ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸಂದರ್ಶನ | ಗೀಯೆರ್ಮೋ ಪೇರೇಸ್‌

ಶಸ್ತ್ರಚಿಕಿತ್ಸಾ ಪರಿಣತರೊಬ್ಬರು ತಮ್ಮ ನಂಬಿಕೆಗಳನ್ನು ಹಂಚಿಕೊಂಡಿದ್ದಾರೆ

ಶಸ್ತ್ರಚಿಕಿತ್ಸಾ ಪರಿಣತರೊಬ್ಬರು ತಮ್ಮ ನಂಬಿಕೆಗಳನ್ನು ಹಂಚಿಕೊಂಡಿದ್ದಾರೆ

ದಕ್ಷಿಣ ಆಫ್ರಿಕದಲ್ಲಿ 700 ಹಾಸಿಗೆಗಳಿರುವ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಮುಖ್ಯ ವೈದ್ಯರಾಗಿದ್ದ ಡಾ. ಗೀಯೆರ್ಮೋ ಪೇರೇಸ್‌ ಇತ್ತೀಚೆಗಷ್ಟೇ ನಿವೃತ್ತರಾದರು. ಅನೇಕ ವರ್ಷಗಳ ವರೆಗೆ ಇವರು ವಿಕಾಸವಾದವನ್ನು ನಂಬಿದ್ದರು. ಆದರೆ ತದನಂತರ ಮಾನವ ದೇಹವನ್ನು ದೇವರು ರಚಿಸಿದ್ದಾನೆಂದು ಮನಗಂಡರು. ಈ ನಂಬಿಕೆಯ ಕುರಿತು ವಿವರಿಸುವಂತೆ ಎಚ್ಚರ! ಪತ್ರಿಕೆ ಕೇಳಿಕೊಂಡಿತು. ಅವರ ಮಾತುಗಳು ಇಲ್ಲಿವೆ.

ನೀವು ಒಂದುಕಾಲದಲ್ಲಿ ವಿಕಾಸವಾದವನ್ನು ಯಾಕೆ ನಂಬಿದ್ದಿರಿ ಅಂತ ದಯವಿಟ್ಟು ಹೇಳುತ್ತೀರಾ?

ನಾನು ಹುಟ್ಟಿದ್ದು ಕ್ಯಾತೊಲಿಕ್‌ ಕುಟುಂಬದಲ್ಲಿ. ಹಾಗಿದ್ದರೂ ದೇವರು ಅಂದಾಕ್ಷಣ ನನಗೆ ತುಂಬ ಸಂದೇಹಗಳು ಏಳುತ್ತಿದ್ದವು. ಉದಾಹರಣೆಗೆ, ಜನರನ್ನು ನರಕದಲ್ಲಿ ಹಾಕಿ ಸುಡುವ ದೇವರಲ್ಲಿ ನಂಬಿಕೆಯಿಡಲು ನನ್ನಿಂದ ಆಗುತ್ತಿರಲಿಲ್ಲ. ಆ ಸಮಯದಲ್ಲಿ ನನ್ನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಜೀವಿಗಳು ವಿಕಾಸವಾಗಿ ಬಂದಿವೆ, ದೇವರು ಸೃಷ್ಟಿಸಲಿಲ್ಲ ಎಂದು ಕಲಿಸಿದರು. ಅದಕ್ಕೇನೋ ಆಧಾರ ಇರಬಹುದೆಂದು ನೆನಸಿ ನಾನದನ್ನು ನಂಬಿದೆ. ನಾನು ಹೋಗುತ್ತಿದ್ದ ಚರ್ಚಿನಲ್ಲಿ ಸಹ ವಿಕಾಸವಾದ ತಪ್ಪೆಂದು ಹೇಳಲಿಲ್ಲ, ಜೀವಿಗಳು ವಿಕಾಸಗೊಳ್ಳುವಂತೆ ದೇವರೇ ಮಾಡಿದ್ದಾನೆ ಎಂದು ಅಲ್ಲಿ ಬೋಧಿಸಿದರು.

