ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಯಾಕೆ ಹುಟ್ಟು ಹಬ್ಬ ಮಾಡಲ್ಲ?

ಯೆಹೋವನ ಸಾಕ್ಷಿಗಳು ಯಾಕೆ ಹುಟ್ಟು ಹಬ್ಬ ಮಾಡಲ್ಲ?

 ಇಂಥ ಆಚರಣೆಗಳು ಯೆಹೋವ ದೇವರಿಗೆ ಇಷ್ಟ ಇಲ್ಲದೆ ಇರೋ ಕಾರಣ ಯೆಹೋವನ ಸಾಕ್ಷಿಗಳು ಹುಟ್ಟು ಹಬ್ಬವನ್ನ ಆಚರಿಸಲ್ಲ. ಆದ್ರೆ ಹುಟ್ಟು ಹಬ್ಬವನ್ನ ಆಚರಿಸಬಾರದು ಅಂತ ಬೈಬಲ್‌ ನೇರವಾಗಿ ಹೇಳದಿದ್ರೂ ಇದರ ಬಗ್ಗೆ ಯೆಹೋವ ಏನು ಯೋಚನೆ ಮಾಡ್ತಾನೆ ಅಂತ ತಿಳಿದುಕೊಳ್ಳೋಕೆ ಬೈಬಲ್‌ ನಮಗೆ ಸಹಾಯ ಮಾಡುತ್ತೆ. ಹುಟ್ಟು ಹಬ್ಬ ಆಚರಿಸದೆ ಇರೋಕೆ ನಾಲ್ಕು ಕಾರಣಗಳನ್ನ ನಾವೀಗ ನೋಡೋಣ.

  1.   ಹುಟ್ಟು ಹಬ್ಬ ಒಂದು ವಿಧರ್ಮಿ ಪದ್ಧತಿ. ಫಂಕ್‌ & ವ್ಯಾಗ್ನಾಲ್ಸ್‌ ಸ್ಟ್ಯಾಂಡರ್ಡ್‌ ಡಿಕ್ಷನರಿ ಆಫ್‌ ಫೋಕ್ಲೋರ್‌, ಮಿಥಾಲಜಿ ಮತ್ತು ಲೆಜೆಂಡ್‌ ಅನ್ನೋ ಪುಸ್ತಕ ಹೇಳೋ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟು ಹಬ್ಬದ ದಿನ “ಕೆಟ್ಟ ಆತ್ಮಗಳು ಆ ವ್ಯಕ್ತಿಯನ್ನು ಆಕ್ರಮಿಸೋ ಸಾಧ್ಯತೆ ಇರುತ್ತೆ. ಆದರೆ ಆ ವ್ಯಕ್ತಿಯ ಫ್ರೆಂಡ್ಸ್‌ ಜೊತೆಗಿದ್ದು ಅವನನ್ನು ಹಾರೈಸಿದ್ರೆ ಅವನಿಗೆ ಸಂರಕ್ಷಣೆ ಸಿಗುತ್ತೆ.” ಅದಕ್ಕೆ ಜನರು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ಜನ್ಮದಿನಗಳ ಸಿದ್ಧಾಂತ (ಇಂಗ್ಲಿಷ್‌) ಅನ್ನೋ ಪುಸ್ತಕದಲ್ಲಿ ಹೀಗಿದೆ: “ಜ್ಯೋತಿಷ್ಯದ ನಿಗೂಢ ವಿಜ್ಞಾನದ ಪ್ರಕಾರ ಜಾತಕ ನೋಡಬೇಕಂದ್ರೆ ಹುಟ್ಟಿದ ದಿನಾಂಕ ಬೇಕೇ ಬೇಕು. ಹುಟ್ಟು ಹಬ್ಬಕ್ಕೆ ಹಚ್ಚೋ ಮೇಣದ ಬತ್ತಿಗೆ ನಮ್ಮ ಆಸೆಗಳನ್ನು ಪೂರೈಸೋ ವಿಶೇಷ ಶಕ್ತಿ ಇದೆ” ಅಂತಾನೂ ನಂಬುತ್ತಿದ್ದರು.

