ಐರ್ಲೆಂಡ್ ಮತ್ತು ಬ್ರಿಟನ್ನಿನ ಸ್ಥಳೀಯ ಭಾಷೆಗಳಲ್ಲಿ ಸುವಾರ್ತೆ ಸಾರಲಾಗುತ್ತಿದೆ
ಐರ್ಲೆಂಡ್ ಮತ್ತು ಬ್ರಿಟನ್ನಿನ * ಸ್ಥಳೀಯ ಭಾಷೆಗಳಲ್ಲಿ ಸುವಾರ್ತೆ ಸಾರಲು ಯೆಹೋವನ ಸಾಕ್ಷಿಗಳಾದ ನಾವು ವಿಶೇಷ ಪ್ರಯತ್ನ ಹಾಕುತ್ತಿದ್ದೇವೆ. ಇಂಗ್ಲಿಷ್ ಭಾಷೆಯ ಜೊತೆಗೆ ಐರಿಷ್, ಸ್ಕಾಟಿಷ್ ಗೇಲಿಕ್ ಮತ್ತು ವೆಲ್ಶ್ ಭಾಷೆಗಳು ಇಲ್ಲಿನ ಸ್ಥಳೀಯ ಭಾಷೆಗಳಾಗಿವೆ.
2012ರ ಸೆಪ್ಟೆಂಬರ್‌ನಲ್ಲಿ jw.org ವೆಬ್‌ಸೈಟನ್ನು ಮರುವಿನ್ಯಾಸಿಸಿ ಅನೇಕ ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. ಈ ಭಾಷೆಗಳಲ್ಲಿ ಐರಿಷ್, ವೆಲ್ಶ್ ಭಾಷೆಗಳೂ ಸೇರಿದ್ದವು. 2014ರ ಆಗಸ್ಟ್ ತಿಂಗಳ ಹೊತ್ತಿಗೆ ಸ್ಕಾಟಿಷ್ ಗೇಲಿಕ್ ಭಾಷೆಯಲ್ಲೂ ವೆಬ್‌ಸೈಟನ್ನು ಬಿಡುಗಡೆ ಮಾಡಲಾಯಿತು. ಈ ಭಾಷೆಗಳಲ್ಲಿ ವಿಭಿನ್ನ ಬೈಬಲ್ ಸಾಹಿತ್ಯಗಳನ್ನು ಲಭ್ಯಗೊಳಿಸಲಾಗಿದೆ. ನಮ್ಮ ಈ ಎಲ್ಲ ಪ್ರಯತ್ನಗಳಿಗೆ ಏನಾದರೂ ಪ್ರತಿಫಲ ಸಿಕ್ಕಿದೆಯಾ?
ಒಬ್ಬ ಚರ್ಚಿನ ಪಾದ್ರಿ ಸ್ಕಾಟಿಷ್ ಗೇಲಿಕ್ ಭಾಷೆಯಲ್ಲಿ ನಮ್ಮ ಕರಪತ್ರವನ್ನು ಪಡೆದರು. ತಕ್ಷಣ ಅದನ್ನು ಗಟ್ಟಿಯಾಗಿ ಓದುತ್ತಾ ಅಳಲು ಶುರುಮಾಡಿದರು. ಯಾಕೆ ಆ ವ್ಯಕ್ತಿ ಅಷ್ಟು ಭಾವುಕರಾದರು? ನಮ್ಮ ಭಾಷಾಂತರ ಗುಣಮಟ್ಟ ನೋಡಿ ಆಶ್ಚರ್ಯದಿಂದ, “ಇದನ್ನು ಭಾಷಾಂತರಿಸಿದ್ದು ಯಾರು? ತುಂಬ ಚೆನ್ನಾಗಿದೆ!” ಎಂದರು.
ಸ್ಕಾಟಿಷ್ ಗೇಲಿಕ್ ಭಾಷೆಯಲ್ಲಿ ನಮ್ಮ ವೆಬ್‌ಸೈಟನ್ನು ಬಿಡುಗಡೆ ಮಾಡಿದ ಮೊದಲ ತಿಂಗಳಿನಲ್ಲೇ ಸುಮಾರು 750 ಮಂದಿ ಭೇಟಿ ಮಾಡಿದರು.
