ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಹಗಲಲ್ಲಿ ಇರುಳು ಮೂಡಿದಾಗ”

“ಹಗಲಲ್ಲಿ ಇರುಳು ಮೂಡಿದಾಗ”

“ಹಗಲಲ್ಲಿ ಇರುಳು ಮೂಡಿದಾಗ”

ಬೆನೀನ್‌ ನ ಎಚ್ಚರ! ಲೇಖಕರಿಂದ

“ಅಬ್ಬಬ್ಬಾ! ಸೂರ್ಯಗ್ರಹಣದಿಂದ ನಿಬ್ಬೆರಗಾದ ಲಕ್ಷಾಂತರ ಮಂದಿ.” ಇದು, ಘಾನದ ಡೈಲಿ ಗ್ರಾಫಿಕ್‌ ವಾರ್ತಾಪತ್ರಿಕೆಯ ಮುಖಪುಟದಲ್ಲಿ ಮೂಡಿಬಂದ ಶಿರೋನಾಮೆಯಾಗಿತ್ತು. 2006 ರ ಮಾರ್ಚ್‌ 29 ರಂದು ಘಾನದಲ್ಲಿ ಸಂಭವಿಸಿದ ಪೂರ್ಣ ಸೂರ್ಯಗ್ರಹಣದ ಮರುದಿನ ವಾರ್ತಾಪತ್ರಿಕೆ ಆ ಕುರಿತು ವರದಿಸಿತು. ಆ ಸೂರ್ಯಗ್ರಹಣವು ಬೆಳಿಗ್ಗೆ ಸುಮಾರು 8 ಗಂಟೆಗೆ ಆರಂಭವಾಗಿ, ಮೊದಲು ಬ್ರಸಿಲ್‌ನ ಪೂರ್ವ ಅಂಚಿನಲ್ಲಿ ಗೋಚರಿಸಿತು. ಬಳಿಕ ತಾಸಿಗೆ ಸುಮಾರು 1,600 ಕಿ.ಮೀ. ವೇಗದಲ್ಲಿ ಅಟ್ಲ್ಯಾಂಟಿಕ್‌ ಸಾಗರದ ಮೇಲೆ ಹಾದುಹೋಗುತ್ತಾ ಘಾನದ ಕರಾವಳಿ ಪ್ರದೇಶ, ಟೋಗೋ ಮತ್ತು ಬೆನೀನ್‌ ವರೆಗೂ ತಲಪಿತು. ಪಶ್ಚಿಮ ಆಫ್ರಿಕದ ಈ ಪ್ರದೇಶಗಳಲ್ಲಿ ಬಾನಂಗಳದ ಆ ಚಮತ್ಕಾರ ಹೇಗೆ ಕಂಡಿತು?

ಘಾನ ದೇಶವು ಇಂತಹ ಪೂರ್ಣ ಸೂರ್ಯಗ್ರಹಣವನ್ನು ಕೊನೆಬಾರಿ ಕಂಡದ್ದು 1947 ರಲ್ಲಾಗಿತ್ತು. ಆಗ 27 ವರ್ಷದವರಾಗಿದ್ದ ಥೀಯೊಡೋರ್‌ ಜ್ಞಾಪಿಸಿಕೊಳ್ಳುವುದು: “ಆ ಸಮಯದಲ್ಲಿ ಅನೇಕರಿಗೆ ಸೂರ್ಯ​ಗ್ರಹಣವೆಂಬುದು ಕಂಡುಕೇಳರಿಯದ ಸಂಗತಿಯಾಗಿತ್ತು. ಆದ್ದರಿಂದ ಸೂರ್ಯಗ್ರಹಣದ ಸಮಯದಲ್ಲಿ ನಿಜವಾಗಿ ಏನು ಸಂಭವಿಸುತ್ತಿದೆ ಎಂಬುದೇ ಅವರ್ಯಾರಿಗೂ ಗೊತ್ತಾಗಲಿಲ್ಲ. ಆದಕಾರಣ ಜನರು ಆ ಘಟನೆಯನ್ನು ‘ಹಗಲಲ್ಲಿ ಇರುಳು ಮೂಡಿದಾಗ’ ಎಂದು ಬಣ್ಣಿಸಿದರು.”