     ಕಣಿ ಹೇಳೋದು, ಮಾಟಮಂತ್ರ ಮತ್ತು ಪ್ರೇತ ವ್ಯವಹಾರ ಇಂಥ “ಯಾವ ಕೆಲಸಾನೂ” ಮಾಡಬಾರದು ಅಂತ ಬೈಬಲ್‌ ಹೇಳುತ್ತೆ. (ಧರ್ಮೋಪದೇಶಕಾಂಡ 18:14; ಗಲಾತ್ಯ 5:19-21) ಯೆಹೋವ ದೇವರು ಬಾಬೆಲನ್ನು ಮತ್ತು ಅಲ್ಲಿನ ಜನರನ್ನು ನಾಶ ಮಾಡೋಕೆ ಕಾರಣ ಅವರು ಜ್ಯೋತಿಷ್ಯವನ್ನು ನಂಬುತ್ತಿದ್ದರು ಮತ್ತು ಮಾಟ ಮಂತ್ರ ಮಾಡುತ್ತಿದ್ದರು. (ಯೆಶಾಯ 47:11-15) ಹಾಗಂತ ಯೆಹೋವನ ಸಾಕ್ಷಿಗಳು ಎಲ್ಲ ಪದ್ಧತಿಗಳ ಮೂಲ ಏನು ಅಂತ ಹುಡುಕುತ್ತಾ ಕೂರಲ್ಲ. ಆದರೆ ಬೈಬಲಿನಲ್ಲಿ ಸ್ಪಷ್ಟವಾಗಿರೋ ನಿರ್ದೇಶನ ಇರುವಾಗ ನಾವದನ್ನು ತಳ್ಳಿಹಾಕಲ್ಲ.

  2.   ಆದಿ ಕ್ರೈಸ್ತರು ಹುಟ್ಟು ಹಬ್ಬವನ್ನು ಆಚರಿಸಲಿಲ್ಲ. ಇವರು “ಹುಟ್ಟು ಹಬ್ಬದ ಆಚರಣೆಯನ್ನು ವಿಧರ್ಮಿ ಪದ್ಧತಿಯಾಗಿ ಪರಿಗಣಿಸುತ್ತಿದ್ದರು” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. ಅಪೊಸ್ತಲರು ಮತ್ತು ಯೇಸುವಿನಿಂದ ಕಲಿತವರು ಇಟ್ಟ ಒಳ್ಳೆ ಮಾದರಿಯನ್ನು ನಾವೂ ಅನುಕರಿಸಬೇಕು ಅಂತ ಬೈಬಲ್‌ ಹೇಳುತ್ತೆ.—2 ಥೆಸಲೊನೀಕ 3:6.

  3.   ಕ್ರೈಸ್ತರು ಆಚರಿಸಬೇಕಾದ ಒಂದೇ ಒಂದು ಆಚರಣೆ ಯೇಸುವಿನ ಸ್ಮರಣೆಯಾಗಿದೆ. (ಲೂಕ 22:17-20) ಇದನ್ನ ಕೇಳಿ ಆಶ್ಚರ್ಯ ಪಡಬೇಕಾಗಿಲ್ಲ. ಯಾಕಂದ್ರೆ ಬೈಬಲಿನಲ್ಲಿ ಹೀಗಿದೆ: “ಹುಟ್ಟಿದ ದಿನಕ್ಕಿಂತ ಮರಣದ ದಿನನೇ ಮೇಲು.” (ಪ್ರಸಂಗಿ 7:1) ಯೇಸು ಸಾಯುವಷ್ಟರಲ್ಲಿ ಒಂದು ಒಳ್ಳೆ ಹೆಸರನ್ನು ಸಂಪಾದಿಸಿದ್ದ. ಹೀಗೆ ಆತನ ಜನ್ಮ ದಿನಕ್ಕಿಂತ ಮರಣದ ದಿನವೇ ಪ್ರಾಮುಖ್ಯವಾಯ್ತು.—ಇಬ್ರಿಯ 1:4.

