ಮಾಹಿತಿ ಇರುವಲ್ಲಿ ಹೋಗಲು

ಪ್ರಧಾನ ದೇವದೂತ ಮೀಕಾಯೇಲನು ಯಾರು?

ಪ್ರಧಾನ ದೇವದೂತ ಮೀಕಾಯೇಲನು ಯಾರು?

ಬೈಬಲ್‌ ಕೊಡೋ ಉತ್ತರ

 ಮೀಕಾಯೇಲ (ಕೆಲವು ಧರ್ಮಗಳು “ಸಂತ ಮೀಕಾಯೇಲ” ಅಂತ ಹೇಳ್ತಾರೆ.) ಅನ್ನೋ ಹೆಸರು ಯೇಸುವಿಗೆ ಇರುವ ಇನ್ನೊಂದು ಹೆಸರು. a ಯೇಸು ಕ್ರಿಸ್ತನು ಭೂಮಿಗೆ ಬರುವ ಮುಂಚೆ ಮತ್ತು ಸ್ವರ್ಗಕ್ಕೆ ಹೋದ ಮೇಲೆ ಆತನಿಗೆ ಮೀಕಾಯೇಲ ಅನ್ನೋ ಹೆಸರು ಇತ್ತು ಅಂತ ಬೈಬಲ್‌ ಹೇಳುತ್ತೆ. ಒಂದು ಸಾರಿ ಪ್ರಧಾನ ದೇವದೂತ ಮೀಕಾಯೇಲನಿಗೆ ಸೈತಾನನ ಜೊತೆ ಮೋಶೆಯ ಶವದ ವಿಷ್ಯದಲ್ಲಿ ವಾದ-ವಿವಾದ ಆಯ್ತು. ಇನ್ನೊಂದು ಸಾರಿ ದೇವರ ಸಂದೇಶವನ್ನ ಪ್ರವಾದಿ ದಾನಿಯೇಲನಿಗೆ ತಿಳಿಸೋಕೆ ಒಬ್ಬ ದೇವದೂತನಿಗೆ ಸಹಾಯ ಮಾಡಿದ. (ದಾನಿಯೇಲ 10:13, 21; ಯೂದ 9) ಮೀಕಾಯೇಲ ಅಂದರೆ “ದೇವರ ತರ ಯಾರಿದ್ದಾರೆ?” ಅಂತ ಅರ್ಥ. ನಿಜ, ಯೆಹೋವನ ಆಳ್ವಿಕೆಗೆ ಬೆಂಬಲ ಕೊಟ್ಟು ದೇವರ ಶತ್ರುಗಳ ವಿರುದ್ಧ ಹೋರಾಡುವ ಯೇಸು ಕ್ರಿಸ್ತನು ಈ ಹೆಸರಿನ ಅರ್ಥಕ್ಕೆ ತಕ್ಕಂತೆ ಜೀವಿಸ್ತಿದ್ದಾನೆ.—ದಾನಿಯೇಲ 12:1; ಪ್ರಕಟನೆ 12:7.

 ಯೇಸುನೇ ಪ್ರಧಾನ ದೇವದೂತ ಮೀಕಾಯೇಲ ಅಂತ ನಾವು ಹೇಗೆ ಹೇಳಬಹುದು? ಇದಕ್ಕೆ ಇರೋ ಕಾರಣಗಳನ್ನ ಈಗ ನೋಡೋಣ.

