ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಲ್ಲವೆಂದು ವಿಜ್ಞಾನ ಸಾಬೀತುಪಡಿಸಿದೆಯೊ?

ದೇವರಿಲ್ಲವೆಂದು ವಿಜ್ಞಾನ ಸಾಬೀತುಪಡಿಸಿದೆಯೊ?

ದೇವರಿಲ್ಲವೆಂದು ವಿಜ್ಞಾನ ಸಾಬೀತುಪಡಿಸಿದೆಯೊ?

ಬ್ರಿಟಿಷ್‌ ತತ್ತ್ವಜ್ಞಾನಿ ಆ್ಯಂಟನಿ ಫ್ಲ್ಯು ಎಂಬವರು ನಾಸ್ತಿಕರಾಗಿದ್ದ ಕಾರಣ ಸುಮಾರು 50 ವರ್ಷಗಳಿಂದ ಅವರ ಸಮಕಾಲೀನರು ಅವರನ್ನು ಬಹಳವಾಗಿ ಗೌರವಿಸಿದರು. 1950ರಲ್ಲಿ ಅವರು ಬರೆದ “ದೇವತಾಶಾಸ್ತ್ರ ಮತ್ತು ಮೋಸಗಾರಿಕೆ” ಎಂಬ ಇಂಗ್ಲಿಷ್‌ ಪುಸ್ತಕವು “[20ನೇ] ಶತಮಾನದ ಅತ್ಯಂತ ಹೆಚ್ಚು ಪುನರ್‌ಮುದ್ರಣ ಹೊಂದಿದ ತತ್ತ್ವಜ್ಞಾನ ಪ್ರಕಾಶನವಾಗಿತ್ತು.” 1986ರಲ್ಲಿ ಫ್ಲ್ಯು ಅವರನ್ನು “ಆಸ್ತಿಕತೆಯ [ದೇವ, ದೇವತೆಗಳಲ್ಲಿ ನಂಬಿಕೆಯ] ಸಮಕಾಲೀನ ಟೀಕಾಕಾರರಲ್ಲಿ ಅಗ್ರಗಣ್ಯ” ಎಂದು ಕರೆಯಲಾಯಿತು. ಇಂಥ ವ್ಯಕ್ತಿ ತನ್ನ ಅಭಿಪ್ರಾಯ ಬದಲಾಯಿಸಿದ್ದೇನೆಂದು 2004ರಲ್ಲಿ ಘೋಷಿಸಿದಾಗ ಅನೇಕರಿಗೆ ಧಕ್ಕೆ ತಗಲಿತು.

ಫ್ಲ್ಯು ತಮ್ಮ ಅಭಿಪ್ರಾಯವನ್ನು ಬದಲಿಸುವಂತೆ ಮಾಡಿದ್ದು ಯಾವುದು? ಒಂದೇ ಮಾತಿನಲ್ಲಿ ಹೇಳುವುದಾದರೆ ವಿಜ್ಞಾನವೇ. ಈ ವಿಶ್ವ, ಪ್ರಕೃತಿ ನಿಯಮಗಳು ಮತ್ತು ಜೀವ ಸಹ ಆಕಸ್ಮಿಕವಾಗಿ ಬರಲು ಸಾಧ್ಯವೇ ಇಲ್ಲವೆಂದು ಅವರಿಗೆ ಮನದಟ್ಟಾಯಿತು. ಅದು ತರ್ಕಬದ್ಧ ತೀರ್ಮಾನವೊ?

ಪ್ರಕೃತಿ ನಿಯಮಗಳು ಬಂದದ್ದು ಹೇಗೆ?

