ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ದೃಷ್ಟಿಕೋನ | ಚಿಂತೆ

ಚಿಂತೆ

ಚಿಂತೆ

ಚಿಂತೆ ಮಾಡುವುದರಿಂದ ಪ್ರಯೋಜನನೂ ಇದೆ ಹಾನಿಯೂ ಇದೆ. ಈ ಎರಡು ರೀತಿಯ ಚಿಂತೆಗಳ ಬಗ್ಗೆ ತಿಳಿಯಲು ಬೈಬಲ್‌ ಸಹಾಯ ಮಾಡುತ್ತದೆ.

ಚಿಂತೆ ಮಾಡುವುದು ತಪ್ಪಾ?

ನಿಜ ಏನು ಗೊತ್ತಾ?

ಕಳವಳ, ಭಯ, ಅತಿಯಾದ ಯೋಚನೆ ಇವೆಲ್ಲಾ ಚಿಂತೆಯಲ್ಲಿ ಒಳಗೂಡಿದೆ. ಯಾವಾಗ ಏನಾಗುತ್ತೇ ಅಂತ ಗೊತ್ತಿಲ್ಲದೆ ಇರುವ ಕಾರಣ ಯಾರನ್ನು ಬೇಕಾದರೂ ಚಿಂತೆ ಕಾಡಬಹುದು.

ಬೈಬಲ್‌ ಏನು ಹೇಳುತ್ತದೆ?

ಪುರಾತನ ಇಸ್ರೇಲಿನ ರಾಜ ದಾವೀದ ಹೀಗೆ ಬರೆದನು: “ನಾನು ಇನ್ನೆಷ್ಟರ ವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿ ಆಲೋಚಿಸಿಕೊಳ್ಳುತ್ತಾ ಇರಬೇಕು?” (ಕೀರ್ತನೆ 13:2) ಇದರಿಂದ ಹೊರಬರಲು ದಾವೀದನಿಗೆ ಯಾವುದು ಸಹಾಯಮಾಡಿತು? ಅವನು ಮನಸ್ಸುಬಿಚ್ಚಿ ಯೆಹೋವ ದೇವರ ಹತ್ತಿರ ತನ್ನ ಚಿಂತೆಗಳನ್ನು ಹೇಳಿಕೊಂಡ. ಏಕೆಂದರೆ ದೇವರು ಅವನನ್ನು ತುಂಬ ಪ್ರೀತಿಸುತ್ತಾನೆಂದು ಅವನಿಗೆ ಗೊತ್ತಿತ್ತು. (ಕೀರ್ತನೆ 13:5; 62:8) ನಮ್ಮ ಚಿಂತೆಗಳನ್ನೆಲ್ಲಾ ತನ್ನ ಮೇಲೆ ಹಾಕಬೇಕೆಂದು ದೇವರು ಬಯಸುತ್ತಾನೆ. 1 ಪೇತ್ರ 5:7 ಹೀಗನ್ನುತ್ತದೆ: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”

ನಾವು ಪ್ರೀತಿಸುವವರಿಗೆ ಸಹಾಯಮಾಡಿದರೆ ಅವರ ಬಗ್ಗೆ ನಮಗಿರುವ ಚಿಂತೆ ಕಡಿಮೆಯಾಗುತ್ತದೆ

ಚಿಂತೆಯನ್ನು ನಿಭಾಯಿಸಬಹುದು. ಹೇಗೆ? ಬೈಬಲ್‌ ಬರೆದವರಲ್ಲಿ ಒಬ್ಬನಾದ ಪೌಲನಿಗೆ ಕ್ರೈಸ್ತ ಸಭೆಯಲ್ಲಿದ್ದವರ ಬಗ್ಗೆ ಚಿಂತೆ ಇತ್ತು. ಆಗ ಅವನು ಅವರನ್ನು ಸಾಂತ್ವನಗೊಳಿಸಲು, ಉತ್ತೇಜಿಸಲು ಶ್ರಮಿಸಿದ. (2 ಕೊರಿಂಥ 11:28) ಹೀಗೆ ಮಾಡಿದಾಗ ಪೌಲನಿಗೆ ಅವರ ಕಡೆಗಿದ್ದ ಚಿಂತೆ ಕಡಿಮೆ ಆಯಿತು. ಸಭೆಯವರಿಗೂ ಪ್ರಯೋಜನವಾಯಿತು. ಇದು ನಮ್ಮ ವಿಷಯದಲ್ಲೂ ನಿಜ. ಆದರೆ ಯಾರಿಗೇನಾದರೆ ನನಗೇನು ಅನ್ನುವ ಮನೋಭಾವ ಸರಿಯಲ್ಲ. ಬೇರೆಯವರ ಮೇಲೆ ನಮಗೆ ಪ್ರೀತಿ ಕಾಳಜಿ ಇಲ್ಲ ಎಂದು ಇದು ತೋರಿಸುತ್ತದೆ.—ಜ್ಞಾನೋಕ್ತಿ 17:17.

“ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” ಫಿಲಿಪ್ಪಿ 2:4, ಸತ್ಯವೇದವು.

ಚಿಂತೆ ಮಾಡುವುದು ಜಾಸ್ತಿಯಾದರೆ ಏನು ಮಾಡಬೇಕು?

ನಿಜ ಏನು ಗೊತ್ತಾ?

ಜನರು ಹಿಂದೆ ಮಾಡಿದ ತಪ್ಪುಗಳ ಬಗ್ಗೆ, ನಾಳೆಯ ಬಗ್ಗೆ ಅಥವಾ ಹಣಕಾಸಿನ ಬಗ್ಗೆ ಚಿಂತಿಸುತ್ತಾರೆ. *

ಬೈಬಲ್‌ ಏನು ಹೇಳುತ್ತದೆ?

ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಚಿಂತೆ: ಮೊದಲನೇ ಶತಮಾನದ ಕೆಲವರು ಕ್ರೈಸ್ತರಾಗುವ ಮುಂಚೆ ಕುಡುಕರು, ಸುಲಿಗೆಮಾಡುವವರು, ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿರುವವರು, ಕಳ್ಳರು ಆಗಿದ್ದರು. (1 ಕೊರಿಂಥ 6:9-11) ಆದರೆ ಅವರು ಅದರ ಬಗ್ಗೆಯೇ ಯೋಚಿಸುತ್ತಾ ಇರುವ ಬದಲು ಕರುಣಾಸಾಗರ ದೇವರ ಮೇಲೆ ನಂಬಿಕೆ ಇಟ್ಟು ತಮ್ಮ ನಡತೆಯನ್ನು ಬದಲಾಯಿಸಿಕೊಂಡರು. ಕೀರ್ತನೆ 130:4 ಹೀಗನ್ನುತ್ತದೆ: “ನೀನು [ದೇವರು] ಪಾಪವನ್ನು ಕ್ಷಮಿಸುವವನಾದ್ದರಿಂದ ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.”

ನಾಳೆಯ ಬಗ್ಗೆ ಚಿಂತೆ: “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು” ಎಂದನು ಯೇಸು. (ಮತ್ತಾಯ 6:25, 34) ಅದರ ಅರ್ಥ? ಇವತ್ತಿನ ಬಗ್ಗೆ ಮಾತ್ರ ಯೋಚಿಸಿ. ನಾಳೆಯ ಚಿಂತೆಯನ್ನು ನಾಳೆಗೆ ಬಿಟ್ಟುಬಿಡಿ, ಇವತ್ತಿನದಕ್ಕೆ ಸೇರಿಸಬೇಡಿ. ಇಲ್ಲ ಅಂದರೆ ಎಲ್ಲ ಗಜಿಬಿಜಿಯಾಗಿ ತಲೆ ಕೆಟ್ಟುಹೋಗುತ್ತದೆ. ಇಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ ಅಂತ ನಂತರ ಗೊತ್ತಾಗುತ್ತದೆ.

ಹಣಕಾಸಿನ ಚಿಂತೆ: “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ” ಜೀವಿಸಲು ಬೇಕಾದದ್ದನ್ನು ಕೊಡು ಎಂದು ಬುದ್ಧಿವಂತನೊಬ್ಬ ದೇವರಿಗೆ ಬೇಡಿಕೊಂಡ. (ಜ್ಞಾನೋಕ್ತಿ 30:8) ಅವನು ಇರುವುದರಲ್ಲೇ ತೃಪ್ತನಾಗಿರಲು ಬಯಸಿದ. ದೇವರು ಇಷ್ಟಪಡುವುದು ಇದನ್ನೇ. ಇಬ್ರಿಯ 13:5ರಲ್ಲಿ ಹೇಳುತ್ತದೆ: “ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ. ಏಕೆಂದರೆ ‘ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ’ ಎಂದು [ದೇವರು] ಹೇಳಿದ್ದಾನೆ.” ಹಣ ಇವತ್ತು ಇರುತ್ತೆ, ನಾಳೆ ಇರಲ್ಲ. ಆದರೆ ದೇವರ ಮೇಲೆ ನಂಬಿಕೆ ಇಟ್ಟು ಸರಳ ಜೀವನ ನಡೆಸಿದರೆ ಆತನು ಯಾವತ್ತೂ ನಮ್ಮ ಕೈಬಿಡಲ್ಲ.

“ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.”ಕೀರ್ತನೆ 37:25.

ಚಿಂತೆನೇ ಇಲ್ಲದಿರುವ ಕಾಲ ಬರುತ್ತಾ?

ಜನರು ಏನು ಹೇಳುತ್ತಾರೆ?

“ಮೊದಲಿಗಿಂತ ಜನರು ಈಗ ಚಿಂತೆ ಮಾಡುವುದು ತುಂಬ ಜಾಸ್ತಿಯಾಗಿದೆ” ಎಂದು ಪತ್ರಕರ್ತ ಹರೀಯಟ್‌ ಗ್ರೀನ್‍ರವರು ಹೇಳಿದ್ದಾರೆ. (2008, ದ ಗಾರ್ಡಿಯನ್‌ ವಾರ್ತಾಪತ್ರಿಕೆ) “ಅಮೆರಿಕದವರು ಇತ್ತೀಚಿಗೆ ಚಿಂತೆ ಮಾಡುವುದು ವಿಪರೀತ ಆಗಿದೆ” ಎಂದು 2014ರಲ್ಲಿ ಪ್ಯಾಟ್ರಿಕ್‌ ಓ ಕೊನರ್‌ರವರು ದ ವಾಲ್‌ ಸ್ಟ್ರೀಟ್‌ ಜರ್ನಲ್‌ ಎಂಬ ಪತ್ರಿಕೆಯಲ್ಲಿ ಬರೆದಿದ್ದಾರೆ.

ಬೈಬಲ್‌ ಏನು ಹೇಳುತ್ತದೆ?

“ಕಳವಳವು ಮನಸ್ಸನ್ನು ಕುಗ್ಗಿಸುವದು; [ಒಳ್ಳೆಯ] ಮಾತು ಅದನ್ನು ಹಿಗ್ಗಿಸುವದು.” (ಜ್ಞಾನೋಕ್ತಿ 12:25) ದೇವರ ರಾಜ್ಯದ ಸುವಾರ್ತೆಯೇ ಆ ಒಳ್ಳೆಯ ಮಾತು. (ಮತ್ತಾಯ 24:14) ಮನುಷ್ಯನ ಕೈಯಿಂದ ಮಾಡಕ್ಕಾಗದೆ ಇರುವ ವಿಷಯಗಳನ್ನು ದೇವರ ರಾಜ್ಯ ಅಥವಾ ಸರ್ಕಾರ ಮಾಡುತ್ತೆ. ಅದು ಚಿಂತೆಗೆ ಮುಖ್ಯ ಕಾರಣವಾಗಿರುವ ರೋಗ, ಮರಣವನ್ನೂ ಬೇಗನೆ ತೆಗೆದುಹಾಕುತ್ತದೆ! ಆಗ “[ದೇವರು ನಮ್ಮ] ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:4. ▪ (g16-E No. 2)

“ನಿರೀಕ್ಷೆಯನ್ನು ಒದಗಿಸುವ ದೇವರು . . . ನಿಮ್ಮ ನಂಬಿಕೆಯ ಮೂಲಕ ನಿಮ್ಮಲ್ಲಿ ಎಲ್ಲ ರೀತಿಯ ಆನಂದವನ್ನೂ ಶಾಂತಿಯನ್ನೂ ತುಂಬಿಸಲಿ.” ರೋಮನ್ನರಿಗೆ 15:13.

^ ಪ್ಯಾರ. 10 ಅತಿಯಾದ ಚಿಂತೆ ನಿಮ್ಮನ್ನು ಕಾಡುತ್ತಿರುವುದಾದರೆ ಡಾಕ್ಟರ್‌ ಹತ್ತಿರ ಹೋಗುವುದು ಒಳ್ಳೇದು. ಎಚ್ಚರ! ಪತ್ರಿಕೆಯು ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ.