ಮಾಹಿತಿ ಇರುವಲ್ಲಿ ಹೋಗಲು

ಸೈತಾನನು ನಿಜವಾಗಲೂ ಇದ್ದಾನಾ?

ಸೈತಾನನು ನಿಜವಾಗಲೂ ಇದ್ದಾನಾ?

ಬೈಬಲ್‌ ಕೊಡೋ ಉತ್ತರ

 ಹೌದು, ಇದ್ದಾನೆ. ಬೈಬಲ್‌ ಸೈತಾನನನ್ನ ಈ “ಲೋಕದ ನಾಯಕ” ಅಂತ ಕರೆಯುತ್ತೆ. ಆರಂಭದಲ್ಲಿ ಇವ್ನು ಒಬ್ಬ ದೇವದೂತನಾಗಿದ್ದ, ಹೋಗ್ತಾ-ಹೋಗ್ತಾ ಕೆಟ್ಟವನಾಗಿ ಬದಲಾದ. ನಂತರ ದೇವರ ವಿರುದ್ಧ ತಿರುಗಿ ಬಿದ್ದ. (ಯೋಹಾನ 14:30; ಎಫೆಸ 6:11, 12) ಬೈಬಲ್‌ ಅವನಿಗೆ ಕೊಟ್ಟಿರೋ ಹೆಸರುಗಳಿಂದಾನೇ ಅವನ ಗುಣಗಳ ಬಗ್ಗೆ ನಾವು ತಿಳ್ಕೊಳ್ಳಬಹುದು:

  •   ಸೈತಾನ ಅಂದರೆ “ವಿರೋಧಿಸುವವನು.”—ಯೋಬ 1:6.

  •   ಪಿಶಾಚ ಅಂದರೆ “ಸುಳ್ಳು ಆರೋಪ ಹಾಕುವವನು.”—ಪ್ರಕಟನೆ 12:9.

  •   ಹಾವು ಅಂದರೆ “ಮೋಸ ಮಾಡುವವನು” ಅಂತ ಬೈಬಲ್‌ ಹೇಳುತ್ತೆ.—2 ಕೊರಿಂಥ 11:3.

  •   ಶೋಧಕ (ಪ್ರಲೋಭಿಸುವವನು).—ಮತ್ತಾಯ 4:3.

  •   ಸುಳ್ಳು ಹೇಳುವವನು.—ಯೋಹಾನ 8:44.

‘ಸೈತಾನ’ ಅಂದರೆ ಒಂದು ಕೆಟ್ಟ ಗುಣ ಅಲ್ಲ

 ಸೈತಾನ ವ್ಯಕ್ತಿ ಅಲ್ಲ, ನಮ್ಮಲ್ಲಿರೋ ಕೆಟ್ಟ ಗುಣಗಳೇ ಸೈತಾನ ಅಂತ ಕೆಲವರು ಹೇಳ್ತಾರೆ. ಆದರೆ ಬೈಬಲ್‌ ದೇವರ ಮತ್ತು ಸೈತಾನನ ಮಧ್ಯ ಮಾತುಕತೆ ನಡಿತು ಅಂತ ಹೇಳುತ್ತೆ. ಹಾಗಿದ್ರೆ ಇದರ ಅರ್ಥ ದೇವರು ತನ್ನೊಳಗೆ ಇರುವ ಕೆಟ್ಟ ವ್ಯಕ್ತಿಯೊಂದಿಗೆ ಮಾತಾಡುತ್ತಿದ್ದ ಅಂತನಾ? ಖಂಡಿತ ಇಲ್ಲ. ದೇವರು ಪರಿಪೂರ್ಣನು ಆತನಲ್ಲಿ ಕೆಟ್ಟತನ ಅನ್ನೋದು ಇಲ್ವೇ ಇಲ್ಲ. (ಧರ್ಮೋಪದೇಶಕಾಂಡ 32:4; ಯೋಬ 2:1-6) ಅದೇ ತರ ಯಾವುದೇ ಪಾಪ ಮಾಡದೆ ಇರೋ ಯೇಸುವಿನ ಜೊತೆ ಕೂಡ ಸೈತಾನ ಮಾತುಕತೆ ನಡೆಸಿ ಅವನನ್ನ ಶೋಧಿಸಿದ. (ಮತ್ತಾಯ 4:8-10; 1 ಯೋಹಾನ 3:5) ಈ ಎರಡು ಉದಾಹರಣೆಗಳಿಂದ ಸೈತಾನ ಒಬ್ಬ ವ್ಯಕ್ತಿ ಅಂತ ಗೊತ್ತಾಗುತ್ತೆ. ಸೈತಾನ ನಮ್ಮಲ್ಲಿರೋ ಕೆಟ್ಟ ಗುಣ ಅಲ್ಲ.