ನಿಮಗೆ ಬೈಬಲಿನಲ್ಲಿ ಹೇಗೆ ಆಸಕ್ತಿ ಹುಟ್ಟಿತು?

ನನ್ನ ಹೆಂಡತಿ ಸುಸಾನಾ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲಿನ ಅಧ್ಯಯನ ಮಾಡತೊಡಗಿದಳು. ದೇವರು ಜನರನ್ನು ನರಕದಲ್ಲಿ ಹಾಕಿ ಯಾತನೆ ಕೊಡಲ್ಲ * ಎಂದೂ ದೇವರು ಬೇಗನೆ ಈ ಭೂಮಿಯನ್ನು ಪರದೈಸಾಗಿ ಮಾರ್ಪಡಿಸಲಿದ್ದಾನೆ ಎಂದೂ * ಅವರು ಅವಳಿಗೆ ಬೈಬಲಿನಿಂದ ತೋರಿಸಿದರು. ಆ ಬೋಧನೆಗಳಲ್ಲಿ ಒಂದರ್ಥ ಇತ್ತು. 1989ರಲ್ಲಿ ನಿಕ್‌ ಎಂಬ ಯೆಹೋವನ ಸಾಕ್ಷಿ ನನ್ನನ್ನು ಭೇಟಿಮಾಡತೊಡಗಿದರು. ಮಾನವ ದೇಹ ಮತ್ತದರ ಸೃಷ್ಟಿ ಬಗ್ಗೆ ಅವರೊಟ್ಟಿಗೆ ಮಾತಾಡುತ್ತಾ ಇರುವಾಗ ಅವರು ಬೈಬಲಿನಿಂದ ಇಬ್ರಿಯ 3:4ನ್ನು ತೋರಿಸಿದರು. ಅಲ್ಲಿ ಹೀಗಿತ್ತು: “ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ.” ನಮ್ಮ ಅಸ್ತಿತ್ವದ ಕುರಿತ ಈ ಸರಳ ವಿವರಣೆ ನನ್ನ ಹುಬ್ಬೇರಿಸಿತು.

ದೇವರೇ ಎಲ್ಲವನ್ನು ಸೃಷ್ಟಿಸಿದನು ಎಂದು ನಂಬಲು ಮಾನವ ದೇಹದ ಬಗ್ಗೆ ನೀವು ಮಾಡಿದ ಅಧ್ಯಯನವು ಸಹಾಯ ಮಾಡಿತಾ?

ಹೌದು. ನಮ್ಮ ದೇಹವು ತನ್ನಿಂದತಾನೇ ರಿಪೇರಿ ಮಾಡಿಕೊಳ್ಳುತ್ತದೆ. ಇದು ತಾನೇ, ಯಾರೋ ಒಬ್ಬರು ಅದನ್ನು ತುಂಬ ಜಾಗ್ರತೆಯಿಂದ ರಚಿಸಿದ್ದಾರೆಂದು ತೋರಿಸುತ್ತದೆ. ಗಾಯ ವಾಸಿಯಾಗುವುದನ್ನೇ ತೆಗೆದುಕೊಂಡರೆ, ಅದು ಒಂದರ ನಂತರ ಒಂದರಂತೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಮಾನವ ದೇಹದಲ್ಲಿ ದುರಸ್ತಿ ಮಾಡಿಕೊಳ್ಳುವ ವ್ಯವಸ್ಥೆ ಈಗಾಗಲೇ ಇದೆ. ನಾನು ಶಸ್ತ್ರಚಿಕಿತ್ಸಕನಾಗಿ ಕೇವಲ ಅದರೊಟ್ಟಿಗೆ ಕೆಲಸಮಾಡುತ್ತಿದ್ದೆನಷ್ಟೇ.

ದೇಹಕ್ಕೆ ಗಾಯವಾದಾಗ ಏನಾಗುತ್ತದೆಂದು ನಮಗೆ ವಿವರಿಸುತ್ತೀರಾ?