ಜನಜಾಗೃತಿ ಕಾರ್ಯಕ್ರಮ

ಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರೀಗಣ್ಣಿನಿಂದ ನೋಡುವುದರಿಂದಾಗುವ ಅಪಾಯಗಳ ಕುರಿತು ಎಚ್ಚರಿಸಲು ಅಧಿಕಾರಿಗಳು ಎಲ್ಲೆಡೆಯಲ್ಲೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಟೋಗೋದ ಬೀದಿಗಳಲ್ಲಿ ರಾರಾಜಿಸುತ್ತಿದ್ದ ಭಿತ್ತಿಪತ್ರಗಳು, “ಜಾಗ್ರತೆ! ನಿಮ್ಮ ಕಣ್ಣುಗಳನ್ನು ಕಳಕೊಳ್ಳದಿರಿ. ನಿಮ್ಮ ದೃಷ್ಟಿ ನಷ್ಟವಾಗುವ ಅಪಾಯವಿದೆ!” ಎಂದು ಎಚ್ಚರಿಸಿದವು.

ಸರಕಾರಿ ಅಧಿಕಾರಿಗಳು ಎರಡು ವಿಷಯಗಳನ್ನು ಸಾರಿಹೇಳಿದರು. ಒಂದೋ, ಮನೆಯಲ್ಲಿದ್ದು ಸೂರ್ಯಗ್ರಹಣದ ರಮ್ಯ ದೃಶ್ಯವನ್ನು ಟಿ.ವಿ ಪರದೆಯಲ್ಲಿ ನೋಡಿ ಇಲ್ಲವೆ ಮನೆಯ ಹೊರಗಡೆ ಇದ್ದಲ್ಲಿ ಸೂರ್ಯ​ಗ್ರಹಣ ನೋಡಲಿಕ್ಕೆಂದೇ ತಯಾರಿಸಲಾದ ಸಂರಕ್ಷಣಾ ಕನ್ನಡಕಗಳನ್ನು ಧರಿಸಿಕೊಳ್ಳಿರಿ ಎಂದು ಅವರು ಒತ್ತಿಹೇಳಿದರು. ಬೇಕೆಂದಾಗ ಬಾರದ, ಬಂದಾಗ ಕಳೆದುಕೊಳ್ಳಬಾರದ, ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಆ ಮಧುರ ಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿರಲು ಲಕ್ಷಾಂತರ ಜನರು ಟಿ.ವಿ ಮತ್ತು ಕಂಪ್ಯೂಟರ್‌ ಸ್ಕ್ರೀನ್‌ ಮುಂದೆ ಕಣ್ಮಿಟಿಕಿಸದೆ ಕುಳಿತುಬಿಟ್ಟರು. ಏನೇ ಆದರೂ, ಗ್ರಹಣದ ಸಮಯದಲ್ಲಿ ಹಾಗೂ ಮುಂಚೆ ಜನರಲ್ಲಿ ನುಸುಳಿದ ತುಮುಲ, ಕೌತುಕವನ್ನು ಟಿ.ವಿ.ಯಾಗಲಿ ಕಂಪ್ಯೂಟರ್‌ಗಳಾಗಲಿ ಸೆರೆಹಿಡಿಯಲು ಸೋತುಹೋದವು. ಆ ಸಂದರ್ಭದಲ್ಲಾದ ಸ್ವಾರಸ್ಯಗಳನ್ನು ನಾವೀಗ ನೋಡುವ.

