸಹ ತುಂಬ ಬಲ ಸಿಗುತ್ತದೆ. ಅವರ ಸ್ನೇಹ, ಅವರು ಕೊಡುವ ಭಾವನಾತ್ಮಕ ಸಹಾಯ, ನನಗಾಗಿ ಮಾಡುವ ಪ್ರಾರ್ಥನೆಗಳಿಂದ ಮಾನಸಿಕ ಹಾಗೂ ಭಾವನಾತ್ಮಕ ಸಮತೋಲನ ಕಾಪಾಡಿಕೊಳ್ಳಲು ನನಗೆ ನೆರವಾಗಿದೆ.

ಸಾಂತ್ವನ ಯಾವಾಗ ಬೇಕೇಬೇಕಾಗಿತ್ತೊ ಆಗಲೇ ಯೆಹೋವನು ನನಗೆ ಅದನ್ನು ಕೊಟ್ಟನು. ಹೊಸಲೋಕದಲ್ಲಿ ಪರಿಪೂರ್ಣ ಆರೋಗ್ಯ ಸಿಗುವುದೆಂಬ ನಿರೀಕ್ಷೆಯನ್ನೂ ಕೊಟ್ಟನು. ‘ಜಿಗಿದು ಎದ್ದುನಿಂತು ಯೆಹೋವನನ್ನು ಸ್ತುತಿಸುವ’ ಆ ಸಮಯಕ್ಕಾಗಿ ಕಾಯುತ್ತಾ ಇದ್ದೇನೆ.—ಅಪೊಸ್ತಲರ ಕಾರ್ಯಗಳು 3:6-9. ▪ (g14-E 11)