ಭೌತವಿಜ್ಞಾನಿಯೂ ಲೇಖಕರೂ ಆದ ಪೌಲ್‌ ಡೇವಿಸ್‌ ತಿಳಿಸುವುದೇನೆಂದರೆ ವಿಜ್ಞಾನವು, ಮಳೆಯಂಥ ಪ್ರಕೃತಿ ಘಟನೆಗಳು ಸಂಭವಿಸುವ ವಿಧವನ್ನು ಚೆನ್ನಾಗಿ ವಿವರಿಸುತ್ತದೆ. ಆದರೆ ಅವರನ್ನುವುದು: “‘ಪ್ರಕೃತಿ ನಿಯಮಗಳು ಏಕಿವೆ?’ ಎಂಬಂಥ ಪ್ರಶ್ನೆಗಳು ಬಂದಾಗ ಮಾತ್ರ ಉತ್ತರಗಳು ಅಷ್ಟು ಸ್ಪಷ್ಟವಾಗಿಲ್ಲ. ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಲು ವೈಜ್ಞಾನಿಕ ಆವಿಷ್ಕಾರಗಳಿಂದ ಹೆಚ್ಚೇನೂ ಸಹಾಯವಾಗಿಲ್ಲ. ನಾಗರಿಕತೆಯ ಹುಟ್ಟಿನಿಂದ ಹಿಡಿದು ಇಂದಿನ ತನಕವೂ ಈ ದೊಡ್ಡ ದೊಡ್ಡ ಪ್ರಶ್ನೆಗಳಲ್ಲಿ ಹೆಚ್ಚಿನವು ಹಾಗೇ ಉಳಿದು ನಮ್ಮನ್ನು ಕಾಡುತ್ತಾ ಇವೆ.”

2007ರಲ್ಲಿ ಫ್ಲ್ಯು ಬರೆದದ್ದು: “ನಿಸರ್ಗದಲ್ಲಿ ನಿಯಮಗಳಿವೆ ಎಂಬುದೇ ಪ್ರಾಮುಖ್ಯ ವಿಷಯವಲ್ಲ. ಈ ನಿಯಮಗಳು ಗಣಿತಶಾಸ್ತ್ರಕ್ಕನುಸಾರ ನಿಖರ, ಸಾರ್ವತ್ರಿಕ ಮತ್ತು ‘ಪರಸ್ಪರ ಸಂಬಂಧಿತ’ ಆಗಿರುವುದೇ ಪ್ರಾಮುಖ್ಯ. ಅದನ್ನೇ ಐನ್‌ಸ್ಟೀನರು ಬುದ್ಧಿಶಕ್ತಿಯ ಭೌತಿಕ ಪುರಾವೆ ಎಂದು ಕರೆದರು. ನಾವು ಕೇಳಬೇಕಾದ ಪ್ರಶ್ನೆಯೇನೆಂದರೆ ನಿಸರ್ಗದಲ್ಲಿ ಈ ಎಲ್ಲ ನಿಯಮಗಳು ಬಂದದ್ದು ಹೇಗೆ? ವಿಜ್ಞಾನಿಗಳಾದ ನ್ಯೂಟನ್‌, ಐನ್‌ಸ್ಟೀನ್‌, ಹೈಸನ್‌ಬರ್ಗ್‌ ಈ ಪ್ರಶ್ನೆಯನ್ನೇ ಕೇಳಿದರು ಮತ್ತು ಉತ್ತರಿಸಿದರು. ‘ದೇವರಿಂದ’ ಎಂಬುದೇ ಅವರ ಉತ್ತರ.”

ಬುದ್ಧಿಶಕ್ತಿಯುಳ್ಳ ಸೃಷ್ಟಿಕರ್ತನಿದ್ದಾನೆ ಎಂಬದಕ್ಕೆ ವಿಜ್ಞಾನದಲ್ಲಿ ಆಧಾರವಿದೆ ಎಂದು ಅತಿ ಗಣ್ಯ ವಿಜ್ಞಾನಿಗಳಲ್ಲಿ ಹೆಚ್ಚಿನವರು ಪರಿಗಣಿಸುತ್ತಾರೆ. ಅವರಿಗನುಸಾರ ಈ ವಿಶ್ವ, ಅದರ ನಿಯಮಗಳು ಮತ್ತು ಜೀವ ಆಕಸ್ಮಿಕವಾಗಿ ಬಂದವೆಂದು ಹೇಳುವುದು ತರ್ಕಬದ್ಧವಲ್ಲ. ದೈನಂದಿನ ಅನುಭವವು ಯಾವುದೇ ರಚನೆಗೆ ಅದರಲ್ಲೂ ಉತ್ಕೃಷ್ಟ ಮಟ್ಟದ ರಚನೆಗೆ ಒಬ್ಬ ರಚಕನು ಇರಲೇಬೇಕೆಂದು ನಮಗೆ ತಿಳಿಸುತ್ತದೆ.