ತಾರಕಕ್ಕೇರಿದ ಕುತೂಹಲ

ಪಶ್ಚಿಮ ಆಫ್ರಿಕದಲ್ಲಿ ಅಂದು ಬೆಳಿಗ್ಗೆ ಎಂದಿನಂತೆ ಶುಭ್ರವಾದ ಆಕಾಶದಲ್ಲಿ ಪ್ರಕಾಶಮಾನ ಸೂರ್ಯ ಇತ್ತು. ಗ್ರಹಣ ಖಂಡಿತ ಸಂಭವಿಸುತ್ತದೋ ಏನೋ ಎನ್ನುತ್ತಾ ಕೆಲವರು ಹುಬ್ಬೇರಿಸಿದರು. ಆದರೆ, ಸೂರ್ಯಗ್ರಹಣದ ಸಮಯದೆಡೆ ಗಡಿಯಾರದ ಮುಳ್ಳು ಧಾವಿಸಿದಂತೆ ಮನೆಯ ಹೊರಗಿದ್ದವರ ಕಣ್ಗಳು ಸಂರಕ್ಷಣಾ ಕನ್ನಡಕಗಳ ಮೊರೆಹೋಗಿ ತಲೆಗಳು ಬಾನಿನತ್ತ ಎತ್ತಲ್ಪಟ್ಟವು. ಕೆಲವರು ತಮ್ಮ ಸೆಲ್‌ ಫೋನ್‌ ಹಿಡಿದು ಅಕ್ಕಪಕ್ಕದ ಪ್ರದೇಶದಲ್ಲಿದ್ದ ಗೆಳೆಯರೊಡನೆ ಏನು ಕಾಣುತ್ತಿದೆ ಎಂದು ಕೇಳುತ್ತಿದ್ದರು.

3,50,000 ಕಿ.ಮೀ. ಗಿಂತಲೂ ಮೇಲಕ್ಕೆ ಬಾನಂಗಣದಲ್ಲಿ ಚಂದಿರ ಮೊದಮೊದಲು ಕಣ್ಮರೆಯಾಗಿತ್ತು. ಸ್ವಲ್ಪದರಲ್ಲೇ ಚಂದ್ರ ಒಂದೇ ಸಮಕ್ಕೆ ಚಲಿಸುತ್ತಾ ಗ್ರಹಣವನ್ನುಂಟುಮಾಡುವ ಬಿಂದುವಿನ ಬಳಿ ಸರಿಯಿತು. ಇದ್ದಕ್ಕಿದ್ದಂತೆ ಕಪ್ಪನೆಯ ಬೆಳ್ಳಿಚುಕ್ಕಿ ಸೂರ್ಯನನ್ನು ಮರೆಮಾಡಲು ತೊಡಗಿದಂತೆ ಕಂಡಿತು. ಅನೇಕಾನೇಕ ಪ್ರೇಕ್ಷಕರು ಅದನ್ನು ಗಮನಿಸುತ್ತಿದ್ದಂತೆ ಕೌತುಕದ ಕಾರಂಜಿ ಚಿಮ್ಮಿತು.

ಆರಂಭದಲ್ಲಿ ಪ್ರೇಕ್ಷಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಾದ ಯಾವುದೇ ವ್ಯತ್ಯಾಸವನ್ನು ಗಮನಿಸಲಿಲ್ಲ. ಚಂದ್ರ ಸೂರ್ಯನನ್ನು ಮರೆಮಾಡುತ್ತಾ ಹೋದಂತೆ ಆಕಾಶವು ತೀರಾ ವಿಚಿತ್ರವಾಗಿ ಕಾಣತೊಡಗಿತು. ನೀಲಿ ಬಾನು ಕಪ್ಪಾಯಿತು. ವಾತಾವರಣ ತಂಪಾಯಿತು. ಸ್ವಯಂಚಾಲಿತ ದಾರಿದೀಪಗಳು ಮತ್ತು ಸೆಕ್ಯುರಿಟಿ ಲೈಟ್‌ಗಳು ಬೆಳಗಲಾರಂಭಿಸಿದವು. ಬೀದಿಗಳು ಖಾಲಿಯಾಗಿ ಬಿಕೋ ಎನಿಸತೊಡಗಿದವು. ಅಂಗಡಿಗಳು ಮುಚ್ಚಲ್ಪಟ್ಟವು. ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಗಳು ತಮ್ಮ ತಮ್ಮ ಗೂಡಿನತ್ತ ಧಾವಿಸಿದರೆ, ಪ್ರಾಣಿಗಳು ತಮ್ಮ ತಾಣಕ್ಕೆ ಹೋಗಿ ​ಮಲಗಲು ಅಣಿಯಾದವು. ಎಲ್ಲೆಲ್ಲೂ ಗವ್ವೆನ್ನುವ ಕತ್ತಲೆ ಮುತ್ತಿತು. ಹೀಗೆ ಪೂರ್ಣ ಸೂರ್ಯಗ್ರಹಣ ಸಂಭವಿಸಿತು. ಎಲ್ಲೆಲ್ಲಿಯೂ ಮೌನ ಆವರಿಸಿತು.

ಅವಿಸ್ಮರಣೀಯ ಕ್ಷಣ

ನಕ್ಷತ್ರಗಳು ಮಿನುಗತೊಡಗಿದವು. ಸೂರ್ಯನ ಭವ್ಯ ಕರೋನ (ಪ್ರಕಾಶಮಾನವಾಗಿ ಕಾಣುವ ಸೂರ್ಯನ ಆವರಣ) ಕಪ್ಪು ಚಂದಿರನ ಸುತ್ತ ಮುತ್ತಿನಷ್ಟು ಬೆಳ್ಳಗೆ ಹೊಳೆಯುವ ಪ್ರಭಾವಲಯದಂತೆ ಕಂಡಿತು. ಚಂದ್ರನಲ್ಲಿರುವ ಉಬ್ಬುಗಳ ಮಧ್ಯದಿಂದ ಸೂರ್ಯ ಇಣುಕುತ್ತಿದ್ದಂತೆ ಮಿರಮಿರನೆ ಹೊಳೆಯುವ, ಬೈಲಿ ಮಣಿಗಳೆಂದು * ಕರೆಯಲಾಗುವ ಕಿರಣಗಳು ಚಂದ್ರನ ಹೊರವಲಯದಲ್ಲಿ ಪ್ರಜ್ವಲಿಸಿದವು. ಬಾನಂಗಳದಲ್ಲಿ ವಜ್ರದುಂಗುರ ಥಳಥಳಿಸಿತು. ರಮಣೀಯವಾದ ಗುಲಾಬಿ ಬಣ್ಣವು ಸೂರ್ಯನ ಪ್ರಭಾವಮಂಡಲದ ಹೊರಗೆ (ಕರೋನಕ್ಕಿಂತ ಒಂದು ಪದರ ಒಳಗೆ) ಮಿಂಚಿತು. “ನಾನು ಕಂಡದ್ದರಲ್ಲೇ ಅತಿ ವಿಸ್ಮಯಕರ ದೃಶ್ಯ ಅದಾಗಿತ್ತು. ಸೋಜಿಗಗೊಳಿಸುವ ಸೊಬಗು” ಎಂದು ಉದ್ಗರಿಸಿದನು ಒಬ್ಬ ಪ್ರೇಕ್ಷಕ.

ಆ ಪೂರ್ಣ ಸೂರ್ಯಗ್ರಹಣವು ಸುಮಾರು 3 ನಿಮಿಷಗಳ ವರೆಗೆ ಇತ್ತು. ಬಳಿಕ ಸೂರ್ಯನು ತನ್ನ ಮೊದಲಿನ ಸ್ಥಾನವನ್ನು ಅಲಂಕರಿಸತೊಡಗಿದನು. ಲೆಕ್ಕವಿಲ್ಲದಷ್ಟು ಪ್ರೇಕ್ಷಕರು ಉಲ್ಲಾಸದಿಂದ ಚಪ್ಪಾಳೆ ತಟ್ಟಿದರು. ಆಕಾಶವು ಬೆಳಗಿತು, ತಾರೆಗಳು ಕಣ್ಮರೆಯಾದವು. ಕವಿದ ಕತ್ತಲು ಇಬ್ಬನಿಯಂತೆ ಕರಗಿ​ಹೋಯಿತು.