ಐರ್ಲೆಂಡಿನ ಗಾಲ್ವೆಯಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರು ಒಬ್ಬ ಸಾಕ್ಷಿಗೆ, ‘ನನಗೆ ಧರ್ಮಗಳಲ್ಲಿ ಆಸಕ್ತಿ ಇಲ್ಲ’ ಎಂದು ಹೇಳಿದ್ದರು. ಆದರೆ ಐರಿಷ್ ಭಾಷೆಯಲ್ಲಿ ಬೈಬಲ್ —ಅದರಲ್ಲಿ ಏನಿದೆ? ಎಂಬ ಕಿರುಹೊತ್ತಗೆ ಇದೆ ಎಂದು ತಿಳಿದುಕೊಂಡಾಗ, ತನಗೊಂದು ಪ್ರತಿ ಕೊಡುವಂತೆ ಕೇಳಿದರು. ಎಲ್ಲರಿಗೂ ತಮ್ಮ ತಮ್ಮ ಮಾತೃ ಭಾಷೆಯಲ್ಲಿ ಬೈಬಲ್ ಸಾಹಿತ್ಯ ಸಿಗಬೇಕು ಅಂತ ಹೇಳಿದರು. ಐರಿಷ್ ಜನರಿಗೆ ಸಾಹಿತ್ಯಗಳನ್ನು ಕೊಡಲು ಯೆಹೋವನ ಸಾಕ್ಷಿಗಳು ಪಡುತ್ತಿರುವ ಶ್ರಮಕ್ಕಾಗಿ ಅವರನ್ನು ತುಂಬ ಮೆಚ್ಚಿಕೊಂಡರು.
ವೆಲ್ಶ್ ಭಾಷೆಯಲ್ಲಿ ಕಿರುಹೊತ್ತಗೆಯನ್ನು ಸ್ವೀಕರಿಸಿದ ಒಬ್ಬ ವೃದ್ಧ ಸ್ತ್ರೀ ಸಂತೋಷದಿಂದ, ‘ನಿಜವಾಗಿಯೂ ಹೇಳ್ತಿದ್ದೀನಿ, ಇದನ್ನ ಇಂಗ್ಲಿಷ್‌ನಲ್ಲಿ ಕೊಟ್ಟಿದಿದ್ದರೆ ಖಂಡಿತ ನಾನು ತೆಗೆದುಕೊಳ್ಳುತ್ತಿರಲಿಲ್ಲ. ನನ್ನ ಭಾಷೆಯಲ್ಲಿ ಈ ಸಾಹಿತ್ಯ ಇರೋದನ್ನು ನೋಡಿ ತುಂಬ ಖುಷಿ ಆಗ್ತಿದೆ” ಎಂದು ಹೇಳಿದರು.
2014ರ ಆಗಸ್ಟ್‌ನಲ್ಲಿ, ವೆಲ್ಶ್ ಭಾಷೆಯ ಸಾಹಿತ್ಯಗಳನ್ನು, ಲೇಖನಗಳನ್ನು jw.orgನಲ್ಲಿ ಹೆಚ್ಚೆಚ್ಚು ಬಿಡುಗಡೆ ಮಾಡಿದೆವು. ಇದರ ಪರಿಣಾಮವಾಗಿ, ಆ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಎರಡರಷ್ಟು ಜನ ವೆಲ್ಶ್ ಭಾಷೆಯಲ್ಲಿ ವಿಷಯಗಳನ್ನು ಓದಲು ನಮ್ಮ ವೆಬ್‌ಸೈಟಿಗೆ ಭೇಟಿಕೊಟ್ಟರು.
“ನಾವು ಒಂದೇ ಭಾಷೆ ಮಾತಾಡುತ್ತೇವೆ”
ಯೇಸು ಬೈಬಲಿನ ವಚನಗಳನ್ನು ತನ್ನ ಇಬ್ಬರು ಶಿಷ್ಯರಿಗೆ ವಿವರಿಸಿದ ನಂತರ, ಆ ಶಿಷ್ಯರು “ಅವನು ದಾರಿಯಲ್ಲಿ ನಮ್ಮೊಂದಿಗೆ ಮಾತಾಡುತ್ತಿದ್ದಾಗಲೂ ನಮಗೆ ಶಾಸ್ತ್ರಗ್ರಂಥವನ್ನು ಸಂಪೂರ್ಣವಾಗಿ ವಿವರಿಸಿ ಹೇಳುತ್ತಿದ್ದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?” ಎಂದು ಹೇಳಿದರು. (ಲೂಕ 24:32) ಜನರಿಗೆ ಅವರ ಸ್ವಂತ ಭಾಷೆಗಳಲ್ಲಿ ಬೈಬಲಿನ ಸತ್ಯಗಳನ್ನು ತಿಳಿಸಿದಾಗ, ಅವರ ಜೀವನಗಳ ಮೇಲೆ ಅವು ಬಹಳ ಪ್ರಭಾವ ಬೀರಿವೆ.