  4.   ದೇವರ ಸೇವಕರು ಹುಟ್ಟು ಹಬ್ಬವನ್ನು ಆಚರಿಸಿದರು ಅಂತ ಬೈಬಲಿನಲ್ಲಿ ಇಲ್ಲ. ಅದರ ಬಗ್ಗೆ ಬರೆಯೋಕೆ ಬರಹಗಾರರು ಮರೆತು ಹೋದರು ಅಂತಲ್ಲ. ಯಾಕೆಂದ್ರೆ ಬೈಬಲಿನಲ್ಲಿ ಹುಟ್ಟಿದ ಹಬ್ಬ ಆಚರಿಸಿದ್ರ ಬಗ್ಗೆ ಎರಡು ಸಲ ಇದೆ. ಅವರಿಬ್ಬರೂ ಯೆಹೋವನ ಆರಾಧಕರಾಗಿರಲಿಲ್ಲ. ಆ ಎರಡೂ ಸಂದರ್ಭದಲ್ಲಿ ಕೆಟ್ಟ ಘಟನೆ ನಡೆಯಿತು ಅಂತ ಬೈಬಲ್‌ ಹೇಳುತ್ತೆ.—ಆದಿಕಾಂಡ 40:20-22; ಮಾರ್ಕ 6:21-29.

ಹುಟ್ಟುಹಬ್ಬ ಆಚರಿಸದೇ ಇರೋದ್ರಿಂದ ಯೆಹೋವನ ಸಾಕ್ಷಿಗಳ ಮಕ್ಕಳಿಗೆ ಬೇಜಾರಾಗ್ತಿದ್ಯಾ?

 ಯೆಹೋವನ ಸಾಕ್ಷಿಗಳಾಗಿರೋ ಎಲ್ಲ ಅಪ್ಪ-ಅಮ್ಮ ಬೇರೆ ಹೆತ್ತವರ ತರ ತಮ್ಮ ಮಕ್ಕಳನ್ನ ಪ್ರೀತಿಸ್ತಾರೆ. ಅಷ್ಟೇ ಅಲ್ಲ ಗಿಫ್ಟ್‌ಗಳನ್ನ ಕೊಡ್ತಾರೆ, ಅವರ ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡ್ತಾರೆ. ತನ್ನ ಮಕ್ಕಳಿಗೆ ಉದಾರವಾಗಿ ಕೊಡೋ ಯೆಹೋವ ದೇವರ ಮಾದರಿಯನ್ನು ಅನುಕರಿಸುತ್ತಾರೆ. (ಮತ್ತಾಯ 7:11) ಕೆಳಗೆ ಕೊಟ್ಟಿರುವ ಮಾತುಗಳು ಸಾಕ್ಷಿಗಳ ಮಕ್ಕಳಿಗೆ ಬೇಜಾರಿಲ್ಲ ಅಂತ ತೋರಿಸಿ ಕೊಡುತ್ತೆ.

  •   “ನಾವು ನೆನಸದೇ ಇರೋವಾಗ ಗಿಫ್ಟ್‌ ಸಿಕ್ಕರೆ ನಮಗೆ ಸಕತ್‌ ಖುಷಿ ಆಗುತ್ತೆ.”—ಟ್ಯಾಮಿ, 12 ವರ್ಷ.

  •   “ಹುಟ್ಟು ಹಬ್ಬದಂದು ನನಗೆ ಗಿಫ್ಟ್‌ ಸಿಗಲ್ಲ ನಿಜ. ಆದರೆ ಅಪ್ಪ-ಅಮ್ಮ ನನಗೆ ಬೇರೆ ಸಮಯದಲ್ಲಿ ಗಿಫ್ಟ್‌ಗಳನ್ನು ಕೊಡುತ್ತಾರೆ. ಅದು ಸರ್ಪ್ರೆಸಾಗಿ ಇರುತ್ತಲ್ವಾ, ಅದಕ್ಕೆ ನನಗದು ಇಷ್ಟ ಆಗುತ್ತೆ.”—ಗ್ರಿಗರಿ, 11 ವರ್ಷ.

  •   “ಹತ್ತು ನಿಮಿಷ, ಸ್ವಲ್ಪ ಕಪ್‌ ಕೇಕ್‌, ಒಂದು ಹಾಡು ಇಷ್ಟಿದ್ದರೆ ಒಂದು ಪಾರ್ಟಿ ಆಗಿಬಿಡುತ್ತಾ? ಪಾರ್ಟಿ ಅಂದ್ರೆ ಏನಂತ ಗೊತ್ತಾಗಬೇಕಂದ್ರೆ ನೀವು ನಮ್ಮ ಮನೆಗೆ ಬರಬೇಕು.”—ಎರಿಕ್‌, 6 ವರ್ಷ.