ಗಾಯವಾಗಿ ಕೆಲವೇ ಸೆಕೆಂಡುಗಳಲ್ಲಿ ಗಾಯ ವಾಸಿಮಾಡುವ ಸರಣಿ ಪ್ರಕ್ರಿಯೆಗಳ ಮೊದಲನೇ ಹಂತ ಶುರುವಾಗುತ್ತದೆ. ಅದು ರಕ್ತಸ್ರಾವವನ್ನು ನಿಲ್ಲಿಸಲು ರಚಿಸಲ್ಪಟ್ಟಿದೆ. ವಾಸಿಮಾಡುವ  ಈ ಪ್ರಕ್ರಿಯೆಗಳು ಜಟಿಲ ಆದರೆ ಕಾರ್ಯಸಾಧಕ! ನಮ್ಮ ದೇಹದಲ್ಲಿರುವ ರಕ್ತ ಪರಿಚಲನಾ ವ್ಯವಸ್ಥೆಯ ಕುರಿತು ನಾನು ನಿಮಗೆ ಹೇಳಲೇಬೇಕು. ಅದರಲ್ಲಿರುವ ರಕ್ತನಾಳಗಳ ಒಟ್ಟು ಉದ್ದ ಸುಮಾರು 1,00,000 ಕಿ. ಮೀ. ಈ ವ್ಯವಸ್ಥೆ ಕಾರ್ಯನಿರ್ವಹಿಸುವ ವಿಧ ಪ್ಲಂಬಿಂಗ್‌ (ಕೊಳಾಯಿ ವ್ಯವಸ್ಥೆ) ಇಂಜಿನಿಯರರಲ್ಲೂ ಅಸೂಯೆ ಹುಟ್ಟಿಸುತ್ತದೆ. ಏಕೆಂದರೆ ಈ ವ್ಯವಸ್ಥೆಯು ರಕ್ತನಾಳಗಳಲ್ಲಿ ಆದ ಸೋರಿಕೆಗಳನ್ನು ತನ್ನಿಂತಾನೇ ಕಂಡುಹಿಡಿದು ಅವುಗಳನ್ನು ಮುಚ್ಚಿ ದುರಸ್ತಿ ಮಾಡುತ್ತದೆ.

ಗಾಯ ವಾಸಿಯಾಗುವ ಎರಡನೇ ಹಂತದಲ್ಲಿ ಏನಾಗುತ್ತದೆ?

ರಕ್ತಸ್ರಾವ ಕೆಲವೇ ತಾಸುಗಳಲ್ಲಿ ನಿಂತುಹೋಗುತ್ತದೆ. ಗಾಯವಾದ ಜಾಗದಲ್ಲಿ ಉರಿಯೂತ ಶುರುವಾಗುತ್ತದೆ. ಈ ಹಂತದಲ್ಲಿ ನಡೆಯುವ ಸರಣಿ ಪ್ರಕ್ರಿಯೆಗಳು ವಿಸ್ಮಯಕರ. ಮೊದಲ ಹಂತದಲ್ಲಿ ರಕ್ತಸ್ರಾವವನ್ನು ಕಡಿಮೆಮಾಡಲು ಕುಗ್ಗಿದ ಅವೇ ರಕ್ತನಾಳಗಳು ಈಗ ಹಿಗ್ಗಿ ಗಾಯವಾದ ಸ್ಥಳದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತವೆ. ಅನಂತರ ಹೆಚ್ಚು ಪ್ರೋಟಿನ್‌ಯುಕ್ತ ದ್ರವ ಹರಿದುಬಂದು ಗಾಯದ ಜಾಗದಲ್ಲಿ ಊತ ಬರುವಂತೆ ಮಾಡುತ್ತದೆ. ಗಾಯ ಸೋಂಕಾಗದಂತೆ ತಡೆದು, ವಿಷಕಾರಿ ಅಂಶಗಳನ್ನು ತಿಳಿಗೊಳಿಸಿ, ಹಾನಿಯಾದ ಅಂಗಾಂಶವನ್ನು ತೆಗೆದುಹಾಕುತ್ತದೆ. ಪ್ರತಿಯೊಂದು ಪ್ರಕ್ರಿಯೆ ನಡೆಯುವಾಗ ಲಕ್ಷಾಂತರ ವಿಶೇಷ ಜೀವಕೋಶಗಳು ಮತ್ತು ಕಣಗಳು ಉತ್ಪಾದನೆಯಾಗುತ್ತವೆ. ಈ ಉತ್ಪಾದನೆಯಲ್ಲಿ ನಾನಾ ಹೆಜ್ಜೆಗಳು ಒಳಗೂಡಿವೆ. ಇವುಗಳಲ್ಲಿ ಕೆಲವು ಹೆಜ್ಜೆಗಳು ಗಾಯ ವಾಸಿಮಾಡುವ ಮೂರನೇ ಹಂತವನ್ನು ಚುರುಕುಗೊಳಿಸಿ ಅನಂತರ ನಿಂತುಹೋಗುತ್ತವೆ.

