ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಹಳೇ ಒಡಂಬಡಿಕೆಯನ್ನು ನಂಬುತ್ತಾರಾ?

ಯೆಹೋವನ ಸಾಕ್ಷಿಗಳು ಹಳೇ ಒಡಂಬಡಿಕೆಯನ್ನು ನಂಬುತ್ತಾರಾ?

 ಹೌದು, ಯೆಹೋವನ ಸಾಕ್ಷಿಗಳು ಸಂಪೂರ್ಣ ಬೈಬಲ್‌ “ದೇವರಿಂದ ಪ್ರೇರಿತವಾಗಿದೆ ಮತ್ತು . . . ಉಪಯುಕ್ತವಾಗಿದೆ” ಎಂದು ನಂಬುತ್ತಾರೆ. (2 ತಿಮೊಥೆಯ 3:16) ಆ ಸಂಪೂರ್ಣ ಬೈಬಲ್‌ನಲ್ಲಿ ಎರಡು ಭಾಗಗಳಿವೆ. ಹೆಚ್ಚಿನವರು ಅವುಗಳನ್ನು ಹಳೇ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, ಯೆಹೋವನ ಸಾಕ್ಷಿಗಳು ಅವುಗಳನ್ನು ಹೀಬ್ರು ಶಾಸ್ತ್ರಗ್ರಂಥ ಮತ್ತು ಗ್ರೀಕ್‌ ಶಾಸ್ತ್ರಗ್ರಂಥ ಎಂದು ಕರೆಯುತ್ತಾರೆ. ಹೀಗೆ ಕರೆಯುವ ಮೂಲಕ ನಾವು ಬೈಬಲಿನ ಕೆಲವು ಭಾಗಗಳು ಪುರಾತನವಾಗಿವೆ ಅಥವಾ ಪ್ರಸ್ತುತಕ್ಕೆ ಉಪಯುಕ್ತವಾಗಿಲ್ಲ ಎಂಬ ಭಾವನೆ ಬರದಂತೆ ತಡೆಯುತ್ತೇವೆ.

ಕ್ರೈಸ್ತರಿಗೆ ಹಳೇ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎರಡೂ ಬೇಕು ಏಕೆ?

 ಕ್ರೈಸ್ತ ಅಪೊಸ್ತಲ ಪೌಲನು “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು” ಎಂದು ದೇವಪ್ರೇರಣೆಯಿಂದ ಬರೆದನು. (ರೋಮನ್ನರಿಗೆ 15:4) ಇದರಿಂದ ಹೀಬ್ರು ಶಾಸ್ತ್ರಗ್ರಂಥದಲ್ಲೂ ನಮಗೆ ಅಮೂಲ್ಯ ಮಾಹಿತಿ ಇದೆ ಎಂದು ಗೊತ್ತಾಗುತ್ತದೆ. ಬೇರೆಯವುಗಳಿಗೆ ಹೋಲಿಸಿದರೆ ಹೀಬ್ರು ಮತ್ತು ಗ್ರೀಕ್‌ ಶಾಸ್ತ್ರಗ್ರಂಥಗಳಲ್ಲಿ ನಮಗಿಂದು ಉಪಯುಕ್ತವಾಗಿರುವ ಇತಿಹಾಸ ಮತ್ತು ಪ್ರಾಯೋಗಿಕ ಸಲಹೆಗಳು ದೊರೆಯುತ್ತವೆ.