 ‘ಸೈತಾನ’ ಅನ್ನೋ ಒಬ್ಬ ವ್ಯಕ್ತಿ ಇಲ್ಲ ಅಂತ ಜನರು ಹೇಳುವಾಗ ನಾವು ಆಶ್ಚರ್ಯಪಡಬಾರದು. ಯಾಕಂದರೆ ಅವನು ಇದ್ರೂ, ಜನರು ಇಲ್ಲ ಅಂತ ಹೇಳೋ ತರ ಮೋಸ ಮಾಡಿದ್ದಾನೆ. (2 ಥೆಸಲೊನೀಕ 2:9, 10) ಜನರನ್ನ ಹೇಗೆ ಮೋಸ ಮಾಡೋದು ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು.—2 ಕೊರಿಂಥ 4:4.

ಸೈತಾನನ ಬಗ್ಗೆ ಇರೋ ಕೆಲವು ತಪ್ಪಾಭಿಪ್ರಾಯಗಳು

ತಪ್ಪಾಭಿಪ್ರಾಯ: ಸೈತಾನನಿಗೆ ಲೂಸಿಫರ್‌ ಅನ್ನೋ ಇನ್ನೊಂದು ಹೆಸರು ಇದೆ.

 ನಿಜ: “ಲೂಸಿಫರ್‌” ಎಂಬ ಹೀಬ್ರು ಪದದ ಅರ್ಥ, “ಹೊಳೆಯುವವನು” ಅಂತ. (ಯೆಶಾಯ 14:12) ಈ ಪದ ಯಾಕೆ ಇಲ್ಲಿ ಉಪಯೋಗಿಸಲಾಗಿದೆ? ಬಾಬೆಲಿನ ರಾಜವಂಶಕ್ಕೆ ಸೇರಿದವರು ತುಂಬ ಗರ್ವದಿಂದ ನಡ್ಕೊಳ್ತಿದ್ದರು. ಅವರ ಬಗ್ಗೆ ಮಾತಾಡುತ್ತಾ ಬೈಬಲ್‌ ಈ ಪದವನ್ನ ಬಳಸಿದೆ. (ಯೆಶಾಯ 14:4, 13-20) ಆದರೆ “ಹೊಳೆಯುವವನು” ಅನ್ನೋ ಪದವನ್ನ ಬಾಬೆಲಿನ ನಾಶ ಆದಮೇಲೆ ಅದರ ರಾಜನನ್ನ ಅಪಹಾಸ್ಯ ಮಾಡ್ತಾ ಹೀಗೆ ವರ್ಣಿಸಲಾಗಿದೆ.

ತಪ್ಪಾಭಿಪ್ರಾಯ: “ಕೆಟ್ಟ ಜನರಿಗೆ ಶಿಕ್ಷೆ ಕೊಡೋಕೆ” ದೇವರು ಸೈತಾನನನ್ನ ಉಪಯೋಗಿಸುತ್ತಿದ್ದಾನೆ.

ನಿಜ: ಸೈತಾನ ದೇವರ ಶತ್ರು, ಸೇವಕನಲ್ಲ. ಸೈತಾನ ಶೋಧಿಸೋದು, ವಿರೋಧಿಸೋದು ದೇವರ ಆರಾಧಕರನ್ನ.—1 ಪೇತ್ರ 5:8; ಪ್ರಕಟನೆ 12:10.