ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರಣ ಯಾರಿಗೂ ತಪ್ಪಿದ್ದಲ್ಲ

ಮರಣ ಯಾರಿಗೂ ತಪ್ಪಿದ್ದಲ್ಲ

ನೀವು ಒಬ್ಬ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಒಂದು ಸಿನಿಮಾ ನೋಡ್ತಾ ಇದ್ದೀರಾ ಅಂತ ನೆನಸಿ. ಉದಾಹರಣೆಗೆ, ಒಬ್ಬ ಕ್ರೀಡಾಪಟುವಿನ ಬಗ್ಗೆ ನೋಡ್ತಿದ್ದೀರಾ. ಆ ಸಿನಿಮಾ ಆಕೆಯ ಬಾಲ್ಯ, ಕ್ರೀಡೆಯನ್ನು ಕಲಿಯಲು ಹಾಕಿದ ಪ್ರಯತ್ನ ಮತ್ತು ಅದಕ್ಕಾಗಿ ಎಷ್ಟೆಲ್ಲಾ ಕಷ್ಟಪಟ್ಟಳು ಎಂಬ ವಿಷಯಗಳಿಂದ ಆರಂಭವಾಗುತ್ತೆ. ಮುಂದೆ ಅವಳು ದೊಡ್ಡ ದೊಡ್ಡ ಪಂದ್ಯಗಳನ್ನು ಗೆಲ್ಲುತ್ತಾ, ದೂರ ದೂರದ ಪ್ರದೇಶಗಳಿಗೆ ಹೋಗುವುದನ್ನು ಮತ್ತು ಇಡೀ ಜಗತ್ತಿಗೆ ಪ್ರಸಿದ್ಧಳಾಗುವುದನ್ನು ನೋಡುತ್ತೀರಾ. ಹೀಗೆ ಇಡೀ ಸಿನಿಮಾ ಅವಳ ಸಾಧನೆಯ ಬಗ್ಗೆ ಇದ್ದರೂ, ದುಃಖಕರವಾಗಿ ಸಿನಿಮಾದ ಕೊನೆಯಲ್ಲಿ ಅವಳು ವಯಸ್ಸಾಗಿ ಸಾಯುತ್ತಾಳೆ.

ಇಂತಹ ಸಿನಿಮಾಗಳು ಕೇವಲ ಕಾಲ್ಪನಿಕ ಅಲ್ಲ ಬದಲಾಗಿ ಒಬ್ಬ ವ್ಯಕ್ತಿಯ ನಿಜ ಜೀವನ ಕಥೆಯೇ ಆಗಿರುತ್ತೆ. ಈ ರೀತಿಯ ಸಿನಿಮಾಗಳು ಒಬ್ಬ ಸಂಗೀತಗಾರ, ವಿಜ್ಞಾನಿ, ಕ್ರೀಡಾಪಟು ಅಥವಾ ಬೇರೆ ಯಾವುದೇ ಪ್ರಸಿದ್ಧ ವ್ಯಕ್ತಿ ಬಗ್ಗೆ ಇರಲಿ, ಕಥೆ ಮಾತ್ರ ಒಂದೇ ಇರುತ್ತೆ. ಅವರು ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ ಕೊನೆಗೆ ಸಾಯುತ್ತಾರೆ. ಆದರೆ ವೃದ್ಧಾಪ್ಯ, ಮರಣ ಇಲ್ಲದಿದ್ದರೆ ಅವರು ಇನ್ನು ಹೆಚ್ಚನ್ನು ಸಾಧಿಸಬಹುದಿತ್ತಲ್ವಾ? ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿರಲಿ, ಸಾವಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಜೀವನದ ಕಹಿ ಸತ್ಯ ಅಲ್ಲವೇ?