ನೀವು ಯಾವುದನ್ನು ನಂಬುವಿರಿ?

ವಿಜ್ಞಾನವೇ ತಮ್ಮ ನಂಬಿಕೆಗೆ ಮುಖ್ಯ ಆಧಾರವೆಂದು ನವನಾಸ್ತಿಕರು ಹೇಳುತ್ತಾರೆ. ಆದರೆ ನಾಸ್ತಿಕತೆಯಾಗಲಿ ಆಸ್ತಿಕತೆಯಾಗಲಿ ಕೇವಲ ವಿಜ್ಞಾನದ ಮೇಲೆ ಆಧರಿಸಿಲ್ಲ ಎಂಬುದೇ ನಿಜ ಸಂಗತಿ. ಎರಡಕ್ಕೂ ನಂಬಿಕೆ ಬೇಕು, ನಾಸ್ತಿಕರಿಗೆ ಉದ್ದೇಶರಹಿತ ಆಕಸ್ಮಿಕತೆಯಲ್ಲಿ ಮತ್ತು ಆಸ್ತಿಕರಿಗೆ ಬುದ್ಧಿಶಕ್ತಿಯುಳ್ಳ ಸೃಷ್ಟಿಕರ್ತನಲ್ಲಿ. “ಎಲ್ಲ ಧಾರ್ಮಿಕ ನಂಬಿಕೆ ಕುರುಡು ನಂಬಿಕೆ” ಎಂಬ ತರ್ಕವನ್ನು ನವನಾಸ್ತಿಕರು ಪ್ರವರ್ಧಿಸುತ್ತಾರೆಂದು ಇಂಗ್ಲೆಂಡಿನ ಯೂನಿವರ್ಸಿಟಿ ಆಫ್‌ ಆಕ್ಸ್‌ಫರ್ಡ್‌ನಲ್ಲಿ ಗಣಿತ ಪ್ರೊಫೆಸರ್‌ ಜಾನ್‌ ಲೆನಕ್ಸ್‌ ಬರೆಯುತ್ತಾರೆ. ಅವರು ಮತ್ತೂ ಹೇಳುವುದು: “ಅವರ ಆ ಮಾತು ತಪ್ಪು ಎಂದು ನಾವು ಖಡಾಖಂಡಿತವಾಗಿ ಹೇಳಬೇಕು.” ಆದ್ದರಿಂದ ಈಗಿರುವ ಪ್ರಶ್ನೆ: ಸತ್ವಪರೀಕ್ಷೆಯನ್ನು ಜಯಿಸುವ ನಂಬಿಕೆ ಯಾವುದು—ನಾಸ್ತಿಕರ ನಂಬಿಕೆಯೊ ಆಸ್ತಿಕರ ನಂಬಿಕೆಯೊ? ಉದಾಹರಣೆಗೆ ಜೀವದ ಉಗಮದ ಕುರಿತ ವಿಷಯವನ್ನು ತೆಗೆದುಕೊಳ್ಳೋಣ.