  •   ಮೀಕಾಯೇಲನೇ “ಪ್ರಧಾನ ದೇವದೂತ.” (ಯೂದ 9) ಮೀಕಾಯೇಲ ಅನ್ನೋ ಪದಕ್ಕೆ “ದೇವದೂತರಲ್ಲಿ ಪ್ರಮುಖ” ಅಥವಾ “ಮುಖ್ಯಸ್ಥ” ಅನ್ನೋ ಅರ್ಥ ಇದೆ. ಈ ಪದ ಇಡೀ ಬೈಬಲ್‌ನಲ್ಲಿ ಎರಡು ವಚನದಲ್ಲಿ ಮಾತ್ರ ಇದೆ. ಈ ಎರಡು ವಚನದಲ್ಲಿ ಈ ಪದನ ಏಕವಚನ ರೂಪದಲ್ಲಿ ಬಳಸಲಾಗಿದೆ. ಇದ್ರ ಅರ್ಥ ಪ್ರಧಾನ ದೇವದೂತ ಒಬ್ಬನೇ ಅಂತ ತೋರಿಸುತ್ತೆ. “ನಮ್ಮ ಪ್ರಭು ಸ್ವರ್ಗದಿಂದ ಬರ್ತಾನೆ. ಪ್ರಧಾನ ದೇವದೂತನಾದ ಆತನು ಆಜ್ಞೆಗಳನ್ನ ಕೊಡೋ ಸ್ವರ ಕೇಳಿಸುತ್ತೆ.” (1 ಥೆಸಲೊನೀಕ 4:16) ಈ ವಚನ ಹೇಳುತ್ತೆ “ಪ್ರಧಾನ ದೇವದೂತನ ಸ್ವರ” ಯೇಸುವಿಗೆ ಇದೆ, ಯಾಕಂದ್ರೆ ಪ್ರಧಾನ ದೇವದೂತ ಮೀಕಾಯೇಲ ಯೇಸು ಕ್ರಿಸ್ತನೇ ಆಗಿದ್ದಾನೆ.

  •   ಮೀಕಾಯೇಲ ದೂತರ ಸೈನ್ಯಕ್ಕೆ ಆಜ್ಞೆ ನೀಡುವ ನಾಯಕನಾಗಿದ್ದಾನೆ. “ಮೀಕಾಯೇಲ ಮತ್ತು ಆತನ ದೇವದೂತರು ಘಟಸರ್ಪದ (ಸೈತಾನ) ಜೊತೆ ಯುದ್ಧ ಮಾಡಿದ್ರು.” (ಪ್ರಕಟನೆ 12:7) ಸ್ವರ್ಗದಲ್ಲಿ ಮೀಕಾಯೇಲನಿಗೆ ತುಂಬಾ ಅಧಿಕಾರ ಇದೆ. ಅದಕ್ಕೆ ಬೈಬಲ್‌ ಅವನನ್ನ “ನಾಯಕರಲ್ಲಿ ತುಂಬ ಪ್ರಮುಖನಾಗಿರೋ” ಮತ್ತು “ಮಹಾ ಸೇನಾಪತಿ” ಅಂತ ಕರೆಯುತ್ತೆ. (ದಾನಿಯೇಲ 10:13, 21; 12:1) ನ್ಯೂ ಟೆಸ್ಟಮೆಂಟ್‌ ಸ್ಕಾಲರ್‌ ಡೇವಿಡ್‌ ಈ. ಆನ್‌ ಹೀಗೆ ಹೇಳ್ತಾರೆ: “ದೂತರ ಸೈನ್ಯಕ್ಕೆ ನಾಯಕ” ಮೀಕಾಯೇಲನೇ ಅಂತ ಈ ಎಲ್ಲಾ ಬಿರುದುಗಳು ತೋರಿಸುತ್ತೆ.

     ಇನ್ನೊಂದು ದೂತರ ಸೈನ್ಯ ಇದೆ, ಅದಕ್ಕೆ ಯೇಸು ನಾಯಕನಾಗಿದ್ದಾನೆ ಅಂತ ಬೈಬಲ್‌ ಹೇಳುತ್ತೆ. ‘ಪ್ರಭು ಯೇಸು ಉರಿಯೋ ಬೆಂಕಿ ಜೊತೆ, ಬಲಿಷ್ಠ ದೇವದೂತರ ಜೊತೆ ಸ್ವರ್ಗದಿಂದ ಬರುವಾಗ, ಕೆಟ್ಟದ್ದು ಮಾಡುವವರಿಗೆ ಶಿಕ್ಷೆ ಕೊಡ್ತಾನೆ.’ (2 ಥೆಸಲೊನೀಕ 1:7, 8; ಮತ್ತಾಯ 16:27) ಯೇಸು ‘ಸ್ವರ್ಗಕ್ಕೆ ಹೋಗಿದ್ರಿಂದ ದೇವದೂತರು, ಅಧಿಕಾರ ಮತ್ತು ಶಕ್ತಿ ಇರೋ ಎಲ್ರೂ ಆತನಿಗೆ ಅಧೀನರಾಗೋ ಹಾಗೆ ದೇವರು ಮಾಡಿದ್ದಾನೆ.’ (1 ಪೇತ್ರ 3:21, 22) ಹಾಗಿದ್ರೆ ಸ್ವರ್ಗದಲ್ಲಿ ಯೇಸು ನಾಯಕನಾಗಿರುವ ಒಂದು ಸೈನ್ಯ ಮತ್ತು ಮೀಕಾಯೇಲ ನಾಯಕನಾಗಿರುವ ಇನ್ನೊಂದು ಸೈನ್ಯ ಇದೆಯಾ? ಇಲ್ಲ. ದೇವರು ಈ ತರ ಎರಡು ಸೈನ್ಯಗಳನ್ನ ಸ್ವರ್ಗದಲ್ಲಿ ಇಟ್ಟಿದ್ದಾನೆ ಅಂತ ಬೈಬಲ್‌ ಹೇಳಲ್ಲ. ಇದರಿಂದ ನಮಗೇನು ಗೊತ್ತಾಗುತ್ತೆ? ಯೇಸು ಮತ್ತು ಮೀಕಾಯೇಲ ಅನ್ನೋ ಎರಡು ಹೆಸರುಗಳು ಒಂದೇ ವ್ಯಕ್ತಿ ಬಗ್ಗೆ ಮಾತಾಡ್ತಿದೆ ಅನ್ನೋ ತೀರ್ಮಾನಕ್ಕೆ ಬರಬಹುದು.