ಆಮೇಲೆ ಏನಾಗುತ್ತದೆ?

ಕೆಲವೇ ದಿನಗಳಲ್ಲಿ ನಮ್ಮ ದೇಹವು ದುರಸ್ತಿಗೆ ಬೇಕಾಗಿರುವ ಎಲ್ಲ ಸಾಧನಗಳನ್ನು ಉತ್ಪಾದಿಸಲು ಶುರುಮಾಡುತ್ತದೆ. ಹೀಗೆ ಮೂರನೇ ಹಂತ ಆರಂಭಗೊಂಡು ಎರಡು ವಾರಗಳ ಮಟ್ಟಿಗೆ ಮುಂದುವರಿಯುತ್ತದೆ. ಜೀವಕೋಶಗಳು ನಾರು ಪದಾರ್ಥವಾಗಿ ಮಾರ್ಪಡುತ್ತಾ ಗಾಯವಾದ ಸ್ಥಳದ ಸುತ್ತ ಹೋಗಿ ಕೂತುಕೊಳ್ಳುತ್ತವೆ ಮತ್ತು ಹೆಚ್ಚುತ್ತಾ ಹೋಗುತ್ತವೆ. ಅಷ್ಟೇ ಅಲ್ಲದೇ ಚಿಕ್ಕ ರಕ್ತನಾಳಗಳು ಚಿಗುರೊಡೆದು ಗಾಯದ ಕಡೆಗೆ ಹಬ್ಬುತ್ತಾ ಹೋಗುತ್ತವೆ. ಅವು ದುರಸ್ತಿ ಸಮಯದಲ್ಲಿ ಕಲ್ಮಶವನ್ನು ತೆಗೆದುಹಾಕುತ್ತವೆ ಮತ್ತು ಬೇಕಾಗುವ ಪೌಷ್ಟಿಕಾಂಶಗಳನ್ನು ಸರಬರಾಯಿ ಮಾಡುತ್ತವೆ. ಇಂತಹದ್ದೇ ಆದ ಇನ್ನೊಂದು ಜಟಿಲ ಸರಣಿ ಪ್ರಕ್ರಿಯೆಗಳಲ್ಲಿ ವಿಶೇಷ ಜೀವಕೋಶಗಳು ಹುಟ್ಟಿಕೊಳ್ಳುತ್ತವೆ. ಅವು ಗಾಯವನ್ನು ಮುಚ್ಚುತ್ತಾ ಬರುತ್ತವೆ.

ಓಹ್‌! ಇಷ್ಟೆಲ್ಲ ಆಗುತ್ತಾ! ಗಾಯ ಪೂರ್ತಿ ವಾಸಿಯಾಗಲು ಇನ್ನೂ ಎಷ್ಟು ಸಮಯ ಹಿಡಿಯುತ್ತದೆ?