ನಾವೆಲ್ಲರೂ ಒಂದಲ್ಲಾ ಒಂದಿನ ಸಾಯುತ್ತೇವೆ. (ಪ್ರಸಂಗಿ 9:5) ನಾವು ಏನೇ ಮಾಡಿದರೂ, ವೃದ್ಧಾಪ್ಯದಿಂದ ಅಥವಾ ಸಾವಿನಿಂದ ತಪ್ಪಿಸಿಕೊಳ್ಳಲು ಆಗಲ್ಲ. ಅಷ್ಟೇ ಅಲ್ಲ, ಕೆಲವೊಮ್ಮೆ ಅಪಘಾತದಿಂದ ಅಥವಾ ದೊಡ್ಡ ಕಾಯಿಲೆಯಿಂದ ಬೇಗಾನೂ ಸಾಯಬಹುದು. ಬೈಬಲ್‌ ಹೇಳೋ ಹಾಗೆ, ನಮ್ಮ ಬದುಕು ಮಂಜಿನಂತೆ ‘ಸ್ವಲ್ಪ ಹೊತ್ತು ಕಾಣಿಸಿಕೊಂಡು ತದನಂತರ ಕಾಣಿಸದೇ ಹೋಗುತ್ತೆ.’—ಯಾಕೋಬ 4:14.

ಕೆಲವರು ಜೀವನ ಅಂದ್ರೆ ಇಷ್ಟೇ, ಹೇಗೂ ಒಂದಿನ ಸಾಯಲೇಬೇಕು, ಹಾಗಾಗಿ, “ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲ” ಅಂದುಕೊಳ್ಳುತ್ತಾರೆ. (1 ಕೊರಿಂಥ 15:32) ಜನ ಯಾಕೆ ಈ ರೀತಿ ಯೋಚಿಸ್ತಾರೆ? ಯಾಕೆಂದ್ರೆ, ನಾವು ಯಾವ ಸಮಯದಲ್ಲಿ ಬೇಕಾದರೂ ಸಾಯಬಹುದು ಅಂತ ಅವರಿಗೆ ಗೊತ್ತು. ಜೀವನದ ಬಗ್ಗೆ ಅವರಿಗೆ ಯಾವುದೇ ಭರವಸೆ ಇಲ್ಲ. ಬಹುಶಃ ಈಗ ನಮಗೆ ಹೀಗೆ ಅನಿಸದಿರಬಹುದು, ಆದರೆ ಮುಂದೆ ಎಂದಾದರೂ ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಅಥವಾ ದುರಂತಗಳಾದಾಗ, ‘ಇಷ್ಟೇನಾ ನಮ್ಮ ಜೀವನ?’ ಅಂತ ಯೋಚಿಸಬಹುದು. ಉತ್ತರ ಎಲ್ಲಿ ಸಿಗುತ್ತೆ?

ವಿಜ್ಞಾನಿಗಳು ಇದಕ್ಕೆ ಉತ್ತರ ಕಂಡುಹಿಡಿಯುತ್ತಾರೆ ಅಂತ ತುಂಬಾ ಜನ ನೆನೆಸುತ್ತಾರೆ. ಯಾಕೆಂದ್ರೆ ಈಗಾಗಲೇ ಕೆಲವು ವಿಜ್ಞಾನಿಗಳು ಮತ್ತು ಡಾಕ್ಟರ್‌ಗಳು ನಮ್ಮ ಆಯಸ್ಸನ್ನು ಜಾಸ್ತಿ ಮಾಡುವಂಥ ವಿಷಯಗಳನ್ನು ಕಂಡುಹಿಡಿದಿದ್ದಾರೆ, ಇನ್ನೂ ಪ್ರಯತ್ನಿಸುತ್ತಲೇ ಇದ್ದಾರೆ. ಇದನ್ನವರು ಕಂಡುಹಿಡಿಯುತ್ತಾರೋ ಇಲ್ಲವೋ, ಈ ಪ್ರಶ್ನೆಗಳಂತೂ ನಮ್ಮ ಮನಸ್ಸಿಗೆ ಬಂದೇ ಬರುತ್ತೆ, ನಾವ್ಯಾಕೆ ವಯಸ್ಸಾಗಿ ಸಾಯ್ತೀವಿ? ನಮ್ಮ ಶತ್ರು ಆಗಿರುವ ಸಾವನ್ನು ಸೋಲಿಸಲು ಸಾಧ್ಯನಾ? ಮುಂದಿನ ಲೇಖನಗಳಲ್ಲಿ ಇದೇ ವಿಷಯ ಚರ್ಚಿಸಲಿದ್ದೇವೆ: ಇಷ್ಟೇನಾ ನಮ್ಮ ಜೀವನ?