  •   ನಮಗಿಂದು ಉಪಯುಕ್ತವಾಗಿರುವ ಇತಿಹಾಸ. ಸೃಷ್ಟಿಯ ಬಗ್ಗೆ ಮತ್ತು ಮಾನವಕುಲ ಪಾಪದಲ್ಲಿ ಬಿದ್ದುದರ ಬಗ್ಗೆ ಸಮಗ್ರ ದಾಖಲೆ ಹೀಬ್ರು ಶಾಸ್ತ್ರಗ್ರಂಥದಲ್ಲಿದೆ. ಆ ಮಾಹಿತಿಯ ವಿನಾ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರ ನಮಗೆ ಸಿಗುತ್ತಿರಲಿಲ್ಲ: ನಾವು ಎಲ್ಲಿಂದ ಬಂದಿದ್ದೇವೆ? ಮಾನವರು ಸಾಯುತ್ತಾರೆ ಏಕೆ? (ಆದಿಕಾಂಡ 2:​7, 17) ಅಷ್ಟುಮಾತ್ರವಲ್ಲದೆ, ನಮ್ಮ ಹಾಗೆಯೇ ಸುಖ-ದುಃಖ ಎರಡನ್ನೂ ಅನುಭವಿಸಿದ ಜನರೊಂದಿಗೆ ಯೆಹೋವ ದೇವರು ಹೇಗೆ ವ್ಯವಹರಿಸಿದನೆಂಬ ಮಾಹಿತಿ ಈ ಹೀಬ್ರು ಶಾಸ್ತ್ರಗ್ರಂಥದಲ್ಲಿದೆ.​—ಯಾಕೋಬ 5:​17.

  •   ಪ್ರಾಯೋಗಿಕ ಸಲಹೆಗಳು. ಜೀವನಕ್ಕೆ ಅವಶ್ಯವಾದ ಯಾವತ್ತಿಗೂ ಮಾಸದ ವಿವೇಕ ಬೈಬಲಿನ ಹೀಬ್ರು ಶಾಸ್ತ್ರಗ್ರಂಥದ ಭಾಗವಾಗಿರುವ ಜ್ಞಾನೋಕ್ತಿಗಳು ಮತ್ತು ಪ್ರಸಂಗಿ ಎಂಬ ಪುಸ್ತಕಗಳಲ್ಲಿ ಅಡಕವಾಗಿದೆ. ಅವುಗಳಲ್ಲಿ ಕುಟುಂಬ ಜೀವನವನ್ನು ಹೇಗೆ ಆನಂದಿಸುವುದು (ಜ್ಞಾನೋಕ್ತಿ 15:17), ಕೆಲಸದ ಬಗ್ಗೆ ಸಮತೂಕದ ನೋಟವನ್ನು ಹೇಗೆ ಕಾಪಾಡಿಕೊಳ್ಳುವುದು (ಜ್ಞಾನೋಕ್ತಿ 10:4; ಪ್ರಸಂಗಿ 4:6), ಯುವಜನರು ತಮ್ಮ ಯೌವನವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬಹುದು (ಪ್ರಸಂಗಿ 11:9–​12:1) ಎಂಬುದರ ಕುರಿತು ಸಲಹೆ ಕೊಡಲ್ಪಟ್ಟಿದೆ.

 ಅಷ್ಟೇ ಅಲ್ಲದೆ, ಟೋರಾ (ಬೈಬಲಿನ ಮೊದಲ ಐದು ಪುಸ್ತಕಗಳು) ಎಂದು ಕರೆಯಲ್ಪಡುವ ಮೋಶೆಯ ಧರ್ಮಶಾಸ್ತ್ರದ ಅಧ್ಯಯನ ಮಾಡುವ ಮೂಲಕ ನಾವು ಪ್ರಯೋಜನ ಪಡೆದುಕೊಳ್ಳಬಲ್ಲೆವು. ಈಗ ಕ್ರೈಸ್ತರಿಗೆ ಆ ಧರ್ಮಶಾಸ್ತ್ರ ಕಡ್ಡಾಯವಲ್ಲದಿದ್ದರೂ, ಸಂತೋಷದಾಯಕ ಜೀವನ ನಡೆಸಲು ನೆರವಾಗುವ ಅಮೂಲ್ಯ ಮೂಲತತ್ತ್ವಗಳು ಅದರಲ್ಲಿವೆ.​—ಯಾಜಕಕಾಂಡ 19:18; ಧರ್ಮೋಪದೇಶಕಾಂಡ 6:​5-7