ಜೀವದ ಉಗಮದ ಕುರಿತು ಅನೇಕಾನೇಕ ವಿರೋಧಾತ್ಮಕ ಸಿದ್ಧಾಂತಗಳಿದ್ದರೂ ಈಗಲೂ ಅದೊಂದು ರಹಸ್ಯವೆಂದು ವಿಕಾಸವಾದಿಗಳು ಹೇಳುತ್ತಾರೆ. ನವನಾಸ್ತಿಕ ಪ್ರಮುಖರಾದ ರಿಚರ್ಡ್‌ ಡಾಕಿನ್ಸ್‌ ಎಂಬವರು ಹೇಳುವುದೇನೆಂದರೆ, ವಿಶ್ವದಲ್ಲಿ ಅಸಂಖ್ಯಾತ ಗ್ರಹಗಳಿರುವುದರಿಂದ ಇವುಗಳಲ್ಲಿ ಒಂದಲ್ಲ ಒಂದು ಕಡೆ ಜೀವವು ತೋರಿಬರಲೇಬೇಕಿತ್ತು. ಆದರೆ ಇದನ್ನು ಅನೇಕ ಖ್ಯಾತ ವಿಜ್ಞಾನಿಗಳು ಒಪ್ಪುವುದಿಲ್ಲ. ಕೇಂಬ್ರಿಡ್ಜ್‌ ಪ್ರೊಫೆಸರ್‌ ಜಾನ್‌ ಬ್ಯಾರೊ ಹೇಳುವುದೇನೆಂದರೆ, “ಜೀವ ಮತ್ತು ಮನಸ್ಸು ವಿಕಾಸವಾಯಿತೆಂಬ ವಾದವು ಪ್ರತಿಯೊಂದು ಘಟ್ಟದಲ್ಲೂ ಮುಂದೆ ಸಾಗದೆ ನಿಂತುಹೋಗುತ್ತದೆ. ಜಟಿಲವೂ ಪ್ರತಿಕೂಲವೂ ಆದ ವಾತಾವರಣದಲ್ಲಿ ಜೀವವು ವಿಕಾಸಗೊಳ್ಳಲು ಅಸಾಧ್ಯವಾಗಿರುವ ಎಷ್ಟೋ ಸನ್ನಿವೇಶಗಳಿವೆ. ಹೀಗಿರುವುದರಿಂದ ಸಾಕಷ್ಟು ಇಂಗಾಲ ಇದ್ದರೆ ಮತ್ತು ಸಾಕಷ್ಟು ಸಮಯ ಕೊಟ್ಟರೆ ಜೀವ ನಿರ್ಮಾಣವಾಗುತ್ತದೆ ಎಂದು ಊಹಿಸುವುದು ಶುದ್ಧ ಅವಿವೇಕತನ!”

ಜೀವವು ರಾಸಾಯನಿಕ ಘಟಕಾಂಶಗಳ ಕೇವಲ ಮಿಶ್ರಣವಲ್ಲ ಎಂಬದನ್ನೂ ಮನಸ್ಸಿನಲ್ಲಿಡಿ. ಅದು ಅತ್ಯಂತ ಉತ್ಕೃಷ್ಟ ರೀತಿಯ ಮಾಹಿತಿಯ ಮೇಲೆ ಆಧರಿಸಿದೆ. ಈ ಮಾಹಿತಿ ಡಿ.ಎನ್‌.ಎ.ಯಲ್ಲಿ ಕ್ರೋಡೀಕರಿಸಲ್ಪಟ್ಟಿದೆ. ಹೀಗಿರುವುದರಿಂದ ಜೀವದ ಉಗಮದ ಕುರಿತು ಮಾತಾಡುವಾಗ ನಾವು ನಿಜವಾಗಿ ಜೀವವಿಜ್ಞಾನದ ಮಾಹಿತಿಯ ಉಗಮದ ಕುರಿತು ಚರ್ಚಿಸುತ್ತಿದ್ದೇವೆ. ಯಾವುದೇ ಮಾಹಿತಿ ಹುಟ್ಟುವುದೆಲ್ಲಿಂದ? ನಮಗೆ ತಿಳಿದಿರುವಂತೆ ಯಾರಾದರೊಬ್ಬರ ಬುದ್ಧಿಶಕ್ತಿಯಿಂದಲೇ. ಆದ್ದರಿಂದ ಜಟಿಲ ಮಾಹಿತಿ ಇರುವ ಕಂಪ್ಯೂಟರ್‌ ಪ್ರೋಗ್ರಾಮ್‌, ಬೀಜಗಣತೀಯ ಸೂತ್ರ, ವಿಶ್ವಕೋಶ, ಅಷ್ಟೇಕೆ ಒಂದು ಸಾದಾ ದೋಸೆಯ ಪಾಕವಿಧಾನವೂ ತನ್ನಿಂದ ತಾನೇ ಬರಲಾರದು. ಉತ್ಕೃಷ್ಟತೆ ಮತ್ತು ಕಾರ್ಯದಕ್ಷತೆಯ ವಿಷಯದಲ್ಲಂತೂ ಇವೆಲ್ಲವನ್ನು ಜೀವಿಗಳ ಜೆನೆಟಿಕ್‌ ಕೋಡ್‌ನಲ್ಲಿರುವ ಮಾಹಿತಿ ಹಿಂದಿಕ್ಕುತ್ತದೆ.