ವೇಲ್ಸ್‌ನಲ್ಲಿರುವ ಎಮಿರ್ ಎಂಬ ವ್ಯಕ್ತಿ ಯೆಹೋವನ ಸಾಕ್ಷಿಯೊಬ್ಬರನ್ನು ಮದುವೆ ಆಗಿದ್ದಾರೆ. ಆದರೆ ಅವರು ತನ್ನ ಪತ್ನಿಯ ಧರ್ಮದಲ್ಲಿ ಆಸಕ್ತಿ ತೋರಿಸಿರಲಿಲ್ಲ. ಸ್ವಲ್ಪ ದಿನಗಳ ನಂತರ ಅವರು, ರಸಲ್ ಎಂಬ ಯೆಹೋವನ ಸಾಕ್ಷಿಯ ಗೆಳೆಯರಾದರು. ತನ್ನ ಮನೋಭಾವವನ್ನು ಯಾವುದು ಬದಲಾಯಿಸಿತು ಅಂತ ಎಮಿರ್ ವಿವರಿಸುತ್ತಾರೆ: “ರಸಲ್, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕ ಕೊಟ್ಟು ‘ಈ ಪುಸ್ತಕ ವೆಲ್ಶ್ ಭಾಷೆಯಲ್ಲಿದೆ. ಇವತ್ತಿನಿಂದ ನಾವಿಬ್ಬರೂ ಈ ಪುಸ್ತಕದಿಂದ ಅಧ್ಯಯನ ಮಾಡೋಣ’ ಎಂದು ನೇರವಾಗಿ ಹೇಳಿದ. ಆಗ ನಾನು ಬೈಬಲ್ ಅಧ್ಯಯನವನ್ನು ಮಾಡಬೇಕು ಅಂತ ನಿರ್ಣಯಿಸಿದೆ.” ರಸಲ್ ಹೇಳಿದ ಈ ವಿಷಯವನ್ನು ಎಮಿರ್ ಯಾಕೆ ಒಪ್ಪಿದರು? “ನಾವಿಬ್ಬರೂ ಒಂದೇ ಭಾಷೆ ಮಾತಾಡುತ್ತೇವೆ, ನಮ್ಮಿಬ್ಬರ ಸಂಸ್ಕೃತಿ ಒಂದೇ ಮತ್ತು ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡ್ಕೊಳ್ತೀವಿ” ಎಂದು ಸ್ವತಃ ಎಮಿರ್ ಹೇಳುತ್ತಾರೆ. ಎಮಿರ್ ತನ್ನ ಸ್ಥಳೀಯ ಭಾಷೆಯಾದ ವೆಲ್ಶ್‌ನಲ್ಲಿ ಬೈಬಲ್ ಬಗ್ಗೆ ಕಲಿಯುವಾಗ ಅವರ ಹೃದಯ ‘ಕುದಿಯುತ್ತಿತ್ತು.’ ಕಾರಣ, ಚರ್ಚಿಸಿದ ವಿಷಯಗಳು ಅವರಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿದ್ದವು.
ಯೆಹೋವನ ಸಾಕ್ಷಿಗಳು ಜನರ ಮಾತೃಭಾಷೆಯಲ್ಲಿ ಸುವಾರ್ತೆ ತಿಳಿಸಲು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಮಾತೃಭಾಷೆ ಜನರ ಭಾವನೆಗಳನ್ನು ಮತ್ತು ಹೃದಯವನ್ನು ತಲುಪುತ್ತದೆ.
^ ಪ್ಯಾರ. 2 ಇಲ್ಲಿ ಬ್ರಿಟನ್ ಎಂಬ ಹೆಸರು ಇಂಗ್ಲೆಂಡ್, ಸ್ಕಾಟ್‌ಲೆಂಡ್ ಮತ್ತು ವೇಲ್ಸ್ ಎಂಬ ದೇಶಗಳನ್ನು ಸೂಚಿಸುತ್ತದೆ.
^ ಪ್ಯಾರ. 11 ಯೆಹೋವನ ಸಾಕ್ಷಿಗಳಿಂದ ತಯಾರಾದ ಬೈಬಲ್ ಅಧ್ಯಯನ ಸಾಧನ.