ಚಂದ್ರ “ಪರಲೋಕದ [ನಂಬಿಗಸ್ತ] ಸಾಕ್ಷಿ.” ಆದುದರಿಂದಲೇ ಗ್ರಹಣಗಳನ್ನು ಶತಮಾನಗಳಿಗಿಂತ ಮುಂಚೆ ಲೆಕ್ಕಹಾಕಿ ತಿಳುಕೊಳ್ಳಬಹುದು. (ಕೀರ್ತನೆ 89:37) ಪಶ್ಚಿಮ ಆಫ್ರಿಕವು ಪೂರ್ಣ ಸೂರ್ಯಗ್ರಹಣವನ್ನು ನೋಡಲು ಕಡಿಮೆಯೆಂದರೆ 60 ವರ್ಷ ಕಾಯಬೇಕಾಗಿತ್ತು. ಅಲ್ಲಿ ಇನ್ನೊಮ್ಮೆ ಕಾಣಸಿಗುವುದು ಇಸವಿ 2081 ರಲ್ಲೇ. ಯಾರಿಗೆ ಗೊತ್ತು ನೀವಿರುವ ಸ್ಥಳದಲ್ಲಿ, ಸೂರ್ಯ-ಚಂದ್ರರ ಈ ಅವಿಸ್ಮರಣೀಯ ‘ಕಣ್ಣಾ-ಮುಚ್ಚಾಲೆ’ ಆಟವನ್ನು ನೋಡುವ ಅವಕಾಶ ಅದಕ್ಕಿಂತಲೂ ಮೊದಲೇ ನಿಮಗೆ ಸಿಗಬಹುದು. (g 3/08)

[ಪಾದಟಿಪ್ಪಣಿ]

^ ಇಸವಿ 1836 ರಲ್ಲಾದ ಸೂರ್ಯಗ್ರಹಣದ ಸಮಯದಲ್ಲಿ ಈ ಕಿರಣಗಳ ಗೋಚರಿಸುವಿಕೆಯನ್ನು ಪ್ರಥಮ ಬಾರಿಗೆ ಬ್ರಿಟಿಷ್‌ ಖಗೋಳಜ್ಞರಾದ ಫ್ರಾನ್ಸಿಸ್‌ ಬೈಲಿ ಗುರುತಿಸಿದರು. ಆದುದರಿಂದ ಅವುಗಳನ್ನು ಬೈಲಿ ಕಿರಣಗಳೆಂದು ಕರೆಯುತ್ತಾರೆ.

[ಪುಟ 11ರಲ್ಲಿರುವ ಚೌಕ/ಚಿತ್ರ]

ಯೇಸುವಿನ ಮರಣದ ಸಮಯದಲ್ಲಿ ಸೂರ್ಯಗ್ರಹಣವಾಗಿತ್ತೋ?