ಜೀವ ಆಕಸ್ಮಿಕವಾಗಿ ಬಂತೆಂದು ಹೇಳುವುದು ವೈಜ್ಞಾನಿಕವೊ?

ಪೌಲ್‌ ಡೇವಿಸ್‌ ವಿವರಿಸುವುದೇನೆಂದರೆ ನಾಸ್ತಿಕರಿಗನುಸಾರ “ವಿಶ್ವ ಉಗಮವಾದದ್ದೇ ರಹಸ್ಯಾತ್ಮಕವಾಗಿ; ಅದರಲ್ಲಿ ಜೀವರಾಶಿ ಇರುವಂತೆ ಅದು ಹೇಗೊ ಬಿಟ್ಟುಬಿಟ್ಟಿದೆ. ಒಂದುವೇಳೆ ಬಿಡದಿರುತ್ತಿದ್ದರೆ ಜೀವದ ಕುರಿತು ವಾದಿಸಲು ನಾವಿರುತ್ತಿರಲಿಲ್ಲ. ವಿಶ್ವವೂ ಅದರಲ್ಲಿ ಇರುವುದೆಲ್ಲವೂ ಪರಸ್ಪರ ಅವಲಂಬಿಸಿರಬಹುದು, ಇಲ್ಲದಿರಬಹುದು. ಆದರೆ ಅದಕ್ಕೆ ಯಾವುದೇ ಒಂದು ಹೇತು, ಉದ್ದೇಶ, ಗುರಿ ಇಲ್ಲ. ಇದ್ದರೂ ನಮಗದು ಅರ್ಥವಾಗುವಂತಿಲ್ಲ.” ಈ ನೋಟದ ಬಗ್ಗೆ ಡೇವಿಸ್‌ ಹೇಳುವುದು: “ಈ ರೀತಿಯ ನಂಬಿಕೆಯ ಲಾಭವೇನೆಂದರೆ ಅದನ್ನು ಸಮರ್ಥಿಸುವುದು ಬಹು ಸುಲಭ. ಅಲ್ಲದೆ ಅದನ್ನು ಪಲಾಯನ-ಮಾರ್ಗವಾಗಿಯೂ ಬಳಸಬಹುದು” ಅಂದರೆ ವಾದದಿಂದ ನುಣುಚಿಕೊಳ್ಳಲು ಅದನ್ನು ಬಳಸಬಹುದು.

ಆಣ್ವಿಕ ಜೀವವಿಜ್ಞಾನಿ ಮೈಕಲ್‌ ಡೆಂಟನ್‌ ಜೀವವಿಕಾಸ: ಗಂಡಾಂತರದಲ್ಲಿರುವ ಸಿದ್ಧಾಂತ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ವಿಕಾಸವಾದವು “ಯಾವುದೊ ಪುರಾತನ ಕಾಲದ ಜ್ಯೋತಿಶ್ಶಾಸ್ತ್ರ ಸಿದ್ಧಾಂತದಂತಿದೆ ಹೊರತು ಗಂಭೀರವಾದ . . . ವೈಜ್ಞಾನಿಕ ಸಿದ್ಧಾಂತದಂತಿಲ್ಲ” ಎಂಬ ನಿರ್ಣಯಕ್ಕೆ ಬಂದರು. ಅವರು ಡಾರ್ವಿನನ ವಿಕಾಸವಾದಕ್ಕೆ ಸೂಚಿಸುತ್ತಾ ಅದನ್ನು ನಮ್ಮ ಕಾಲದ ಅತ್ಯಂತ ದೊಡ್ಡ ಕಟ್ಟುಕಥೆಗಳಲ್ಲಿ ಒಂದು ಎಂದೂ ಕರೆದರು.