ಕೊನೆಯ ಹಂತ ಮುಗಿಯಲು ತಿಂಗಳುಗಳೇ ಹಿಡಿಯುತ್ತವೆ. ಈ ಹಂತದಲ್ಲಿ, ಗಾಯಗೊಂಡ ಭಾಗವು ಮುಂಚಿನ ಸ್ಥಿತಿಗೆ ಬರುತ್ತದೆ. ಒಂದುವೇಳೆ ಎಲುಬುಗಳು ಮುರಿದಿದ್ದರೆ ಮುಂಚಿನಂತೆ ದೃಢವಾಗುತ್ತವೆ. ಗಾಯದ ಮೇಲೆ ಮುಂಚೆ ಹಾಕಲಾಗಿದ್ದ ನಾರಿನ ಪದರು ಹೋಗಿ ಗಟ್ಟಿಯಾದ ವಸ್ತು ಆವರಿಸತೊಡಗುತ್ತದೆ. ಒಟ್ಟಿನಲ್ಲಿ ಗಾಯ ವಾಸಿಗೊಳ್ಳುವಿಕೆಯ ಎಲ್ಲ ಹಂತಗಳು ಪರಸ್ಪರ ಹೊಂದಿಕೆಯಲ್ಲಿ ಕೆಲಸಮಾಡುತ್ತವೆ. ಇದೇ ತೋರಿಸುತ್ತದೆ ಈ ವಾಸಿಯಾಗುವ ಕ್ರಿಯೆಯನ್ನು ಸಂಯೋಜಿಸಿ ರಚಿಸಲಾಗಿದೆ ಎಂದು.

ನಿಮ್ಮನ್ನು ತುಂಬ ಪ್ರಭಾವಿಸಿದ ಯಾವುದಾದರೂ ಘಟನೆಯನ್ನು ತಿಳಿಸುವಿರಾ?

ದೇಹ ತನ್ನನ್ನು ತಾನೇ ಗುಣಪಡಿಸಿಕೊಳ್ಳುವುದನ್ನು ಕಣ್ಣಾರೆ ಕಂಡು ಬೆರಗಾಗುತ್ತಿದ್ದೆ

ಒಂದು ಸನ್ನಿವೇಶದ ಬಗ್ಗೆ ಹೇಳಲಿಕ್ಕೆ ಇಷ್ಟಪಡುತ್ತೇನೆ. 16 ವರ್ಷದ ಹುಡುಗಿಯೊಬ್ಬಳಿಗೆ ಕಾರು ಅಪಘಾತವಾಗಿ ಸ್ಥಿತಿ ತುಂಬ ಗಂಭೀರವಾಗಿತ್ತು. ಅವಳ ಗುಲ್ಮಕ್ಕೆ (ಜಠರದ ಹಿಂಬದಿಯಲ್ಲಿರುವ ಅಂಗ) ದೊಡ್ಡ ಗಾಯವಾಗಿತ್ತು, ದೇಹದೊಳಗೆ ರಕ್ತಸ್ರಾವವಾಗುತ್ತಿತ್ತು. ವರ್ಷಗಳ ಮುಂಚೆಯಾದರೆ, ನಾವು ಶಸ್ತ್ರಚಿಕಿತ್ಸೆ ಮಾಡಿ ಗುಲ್ಮವನ್ನು ಸರಿಪಡಿಸುತ್ತಿದ್ದೆವು ಇಲ್ಲವೆ ಅದನ್ನು ತೆಗೆದುಹಾಕುತ್ತಿದ್ದೆವು. ಆದರೆ ಈಗ ಹಾಗಲ್ಲ. ದೇಹ ತನ್ನಿಂದತಾನೇ ಸರಿಯಾಗುವಂತೆ ವೈದ್ಯರು ಬಿಡುತ್ತಾರೆ. ಹಾಗಾಗಿ ನಾನವತ್ತು ಆ ಹುಡುಗಿಗೆ ಕೇವಲ ಸೋಂಕು, ದ್ರವ ಸೋರಿಕೆ, ರಕ್ತಹೀನತೆ ಹಾಗೂ ನೋವಿಗೆ ಮದ್ದು ಕೊಟ್ಟೆ. ಕೆಲವು ವಾರಗಳ ನಂತರ ಸ್ಕಾ್ಯನ್‌ ಮಾಡಿ ನೋಡಿದಾಗ ಅವಳ ಗುಲ್ಮ ವಾಸಿಯಾಗಿತ್ತು! ಹೀಗೆ ಅನೇಕ ಸಂದರ್ಭಗಳಲ್ಲಿ ದೇಹ ತನ್ನನ್ನು ತಾನೇ ಗುಣಪಡಿಸಿಕೊಳ್ಳುವುದನ್ನು ಕಣ್ಣಾರೆ ಕಂಡು ಬೆರಗಾಗುತ್ತಿದ್ದೆ. ನಮ್ಮನ್ನು ದೇವರೇ ವಿನ್ಯಾಸಿಸಿದ್ದಾನೆಂಬುದಕ್ಕೆ ಇನ್ನಷ್ಟು ಪುರಾವೆ ನನಗೆ ಸಿಕ್ಕಿತು.

ಯೆಹೋವನ ಸಾಕ್ಷಿಗಳು ನಿಮಗೆ ಯಾಕೆ ಇಷ್ಟವಾದರು?

ಅವರು ಸ್ನೇಹಪರರು. ನನ್ನೆಲ್ಲ ಪ್ರಶ್ನೆಗಳಿಗೆ ಯಾವಾಗಲೂ ಬೈಬಲಿನಿಂದ ಉತ್ತರ ಕೊಟ್ಟರು. ಅವರು ಧೈರ್ಯದಿಂದ ತಮ್ಮ ನಂಬಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು, ದೇವರ ಬಗ್ಗೆ ಕಲಿಯಲು ಸಹಾಯಮಾಡುವುದು ನನಗೆ ತುಂಬ ಹಿಡಿಸಿತು.

ನೀವು ಯೆಹೋವನ ಸಾಕ್ಷಿಯಾದದ್ದರಿಂದ ನಿಮ್ಮ ಕೆಲಸದಲ್ಲಿ ಏನಾದರೂ ಪ್ರಯೋಜನವಾಯಿತಾ?

ಖಂಡಿತ ಆಗಿದೆ. ಕಾಯಿಲೆ ಬಿದ್ದಿರುವ, ಗಾಯಗೊಂಡಿರುವ ಜನರೊಂದಿಗೆ ಯಾವಾಗಲೂ ಇರುವುದರಿಂದ ವೈದ್ಯರು ಹಾಗೂ ನರ್ಸುಗಳು ಭಾವನಾತ್ಮಕವಾಗಿ ಬಳಲಿ ಹೋಗುತ್ತಾರೆ. ಇದು ಒಂದು ಭಾವನಾತ್ಮಕ ಸಮಸ್ಯೆಯಾಗಿ ಅವರನ್ನು ಕಾಡುತ್ತದೆ. ಯೆಹೋವನ ಸಾಕ್ಷಿಯಾಗಿರುವುದರಿಂದ ಈ ಸಮಸ್ಯೆಯನ್ನು ನಿಭಾಯಿಸಲು ನನಗೆ ಸಾಧ್ಯವಾಯಿತು. ಮಾತ್ರವಲ್ಲ, ರೋಗಿಗಳು ನನ್ನೊಂದಿಗೆ ಮಾತಾಡಲು ಬಯಸಿದಾಗ ಸೃಷ್ಟಿಕರ್ತನು ಮಾಡಿರುವ ವಾಗ್ದಾನದ ಬಗ್ಗೆ ಅವರಿಗೆ ತಿಳಿಸಲು ನನ್ನಿಂದಾಯಿತು. ಬೇಗನೆ ಕಾಯಿಲೆ, ನೋವನ್ನು ಕೊನೆಗಾಣಿಸಿ * ಯಾರೂ “ತಾನು ಅಸ್ವಸ್ಥನು” * ಎಂದು ಹೇಳದಿರುವ ಪರಿಸ್ಥಿತಿಯನ್ನು ಆತನು ತರುತ್ತಾನೆಂದು ಅವರಿಗೆ ವಿವರಿಸುತ್ತಿದ್ದೆ. (g14-E 05)