ಮಾರ್ಕ 15:33 ತಿಳಿಸುವುದು: “ಮಧ್ಯಾಹ್ನವಾದಾಗ ಆ ದೇಶದ ಮೇಲೆಲ್ಲಾ ಕತ್ತಲೆ ಕವಿದು ಸಾಯಂಕಾಲ ಮೂರು ಘಂಟೆಯ ತನಕ ಇತ್ತು.” ಮಧ್ಯಾಹ್ನದಿಂದ ಸಾಯಂಕಾಲ ಮೂರು ಘಂಟೆಯ ವರೆಗೆ ಕವಿದ ಮೂರು ತಾಸಿನ ಕತ್ತಲೆ ಒಂದು ಅದ್ಭುತವಾಗಿತ್ತು. ಅದು ಸೂರ್ಯ ಗ್ರಹಣದಿಂದ ಉಂಟಾದ ಕತ್ತಲೆಯಾಗಿರಲು ಸಾಧ್ಯವಿಲ್ಲ. ಇದಕ್ಕಿರುವ ಮೊದಲನೆ ಕಾರಣವೇನೆಂದರೆ, ಭೂಮಿಯ ಯಾವುದೇ ಭಾಗದಲ್ಲಿ ಅತಿ ದೀರ್ಘವಾದ ಸೂರ್ಯ ಗ್ರಹಣವು ಹೆಚ್ಚೆಂದರೆ ಏಳುವರೆ ನಿಮಿಷಗಳಷ್ಟೇ ಇರಬಲ್ಲದು. ಎರಡನೇ ಕಾರಣವು, ಯೇಸು ಮರಣಹೊಂದಿದ್ದು ಚಂದ್ರಮಾನ ಕ್ಯಾಲೆಂಡರ್‌ನ ನೈಸಾನ್‌ ತಿಂಗಳ 14 ನೇ ದಿನವಾಗಿತ್ತು. ಆ ತಿಂಗಳಿನ ಪ್ರಥಮ ದಿನವನ್ನು ಅಮಾವಾಸ್ಯೆಯ ಚಂದ್ರನ ಗೋಚರಿಸುವಿಕೆಯಿಂದ ಗೊತ್ತುಪಡಿಸಲಾಗುತ್ತದೆ. ಆ ದಿನದಂದು, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನಿರುತ್ತಾನೆ. ಇದು ಗ್ರಹಣವನ್ನು ಉಂಟುಮಾಡಬಲ್ಲದು. ಆದರೆ ನೈಸಾನ್‌ 14 ನೇ ದಿನದಷ್ಟರಲ್ಲಿ ಚಂದ್ರ ತನ್ನ ಕಕ್ಷೆಯಲ್ಲಿ ಅರ್ಧ ಪ್ರಯಾಣವನ್ನು ಮುಗಿಸಿರುತ್ತಾನೆ. ಆಗ ಭೂಮಿಯು, ಸೂರ್ಯ ಮತ್ತು ಚಂದ್ರರ ನಡುವೆ ಇರುತ್ತದೆ. ಆ ಸಮಯದಲ್ಲಿ ಚಂದ್ರನು ಸೂರ್ಯನನ್ನು ಮರೆಮಾಡುವ ಬದಲು ಸೂರ್ಯನ ಬೆಳಕನ್ನು ಪೂರ್ಣವಾಗಿ ಪ್ರತಿಫಲಿಸುತ್ತಾನೆ. ಹೀಗಿರುವುದರಿಂದ, ಆ ದಿನದಂದು ನಾವು ಹುಣ್ಣಿಮೆ ಚಂದಿರನನ್ನು ನೋಡುತ್ತೇವೆ. ಇದು ನಿಶ್ಚಯವಾಗಿಯೂ ಯೇಸುವಿನ ಮರಣದ ಜ್ಞಾಪಕಾಚರಣೆಗೆ ಸೂಕ್ತ ಸನ್ನಿವೇಶವಾಗಿದೆ.

[ಚಿತ್ರ]

ನೈಸಾನ್‌ 14 ಯಾವಾಗಲೂ ಹುಣ್ಣಿಮೆಯ ದಿನದಂದು ಅಥವಾ ಅದರ ಆಸುಪಾಸಿನಲ್ಲಿ ಬರುತ್ತದೆ

[ಪುಟ 10, 11ರಲ್ಲಿರುವ ರೇಖಾಕೃತಿ/ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಗ್ರಹಣದ ಪಥ

ಆಫ್ರಿ

ಬೇನಿನ್‌

ಟೋಗೋ

ಘಾನಾ

[ಕೃಪೆ]

Map: Based on NASA/Visible Earth imagery

[ಪುಟ 10ರಲ್ಲಿರುವ ಚಿತ್ರ]

2006, ಮಾರ್ಚ್‌ 29 ರಂದು ಗೋಚರಿಸಿದ ಪೂರ್ಣ ಸೂರ್ಯಗ್ರಹಣ

[ಪುಟ 10ರಲ್ಲಿರುವ ಚಿತ್ರ]

ವಿಶೇಷ ಸಂರಕ್ಷಣಾ ಕನ್ನಡಕಗಳಿಂದ ವೀಕ್ಷಕರು ಗ್ರಹಣವನ್ನು ನೇರವಾಗಿ ನೋಡಲು ಸಾಧ್ಯವಾಯಿತು