ನಿಜ ಹೇಳುವುದಾದರೆ, ಜೀವವು ಆಕಸ್ಮಿಕವಾಗಿ ಬಂತು ಎಂಬ ವಾದವು ಕಟ್ಟುಕಥೆಯಂತೇ ಅನಿಸುತ್ತದೆ. ತುಸು ಊಹಿಸಿ: ಪುರಾತತ್ವಜ್ಞನೊಬ್ಬನು ಅಗೆಯುವಾಗ ಸಾಧಾರಣ ಚಚ್ಚೌಕ ಕಲ್ಲು ಅವನಿಗೆ ಸಿಗುತ್ತದೆ. ಅದರ ಆಕಾರ ಆಕಸ್ಮಿಕವೆಂದು ಅವನು ಹೇಳಬಹುದು. ಅದು ತರ್ಕಬದ್ಧವೇ. ಆದರೆ ನಂತರ ಅವನಿಗೆ ನೀಟಾಗಿ ಕೆತ್ತಲ್ಪಟ್ಟಿರುವ ಮನುಷ್ಯಾಕಾರದ ಕಲ್ಲಿನ ಪ್ರತಿಮೆಯೊಂದು ಸಿಗುತ್ತದೆ. ಈ ಆಕಾರ ಸಹ ಆಕಸ್ಮಿಕವಾಗಿ ಬಂತೆಂದು ಅವನು ಹೇಳುವನೋ? ಇಲ್ಲ. ಅವನು ಸರಿಯಾಗಿ ತರ್ಕಿಸುತ್ತಾ ‘ಯಾರೋ ಇದನ್ನು ಮಾಡಿದನು’ ಅನ್ನುತ್ತಾನೆ. ತದ್ರೀತಿಯ ತರ್ಕವನ್ನು ಬಳಸುತ್ತಾ ಬೈಬಲ್‌ ಹೀಗನ್ನುತ್ತದೆ: “ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ.” (ಇಬ್ರಿಯ 3:4) ನೀವು ಆ ಹೇಳಿಕೆಯನ್ನು ಒಪ್ಪುತ್ತೀರೋ?

ಲೆನಾಕ್ಸ್‌ ಬರೆಯುವುದು: “ನಮ್ಮ ವಿಶ್ವದ ಕುರಿತು ನಾವು ಹೆಚ್ಚೆಚ್ಚನ್ನು ತಿಳಿಯುವಾಗ, ವಿಶ್ವವನ್ನು ಒಂದು ಉದ್ದೇಶಕ್ಕಾಗಿ ರಚಿಸಿದ ಸೃಷ್ಟಿಕರ್ತ ದೇವರಿದ್ದಾನೆ ಎಂಬ ಸಿದ್ಧಾಂತ ಸತ್ಯ ಎಂಬದಕ್ಕೆ ಹೆಚ್ಚೆಚ್ಚು ಪುರಾವೆ ಸಿಗುತ್ತಿದೆ. ಜೀವದ ಉಗಮ ಹೇಗಾಯಿತು ಎಂಬುದಕ್ಕೆ ಅದೇ ಅತ್ಯುತ್ತಮ ವಿವರಣೆ.”

ವಿಷಾದಕರ ಸಂಗತಿಯೇನೆಂದರೆ, ದೇವರ ಹೆಸರಿನಲ್ಲಿ ನಡೆಸಲಾಗುವ ದುಷ್ಕಾರ್ಯಗಳು ದೇವರಿದ್ದಾನೆಂಬ ನಂಬಿಕೆಯನ್ನು ಶಿಥಿಲಗೊಳಿಸುವ ಕಾರಣಗಳಲ್ಲಿ ಒಂದು. ಇದರಿಂದಾಗಿಯೇ, ಧರ್ಮವಿಲ್ಲದಿದ್ದರೆ ಮನುಷ್ಯರಿಗೆ ಒಳ್ಳೇದು ಎಂಬ ತೀರ್ಮಾನಕ್ಕೆ ಕೆಲವರು ಬಂದಿದ್ದಾರೆ. ನಿಮ್ಮ ಅಭಿಪ್ರಾಯವೇನು? (g10-E 11)