  •   ಮೀಕಾಯೇಲ “ಕಷ್ಟಕಾಲದಲ್ಲಿ” “ಜನ್ರ ಪರವಾಗಿ ನಿಲ್ತಾನೆ.” (ದಾನಿಯೇಲ 12:1) ದಾನಿಯೇಲ ಪುಸ್ತಕದಲ್ಲಿ “ಏಳ್ತಾನೆ” ಅನ್ನೋ ಪದ ಒಬ್ಬ ರಾಜ ಒಂದು ವಿಶೇಷ ಕ್ರಮವನ್ನ ತೊಗೊಳ್ಳೋಕೆ ಬರ್ತಿರೋದ್ರ ಬಗ್ಗೆ ಸೂಚಿಸುತ್ತೆ. (ದಾನಿಯೇಲ 11:2-4, 21) “ದೇವರ ವಾಕ್ಯ” ಮತ್ತು “ರಾಜರ ರಾಜನಾದ” ಯೇಸು ಒಂದು ವಿಶೇಷ ಕ್ರಮವನ್ನ ತಗೊಂಡು, ದೇವರ ಶತ್ರುಗಳನ್ನ ನಾಶ ಮಾಡಿ ದೇವರ ಜನ್ರನ್ನ ಕಾಪಾಡ್ತಾನೆ. (ಪ್ರಕಟನೆ 19:11-16) ಈ ಕ್ರಮವನ್ನ ಯೇಸು “ಮಹಾ ಸಂಕಟ” ಬಂದಾಗ ತಗೊಳ್ತಾನೆ. ಯಾಕಂದ್ರೆ ‘ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ. ಇನ್ನು ಮುಂದೆನೂ ಬರಲ್ಲ’ ಅಂತ ಬೈಬಲ್‌ ಹೇಳುತ್ತೆ. ಈ ಮಹಾ ಸಂಕಟ ಬಂದಾಗ ಯೇಸು ನಂಬಿಗಸ್ತ ಜನ್ರನ್ನ ಕಾಪಾಡುತ್ತಾನೆ.—ಮತ್ತಾಯ 24:21, 42.

a ಒಂದು ವ್ಯಕ್ತಿಗೆ ಬೇರೆ-ಬೇರೆ ಹೆಸರು ಕೊಟ್ಟು ಕರೆಯುವ ಉದಾಹರಣೆಗಳು ಬೈಬಲ್‌ನಲ್ಲಿ ಇವೆ. ಉದಾಹರಣೆಗೆ, ಯಾಕೋಬನನ್ನ (ಇಸ್ರಾಯೇಲ್‌ ಅಂತ) ಪೇತ್ರನನ್ನ (ಸೀಮೋನ ಅಂತ) ತದ್ದಾಯ (ಯೂದ ಅಂತ) ಬೇರೆ-ಬೇರೆ ಹೆಸರುಗಳಿವೆ.—ಆದಿಕಾಂಡ 49:1, 2; ಮತ್ತಾಯ 10:2, 3; ಮಾರ್ಕ 3:18; ಅಪೊಸ್ತಲರ ಕಾರ್ಯ 1:13.